ನೀಲ ದಿಗಂತಕೆ ಮೋರೆಯನೆತ್ತಿ,
ಸುಂಟರ ಗಾಳಿಯನೂ ಬದಿಗೊತ್ತಿ,
ಮುಗಿಲೊಳಗೋಡುವೆ ಮೋಡನ ಹತ್ತಿ.
ಯಂತ್ರ-ವಿಹಂಗಮ ವಾಹನವೇ.
ಐದು ಖಂಡಗಳ ಭಾರವ ಹೊತ್ತು
ಮೂರೇ ದಿನದಲಿ ವಿಶ್ವದ ಸುತ್ತು !
ಜಗದಾಕಾರವು ನಿನಗೇ ಗೊತ್ತು !
ಯಂತ್ರ-ವಿಹಂಗಮ ವಾಹನವೇ.
ಎಣ್ಣೆಯ ಕುಡಿದು ಪರಾಕ್ರಮ ತೋರಿ.
ದಶದಶ ಯೋಜನ ನಿಮಿಷಕೆ ಹಾರಿ,
ತೇಲುವ ನೀನೇ ಗಗನ-ವಿಹಾರಿ;
ಯಂತ್ರ-ವಿಹಂಗಮ ವಾಹನವೇ.
ಚಳಿಯಾದರು ಸಮ, ಮಳೆ ಬಂದರು ಸಮ.
ಒಂದೇ ವೇಗದೊಳೋಡುವ ತವ ಕ್ರಮ
ಅದ್ಭುತರಮ್ಯವು ಶ್ರೇಷ್ಠ ವಿಹಂಗಮ;
ಯಂತ್ರ – ವಿಂಗಮ ವಾಹನವೇ.
ಕೋಟಿ ಕುದುರೆಗಳ ವೇಗವು ವ್ಯರ್ಥ!
ನಿನ್ನ ಪರಾಕ್ರಮ ನಿಜ ಪುರುಷಾರ್ಥ!
ವ್ಯೋಮಸಾಗರದಿ ನೀನೇ ಧೂರ್ತ !
ಯಂತ್ರ-ವಿಹಂಗಮ ವಾಹನವೇ.
ನವ ಶತಮಾನದ ‘ಪ್ರಗತಿಯ’ ತೋರಣ !
ಹೃದಯ ಕಠೋರವು ಮನ ಬಲು ದಾರುಣ !
ಹೊಸ ಪರಿ ಯುದ್ಧಕೆ ನೀನೇ ಕಾರಣ !
ಯಂತ್ರ-ವಿಹಂಗಮ ವಾಹನವೇ.
ಕಾಳಗದಲಿ ನೀ ಕ್ರೂರ ಕಠಿನ ಯಮ;
ಬೆಂಕಿಯ ಸುರಿಮಳೆಗರೆದು, ವಿಹಂಗಮ,
ಮನೆಮನೆಗಳ ನೀ ಮಾಡುವೆ ನೆಲಸಮ,
ಯಂತ್ರ-ವಿಹಂಗನು ವಾಹನವೇ.
ದ್ವಾಪರ ಯುಗದಲಿ ಪುಷ್ಪ-ವಿಮಾನ;
ಕಲಿಯುಗದೊಳಗೇ ಯಂತ್ರಕೆ ಸ್ನಾನ !
ಮಾನವ ಸಂಸ್ಕೃತಿಯಾಯಿತು ಕ್ಷೀಣ !
ಯಂತ್ರ-ವಿಹಂಗಮ ವಾಹನವೇ.
*****









