ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು
ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ
ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು
ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು
ಸಂಬಂಧಗಳು ವಿಶ್ವಾಸಗಳು…

ಬಿಕ್ಕದರೇನೀಗ, –
ನಸುಕಿನ ಕೋಳಿಕೂಗಿಗೆ
ನಡುರಾತ್ರಿ ನಾಯಿಗಳ ಬೊಗಳುವಿಕೆಗೆ
ಪಟ ಪಟನೆ ಕಿಡಿ ಎಬ್ಬಿಸುತ
ಕಾಯಿಸಿಕೊಳ್ಳುವ ಹಿತ್ತಲಂಗಳದ
ಇಬ್ಬನಿ ನಸುಕಿನ ಚಳಿಗೆ,

ಬಿಕ್ಕಿದರೇನೀಗ, –
ಕೈ ತಟ್ಟೆಯಲಿಟ್ಟ ಬಿಸಿರೊಟ್ಟಿ
ಹೂವುಗಳುದುರದ ಹೀರೆಪಲ್ಲೆಗೆ
ಗಡಿಗೆಯ ತಾಜಾಬೆಣ್ಣೆಮಜ್ಜಿಗೆಗೆ
ತುಂಬಿದ ಬಾವಿ ಜೋಡೆತ್ತಿನ ಗಾಡಿ
ಸಾಲುಮರಗಳ ನೆರಳು, ಗಾಳಿ ಬೀಸುವ ಗರಿಗಳಿಗೆ,

ಬಿಕ್ಕಿದರೇನೀಗ, –
ತೊನೆದಾಡುವ ತುಂಬು ಹೊಲಕ್ಕೆ
ಹರಕೆಹೊತ್ತು ಹೊರಡುವ ಜಾತ್ರೆಗಳಿಗೆ
ನಲಿದಾಡುವ ಕಾಡು ಬೆಟ್ಟ ಹೊಳೆಹಳ್ಳಗಳಿಗೆ
ಕಂಬಳಿಯಲಿ ಕಾಲು ತೂರಿಸಿ ಕೇಳುವ
ದೆವ್ವಭೂತಗಳ ಕಥೆಗಳಿಗೆ,…

ಬಿಕ್ಕಿದರೇನೀಗ, –
ಅಜ್ಜಿಯ ತೋಳತೆಕ್ಕೆ ನಿದ್ರೆಗೆ
ಅಜ್ಜನ ಗರ್ಜನೆಯ ಮಾತುಗಳಿಗೆ
ದನಕರುಗಳ ಕೊರಳು ಗಂಟೆ ಗೆಜ್ಜೆಗಳಿಗೆ
ಮಣ್ಣುಗೋಡೆಯ ವಾಸನೆ ಬೆಳಕಿಂಡಿಗಳಿಗೆ
ಮಾದಲಿ ಹುರಕ್ಕಿಹೋಳಿಗೆ ಗಾರಿಗೆ
ಕರಿಗಡಬುಗಳಿಗೆ…..

ಮಹಲು ಹೊಕ್ಕು ಆರಾಮ ಖುರ್ಚಿಗೆ ಬೆನ್ನುಹಚ್ಚಿ
ಟಿ. ವಿ., ಚಾನೆಲ್‌ಗಳಲಿ ಕಣ್ಣುತೂರಿಸುತ
ಪಿಜ್ಜಾ, ಕೊಕ್‌ಗಳ ರುಚಿನೋಡುತ
ಏರ್ ಕಂಡೀಶನ್ ಕಾರಿನೊಳಗೆ ಅಡ್ಡಾಡುತ್ತಿದ್ದರೂ
ಒಮ್ಮೊಮ್ಮೆ ಒಳಗೊಳಗೆ ಬಿಕ್ಕುತ್ತಿರುತ್ತೇನೆ.
*****