ನಿನ್ನ ನೂರಾರು ಹಸ್ತಗಳು ಭೂಮಿ ಎದೆಯ ತೂರಿ ತಬ್ಬಿದವು
ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ
ಎಂದೋ ಒಲುಮೆ ನೆಲವ ಮುದ್ದಿಸಿತು-ನೀನೆದ್ದ ಪ್ರೇಮದ ಮುದ್ದೆ
ಮೇಲೂ ಕೆಳಗೂ ಓಡಾಡಿ ಅಂಟು-ಭದ್ರವಾಯಿತು ನಂಟು
ಎಷ್ಟೋ ನೋವಿನ ಸುಂಕತೆತ್ತು ಮೈತುಂಬ ಪುಳಕಗಳೆದ್ದವು
ಚೆಲುವು ಎಲೆ‌ಎಲೆಯಾಗರಳಿತು ಚಿರನೂತನ ಕೈಚಳಕವಾಗಿ
ತಾಯ್ತತನವು ಹೂತು ಕನಸು ನನಸಾಗಿ ಕಾತು ಶಾಶ್ವತಿಯ ಸೇತು
ಅನಂತರೂಪದ ರಸಧಾರಣೆಯಾಯಿತು
ಸಫಲವಾಯಿತು ಬದುಕು
ಎಲ್ಲವೂ ಮುತ್ತಾಗಲಿಲ್ಲ ನಿನ್ನ ಮುತ್ತನುಂಡು ಬೆಳೆದಿದ್ದರೂ,
ಕೆಲವು ಹೋಕು ತಾಕು ಹೋಗಿ, ಜೊಳ್ಳುಗೊಳ್ಳು ಕಳೆದು
ನಿನ್ನ ಸಂತಾನ ಯಾತ್ರೆಗಾಗಿ ಉಳಿದವು ಕೆಲವು ಗಟ್ಟಿ ನೆನಪು
*****