Home / ಕಥೆ / ಕಿರು ಕಥೆ / ಲಕ್ಷ್ಮೀದೇವಿ

ಲಕ್ಷ್ಮೀದೇವಿ

“ಎಲ್ಲಿ ಹೋಗಿ ಸತ್ತನೋ ಏನೋ ತಿಮ್ಮ, ಎಂಟು ಗಂಟೆಯಾದರೂ ಬರಲೇ ಇಲ್ಲ. ಏ….” ಎಂದು ಒಳಗೆ ಶ್ರೀಮತಿ ಲಕ್ಷ್ಮೀದೇವಿಯವರು ಎಂಟು ಗಂಟೆಯಾದರೂ ಬರದಿದ್ದ ಆಳಿನ ಮೇಲೆ ಕೋಪಿಸಿಕೊಂಡರು.

ಚಹಕ್ಕೆ ಒಳಗಿನಿಂದ ಕರೆಬರಲಿಲ್ಲವೆಂದು ಲಕ್ಷ್ಮೀಪತಿರಾಯರು ಹೀಗೆ ಇಣಿಕಿನೋಡಿದರು. ಪತ್ನಿಯು ಸಿಟ್ಟಿನಿಂದ ಏನೇನೋ ಹಲುಬುತ್ತ ಕೋಣೆಯಿಂದ ಕೋಣೆಗೆ ಸುಳುಮುಳು ಅಲೆಯುತ್ತಿದ್ದಾಳೆ; ಪಾತ್ರೆಗಳನ್ನು ಸರಿಸುತ್ತಿದ್ದಾಳೆ; ವಸ್ತ್ರಗಳನ್ನು ರಾಶಿ ಹಾಕುತ್ತಿದ್ದಾಳೆ.

ರಾಯರ ಪುತ್ರನು ಏನೋ ಬಾಯಿಗೆ ಹಾಕಿಕೊಂಡು ಹೊರಗೆ ಬಂದನು. ಗೋಪೂ ನೋಡು….ಒಳಗೆ ಹೋಗಿ ನಿನ್ನ ಅಮ್ಮನ ಹತ್ತಿರ ಹೇಳು- ಆಳು ಇನ್ನೂ ಬರಲಿಲ್ಲ ಅಂತ ಕಾಣುತ್ತದೆ; ನೀನೇ ಎಮ್ಮೆ ಹಿಂಡಿ ಚಹ ಮಾಡಿಕೊಡು.”

ಪುತ್ರನು ಒಳಗೆ ಹೋಗಿ ತಂದೆಯ ಅಭಿಪ್ರಾಯವನ್ನು ತಾಯಿಗೆ ತನ್ನ ತೊದಲು ನುಡಿಯಲ್ಲಿ ತಿಳಿಸಿದನು.

ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮತಿ ಲಕ್ಷ್ಮೀದೇವಿಯವರು ಕೋಪವನ್ನೆಲ್ಲ ಕೇಂದ್ರೀಕರಿಸಿಕೊಂಡು ಹೊರಗೆ ನುಗ್ಗಿ ಬಂದು “ಅಲ್ಲ, ನನ್ನನ್ನು ನಿಮಗೆ ನನ್ನಪ್ಪ ಐದು ಸಾವಿರ ರೂಪಾಯಿ ಒಟ್ಟಿಗೆ ಕೊಟ್ಟಿದ್ದು ಎಮ್ಮೆ ಹಿಂಡಲಿಕ್ಕಲ್ಲ. ತಿಳಿಯಿತೇ?”

ಚಹವಿಲ್ಲದೆ ಮಿಡುಕುತ್ತಿದ್ದ ಶ್ರೀಮಾನ್ ಲಕ್ಷ್ಮೀಪತಿ ರಾಯರು ತಮ್ಮ ಪತ್ನಿಯ ಮಾತಿನ ಮಳೆಯಲ್ಲಿ ತೊಯ್ದು ಮುದ್ದೆಯಾಗಿ ಮಂಕನಂತೆ ಕುಳಿತುಬಿಟ್ಟರು. ಚಕಾರ ಮಾತಾಡಲಿಲ್ಲ ಅವರು.

ಆಳು ಬಂದು ಎಮ್ಮೆ ಹಿಂಡಿ, ಚಹಮಾಡಿ, ಇಬ್ಬರೂ ಕುಡಿದು ತಮ್ಮ ನಿತ್ಯದ ಕಾರ್ಯಕಲಾಪಗಳಿಗೆ ತೊಡಗಿದರೇನೋ ನಿಜ. ಆದರೆ ರಾಯರ ತಲೆ ಕಿರಿಕಿರಿ ಉಳಿಯಿತು.

ಸಂಜೆಯ ಮುಂದೆ ಅವರು “ನಾಳೆ ಸಂಜೆ ಬರುತ್ತೇನೆ.” ಎಂದು ಹೇಳಿ ಹೊರಟರು.

ಮರುದಿನ ಅವರು ಬರಲು ತುಸು ತಡವಾಯಿತು; ಸಂಜೆಯ ಬದಲು ರಾತ್ರಿಯಾಯಿತು. ಹೊಸ್ತಿಲಿಗೆ ಕಾಲಿಡುವ ಮುಂಚೆ ಲಕ್ಷ್ಮೀದೇವಿಯವರು ತಮ್ಮ ಪತಿಯು ತಡವಾಗಿ ಬಂದ ಬಗ್ಯೆ ಗುಡುಗಿ ಮಿಂಚಿ ಮಾತಿನ ಮಳೆಗರೆದರು.

ರಾಯರು ಚಕಾರ ಮಾತಾಡದೆ ಐದು ಸಾವಿರ ಮುಟ್ಟಿದ ಬಗ್ಗೆ ತಮ್ಮ ಮಾವಂದಿರು-ಅರ್ಥಾತ್ ದೇವಿಯವರ ತಂದೆಯವರು ಕೊಟ್ಟ ಪಾವತಿಯನ್ನು ತಮ್ಮ ಪತ್ನಿಯ ದೃಷ್ಟಿಗೆ ಹಿಡಿದರು.

ಲಕ್ಷ್ಮೀದೇವಿಯ ಕಣ್ಣು ತುಂಬಿ ಬಂದುವು. ಅವರು-ಅಲ್ಲ-ಅವಳು-ನಿಜವಾಗಿ (ಕಂಬನಿ) ಮಳೆಗರೆದಳು.

ಮರುದಿನ ಮುಂಜಾನೆ ರಾಯರು ಎಚ್ಚರಾಗಿ ಕಣ್ಣು ತೆರೆಯುವಾಗ ಲಕ್ಷ್ಮೀದೇವಿ ಕಸ ಹೊಡೆಯುತಿದ್ದಾಳೆ!
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...