ಪರಕಾಯ ಪ್ರವೇಶ

ಹೆಸರು ಪರಪುಂಜನ ಪರಕಾಯ ಪ್ರವೇಶ
ಹಿಂದೆ ಅಂಥ ಹೆಸರಿನ ಒಬ್ಬ ರಾಜ
ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ
ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ
ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ
ಸನ್ಯಾಸಿಯೊಬ್ಬನ ದೇಹವನ್ನು ಸೇರುವನು.
ವಿದೂಷಕನೊ ಎಲ್ಲ ವಿದೂಷಕರಂತೆ ಕರುಬುತ್ತ
ಹಾಸ್ಯದ ಚಟಾಕಿಗಳನ್ನು ಹಾರಿಸುತ್ತ ರಾಜನ
ಕಳೇಬರವನ್ನೊಂದು ಗುಪ್ತ ಕೊಠಡಿಯೊಳಗಿರಿಸಿ
ಕಾಯುತ್ತಾನೆ ಆತ ಮರಳಿ ಬರುವುದನ್ನು.
ಇದು ತಿಳಿದ ಮಂತ್ರಿ (ಮಂತ್ರಿಯೇ ಖಳನಾಯಕ)
ರಾಜ್ಯವನ್ನು ಪಡೆಯುವುದಕ್ಕೆ ಮತ್ತು ರಾಣಿ
ಅಪ್ರತಿಮಳನ್ನು ಅನುಭವಿಸುವುದಕ್ಕೆ
ಒಂದು ಏಟಿಗೆ ಎರಡು ಹಣ್ಣುಗಳನ್ನು ಉದುರಿಸುವುದಕ್ಕೆ
ಇದೇ ತಕ್ಕ ಸಮಯವೆಂದು ರಾಜನ ಕಳೇಬರವನ್ನು
ಹುಡುಕಿ ಹಿಡಿದು ಯಾರಿಗೂ ತಿಳಿಯದಂತೆ ಅದನ್ನು
ಹೊಕ್ಕುಬಿಡುತ್ತಾನೆ-ತಾನೇ ಪರಪುಂಜನೆಂದು
ಎದ್ದು ಬರುತ್ತಾನೆ. ಆದರೆ ಚಾಣಾಕ್ಷನಾದ
ವಿದೂಷಕನಿಗೆ ತಿಳಿಯದುದು ಯಾವುದೂ ಇಲ್ಲ.
ಆತ ಅಂದುಕೊಂಡಷ್ಟು ದಡ್ದನೇನಲ್ಲ
ತಾನೇ ಖುದ್ದು ಹೊರಟು ನಿಜವಾದ ರಾಜನನ್ನು
ಹುಡುಕಿ ತರುತ್ತಾನೆ. ಆದರೂ ರಾಜನಿಗೆ
ತನ್ನ ದೇಹ ಮರಳಿ ದೊರಕುವುದು ಹೇಗೆ?
ತಾನೇ ನಿಜವಾದ ಪರಪುಂಜನೆಂದು ಅಪ್ರತಿಮಳಿಗೆ
ತಿಳಿಸಿಕೊಡುವುದು ಹೇಗೆ? ಆಕೆಯನ್ನಾದರೂ
ನಂಬುವುದು ಹೇಗೆ? ನಾಟಕದ ಕುತೂಹಲ
ಇರುವುದೇ ಇಲ್ಲಿ!

ಪರಪುಂಜನ ಪಾತ್ರವನ್ನು ಪ್ರವಣಕುಮಾರನೂ
ಅಪ್ರತಿಮಳ ಪಾತ್ರವನ್ನು ಅಶ್ವಿನಿಯೂ
ಖಳನಾಯಕನ ಪಾತ್ರವನ್ನು ಸುಂಠಣಕರನೂ
ಅಭಿನಯಿಸುತ್ತಾರೆ. ವಿದೂಷಕನ ನಿಜವಾದ
ಹೆಸರು ಯಾರಿಗೂ ಗೊತ್ತಿಲ್ಲ! ಎಲ್ಲರೂ
ಚೆನ್ನಾಗಿ ನಟಿಸುತ್ತಾರೆ. ಅಶ್ವಿನಿಗೆ ಮಾತ್ರ
ಕುಂಡೆಯಲ್ಲೊಂದು ಕುರುವಾದ್ದರಿಂದ
ಒಂದು ಥರ ಲಾಸ್ಯದಲ್ಲಿ ನಡೆಯುತ್ತಾಳೆ
ಒಂದು ಥರ ಆಲಸ್ಯದಲ್ಲಿ ಕುಳಿತುಕೊಳ್ಳುತ್ತಾಳೆ
ಪ್ರೇಕ್ಷಕರು ದಂಗಾಗಿದ್ದಾರೆ! ಇಂಥ ಮಾದಕ
ಭಂಗಿಯನ್ನು ಅವರು ಇದು ತನಕ
ನೋಡಿಯೆ ಇಲ್ಲ! ಎಲ್ಲವೂ ಮುಗಿದಾಗ
ನಿಟ್ಬುಸಿರಿಟ್ಟು ಚಪ್ಪಾಳೆ ತಟ್ಟುವರು
ಅದೆಷ್ಟು ಹೊತ್ತು! ಅಂಥವರಲ್ಲೊಬ್ಬಾತ
ಕುಸುಮಾಕರ ಕಲಘಟಗಿ

ಒಂಟಿ ಜೀವಿ. ತರುಣ, ನೃತ್ಯನಾಟಕ
ಸಂಗೀತ ಪ್ರೇಮಿ ಭಾರತದ ಆಹಾರ ನಿಗಮದಲ್ಲಿ
ಕಾರಕೂನ ತನ್ನ ಅಡುಗೆಯನ್ನು ತಾನೇ
ಮಾಡಿಕೊಳ್ಳುತ್ತಾನೆ. ಅಲುಮಿನಿಯಂ ಇಂಡೇಲಿಯಂ
ಪಾತ್ರೆ ಪಗಡೆ ಇಟ್ಟುಕೊಂಡಿದ್ದಾನೆ.
ಸಂಜೆ ಕಿಟಿಕಿಯ ಹತ್ತಿರ ಕುಳಿತುಕೊಳ್ಳುತ್ತಾನೆ
ತುಂಬ ದುಃಖವಾದಾಗ ತಬಲ ಬಾರಿಸುತ್ತಾನೆ
ಒಲೆಯ ಮೇಲಿನ ಅನ್ನ ಸೀದುಹೋಗುತ್ತದೆ!
ಹೋದರೆ ಹೋಗಲಿ! ನೆರೆಮನೆಯ ಹೆಣ್ಣು-
ಹೆಸರು ಕಾಮಿನಿಯೆಂದು-ಆಕೆ ಹೂದೋಟದಲ್ಲಿ
ಅಡ್ಡಾಡುವುದು ಇದೇ ಸಮಯ!
ಎರಡು ಮಕ್ಕಳ ತಾಯಿ-ಆದರೇನು, ನೋಡಿದವರು
ಯಾರೂ ಅಂದುಕೊಳ್ಳಲಾರರು ಹಾಗೆ
ಆ ರೀತಿ ಇದ್ದಾಳೆ! ಇಚೆಗಂತೂ
ಪ್ರತ್ಯೇಕ ಶೈಲಿಯಲ್ಲಿ ನಡೆಯುವಳು
ತುಳುಕಿ ಬಳುಕಿ ಕಾಲು ಉಳುಕದಿದ್ದರೂ
ಉಳುಕಿದಂತೆ! ಕುಸುವಣಕರ ಕಲಘಟಗಿ
ರಾತ್ರಿ ನಿದ್ದೆಯಿಲ್ಲದೆ ಹೊರಳುವನು
ಮನಸ್ಸಿನಲ್ಲೇ ಬರೆಯುವನು
“ಕಾಮಿನಿ! ಕಾಮಿನಿ! ಕೇಳಿಸುವುದೆ
ನಿನಗೆ ನನ್ನ ದನಿ? ಎಷ್ಟು ಹತ್ತಿರವಿದ್ದೂ
ಎಷ್ಟು ದೂರ ! ಎಷ್ಟ ರಾತ್ರಿಗಳು!
ಎಷ್ಟು ಮೌನಗಳು! ಮತ್ತೆ ಬೆಳಗಾಗಲು
ಎಷ್ಟು ಯುಗಗಳು !”

ಸುಂಠಣಕರ ಮತ್ತು ಕುಸುಮಾಕರ ಕಲಘಟಗಿ
ಸ್ಥಳ ರಾಮಯ್ಯ ಮೆಸ್ಸು ಸಮಯ ಸಾಯಂಕಾಲ
ಒಂದೆ ಟೇಬಲಿನ ಆಚೀಚೆ! ಸುಂಠಣಕರನಿಗಿದು
ಖಾಯಮ್‌ ಜಾಗ. ಕಲಘಟಗಿ ಬಂದಿದ್ದಾನೆ
ಸ್ವಂತ ಅಡುಗೆಯಲ್ಲಿ ಪರಮ ಬೇಸರದಿಂದ
ಸಾಂಬಾರಿನ ಮಸಾಲೆ ಬಹಳ ಖಾರ. ಆದ್ದರಿಂದಲೆ
ಅವನ ಕಣ್ಣು ಮೂಗುಗಳಲ್ಲಿ ನೀರು.
ಸುಂಠಣಕರನೋ ಎತ್ತರದ ದಪ್ಪ ಮನುಷ್ಯ
ಅವನ ಸ್ವರವೂ ಆಪ್ಟೆ ಕರ್ಕಶ: “ಸಾಂಬಾರು!
ಸಾಂಬಾರು!” ಎಂದು ಅರಚುತ್ತಾನೆ.
ಎಲ್ಲೋ ಕೇಳಿದ ಧ್ವನಿ! ಕಲಘಟಗಿ ಮುಖವೆತ್ತಿ
ನೋಡುವನು. ಇಲ್ಲ, ಗುರುತಿಸಲಾರ!
ಸುಂಠಣಕರ ಪಾಪ ನಿಜಜೀವನದಲ್ಲಿ
ತುಂಬ ಸಾಧು ಒಳಗೊಳಗೆ ತನ್ನ ನಾಟಕದ
ನಾಯಕಿಯರನ್ನೆಲ್ಲ-ಮುಖ್ಯವಾಗಿ ಅಶ್ವಿನಿಯನ್ನು–
ಮನಸಾರೆ ಪ್ರೀತಿಸುವನು- ಎಂಥ ತ್ಯಾಗಕ್ಕೂ
ಸಿದ್ಧನು! ಯಾರೂ ನಂಬುವುದಿಲ್ಲ ಇದನ್ನೆಲ್ಲ!
ಖಳನಾಯಕನ ದುರಂತ ಇಂದು ನಿನ್ನೆಯದಲ್ಲ.
ಮಾತಿಗನ್ನುವನು, “ಚೆನ್ನಾಗಿದೆ ಸಾಂಬಾರು!”
ಕಲಘಟಗಿ “ಹೂಂ! ಹೂಂ” ಎಂದು ಮೂಗೊರೆಸಿಕೊಳ್ಳುವನು
ಇನ್ನೆಂದಿಗೂ ಇತ್ತ ಬರಲಾರೆ ಎಂದುಕೊಳ್ಳುತ್ತ!

ಇತ್ತ ನಿರ್ದೇಶಕ ಶ್ರೀನಿವಾಸ
(ಸಕಲರ ಬಾಯಲ್ಲೂ ಕೇವಲ ಶ್ರೀನಿ)
ಸುರುಮಾಡಿದ್ದಾನೆ ಈಗಾಗಲೆ
ಇನ್ನೊಂದು ನಾಟಕದ ತಾಲೀಮು
ಹೆಸರೇನು ಕಥೆಯೇನು
ಎಲ್ಲಿ ರಹಸ್ಯವಾಗಿದೆ!
ಅಶ್ವಿನಿ ಮಾತ್ರ ಇದರಲ್ಲಿ ಇಲ್ಲ
ಅವಳ ಕುರು ಇನ್ನೂ ಗುಣವಾಗಿಲ್ಲ ಪಾಪ !
ಅವಳ ಬದಲಿಗೆ ನಟಿಸುತ್ತಾಳೆ ಪದ್ಮಿನಿ.
ಪದ್ಮಿನಿಗೆ ಯಾವ ತೊಂದರೆಯೂ ಇಲ್ಲ
ಆದರೆ ಭಾವಾತಿರೇಕದಲ್ಲಿ ಮಾತ್ರ
ಒಮ್ಮೊಮ್ಮೆ ಉಗ್ಗುವುದುಂಟು
ಉಗ್ಗಿದಾಗ ಮಾತು ನಿಂತುಬಿಡುತ್ತದೆ
ಅವಳ ಮೂಗಿನ ಹೊಳ್ಳೆಗಳು ಅರಳುತ್ತವೆ!
ಶ್ರೀನಿಗೆ ಮಾತ್ರ ಇದೊಂದೂ ಗೊತ್ತಿಲ್ಲ
ಅವನು ಪ್ರತಿ ಸೀನಿಗೂ ಹತ್ತತ್ತು ಬಾರಿ
ಸೀನುತ್ತಾನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಿಪ್ರೆಸ್ಸಿವ್ – ಮೇನಿಯಕ್ಕು
Next post ಕನ್ನಡಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys