ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ
ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ
ಬೆವರ ಹನಿ ಗುಂಟ ಇಳಿದ ಶ್ರಮ
ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ.

ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ
ಇಳಿದು ಉಸಿರಾಡಿದ ಸದ್ದುಗಳು
ಹರಡಿ ಹಾಸಿವೆ ಗೊತ್ತೇ ಆಗದ ಹಾಗೆ
ಜೀವ ಜೋಡು ಅಲೆಯ ಬೆಲೆ ಹೆಣೆದಿವೆ.

ನಿನ್ನ ಬರವಿನಲಿ ತೇಲಿ ಸುಖದುಃಖ
ಒಳಹೊರಗೆ ಹಿತಮಿತ ಹೂವು ಗಂಧ
ಸಂಧಾನದ ಇರುವಿಕೆಯು ಭಾವ ಸುಳಿ
ಸುಳಿದು ಹರಿದು ತೇಲಿ ಜಾರಿದ ನದಿಬಯಲು.

ಸ್ನೇಹ ಮೋಹ ನೀಲಿ ಅಂಬರದ ಪಟ
ವರ್ಗ ವರ್ಣದಲಿ ಅದ್ದಿ ತೇಲಿ ತೂಗಿ
ಸೂತ್ರ ಬಿಗಿದ ಕಾಲು ನೆಲದಡಿ ಹೆಜ್ಜೆಯೂರಿ
ಮರುಕ್ಷಣ ಧ್ಯಾನಕ್ಕೆ ಉಕ್ಕಿದ ಕಡಲು.

ಮನಸ್ಸು ಮುತ್ತು ರತ್ನ ಹವಳದ
ದ್ವೀಪ ಬಿಂಬಗ್ರಾಹಿಗೆ ಜಾಗ ಉಂಟು
ಜಗದ ನಿತ್ಯಾರಾಧನೆಯ ಕಾಯಕದಲಿ
ಹೆಗಲಿಗೇರಿದ ಭಾರ ತಾನೇ ಇಳಿಯುವುದು
ಹೆಗರು ಪೂಜೆಯ ಕಾಯಕದಲಿ.
*****