Home / ಬಾಲ ಚಿಲುಮೆ / ಕಥೆ / ಹೆದರಿದ ನರಿಯ ಕಥೆ

ಹೆದರಿದ ನರಿಯ ಕಥೆ

ಗೋಮಾಯುವೆಂಬ ಒಂದಾನೊಂದು ನರಿಯಿತ್ತು. ಅದು ಅಲ್ಲಿ ಇಲ್ಲಿ ಹೊಟ್ಟೆಗಾಗಿ ಅಲೆಯುತ್ತಾ ಒಂದು ಯುದ್ಧಭೂಮಿಗೆ ಬಂತು. ಅಲ್ಲಿ ಹೊಟ್ಟೆತುಂಬುವ ಯೋಚನೆ ಮಾಡುತ್ತಿರಲು, ಗಾಳಿಗೆ ಆಡಿದ ಮರದ ಕೊನೆಗಳು ತಗಲಿ ಅಲ್ಲಿದ್ದ ಭೇರಿಯೊಂದು ಭಾರಿ ಶಬ್ದ ಮಾಡಿತು. ಅದನ್ನು ಕೇಳಿ ಅದಕ್ಕೆ ದಿಗಿಲಾಗಿ ಕೆಟ್ಟೆನಲ್ಲಾ ಎನ್ನಿಸಿತು. ಓಡಿ ಹೋಗೋಣ ಎನ್ನಿಸಿತು. ಆದರೂ “ವಿಮರ್ಶೆ ಮಾಡೋಣ ಬರಿ ಬರಿದೆ ಹೆದರುವುದು ಸರಿಯಲ್ಲ” ಎನ್ನಿಸಿ ಅಲ್ಲಿಯೇ ನಿಂತು ನೋಡಿತು. ಮತ್ತೆ ಗಾಳಿ ಬರುವವರೆಗೂ ಯಾವ ಸದ್ದೂ ಆಗಲಿಲ್ಲ. ಗಾಳಿಯು ಬರುತ್ತಲೂ ಕೊಂಬೆಗಳು ತಗಲಿ ಭೇರಿಯ ಸದ್ದಾಯಿತು. ಮೆಲ್ಲ ಮೆಲ್ಲಗೆ ಆ ಭೇರಿಯ ಹತ್ತಿರಹೋಗಿ ತಾನು ಒಂದು ಸಲ ಹೊಡೆಯಿತು. ಹೀಗೆ ಸದ್ದಿನ ಭೀತಿಯು ತಪ್ಪಿ ಇದು ಒಂದು ಕೊಬ್ಬಿದ ಪ್ರಾಣಿಯಿರಬೇಕು. ಇದರ ತುಂಬಾ ಕೊಬ್ಬೇ ಇರಬೇಕು. ಒಳ್ಳೆಯ ಊಟ ಸಿಕ್ಕಿತು. ಎಂದುಕೊಂಡು ಅದನ್ನು ಆನಂದದಿಂದ ಸೀಳಿ ಅದರ ಹೊಟ್ಟೆಯನ್ನು ಹೊಕ್ಕಿತು. ಒಳಗೆ ಹೋಗಿ ನೋಡಿದರೆ ಬರಿಯ ಚಕ್ಕಳ ಕಟ್ಟಿಗೆ ಅಲ್ಲದೆ ಅಲ್ಲಿ ಇನ್ನು ಏನೂ ಇರಲಿಲ್ಲ ಹಾಗೆ ಆಗಬಾರದು. ಸ್ವಾಮಿಯು ಬರಿಯ ಸದ್ದಿಗೆ ಹೆದರುವುದು ಎಂದರೇನು?”

ಪಿಂಗಲಕನು ಹೇಳಿದನು “ಹಾಗಲ್ಲ. ನಾನೊಬ್ಬನಲ್ಲ, ನಮ್ಮವರೆಲ್ಲರೂ ಹೆದರಿರುವರು ನೋಡು.”

“ಪ್ರಭು, ಇದು ಅವರ ದೋಷವಲ್ಲ. ಆಳುಗಳೆಲ್ಲ ಅರಸರಿಗೆ ತಕ್ಕಂತೆ ಇರುವರು.

ಅಶ್ವವು ಶಸ್ತ್ರವು ಶಾಸ್ತ್ರವು ವೀಣೆಯು ॥
ಭೃತ್ಯರು ವಾಣಿಯು ನಾರಿಯು ನೋಡಲು ॥
ಯೋಗ್ಯರಯೋಗ್ಯರು ಆಗುವುದಾಶ್ರಯದಿಂ ॥
ಅದರಿಂದವರಂಜಲು ನೃಪ ದೋಷ ॥ ೨೭ ॥

ಅದರಿಂದ, ತಾವು ಧೈರ್ಯವಾಗಿ ಇಲ್ಲಿಯೇ ಇರಿ. ನಾನು ಹೋಗಿ ಈ ಮಹಾಶಬ್ದವನ್ನು ಮಾಡಿದ ಪ್ರಾಣಿ ಯಾವುದು ಎಂಬುದನ್ನು ತಿಳಿದು ಬರುವೆನು.”

“ಹಾಗಾದರೆ ನೀನು ಆ ಪ್ರಾಣಿಯ ಬಳಿ ಹೋಗುವೆಯಾ?”

“ಅರಸನ ಅಪ್ಪಣೆಯಾದರೆ ಭೃತ್ಯನು ಏನನ್ನು ತಾನೇ ಮಾಡುವುದಿಲ್ಲ. ಹಾವಿನ ಬಾಯಾಗಲಿ, ಸಮುದ್ರವೇ ಆಗಲಿ ಹೊಕ್ಕೇ ಹೊಗುವನು.”

“ಹಾಗಾದರೆ ಹೋಗಿ ಬಾ ನಿನಗೆ ಒಳ್ಳೆಯದಾಗಲಿ.”

ದಮನಕನು ಅರಸನಿಗೆ ನಮಸ್ಕಾರಮಾಡಿ, ಆ ಶಬ್ದವನ್ನು ಹಿಡಿದು ಸಂಜೀವಕನು ಇನ್ನ ತಾವಿಗೆ ಹೋದನು. ನರಿಯು ಅತ್ತ ಕಡೆ ಹೋದಮೇಲೆ, ಇತ್ತ ಭಯದಿಂದ ತಲ್ಲಣಿಸುತ್ತಿದ್ದ ಸಿಂಹವು ಯೋಚಿಸಿತು:- ನಾನು ಮಾಡಿದ್ದು ಸರಿಹೋಗಲಿಲ್ಲ. ಅವನಿಗೆ ನನ್ನ ಮನಸ್ಸಿನಲ್ಲಿದ್ದುದನ್ನು ಹೇಳಬಾರದಾಗಿತ್ತು. ಈ ದಮನಕನು ಎರಡು ಕಡೆಯೂ ಸಂಬಳ ತೆಗೆದುಕೊಳ್ಳುವ ಉಭಯ ವೇತನನಾಗಿ ನನ್ನ ಮೇಲೆ ದ್ವೇಷವನ್ನು ತೀರಿಸಿಕೊಂಡರೆ ಏನು ಗತಿ? ಇವನಿಗೆ ತಾನು ಅಧಿಕಾರವನ್ನು ಕಳೆದುಕೊಂಡೆನೆಂಬ ಹೊಟ್ಟೆಯುರಿ ಇರುವುದು. ಇಂಥವರು ತಪ್ಪದೆ ತಮ್ಮ ಹಿಂದಿನ ಅರಸರ ನಾಶಕ್ಕೆ ಯತ್ನಿಸುವರು ಅದರಿಂದ, ಏನಾದರೂ ಆಗಲಿ. ಮತ್ತೊಂದು ಸ್ಥಾನದಲ್ಲಿದ್ದು ಇವನು ಏನು ಮಾಡುವನೋ ನೋಡುವೆನು. ಈ ನರಿಯು ಆ ಶತ್ರುವನ್ನು ಕರೆದುಕೊಂಡು ಬಂದು ನನ್ನ ಮೇಲೆ ಬೀಳಿಸಿ ಕೊಲ್ಲಿಸಿದರೂ ಕೊಲ್ಲಿಸೀತು” ಎಂದು ಇನ್ನೊಂದು ಕಡೆ ಹೋಗಿ ದಮನಕನ ಹಾದಿ ಕಾಯುತ್ತಿತ್ತು.

ದಮುಕನು ಹೋಗಿ ಸಂಜೀವಕನನ್ನು ಕಂಡು ಇದು ಗೂಳಿ ಎಂದು ತಿಳಿದು ಸಂತೋಷಪಟ್ಟುಕೊಂಡು ಹಿಂತಿರುಗಿ ಪಿಂಗಲಕನ ಬಳಿಗೆ ಬರುತ್ತಾ “ಒಳ್ಳೆಯದಾಯಿತು. ಇವರಿಬ್ಬರಿಗೂ ಸ್ನೇಹಮಾಡಿಸುವ ಕಾರಣದಿಂದಲೇ ಪಿಂಗಲಕನು ವಶನಾಗುವನು.ಅರಸನು ತನಗೆ ವ್ಯಸನ ಬಂದಾಗಲೇ ಇನ್ನೊಬ್ಬರ ಮಾತು ಕೇಳುವುದು. ಆಪತ್ತಿಗೆ ಸಿಕ್ಕಿರುವ ರಾಜನು ಮಂತ್ರಿಗಳನ್ನು ಗೌರವಿಸುವನು. ಆರೋಗ್ಯವಾಗಿರುವವರಿಗೆ ವೈದ್ಯನಿಂದ ಏನಾಗಬೇಕು? ಹಾಗೆಯೇ ಇದೂ!” ಎಂದು ಮುಂತಾಗಿ ಯೋಚಿಸಿಕೊಂಡು ಬಂದನು.

ಪಿಂಗಲಕನು ಬರುತ್ತಿರುವ ದಮನಕನನ್ನು ಕಂಡು ತನ್ನ ಮನಸ್ಸಿನ ಭಯವನ್ನು ಬಹುಕಷ್ಟದಿಂದ ಮುಚ್ಚಿಕೊಳ್ಳುತ್ತಾ, ಸಮೀಪಕ್ಕೆ ಬಂದು ನಮಸ್ಕಾರ ಮಾಡಿದ ಅವನನ್ನು ಹೋದ ಕೆಲಸವೇನಾಯಿತು? ಎಂದು ವಿಚಾರಿಸಿದನು. ಆ ಪ್ರಾಣಿಯನ್ನು ಕಂಡು ಬಂದೆನೆಂದರೂ ಪಿಂಗಲಕನು ನಂಬಲಿಲ್ಲ. ನರಿಯು ಆಣೆಯನ್ನು ಇಟ್ಟು ಕೊಂಡಮೇಲೆ, “ಇದ್ದರೂ ಇರಬಹುದು. ದೊಡ್ಡವರು ಯಾರೂ ಸಣ್ಣವರ ಮೇಲೆ ಕೈ ಮಾಡುವುದಿಲ್ಲ. ಏಕೆಂದರೆ.

ಬಲವಂತ ರೇಗುವನು ಸಮ ಬಲರೊಳು ॥
ಎದುರಿಸುವ ಹೆಮ್ಮರವ ಕಿತ್ತೆಸೆಯುವ ॥
ಬರುಗಾಳಿ ಬಗ್ಗಿ ಮಲಗುತ ನಮಿಸಿದ ॥
ತೃಣರಾಶಿಯನ್ನೇನು ಕೆಡಿಸುವುದೇ? ॥
ನೆತ್ತಿಯಿಂದಳಿವ ಮದಜಲಕೆ ಮುಸುಕಿ ॥
ದುಂಬಿಗಳು ಕಾಲಿಂದ ತುಳಿಯುತಿರೆಯು ॥ ೨೪ ॥

ಕೋಪಗೊಳ್ವುದು ಮುಂಟೆ ಮದ್ದಾನೆ? ಎಂದಿತು.

ನರಿಯು ಹೇಳಿತು:- ತಾವು ಹೇಳಿದಂತೆಯೇ ಆತನು ಮಹಾತ್ಮನು. ನಾವು ಅಲ್ಪರು. ಆಗಲಿ. ಆದರೂ ಸ್ಟಾಮಿಯ ಅಪ್ಪಣೆಯಾದರೆ ಆ ಮಹಾತ್ಮನನ್ನು ತಂದು ತಮ್ಮ ಭೃತ್ಯನನ್ನು ಮಾಡುವೆನು.”

ಆ ಮಾತು ಕೇಳಿ ಸಿಂಹಕ್ಕೆ ಆಶ್ಚರ್ಯವಾಯಿತು: “ನಿಜವಾಗಿಯೂ!” ಎಂದಿತು. ನರಿಯು ವಿನಯವಾಗಿ ಹೇಳಿತು; “ಸ್ವಾಮಿ, ಬುದ್ಧಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಬುದ್ಧಿಯಿಂದ ಸಾಧ್ಯವಾಗುವುದನ್ನು ಶಸ್ತ್ರಗಳಿಂದ ಆನೆಗಳಿಂದ ಕುದುರೆಗಳಿಂದ ಸೇನೆಗಳಿಂದ ಸಾಧಿಸುವುದಕ್ಕಾಗುವುದಿಲ್ಲ.”

“ಇದು ನಿಜವಾದರೆ, ನಿನಗೇ ಮಂತ್ರಿಪದವಿಯು ತಕ್ಕುದು. ಇನ್ನು ಮುಂದೆ ನಾವು ನಡೆಸುವ ಶಿಕ್ಷೆರಕ್ಷೆಗಳೆಲ್ಲವೂ ನಿನ್ನ ಮೂಲಕವಾಗಿಯೇ ನಡೆಯುವುವು.

“ದಮನಕನು ಒಡೋಡಿ ಸಂಜೀವಕನ ಬಳಿಗೆ ಹೋಯಿತು: “ಏ ಪೋಲೀ ಬಸವ, ಸ್ವಾಮಿಯಾದ ಪಿಂಗಲಕನ ಅಪ್ಪಣೆಯಾಗಿದೆ ಹೊರಟು ಬಾ. ಏನು? ಅಂಕೆ ಸಂಕೆಗಳಿಲ್ಲದೆ ಗುಟ್ಟಿರೆ ಹಾಕಿದ್ದೂ ಹಾಕಿದ್ದೇ! ಎಂದಿತು. ಅದನ್ನು ಕೇಳಿ ಬಸವನು “ಅಯ್ಯೋ, ಪಿಂಗಳಕನು ಯಾರು?” ಎಂದು ಕೇಳಲು “ಪ್ರಭುವಾದ ಪಿಂಗಲಕನು ನಿನಗೆಗೊತ್ತಿಲ್ಲವೆ? ಮೊದಲು ಆತನ ಅಪ್ಪಣೆಯಂತೆ ನಡೆ ಫಲದಿಂದ ನಿನಗೇ ತಿಳಿಯುವುದು. ನೋಡು, ಆ ಆಲದ ಮರದ ಕೆಳಗೆ ಮೃಗಗಳ ಪರಿವಾರವನ್ನು ಸೇರಿಸಿಕೊಂಡು ಕುಳಿತಿರುವವನೇ ಪಿಂಗಲಕನು. ಆತನು ಈ ವನ ಭೂಮಿಗೆಲ್ಲ ಅರಸನು.” ಎಂದು ಹೇಳಿತು.

ಹಾಗೆನ್ನುತ್ತಲೂ ಸಂಜೀವಕನಿಗೆ ಪ್ರಾಣವೇ ಹಾರಿ ಹೋದ ಹಾಗಾಯಿತು. ಆ ದುಃಖದಿಂದ ನರಿಗೆ ಹೇಳಿಕೊಂಡಿತು: “ಅಯ್ಯಾ ನೀನು ಒಳ್ಳೆಯವನು, ಚೆನ್ನಾಗಿ ಮಾತನಾಡಬಲ್ಲವನು ಎಂದು ತೋರುತ್ತದೆ. ನಾನು ಅಲ್ಲಿಗೆ ಬರಲೇಬೇಕು ಎಂದು ನಿನ್ನ ಮನಸ್ಸಾದರೆ, ಅಲ್ಲಿಂದ ನನಗೆ ಯಾವ ಭಯವೂ ಇಲ್ಲದಂತೆ ನನಗೆ ವರವನ್ನು ಕೊಡಿಸಬೇಕು.”

“ನೀನು ಹೇಳಿದ್ದು ಸರಿ. ಇದೇ ನೀತಿಯು, ಕಡಲಿನವರೆಗೂ ಹಬ್ಬಿ, ಪರ್ವತದ ಕೋಡುಗಲ್ಲಿನವರೆಗೂ ಎದ್ದಿರುವ ಭೂಮಿಯ ಅಗಲ ಎತ್ತರ ಕಾಣಬಹುದು. ಆದರೆ ಭೂಪತಿಗಳ ಚಿತ್ತದ ಆಳ ಕೊನೆ ಕಾಣುವುದಕ್ಕಾಗುವುದಿಲ್ಲ. ಅದರಿಂದ ನೀನು ಇಲ್ಲಿಯೇ ಇರು. ನಾನು ಹೋಗಿ, ಆತನನ್ನು ನೋಡಿಕೊಂಡು ಬರುವೆನು” ಎಂದು ನರಿಯು ಮತ್ತೆ ಸಿಂಹದ ಬಳಿಗೆ ಹೋಯಿತು.

ಸಿಂಹವನ್ನು ಕಂಡು ನರಿಯು “ಸ್ವಾಮಿ, ಅದು ಸಾಮಾನ್ಯವಾದ ಈ ಲೋಕದ ಪ್ರಾಣಿಯಲ್ಲ. ಅದು ಸಾಕ್ಷಾತ್‌ ಮಹೇಶ್ವರನ ವಾಹನವಾದ ವೃಷಭವು. ನಾನು ಕೇಳಿದುದಕೆ ‘ಮಹೇಶ್ವರನು ಸಂತೋಷದಿಂದ ಈ ಕಾಡನ್ನು ನನಗೆ ಕೊಟ್ಟಿರುವನು.’ ಎಂದು ಹೇಳಿತು” ಎಂದಿತು. ಪಿಂಗಲಕನು, “ಸರಿ ನಾನು ಎಂದು ಕೊಂಡುದು ನಿಜವಾಯಿತು, ದೇವತೆಗಳ ವರವಿಲ್ಲದಿದ್ದರೆ ಮಾಂಸ ತಿನ್ನುವ ಪ್ರಾಣಿಗಳು ತುಂಬಿರುವ ಈ ಕಾಡಿನಲ್ಲಿ ಹುಲ್ಲುತಿನ್ನುವ ಪ್ರಾಣಿಗಳು ಹೆದರಿಕೆಯಿಲ್ಲದೆ ಕೂಗಿಕೊಂಡು ತಿರುಗುವುದಕ್ಕುಂಟೆ? ಆಯಿತು. ಅದಕ್ಕೆ ನೀನೇನು. ಹೇಳಿದೆ?” ಎಂದು ಕೇಳಿತು.

ನರಿಯು ಹೇಳಿತು: “ಸ್ವಾಮಿ, ನಾನು ಹೀಗೆಂದೆನು:- ಚಂಡಿಕಾ ದೇವಿಯ ವಾಹನವಾದ ಪಿಂಗಲಕನೆಂಬ ಸಿಂಹವೊಂದುಂಟು. ಅದಕ್ಕೆ ಸೇರಿದ ವನವು ಇದು. ನೀನು ಅತಿಥಿಯು. ಅದರಿಂದ ಆ ಸಿಂಹರಾಜನೆ ಬಳಿಗೆ ಬಂದು ಒಡಹುಟ್ಟುಗಳಂತೆ ಊಟ ಆಟಪಾಟಗಳಲ್ಲೆಲ್ಲಾ ಒಟ್ಟಿಗೆ ಇರುವುದು ಸರಿ.” ಅದಕ್ಕೆ ಆತನೂ ಆಗಬಹುದು. ಹೋಗಿ ನಿಮ್ಮ ಒಡೆಯನಿಂದ ಭಯವಿಲ್ಲವೆಂದು ಮಾತು ತೆಗೆದುಕೊಂಡು ಬಾ.” ಎಂದನು ಇನ್ನು ತಮ್ಮ ಇಷ್ಟ.

ಅದನ್ನು ಕೇಳಿ ಪಿಂಗಲಕನು ದಮನಕನನ್ನು ಬಹುವಾಗಿ ಮೆಚ್ಚಿಕೊಂಡು “ನನ್ನ ಮನಸ್ಸಿನಲ್ಲಿದ್ದಂತೆಯೇ ಮಾಡಿಕೊಂಡು ಬಂದಿರುವೆ. ಭಲೆ, ಭಲೆ ನಾನೂ ಹಾಗೆಯೇ ಅಭಯವನ್ನು ಯಾಚಿಸುವೆನೆಂದು ಆತನಲ್ಲಿ ಹೇಳಿ ಕರೆದುಕೊಂಡು ಬಾ.” ಎಂದು ಬಹುಮಾನವಾಗಿ ಕಳುಹಿಸಿಕೊಟ್ಟನು.

ದಮನಕನು ಸಂಜೀವಕನ ಬಳಿಗೆ ಹೋಗಿ ಹೇಳಿತು: “ನಮ್ಮ ಅರಸನು ಪ್ರಸನ್ನನಾಗಿರುವನು. ಅದೃಷ್ಟವಶದಿಂದ ನನ್ನ ಮಾತನ್ನು ನಡೆಸಿ ಕೊಡುವುದಾಗಿಯೂ ಹೇಳಿದನು. ನಾನು ಧನ್ಯನಾದೆನು. ನಿನ್ನನ್ನು ಅಭಯಕೊಟ್ಟು ಕರೆದುಕೊಂಡು ಬಾ ಎಂದು ಹೇಳಿರುವನು. ಬಾ,ಆದರೆ ನಿನಗೆ ಒಂದು ವಿಷಯ ನೆನೆಪಿನಲ್ಲಿರಲಿ ನೀನು ರಾಜನ ಬಳಿ ಸೇರಿದಮೇಲೆ ಗರ್ವಪಟ್ಟು ನನ್ನ ಮೇಲೆ ಅಧಿಕಾರ ಮಾಡಕೂಡದು. ನಾನೂ ನೀನೂ ಇಬ್ಬರೂ ರಾಜ್ಯಭಾರವನ್ನು ವಹಿಸುವ ಅಮಾತ್ಯರಾಗಿ ಇರೋಣ. ರಾಜ ಮರ್ಯಾದೆಯನ್ನು ಇಬ್ಬರೂ ಸಮನಾಗಿ ಅನುಭವಿಸೋಣ.” ಸಂಜೀವಕನು “ಹಾಗೇ ಆಗಲಿ. ನೀನು ಹೇಳಿದಂತೆಯೇ ನಡೆದುಕೊಳ್ಳುವೆನು.” ಎಂದು ಮಾತು ಕೊಟ್ಟಿತು.

ದಮನಕನು ಸಂಜೀವಕನನ್ನು ಪಿಂಗಲಕನ ಬಳಿಗೆ ಕರೆದುಕೊಂಡು ಹೋದನು. “ದೇವ, ಇದೋ ಸಂಜೀವಕನು ಬಂದಿರುವನು.” ಎಂದು ಕರೆದುಕೊಂಡು ಹೋಗಿ ಮುಂದೆ ನಿಲ್ಲಿಸಿತು. ಸಂಜೀವಕನೂ ಗೌರವವಾಗಿ ಭಕ್ತಿಯಿಂದ ವಿಶ್ವಾಸದಿಂದ ನಮಸ್ಕಾರಮಾಡಿ ವಿನಯವಾಗಿ ಒಂದು ಕಡೆ ಕೂತಿತು. ಪಿಂಗಲಕನು ತನ್ನ ಬಲಗಾಲನ್ನು ಅದರ ವಿಸ್ತಾರವಾದ ಹಿಣಿಲಿನ ಮೇಲಿಟ್ಟು ಗೌರವವಾಗಿ “ಚೆನ್ನಾಗಿದ್ದೀಯಾ? ನೀನು ಈ ವನಕ್ಕೆ ಹೇಗೆ ಬಂದೆ?” ಎಂದು ವಿಶ್ವಾಸವಾಗಿ ಕೇಳಿತು. ಸಂಜೀವಕನೂ ತನ್ನ ಕಥೆಯನ್ನೆಲ್ಲಾ ಹೇಳಿತು. ಅದನ್ನೆಲ್ಲಾ ಕೇಳಿ ಪಿಂಗಲಕನ್ನು “ಸ್ನೇಹಿತನೆ, ನೀನು ಹೆದರಬೇಕಾಗಿಲ್ಲ. ನಮ್ಮಲ್ಲಿ ಒಬ್ಬನಾಗಿದ್ದುಕೊಂಡು ಬೇಕಾದ ಹಾಗೆ ಸುಖವಾಗಿ ಇರು. ನೀನು ನಿತ್ಯವೂ ಇಲ್ಲಿಗೆ ಬರುತ್ತಿರಬೇಕು. ಈ ವನದಲ್ಲಿ ದುಷ್ಟ ಪ್ರಾಣಿಗಳು ಬದುಕುವುದೇ ಕಷ್ಟ, ಅಂಥದ್ದರಲ್ಲಿ ಹುಲ್ಲು ತಿನ್ನುವವರ ಮಾತೇನು? ಅದರಿಂದ ಹಾಗೆ ಹೇಳಿದೆನು.” ಎಂದು ಹೇಳಿ ಅದನ್ನು ಕಳುಹಿಸಿಕೊಟ್ಟು, ತಾನೂ ನದಿಗಿಳಿದು ನೀರು ಕುಡಿದು ಎಂದಿನಂತೆ ತನ್ನ ಪರಿವಾರದೊಡನೆ ಕಾಡಿನಲ್ಲಿ ಹೊರಟು ಹೋಯಿತು.

ಅಂದಿನಿಂದ ಪಿಂಗಲಕನ ರಾಜ್ಯಭಾರವೆಲ್ಲ ಕರಟಕ ದಮನಕರದೇ ಆಗಿ ಹೋಯಿತು. ಪಿಂಗಲಕನು ಸಂಜೀವಕನೊಡನೆ ಮಾತು ಕಥೆಗಳನ್ನು ಆಡಿಕೊಂಡು ಸುಖವಾಗಿ ಇರುತ್ತಿದ್ದನು.

ಸಂಜೀವಕನು ಅನೇಕ ಶಾಸ್ತ್ರಗಳನ್ನು ಬಲ್ಲವನಾದ್ದರಿಂದ ಕೆಲವು ದಿನಗಳಲ್ಲಿಯೇ ಪಿಂಗಲಕನಿಗೆ ಶಾಸ್ತ್ರ ಶಾಸ್ತ್ರಗಳ ವಿಷಯಗಳನ್ನೆಲ್ಲಾ ತಿಳಿಯ ಹೇಳಿ, ಅರಣ್ಯ ಧರ್ಮವನ್ನು ಬಿಡಿಸಿ ಗ್ರಾಮ ಧರ್ಮವನ್ನು ಕಲಿಸಿದನು. ಪಿಂಗಲಕನು ಸಂಜೀವಕನನ್ನು ಒಂದು ಗಳಿಗೆಯೂ ಬಿಟ್ಟಿರಲೊಲ್ಲನು. ಮಿಕ್ಕ ಮೃಗಗಳು ಯಾರೂ ಹತ್ತಿರಕ್ಕೆ ಬರುವಂತಿಲ್ಲ. ಕರಟಕ ದಮನಕರು ಬಂದರೂ ಬಾಗಿಲಲ್ಲಿ ಕಾದಿರಬೇಕು ಎನ್ನುವ ಮಟ್ಟಿಗೂ ಆಗಿ ಹೋಯಿತು.

ಪಿಂಗಲಕನು ಆರಣ್ಯಕ ಧರ್ಮವನ್ನು ಬಿಟ್ಟನು. ಆರಣ್ಯಕ ಧರ್ಮ ಎಂದರೆ ಬಲವಾಗಿದ್ದವನು ಬಲವಿಲ್ಲದವನನ್ನು ಹೊಡೆದು ತಿನ್ನುವುದು. ಸಿಂಹವು ಬೇಟೆಗೆ ಹೊರಡುವುದು. ಸಿಕ್ಕಿದ ಮೃಗಗಳನ್ನು ಹೊಡೆಯುವುದು. ತನಗೆ ಬೇಕಾದಷ್ಟು ತಿನ್ನುವುದು. ಮಿಕ್ಕುದನ್ನು ಪರಿಜನರಿಗೆಲ್ಲಾ ಕೊಟ್ಟುಬಿಡುವುದು. ಹೀಗಿತ್ತು. ಅದು ತಪ್ಪಿ ಹೋಯಿತು. ಸಿಂಹವು ಬೇಟೆಯಾಡುವುದನ್ನು ಬಿಡಲು ಮಿಕ್ಕ ಪ್ರಾಣಿಗಳಿಗೆ ಹೊಟ್ಟೆಗೆ ಸಿಕ್ಕುವುದೇ ಕಷ್ಟವಾಯಿತು. ಎಲ್ಲಾ ಪ್ರಾಣಿಗಳೂ ಮುಖವನ್ನು ಜೋಲು ಹಾಕಿಕೊಂಡು ಕುಳಿತುಕೊಳ್ಳುವಂತಾಯಿತು. ಅರಸನು ಎಷ್ಟು ಒಳ್ಳೆಯವನಾದರೂ ಆಳುಗಳು ಹೊಟ್ಟೆಗಿಲ್ಲದೆ ಅವನನ್ನು ಸೇವಿಸಲಾದೀತೆ? ಒಣ ಮರವನ್ನು ಹಕ್ಕಿಗಳು ಬಿಡುವಂತೆ ಅವರು ಅವನನ್ನು ಬಿಡುವರು. ಹೊತ್ತಿಗೆ‌ ಸರಿಯಾಗಿ ಹೊಟ್ಟೆಗೆ ಹಾಕುವ ದೊರೆಯು ಬಯ್ಯುತ್ತಿದ್ದರೂ ಅವನನ್ನು ಆಳುಗಳು ಬಿಡುವುದಿಲ್ಲ. ಇದು ಕೇವಲ ಆಳು ಅರಸುಗಳ ಮಾತಲ್ಲ. ಜಗತ್ತಿಗೆ ಜಗತ್ತೇ ಒಂದನ್ನೊಂದು ಸಾಮ ದಾನ ಭೇದ ದಂಡ ಎಂಬ ನಾಲ್ಕು ದಾರಿಗಳಲ್ಲಿ ಹಿಡಿದುಕೊಂಡಿರುವುದು, ಅರಸು ದೇಶವನ್ನು ಕಿತ್ತು ತಿನ್ನುವನು. ರೋಗಿಗಳನ್ನು ವೈದ್ಯರು ಕಿತ್ತು ತಿನ್ನುವರು. ವರ್ತಕರು ಗಿರಾಕಿಗಳನ್ನು ಕಿತ್ತು ತಿನ್ನುವರು. ಮೂರ‍್ಖರನ್ನು ಪಂಡಿತರು ಕಿತ್ತು ತಿನ್ನುವರು. ಮೈ ಮರೆತವರನ್ನು ಕಳ್ಳರು, ಭಿಕ್ಷುಕರು ಗೃಹಸ್ಥರನ್ನು, ಹೀಗೆಯೇ ಒಬ್ಬರನ್ನೊಬ್ಬರು ಕಿತ್ತುತಿನ್ನುವುದೇ ಜಗತ್ತು. ಇದೇ ಮತ್ಸ್ಯನ್ಯಾಯವು (ನೀರಿನಲ್ಲಿ ಒಂದು ಮೀನು ಇನ್ನೊಂದು ಮೀನನ್ನು ಹಿಡಿದು ತಿನ್ನುವುದು. ಅದಕ್ಕೆ ಮತ್ಸ್ಯನ್ಯಾಯ ಎಂದು ಹೆಸರು) ಅಷ್ಟೇನು ಕೇಳಿಲ್ಲವೆ?

ಶಂಕರನು ಧರಿಸಿರುವ ಹಾವು ಗಣಪತಿಯ ವಾಹನವಾದ ಇಲಿಯನ್ನು ತಿನ್ನಬೇಕು ಎನ್ನವುದು. ಆ ಹಾವನ್ನು ಶಿವಪುತ್ರನಾದ ಸ್ಕಂದನ ವಾಹನವಾದ ನವಿಲು ತಿನ್ನಬೇಕು ಎನ್ನುವುದು. ಶಿವ ಪತ್ನಿಯಾದ ಪಾರ್ವತಿಯ ವಾಹನವಾದ ಸಿಂಹವು ಆ ನವಿಲನ್ನು ತಿನ್ನಬೇಕು ಎನ್ನುವುದು. ಲೋಕನಾಯಕನಾದ ಶಂಕರನ ಸಂಸಾರದಲ್ಲಿಯೇ ಹೀಗೆ ಮತ್ಸ್ಯನ್ಯಾಯವಿರುವುದು. ಎಂದಮೇಲೆ, ಮಿಕ್ಕ ಕಡೆಗಳಲ್ಲಿ ಇರುವುದಿಲ್ಲ ಎನ್ನುವುದು ಹೇಗೆ?

ಹೀಗೆ ಸಿಂಹವು ಬೇಟೆಯನ್ನು ನಿಲ್ಲಿಸಲು ಕರಟಕ ದಮನಕರು. ಮಂತ್ರಿಗಳಾದರೂ ಅವರಿಗೂ ಹೊಟ್ಟೆಯು ಬೆನ್ನಿಗೆ ಹತ್ತಿಹೋಯಿತು ಆಗ ಅವೆರಡೂ ಓಂದು ಕಡೆ ಕುಳಿತು ಯೋಚಿಸಿದುವು:

“ಕರಟಕ, ಆದ ಅನರ್ಥವನ್ನು ನೋಡಿದೆಯಾ? ಈ ಪಿಂಗಲಕನು ಸಂಜೀವಕನನ್ನು ಒಂದು ಘಳಿಗೆಯೂ ಬಿಡದೆ, ಅವನ ಜೊತೆಯಲ್ಲಿದು ಎಲ್ಲವನ್ನೂ ಮರೆತು ಬಿಟ್ಟಿರುವನು. ನಮ್ಮನ್ನು ಕೇಳುವವರಿಲ್ಲವಾಯಿತು. ಪರಿಜನರೆಲ್ಲರೂ ಬಿಟ್ಟು ಹೋದರು, ಏನು ಮಾಡೋಣ?”

“ದಮನಕ, ಆರಸನು ನಿನ್ನ ಮಾತನ್ನೂ ಕೇಳದಿದ್ದರೂ ನೀನು ನಿನ್ನಮೇಲೆ ಅಪವಾದವು ಬರದಿರಲಿ ಎಂದಾದರೂ ನೀನು ಹೇಳುವುದನ್ನು ಹೇಳಿಬಿಡು. ವಿದುರನು ಧೃತರಾಷ್ಟ್ರನಿಗೆ ಹೇಳಿದಂತೆ ನೀನೂ ಹೇಳಿಬಿಡು. ಆನೆಗಳೂ ಅರಸರೂ ಮದೋನ್ಮತ್ತರಾಗಿ ದಾರಿತಪ್ಪಿ ಹೋದರೆ ಎಲ್ಲರೂ ಅಮಾತ್ಯರನ್ನು ಬಯ್ಯುವರು. ಅಲ್ಲದೆ ಈ ಹುಲ್ಲು ತಿನ್ನುವ ಪ್ರಾಣಿಯನ್ನು ಅರಸನ ಬಳಿಗೆ ಕರೆತಂದವರು ಯಾರು? ನೀನೇ ನಿನ್ನ ಕ್ಯೆಯ್ಯಿಂದಲೇ ಬೆಂಕಿಯನ್ನಿಟ್ಟೆ.”

“ಅಣ್ಣ, ನಿನ್ನ ಮಾತು ನಿಜ. ಇದು ನಾನಾಗಿ ಮಾಡಿಕೊಂಡ ಅಪರಾಧ. ಆಷಾಢಭೂತಿಯ ಕೈಗೆ ಸಿಕ್ಕಿದ ದೇವಶರ್ಮನು ಹೇಳಿದಂತೆ ಇದು ಸ್ವಯಂಕೃತ ಅಪರಾಧ.”

ಕರಟಕನು ಕೇಳಿತು: “ಅದು ಹೇಗೆ?” ಎಂದು. ದಮನಕನು ಹೇಳಿತು.
*****
ಸ್ವಯಂ ಕೃತಾಪರಾಧದ ಕಥೆ ಓದಿ

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...