೧
ದೀವಳಿಗೆಯೊಳು ಕಾಂಬ
ಸಾಲು ದೀಪದ ತೆರದಿ
‘ಭಾವ’ ದೀಪಗಳೆಲ್ಲ-
ಒಂದಾಗಲಿಹವನೆಂದೋ?
೨
‘ಒಂದ’ ರೊಳು ನೂರಾಗಿ
ನೂರರೊಳಗೆನಿತೆನಿತೊ
ವಿರಸ ಭಾವಗಳುದಿಸಿ
ಹೃದಯವನು ಕೊರೆಯುತಿವೆ
೩
ಹಿಂದಿನಂತೆಯೆ ಬುದ್ಧ-
ಬಸವೇಶ್ವರರು ಜನಿಸಿ
ಒಂದರೊಳು ನೂರನ್ನು
ಮಿಲನ ಮಾಡುವರೇನೊ?
೪
ಬಂದಿಹುದು ಕಲಿಕಾಲ
ಬರಲಿಹುದು ‘ಆಕಾಲ’
ಇನ್ನಾವ ಕಾಲದಲಿ
‘ದೇವ’ ಜನಿಸುವ ನಿಹನೊ?
೫
`ದೇವ’ ಜನಿಸಲು ಸರಿಯೆ
ಜನಿಸ ದಿರ್ದರು ಸರಿಯೆ
ಒಂದರೊಳು ‘ನೂರು’ ಗಳು
ಮಿಲನವಾಗಲೆ ಬೇಕು
*****
ಹಾವೇರಿ : ೧೯೩೬








