ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ
ಕಂತೇ ಒಗೆಯುವುದು ನಿಶ್ಚಿತ
ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ

ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ
ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ

ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ ಹಾರಿ ಹೋಗುತದ ಹಕ್ಕೀ
ಬೆರಳ ಸಂದಿನ್ಯಾಗ ಸೋರಿ ಹೋಗತಾವ ಬದುಕಿನ ಲೆಕ್ಕದ ಅಕ್ಕೀ

ಹಾರಾಡುತ್ತಿದೆ ಹದ್ದು ತಲಿ ಮ್ಯಾಲೆ ಜೀವದ ಹಕ್ಕೀ ಹಿಡಿಯಾಕ
ಕುಂತ ಕುಂತಲ್ಲೊ ದಾರಿ ದಾಟುವಾಗೊ ಅಪ್ಪಳಿಸುತ್ತದ ನೆಲಕ

ಗಬಕ್ಕನ ಕಚ್ಚಿ ಹಾರಿ ಹೋಗತದ ಬಾಯ್ಬಯ್ ಬಿಡ್ತಾವ ಸುತ್ತ
ಲಬಲಬ ಎದೆ ಬಡಕೊಂಡರು ಇಲ್ಲಾ ತಿರುಗಿ ಬರೋದಿಲ್ಲ ಮತ್ತ

ಕಾಲ ಎಂಬ ಇಲಿ ಮೂಸಿ ನೋಡತದ ಬೀಪೀ ಷುಗರ್ರು ಪಾರ್ಶೀ
ಕ್ಯಾನ್ಸರ್ ಏಡ್ಸೋ ಹುಣ್ಣೋ ಮಣ್ಣೋ ಯಾವುದೋ ರೋಗಾ ಸೇರ್ಸಿ
***

ರೊಕ್ಕಾ ರೊಕ್ಕಾ ಗಳಿಸೂ ಗಳಿಸೂ ಬೊಜ್ಜ ಮೈಯಾ ಬೆಳಸೂ
ಸುತ್ತಲಿನವರು ಸತ್ರೂ ಕೆಟ್ರೂ ಕಟುಕಸ್ವಾರ್ಥದಲೆ ಗಳಸೂ

ತಂದೆ ತಾಯಿಗಳ ಕಾಲಲಿ ತಡಕೂ ಬಂಧೂ ಬಳಗಾ ಕಸಾ
ನಿಂದೇ ನೀನು ಹೆಂಡ್ರು ಮಕ್ಳೂ ನೀನೇ ಜಗತ್ತು ರಸಾ

ಆಶೆ ಮುಚ್ಚಿಕೊಂಡು ಪಾಶ ಹಚ್ಚಿಕೊಂಡು ಒಂದಿನ ಗೊಟಕ್ಕ ಅಂತಿ
ಮೋಸ ತಗಲು ವಿಷ ಕೂಪದಿ ಬಿದ್ದು ಜೀವನ ಮರ್ಮವ ಮರತಿ
***

ನಾಯಿ ನರಿಹಂಗೆ ಕಾಗೆ ಗೂಗಿ ಹಂಗೆ ಕತ್ತೆ ಕೋಣನ್ಹಂಗೆ
ಹಂದಿ ಹದ್ದಿನಂಗೆ ಇಲಿ ಹೆಗ್ಗಣದಂಗೆ ಕ್ರೂರಮೃಗಗಳಂಗೆ

ಪ್ರಾಣಿ ಪಕ್ಷಗಳ ಹೋಲಿಸಿ ಮಾನವ ಶ್ರೇಷ್ಠನೆಂಬುವುದು ತಪ್ಪು
ಅವುಗಳ ಗುಣಗಳು ಇವನಲ್ಲಿರುವುವೆ ಯೋಚಿಸಿ ನೋಡಿ ಒಪ್ಪು

ಹೇಗಿರಬೇಕೊ ಆಯಾ ಪ್ರಾಣೀ ಹಾಂಗೇ ಅವು ಬಾಳ್ತಾವೇ
ಸುಮ್ಮ ಸುಮ್ಮನೇ ಅವುಗಳ ನಿಂದಿಸಿ ಅಪಮಾನ ಮಾಡುತಿರುವೆ
****

ಹಿಂದಿನ ಹಿರೇರು ಹೇಳ್ತಾ ಬಂದ್ರು ನೀರಿನ ಗುಳ್ಳೇ ಜನ್ಮಾ
ಆದರು ಅದನ್ನೆ ಗಟ್ಯಾಗಿ ಹಿಡಿಕೊಂಡು ಸಾಗ್ಯಾದ ನಮ್ಮ ಕರ್ಮ

ಆತ್ಮಾ ಆತ್ಮಾ ಸಾದ್ಸು ಅಂದ್ರು ಅತ್ಮದ ಚಿಂತಿ ಬ್ಯಾಡೋ
ಇರುವ ಬದುಕನೇ ಸಾರ್ಥಕ ಹ್ಯಾಂಗೆ ಮಾಡಿಕೊಬೇಕು ನೋಡೊ

ನ್ಯಾಯದ ದಾರಿ ಸತ್ಯದ ದಾರಿ ಗಟ್ಟಿಯ ದಾರಿ ಹಿಡಿಯೊ
ನನ್ನ ಜನಗಳು ನಾನೂ ಒಂದೇ ಎಂಬುವ ವಿಚಾರ ಪಡಿಯೊ
*****