ಒಂದು ಊರಿಗೆ ಒಂಬತ್ತು ಬಾಗಿಲು,
ಆ ಊರಿಗೆ ಐವರು ಕಾವಲು,
ಆರು ಮಂದಿ ಪ್ರಧಾನರು,
ಇಪ್ಪತ್ತೈದು ಮಂದಿ ಪರಿವಾರ,
ಅವರೊಳು ತೊಟ್ಟನೆ ತೊಳಲಿ ಬಳಲಲಾರದೆ,
ಎಚ್ಚತ್ತು ನಿಶ್ಚಿಂತನಾದ ಅರಸರ ಕಂಡೆ.
ಅರಸಿನ ಗೊತ್ತುವಿಡಿದು, ಒಂಬತ್ತು
ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ,
ಒಂದು ಬಾಗಿಲಲ್ಲಿ ನಿಂದು,
ಕಾವಲರ ಕಟ್ಟಿ, ಪ್ರಧಾನಿಯನೆ ಮೆಟ್ಟಿ ಸೀಳಿ,
ಪರಿವಾರವನೆ ಸುಟ್ಟು, ಅರಸ ಮುಟ್ಟಿ,
ಹಿರಿದು ಓಲೈಸಲು, ಸಪ್ತಧಾತು ಷಡುವರ್ಗವನೆ ಕಂಡು,
ಕತ್ತಲೆಯ ಕದಳಿಯ ದಾಂಟಿ,
ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೆಯೋಲಾಡಿ,
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****