‘ನಂದನವನ ಮಕರಂದವನು ತರಲು ನಡೆದ ಜಾಣ!
ಬಂದೆಯಲ್ಲ! ತಂದುದೇನು?’ `ಬರಿಯ ಪಂಚಪ್ರಾಣ.
ಮಿಂಚಿತೆಂದು ಮುಂದೆ ನಡೆದೆ. ಕಾಮಾಕ್ಷಿಯೆ! ನಿನ್ನ
ಬಿಟ್ಟ ದಿನವೆ ಕವಿಯಿತೆನ್ನ ಕತ್ತಲಂಥ ಬನ್ನ!
ನಂದಿತೇನೊ ಎನ್ನ ಬೆಳಕು ಇಂಗಿತೇನೊ ಘ್ರಾಣ?
ಅಂತೆ ಬಂತು ನಿನ್ನನರಸಿ ನನ್ನ ಪಂಚಪ್ರಾಣ!’
‘ಪಣವ ತೊಟ್ಟ ವೀರನಿಂತು ರಣವ ಬಿಟ್ಟು ಬರುವನೆ?’
‘ಪಣವೆ ಅವನ ತೊರೆಯೆ ರಣವ ತೊರೆದು ಬಾರದಿರುವನೆ?
ಪಯಣವೆ ಗುರಿಯೆ೦ದು ನಡೆದೆ. ದಾರಿದೋರಿದಾತನು
ತಿರುಗೆಂದನು. ತಿರುಗಿ ಬಂದೆ ನೆನೆಯುತವನ ಮಾತನು.
ಇಲ್ಲ. ನಲ್ಲೆ! ಯಾವ ದ್ರೋಹವಿಲ್ಲ. ನನ್ನ ತ್ರಾಣ
ಕುಂದಿತಷ್ಟೆ, ಹಿಂದುಳಿಯಲು ನೀನು ಪಂಚಪ್ರಾಣ!’
‘ನನ್ನ ನಲ್ಲ ಲೋಕಮಲ್ಲನವನ ತ್ರಾಣ ಹಿಂಗಿತೆ?’
‘ಕೇಳು, ನಲ್ಲೆ! ಸಂದೇಹ ನಿನ್ನ ಮನದಿ ತಂಗಿತೆ?
ನಂದನದಲರೆಂದು ತಿಳಿದ ಮಲರಿನ ವಿಷವಾತವು
ಮರಣ ಜಾಲದಂತೆ ಬೀಸಲೆಲ್ಲೆಡೆಗಾಘಾತವು
ಕುತ್ತದಿರಲಿ ನನ್ನಸುವನು; ಬತ್ತದಿರಲಿ ಘ್ರಾಣ;
ಉಳಿದುದಳಿದರೇನು ಎಂದೆ: ತಂದೆ ಪಂಚಪ್ರಾಣ?’
‘ರಾಜಭಭೃ೦ಗ ನಿನ್ನ ನಂಗ ಸಂಗವೆನ್ನ ಮುಕ್ತಿಯು.’
‘ನೀನೆ ಜೇನು, ನಿನ್ನ ಸಾಮರಸ್ಯವೆನ್ನ ಶಕ್ತಿಯು!
ನಾವು ಕಟ್ಟಿದಂಥ ಹುಟ್ಟು ಸಾಹಸಿಗಳ ತೊಟ್ಟಿಲ
ನಾವು ಕೂಡಿಸಿಟ್ಟ ಜೇನಿಗೆಲ್ಲ ನಾಡೆ ಬಟ್ಟಲು
ಅಮೃತನಾಗಿ ಉಳಿಯಲೆಮ್ಮ ಜೀವದೇಕತಾನ:
ದಿವ್ಯದೇವಯಾನದಲ್ಲಿ ನನ್ನ ನಿನ್ನ ಪ್ರಾಣ!’
*****








