ಅಪ್ಪ ಅಮ್ಮ ಎಲ್ಲಾರ್‍ಗಿಂತ
ಅಜ್ಜಿ ನಂಗೆ ಇಷ್ಟ
ಅಜ್ಜಿಗೂನು ಅಷ್ಟೆ ನಾನು
ಇಲ್ದೆ ಹೋದ್ರೆ ಕಷ್ಟ.

ಗಲ್ಲ ಹಿಂಡಿ ಮುದ್ದು ಮಾಡಿ
ಚುಕ್ಕು ಬಡಿದು ತೊಡೇಲಿ,
ನಿದ್ದೆ ಬರ್‍ಲೇ ಬಿಡ್ತಾಳಜ್ಜಿ
ಕಥೆ ಹೇಳ್ತಾ ಕಡೇಲಿ!

ನನ್ ಗೊಂಬೇಗೂ ಸ್ನಾನ ಮಾಡ್ಸಿ
ಬಟ್ಟ ತೊಡಿಸಿ, ಮಲಗ್ಸಿ,
‘ಏನ್ ಚಂದಾನೋ ನಿನ್ಮಗು’ ಅಂತ
ಅಜ್ಜಿ ನಗ್ತಾಳೆ ಖುಷೀಲಿ!

ಬಲೇ ಚೂಟಿ, ಭಾಳ ಘಾಟಿ
ನಿನ್ ಕಂದ ಅಂತ್ಹೇಳ್ತಾಳೆ,
ನಿನ್ ಥರಾನೇ ಇದೂನೂ ಅಂತ
ಅದಕ್ಕೂ ಕೆನ್ನೆ ಸವರ್‍ತಾಳೆ.

ದಿನಾ ಅಜ್ಜಿ ತೀರ್‍ಕೊಂಡಿರೋ
ಅಜ್ಜನ್ ಕಥೆ ಹೇಳ್ತಾಳೆ,
ಹೇಳ್ತಾ ಹೇಳ್ತಾ ಕಣ್ಣಲ್ ನೀರು
ಯಾಕೆ ಅಜ್ಜಿ ಅಳ್ತಾಳೆ?

ಅಮ್ಮ ಬಯ್ದೆ, ಅಪ್ಪ ಹೊಡದ್ರೆ
ಅಜ್ಜಿ ರೇಗಿ ಕೂಗ್ತಾಳೆ;
‘ಇಂಥ ಮುದ್ಮಗು ಸಿಕ್ಕಿತೇನ್ರೋ’
ಅಜ್ಜನ್ಹಂಗೇ ಅಂತಾಳೆ!

ನಾನ್ ಯಾವತ್ತೂ ಅಜ್ಜೀನ್ ಮಾತ್ರ
ಬಿಟ್‌ಕೊಡೊಲ್ಲ ಯಾರ್‍ಗೂನೂ.
ಅಜ್ಜೀನ್ ನಾನೇ ಮದ್ವೆ ಆಗಿ
ಕಥೆ ಕೇಳ್ತೀನ್ ದಿನಾನೂ!
*****