ಬಳ್ಳಾರಿ ಬಿಸಿಲೆಂದರೆ…
ನಿಗಿ ನಿಗಿ ಉರಿವಕೊಳ್ಳಿ ದೆವ್ವ!!
ನಿತ್ಯ ಬಿಸುಲುಗುದುರೆಯೇರಿ,
ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ!
ಆಲೆಮನೆಯ, ಕೊಪ್ಪರಿಗೆಯೊಳಗಿನ
ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ!
ಕಾದ ತಾರೆಣ್ಣೆ, ಮೈಮೇಲೆ ಸುರಿವಿಕೊಂಡಂತೆ!
ಕಮ್ಮಾರ ರೋಸಿಗೊಂಡು ಸಿಟ್ಟಲಿ,
ತಿದಿಯೊತ್ತಿದ ಬಿರುಸಿಗೆ, ಕಿಡಿಕಿಡಿ ಕಾರುವ, ಸೂರ್‍ಯಕಿರಣ!
ಚಳಮಳ ಕಾದ, ಎಮ್ಮೆ ಹಾಲಿನ ಝಳದಂತೆ,
ಮಖಾಮೂತಿಗೆ ರಾಚುವ, ಕೆಂಡದುಂಡೆಯ ಬಿಸಿಲ ಮಳೆ!
ಇಟ್ಟಂಗಿ ಭಟ್ಟಿಯೊಳಗೆ, ಸಿಕ್ಕ ಮರಿ ಹುಲ್ಲೆಯಂಗೆ,
ನಿತ್ಯ ವಿಲವಿಲಾ ಒದ್ದಾಡುವ, ನರಪಿಳ್ಳೆಗಳು!
ಸೀದಕರುಕು, ಅಶ್ಟೇ ಚುರುಕು, ಹರಕು! ಝಲಕು…
ಅಬ್ಬಾ…! ಹುಟ್ಟಬೇಕು ಬಳ್ಳಾರಿ ಬಿಸಿಲಿಗೇ… ಒಮ್ಮೆಯಾದರೂ
ಗಟ್ಟಿತನ ಎತ್ತಿ ತೋರಬೇಕು!

-೨-
ಬಳ್ಳಾರಿ ಬಿಸಿಲೆಂದರೆ…
ಬಿಸಿಲೇ…! ಬಿಸಿಲಿಗೆ, ಬಿಸಲು ಸೇರಿ,
ಚಕ್ರಬಡ್ಡಿ, ಮೀಟರ್‍ ಬಡ್ಡಿ, ಸುಸ್ತಿಬಡ್ಡಿಯಶ್ಟು ತಾಪಮಾನ…
ನವರಂಧ್ರಗಳಲ್ಲಿ… ಎರೆಭೂಮಿಯಂಗೆ ಬಿರುಕು ಬಿಟ್ಟು
ಬಾಯಿಬಿಟ್ಟರೆ, ಬಾನೆಟ್ಟೆತ್ತಿದ ಹಳೆ ಜೀಪಿನ,
ರೇಡಿಯೆಟರಿನ, ಬಿಸಿನೀರಿನಿಂದ ಚಿಮ್ಮುವ ಕಾರಂಜಿ!
ಜ್ವಾಲಾಮುಖಿನೇ ಈ ಧರೆಗಿಳಿದಂತೆ, ನಿತ್ಯ ಭಸಿವ ಬಿಸಿಲು!
ಮನೆ ನಲ್ಲಿಗಳು; ಭುಸು ಭುಸುಗುಡುವ, ಬಿಸಿನೀರಿನ ಬುಗ್ಗೆಗಳು!

-೩-
ಬಳ್ಳಾರಿ ಬಿಸಿಲೆಂದರೆ…
ಕಾದ ಕಮ್ಮಾರನ ಕುಲುಮೆ!  ಇಂದ್ರನ ವಜ್ರಾಯುಧಾ!
ಸಪ್ತ ಸಾಗರಗಳ, ಲಾವರಸದ ಚಿಲುಮೆ!
ಸುಡುಬಿಸಿಲ ಸಿಡಿಲು!
ಶಿವನ ತ್ರಿನೇತ್ರದುರಿಯ ಬೆಂಗಾಡು, ಗುಡ್ಡಗಾಡು, ಗಣೆಗೂಡು…
ಪ್ರಾಣಿ, ಪಕ್ಷಿ, ನರಪಿಳ್ಳೆಗಳಿಗೇ ಗುಕ್ಕು ನೀರಿಲ್ಲದಾ ಸುಡುಗಾಡು!
ಸತ್ತಂತಿರುವ ಹಸಿರು, ಮರ, ಗಿಡಿ, ಬಳ್ಳಿಗಳೆಲ್ಲ ತ್ಯಾಪೆ ಮೋರೆ!
ಕಡುವೈರಿಗೂ ಬೇಡ ಬಿಡು! ಬಳ್ಳಾರಿ ಬಿಸಿಲು… ಉಮ್ರು… ಬೆವ್ರು…
ನಡುರಾತ್ರಿಲಿ ಉರಿವ ಸೂರ್‍ಯ! ಕಾದ ಕೋಟೆಯ ನಿಟ್ಟೂಸಿರು!
ಮೈ, ಕೈ, ಕಾಲು: ಚುರು… ಚುರು…
ಮೂಗು, ಬಾಯಿ, ಕಣ್ಣು: ಉರಿ… ಉರಿ…
ಹರಲಿರುಳು ಬೇಸಿಗೆ ಬಿಸಿಲು!
ಹಾಗಲ್ಲದಿದ್ದರೆ… ಬಳ್ಳಾರಿ ಬಿಸಲೇ ಅಲ್ಲ ಬಿಡಿ!
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)