ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ
ಎದ್ದು ಹೋಗುತೇನಿ ತಾಳೆಲೋ ||ಪ||

ಎದ್ದು ಹೋಗುತೇನಿ ತಾಳೆಲೋ
ಇದ್ದು ಇಲ್ಲೇ ಭವಕೆ ಬೀಳೊ
ಸಧ್ಯ ಸದ್ಗುರು ಶಾಪ ನಿನಗೆ
ಸಿದ್ಧಲಿಂಗನ ಪಾದಸಾಕ್ಷಿ ||ಅ.ಪ||

ಹಟದಿ ನಮ್ಮನ್ನ್ಯಾಕ ನೋಡುತಿ ಒಣ
ಕಟಗಿಯಂತೆ ಸೆಟೆದುಕೊಂಡು ಮಾತನಾಡುತಿ
ಚಟಕಿ ಹೊಡೆದು ಬಟ್ಟ ಕುಣಿಸಿ
ಕಠಿಣ ಕಲಹ ಗುಣಗುಣಗಳೆಣಿಸಿ
ಕಟಕಿದೋಷವು ತಟ್ಟಿತೋ ಹಿರಿಯ ಮಠದ ಪಾದಸಾಕ್ಷಿ ||೧||

ನಿಂದೆನಾಡಿ ನೀಚನಾದೆಯೋ‌ಇದ-
ರಿಂದ ದಂದುಗಕ್ಕೆ ಬಂದು ಬಿದ್ದಿಯೋ
ತಂದೆ ಗುರುಗೋವಿಂದರಾಜನ
ದ್ವಂದ್ವಪಾದವ ನಂಬಿದವರಿಗೆ
ಕುಂದನಿಟ್ಟ ಮಂದಮನುಜ
ಹಂದಿಜಲ್ಮಕ ಬಿದ್ದಿ ತಮ್ಮಾ ||೨||

ಮಂಡಲಕ ಮಹಿಮಾಸಾಗರ ಬ್ರಹ್ಮೋತ್ರಕಾಂಡ
ಪಂಡಿತರಿಗೆ ಪಾರಮಾರ್ಥದಾಗರಾ ಇದರೊಳಗೆ ನೀನು
ಬಂಡು ಬರಿದೆ ಬೊಗಳು ಅಕ್ಷರ ನಾ ಕಂಡಿದ್ದಿಲ್ಲಾ
ಪುಂಡ ಶಿಶುನಾಳಧೀಶನ ದಂಡಕೋಲು ಕೈಯಲಿ ಪಿಡಿದು
ದಿಂಡುತನವ ಮುರಿದು ನಿನ್ನ ಚಂಡಿತನವ ಬಿಡಿಸಿ ಮೌಜಿಲೆ ||೩||

*****