ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು
ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ
ಅದರ ತಲೆಗೆ ಹೊಡೆಯಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು

ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್ಯ ರಸವು
ರಸದ ಇಂಥ ಕಲಬೆರಕೆಗೆ || ಧೈರ್ಯ….
ಸುತಮುತ್ತಲ ಕಡೆಗೆ | ಕತ್ತಲೊಂದೆ ತುಂಬಿದಾಗ
ಕಿರಣವನ್ನು ಕಾಣಲಿಕ್ಕೆ || ಧೈರ್ಯ….

ಸಂಶಯ ನಿರಾಶೆ ತುಂಬಿ | ಉಸಿರು ಕಟ್ಟಿ ಹೋಗುವಾಗ
ನಂಬಿಕೆಯಲಿ ತಲೆಯನೆತ್ತೆ || ಧೈರ್ಯ….
ನಮ್ಮ ಅಳುವೆ ಹೊರ ಒಳಗಿರೆ | ಇತರರಳುವ ತವಿಸಿ ನಗುವ
ಹೊಮ್ಮಿಸುವಾ ಸಾಹಸಕ್ಕೆ || ಧೈರ್ಯ….

ದೇಹಶಕ್ತಿ ಇಳಿದು ಹೋಗಿ | ದಿನದ ಕೆಲಸ ಸಪ್ಪೆಯಾಗಿ
ಇರುವ ಕಸವ ರಸ ಮಾಡಲು || ಧೈರ್ಯ….
ಮಾತುಗಳಿಗೆ ಬಣ್ಣ ಕೊಟ್ಟು| ಮೋಸ ಬಲೆಗೆ ಎಳೆಯುವಾಗ
ಇದ್ದುದಿದ್ದ ಹಾಗೆ ಪೇಳೆ || ಧೈರ್ಯ….

ನೀಚತನವು ದನಿಯನೆತ್ತಿ | ಎಳೆಯ ಸತ್ಯವನೊತ್ತಲು
ಎಳೆಯ ಲತೆಯು ಮರವಾಗಲು || ಧೈರ್ಯ….
ಗುಡ್ಡ ತಲೆಯ ಮೇಲೆ ಬಿದ್ದ| ರೀತಿಯಲ್ಲಿ ದುಃಖವಡಸೆ
ನಿನ್ನ ಇಚ್ಛೆ ದೇವ ಎನಲು || ಧೈರ್ಯ….
ವಿಧಿಯು ನಿನ್ನ ಬಲಗೆನ್ನೆಗೆ ಹೊಡೆತ ಕೊಡಲು ಸಿಟ್ಟಾಗದೆ
ನಿನ್ನ ಎಡದ ಕೆನ್ನೆ ಕೊಡಲು || ಧೈರ್ಯ….
ಕತ್ತಿ ಮದ್ದು ಗುಂಡುಗಳಲಿ ತೋರುವಂಥದಲ್ಲ ಧೈರ್ಯ
ಸೃಷ್ಟಿಯಲ್ಲಿ ಮಗುವು ಕೂಡ ಮಾಡಬಲ್ಲ ಸಹಜ ಧೈರ್ಯ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)