ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ
ಅಂದು, ಅಂತೆಯೇ ಮಾರಿದನೊಬ್ಬ
ತನ್ನ ಸತಿಯ ನಡುಬೀದಿಯಲಿ
ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು
ಬಿಕರಿಗಿಟ್ಟ ವಸ್ತುವಿನಂತೆ
ಕೊಟ್ಟಮಾತ ಉಳಿಸಿಕೊಳ್ಳಲು
ಸತ್ಯದ ಕೀರ್ತಿಗಾಗಿ
ಸತಿಯ ಮಾರಿ, ತನ್ನ ತಾ
ಮಾರಿಕೊಂಡ ಹುಂಬ ಗಂಡ
ಇವನಿಗಿಂತ ಕಡೆಯಾದನೊಬ್ಬ
ಪಣಕ್ಕಿಟ್ಟ ತನ್ನ ಸತಿಯ
ಲತ್ತೆಯಾಟದಲಿ ಸೋತು
ಪರರಿಗೊಪ್ಪಿಸಿದ ಧನದಂತೆ
ಗೆದ್ದವರು ಪೌರುಷದಲಿ
ಗೆದ್ದೆವೆಂಬ ಹಮ್ಮಿನಲಿ
ಕಣ್ಣೆದುರೇ ಸತಿಯ ಎಳೆದಾಡಿ
ಸೊಂಟಕ್ಕೆ ಕೈ ಇಕ್ಕಿದರೂ
ಬಗ್ಗಿಸಿದ ತಲೆ ಎತ್ತಲಾರದೆ
ಷಂಡರಾದರು ಗಂಡಂದಿರೈವರು
ನಡುದಾರಿಯಲಿ ಕೈಕೊಟ್ಟು
ಸತಿ ಉಟ್ಟ ಅರ್ಧ ಸೀರೆ ಹರಿದುಟ್ಟು
ನಿರ್ಧಯನಾಗಿ ಹೊರಟೆ ಬಿಟ್ಟ
ಕಗ್ಗಾಡಿನಲಿ ನಿದ್ರೆ ಹೋದ
ಅರ್ಧಾಂಗಿನಿಯ ಬಿಟ್ಟು!
ಅಲ್ಪನ ಮಾತಿಗೆ
ಕಲ್ಪನೆಯ ತಾವಿಗೆ
ಫಲಹೊತ್ತ ಮಡದಿಯ
ಕಾಡಟ್ಟಿ ಜನಮೆಚ್ಚಿದ
ದೊರೆಯಾದ ಅಗ್ನಿಗೆ
ತಳ್ಳಿದ್ದ ದೊರೆಯೊಬ್ಬ
*****