ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ
ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ
ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ
ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ
ಅಲೆಗಳಲ್ಲಿ ಮುತ್ತಿಡುವ ಮೀನುಗಳಿಲ್ಲ ಆದರೂ

ಮತ್ತೇಕೆ ಇದರ ದಡದಲ್ಲಿ ಕುಳಿತಿದ್ದೇವೆ ಈ ನಿಮಿಷ
ಉತ್ಕಟವಾಗಿ ಹಿಡಿದು ನಿಲ್ಲಿಸಲೆಂದು ಅನಿಮಿಷರಾಗಿ
ಒಬ್ಬರನೊಬ್ಬರು ನೋಡುತ್ತ ಈ ಕ್ಷಣವ ನಾವು

ಬಿಟ್ಟರೆ ಇನ್ನೆಂದೂ ಅದನ್ನು ಪಡೆಯಲಾರದವರಂತೆ
ಪಡೆದರೂ ಬಯಸದವರಂತೆ ಸಕಲ ಬಯಕೆಗಳನ್ನೂ
ಮೀರಿದ ಇಚ್ಛಾಮರಣಿಗಳಂತೆ ಇಲ್ಲಿ ಇಂದು!
*****

Latest posts by ತಿರುಮಲೇಶ್ ಕೆ ವಿ (see all)