ಕೆಂಪುಸಮುದ್ರದ ಕಡಲಿನೊಳಗಿನ
ಮೀನುಗಳಿಗೆ ಮುತ್ತಿಟ್ಟ ನೆನಪು,
ಮರುಭೂಮಿಯ ಬಿಸಿ ಉಸುಕಿನೊಳಗೆ
ಹೆಸರು ಬರೆದು ಓಡಾಡಿದ ನೆನಪು,
ಸೊಕ್ಕಿನ ಸೂರ್ಯ ಒರಟು ಕ್ಯಾಕ್ಟಸ್‌
ತರಚಿ ಉರಿಸಿದ ನೆನಪು.

ಬುರ್ಕಾದೊಳಗಿನ ಕಥೆ ಕನಸುಗಳು
ಹೇಳುವ ಕಣ್ಣುಗಳ ನೆನಪು,
ನೈಟ್‌ಕ್ಲಬ್ಬಿನ ಮದೋನ್ಮತ್ತ
ಹುಡುಗಿಯರ ತುಳುಕಾಟದ ನೆನಪು,
ಸಂಪ್ರದಾಯಿಗಳ ಭಾಷಣಕೊರೆಯುವ
ಅಮರ ಅಕಬರ ಅಂಥೋನಿಗಳ ನೆನಪು.

ನೈಲ್‌ನದಿ ಪಿರ್‍ಯಾಮಿಡ್ಡಗಳೊಳಗಿನ
ಕಟ್ಟಿಹಾಕಿದ ಮಮ್ಮಿಗಳ ನೆನಪು,
ವೆಸ್ಟಮಿನಿಸ್ಟರ ಅಬೆಯೊಳಗಿನ ಶೇಕ್ಸ್‌ಪೀಯರ್
ವರ್ಡ್ಸ್‌ವರ್ತರೊ೦ದಿಗೆ ಮಾತಾಡಿದ ನೆನಪು,
ಪ್ಯಾರಿಸ್ಸಿನ ಪಿಝಾ ಹಾಲೆಂಡಿನ ಚೀಸ್
ತಿಂದು ಸುಸ್ತಾಗಿ ತಳಮಳಿಸಿದ ನೆನಪು.
*****