(೧)
ಮನುಕುಲದ ಕೆನ್ನೀರ ಮಡುವಿಗಿಹ ನಡುಸುಳಿಯ
ನಟ್ಟನಡುವೆಯೆ ನಿಂತು ಬರೆಯುತಿಹೆನೀ ಮಾತ.
ಎದೆ ಬೆಂದು ಬೇಯಿಸಲು,-ಓದುಗನೆ ಮುನಿಯದಿರು
ಸಟಿಯಲ್ಲ, ಕನಸಲ್ಲ ನರನ ರಕ್ಕಸತನವು.
ಇಲ್ಲಿಯೇ ಕೋಟೆಕೊತ್ತಳವ ಕಟ್ಟುವ ಮುನ್ನ-
ವಿತ್ತೊಂದು ಬೆಟ್ಟವಿದು. ವನಚರರು ಬಾಳಿದರ-
ದೆನಿತೊ ವರ್ಷಗಳಿಲ್ಲಿ-ದ್ರೂಯಿಡರು, ಬ್ರೀತನರು.
ಕಲ್ಲಿನಾಯುಧಗಳನೆ ರುಳಪಿಸುತ ಹೋರಿದರು,
ಮೈಗಳನು ನೀಲಿ ಹಚ್ಚೆಗಳಿಂದ ಚುಚ್ಚಿದರು,
ಕೂಡಿ ಹೊಡೆದಾಡಿದರು, ಕಾಡಿದರು, ಮಡಿದರು.
ಮುಂದೆ ಬೆಟ್ಟವ ಸುತ್ತಿ, ನಿತ್ಯ ಪ್ರವಹಿಸುತಿರುವ
ಕಾಲಕಾಳ್ಪುರದ ನೀರೆಲ್ಲ ಕಣ್ಸವಿಗೊಂಡು
ರೋಮದಾ ಟೈಗ್ರಿಸದ ಸಂಗಮವ ಕೋರಿತ್ತು.
ನೋಡಿದೆನು ರೋಮರಾಜ್ಯದ ಶಿಲಾಶಾಸನದ
ಮುರಿಗಳನು, ಹಾಳಾದ ನಿರ್ಜರರ ಮೂರ್ತಿಗಳ,
ಒಡೆಯನನುಯಾಯಿಯನು ಬಂಧಿಸಿದ ಮೋಡಿಯನು;-
ರಕ್ತ ಕುದಿಯಿತು ರೋಮರೋಮದಲಿ ನವಿರೆದ್ದು
ಬಡವರನು ಬಲ್ಲಿದರು ಕೆರಳಿದುದ ಕೇಳ್ದೊಡನೆ,
ಅದಕಂತೆ ರೋಮವಾಗಿಹುದು ಕಾಲನ ಹೋಮ.
(೨)
ಕಳೆಯಿತು ಶಿಲಾಯುಗವು. ಕಳೆದವೈ ರೋಮಯುಗ-
ದನ್ಯಾಯ ನ್ಯಾಯಗಳು. ಬೇರೊಂದು ಯುಗ ಬಂತು
ಜಗವನ್ನು ಬದಲಿಸುವ ಪಣ ತೊಟ್ಟು, ಮಧ್ಯಯುಗ
ತೋರಿತ್ತು ತ್ರಿಮುಖಗಳ, ಧರ್ಮವದಕೊಂದು ಮುಖ,
ಪ್ರೇಮವಿನ್ನೊಂದಹುದು; ಯುದ್ಧಶ್ರೀ ಮಗುದೊಂದು.
ಧರ್ಮವಿದು: ಗುರುವೊಬ್ಬ ಕುರುಬನವ,-ಮಂದಿ ಕುರಿ;
ಓದಿಲ್ಲ, ತಿಳಿವಿಲ್ಲ ಕರುಡುನಂಬಿಕೆಯುಳಿದು.
ಪ್ರೀತಿಯ ವಿಚಿತ್ರರೀತಿಯ ನೋಡಲೆಳಸುವಿಯ?
ಬಾರಿಲ್ಲಿ ಮೇರಿರಾಣಿಯ ಶಯನಮಂದಿರಕೆ.
ಇದು ಮಂಚವವಳದಿದು ಹಾಸಿಗೆಯು. ಮತ್ತಿಲ್ಲಿ
ಪವಡಿಸಿದಳವಳು ಕಾದಲನೊಡನೆ, ಪತಿಯೊಡನೆ;
ಋತುವಿಗೊಬ್ಬೊಬ್ಬ ನಾಯಕನೊಡನೆ ರತಿಸಿದಳು.
ಗತಿಸಿದಳು ನಿರ್ಗತಿಕೆಯಾಗಿ ಕೊನೆಗಾಲದಲಿ
ದಯೆ, ಮಾಯೆ, ಸೌಂದರ್ಯವಿಲ್ಲ ದೆಲಿಝಾ ರಾಣಿ
ರತಿಗೆ ಪ್ರತಿರತಿಯಾದ ಮೇರಿಯನು ಕೊಲ್ಲಿಸಲು.
ಕಾಳಗಂಗೊಡುವವರ ಕಂಟಮಟ ಹೊಗಳುವಿಯ?
ನೋಡುತಾಯುಧಶಾಲೆಯನು ನಿಂತಿರೊಂದು ಕ್ಷಣ:
ನೂರು ಚಿರ್ಚಿನ ಕೌರ್ಯಗಳನು ಮೀರುವ ಬರ್ಚೆ,
ಏಳುಮೆಟ್ಟಿನ ಹುಲಿಯನಂಜಿಸುವ ಹುಲಿಯುಗುರು,
ಸೋಂಕಿ ಕೊಲುವ ಕುಠಾರ, ನೂಂಕಿ ನಲಿವ ಕಠಾರಿ,
ತ್ರಿಶೂಲ, ರಣಗೊಡಲಿ, ರತ್ನ ರಂಜಿತ ಖಡ್ಗ,
ಕಣ್ಣಾಲಿಯಲಿ ಕಾಂಬ ಗೊಂಬೆಯೆದೆಯನೆ ಸೀಳಿ
ಸರಿವಂಥ ಮೊನೆಯೀಟಿ, ತೋಫು, ಗುಂಡು, ಗುರಾಣಿ,-
ಮಧ್ಯಯುಗದೆದೆಯ ಪಾಷಾಣತೆಯ ಕುರುಹುಗಳು
ನೋಡಿದೋರಂತೆ ನಿಂತಿವೆ ಸಂಗ್ರಹಾಲಯದಿ:
ಯುಗಗಳೆಂಬೀ ಮೃಗಗಳನು ಬೇಟೆಯಾಡುತ್ತ
ಕಾಲಪುರುಷನು ತನ್ನ ಕಟ್ಟಡದ ಕೈಸಾಲೆ-
ಯಲ್ಲಿ ತಂದಿರಿಸಿದೊಲು ದಂಷ್ಟ್ರದೊವಲುಗಳನ್ನು
ಮಧ್ಯಯುಗ ನಾಗರೀಕತೆಯ ದೇಹವಿದಿಲ್ಲಿ.
ಮಗಳೊಡನೆ ಬಂದೊಬ್ಬ ಮುದುಕಿ ಬಿದ್ದಳು ಬವಳಿ
ಬರಲೇರಿಃ ಬರ್ಜಿಯಿಂದಾಚೆಯೆಂದತಿ ಚೀರಿ.
ತಾಯಂದಿರನು ಕೂಡಿ ಬಂದ ಮಕ್ಕಳು ಕಣ್ಣು
ಬಿಡುತಿದ್ದವೀ ಭಯಾನಕ ಸೃಷ್ಟಿಯನು ನೋಡಿ.
ನಮೋ! ನಮೋ! ಮಧ್ಯಯುಗವೇ! ನಮೋ! ನಮೋ!
ವರವೊಂದನಿತ್ತು, ಮುಂದಕೆ ಸಾಗು. ನಮ್ಮಗಳ
ದಾರಿಯಲಿ- ದಾರುಣರುಣಾರುಣದ ದಾರಿಯಲಿ-
ಬಾರದಿರು. ನೀನಿಲ್ಲದಿಹುದು ರುಧಿರ ಸಮೃದ್ದಿ.
(೩)
ಕೊತ್ತಳದ ತುದಿಬಂಡೆಯೇರಿದೆನು. ಮಾನವನ
ಹೊಲೆನಡತೆ ಬತ್ತಳಿಕೆಯಲಿ ಬಾಣ ಮುಗಿದಿಲ್ಲ.
ಮನುಕುಲದ ಪಾಪಮಂದಿರದ ಗರ್ಭವಿದೆನಲು
ಗತಿಸಿದ ಮಹಾಯುದ್ಧಕೆಂದಿಟ್ಟ ಸ್ಮಾರಕವು
ಕಣ್ಮನವನಂಜಿಸಿತು. ದಿಟ್ಟಿಸಿದೆನಡಿಯಿಕ್ಕಿ,-
ನಿಟ್ಟಿಸಿದೆ ಮರಣ ಕೊರೆದಿರುವಮರಶಾಸನವ.
ಗೋಡೆಗೋಡೆಗೆ ಶಿಲ್ಪಿ ನಿರ್‍ಮಿಸಿದ ಸೈನಿಕರು,-
ಹೇಳಹೆಸರಿಲ್ಲದರ ಪಡುಶಿಲಾಮೂರ್ತಿಗಳು-
ಕಾಸಿ ಕಬ್ಬಿಣ ಕಂಚಿನಲಿ ಹೊಯ್ದ ಪ್ರಾಣಗಳು-
ಮೃತದೇಹಗಳನೆ ತುಂಬಿಹ ಪ್ರಾಣವಾಯುಗಳು-
ಮೂಡಲಿವೆ ಭಿತ್ತಿಯಿಂದೀ ಚಿತ್ರಭಿತ್ತಿಯಲಿ.
ತಾಯ್ನಾಡ ಕರೆಯೆಂದು ಮೋಸಗೊಂಡಿಹ ಮುದುಕ,
ಕರ್ತವ್ಯವೆಂಬಾತ್ಮವಂಚನೆಗೆ ಗುರಿಯಾದ
ನವಯುವಕ, ಬಾಲಲೀಲೆಯ ತೊರೆದಮಾನುಷರ
ಹೊಂಚಿನಲಿ ತುತ್ತಾದ-ಮುದ್ದು ಶಿಶು,-ಎಲ್ಲರೂ
ಸಾಲ್ಗೊ೦ಡು ನಡೆದರಾ ಪ್ರಳಯಾಗ್ನಿ ಯುದ್ಧದಲಿ.
ನೋಡಿದಶ್ವಾರೋಹಿಗಳ ಸಾಲು, ಕಾಲಾಳು-
ಗಳ ದಂಡು, ಕಡಲ ಕಾಳಗದವರ ಬಳಗವಿದು,
ಕಪ್ತಾನರಿಡಿಹಿಂಡು. ಚಾಣಕ್ಯತಂತ್ರದಲಿ,
ಕೊಲೆಪಾತಕಿಯ ಕಲೆಯ ಸಾಗುವಳಿಸುವ, ಖಳರ,
ಧೂರ್ತರಾಕಾಂಕ್ಷೆಗಳ ಪೂರೈಸುವದೆ ಮೋಕ್ಷ-
ವೆಂದು ನಂಬಿದ ಜನವು ಮರಣವನೆ ಗುರಿಯಿಟ್ಟು
ಕೊಲ್ಲುತಿದೆ, ಸಾಯುತಿದೆ, ಕೊಲ್ಲುತಿದೆ, ಸಾಯುತಿದೆ.
ಕಿಂಕರ್ತವ್ಯಂ? ಯುದ್ಧಸ್ವ. ಕಿಂಕರ್ತವ್ಯಂ? ಯುದ್ಧಸ್ವ.
ಯುದ್ಧಮೇಕಂ ಶರಣಂ ವ್ರಜಂ. ಮೋಕ್ಷ ಮಾಪ್ಸ್ಯಸಿ.
ಇದೆ ಅವರ ಬೈಬಲ್ಲು, ಗೀತೆ, ಬಗೆಯಡಿಗಲ್ಲು.
ವಾರ್ ಟು ಎಂಡ್ ವಾರ್; ವಾರ್ ಟು ಎಂಡ ವಾರ್.
ಇಂತು ಶಂಖಧ್ವನಿಯು. ಇಂತಹರ ರುಧಿರಸ್ವನ.
ಜನರ ಕಿವಿ ಗಡಚಿಕ್ಕಿ ಕಣ್ಗೆ ಕತ್ತಲೆ ಕವಿದು
ಮಂಕುಹಿಡಿಯಲು ಬುದ್ಧಿ, ಹಿರಿಕಿರಿಯರೆನ್ನದಲೆ
ಮದ್ದುಗೊಳವೆಯ ಕೊಂಡು ಎದ್ದರಲ್ಲವೆ ಅವರು?
ಕುದುರೆ ತುಳಿದಿತ್ತಿವನ, ತೋಫು ನುಂಗಿತ್ತವನ;
ಲಕ್ಷೋಪಲಕ್ಷ ಜನ ವ್ಯರ್ಥ ಸಾಯುವರಲ್ಲ,-
ಲಕ್ಷ್ಯಕ್ಕೆ ತಾರಿರೋ! ಎಂದು ಕೂಗುವ ತೆರದಿ
ಮಂದಿರದ ಭಿತ್ತಿಗಳ ಕಾಂಡಪಟದಲ್ಲಿಂತು
ಮೂಡಿಸಿದನೀ ಮಹಾಮರಣಯಾತ್ರೆಯ, ಶಿಲ್ಪಿ.
ಕಂಡೆನೊಬ್ಬಳು ಗರತಿ ತುಸು ಹಿಂದೆ ಬರುತಿಹುದ.
ಅಜ್ಞಾತಯೋದ್ಧರಾಮೂರ್ತಿ ಶಾಲೆಯಲಿನ್ನು
ಕಾದಲನ ಗುರುತಿಸಲು ಬಾರದೆಯೆ ಮರುಗಿದಳು.
ನೆನೆದಳೀ ದುರ್ಭಾಗಿಗಳ ಜೊತೆಗೆ ತನ್ನ ಪತಿ-
ಯಸುವ ಬಿಸುಟಿದ ಬಗೆಯ, ತುಂಬುತ್ತ ಕೋಡಿಯೊಡೆ-
ದವು ಕಣ್ಣು. ಪರಿಚಯದ ಛಾಯೆ ಹೊಳೆಯಲದೊಂದು
ಕೃತಿಯಲ್ಲಿ! ಹಾ! ನಲ್ಲ! ಹಾ! ಮನೋಜ್ಞನೆ! ಎಂದು
ಚೀರಿ ನೆಲಕುರುಳಿದಳು. ಹೊಸ ಯುಗವೆ! ಹೊಸ ಜಗವೆ!
ನೀವು ಮಾಡಿದುದೇನು? ಹೊಸ ಸಮಸ್ಯೆಯನೊಂದ-
ನಾರೋಪಿಸಿದಿರಿಂದು, ಹಿಂದೊಬ್ಬ ಕಲ್ಲೊಗೆದು
ಕೊಲುತಿದ್ದನೊಬ್ಬನನು, ಬಾಂಬಯಲಿನಿಂದಿಂದು
ಬಾಂಬೆಸೆದು ಬೆಂಕಿಯಡಬಹುದು ಪಟ್ಟಣಗಳಿಗೆ.
ನಾಗರೀಕತೆಯಿಂತು ಹಿಂಸೆಗೆಡೆಯಿಟ್ಟಿರಲು
ಆಲೆಯೋಣ ಕಾಡು ಜನರಾಗುತ್ತ ಕಾಡುಗಳ,
ತೊರೆಯೋಣ ನಾಡುಗಳ ಹೃದಯ ಕಲುಷಿತವಿರಲು.
ಬದ್ಧಿಯಿದ್ದೇನು ಫಲ, ವಿದ್ಯೆಯಿದ್ದೇನು ಫಲ?
ಹುಸಿನಗೆಯ ನಕ್ಕೆಂತು ಹಸನಗೆಯ್ಯುವದಿಳೆಯ?
(೪)
ಎದೆಯ ತಿದಿಯಿಂದ ನಿಗಿನಿಗಿ ಕೆಂಡದುಸಿರಂತೆ
ನೆಗೆದಿತ್ತು, ನಿಟ್ಟುಸಿರು. ದೂರ ನೋಟವು ಹೊರಳಿ
ಗಾವುದಗಳಾಚೆ ಚಿರಮಧುರ ನಿದ್ರೆಯಲಿರುವ
ಶಾಂತಪ್ರಶಾಂತ ಸಾಗರವನಾಲಂಗಿಸಿತು.
ಕೋಟೆಯಡಿಯಲಿ ರಾಜಮಾರ್ಗಗಳಲೆಡಬಿಡದೆ
ಟ್ರಾಮು ಮೋಟರು ಬಸ್ಸು ಚಿನ್ನರಾಟಿಗೆಯಂತೆ
ಮಾಟಾಗಿ ಸಾಗಿಹವು. ಹಲವು ಗೊಂಬೆಗಳಂತೆ
ಜನಸಂದಣಿಯ ಜಾತ್ರೆ ಸಂಸಾರ ನಡೆದಿಹುದು.
ದೇವರಿತ್ತಿಹ ಬುದ್ದಿಯನು ಬಳಿಸದಾದೆವೆ?
ಏನು ದೈವವೆ ಕಾಡು ಮಿಗದಂತೆ ಕಾಡುವದೆ?
ಧವಲಗಿರಿಯನಿತು ಬಿತ್ತರವಡಿಯೆ ಪಾಂಡಿತ್ಯ
ಹೃದಯವೆಳ್ಳಷ್ಟು ಮಾರ್ಪಡದೆ ಬದುಕಿಹೆವಾವು
ಹಗೆತನದ ವಿಷ ಮಣಿಸಿದಂಥ ಒಗೆತನದಲ್ಲಿ!
ಇಂದಿನೆಮ್ಮಯ ಬೇನೆಗಳನು ತಿಳಿದವರಾರು?
ಬರಲಿರುವದಂತೆ ಸಾಯುಜ್ಯ ಸಮತೆಯದೊಂದು;
ಧರಣಿಯಾಗುವಂತೆ ಸ್ವರ್ಣ ಸ್ವಪ್ನದೊಲಂದು
ಪಡೆದಪ್ಪ ದುಡಿದಪ್ಪರೆಂಬ ಭೇದಗಳಳಿದು.
ಬರಲಿರುವದಂತೆ ಇದು,-ಅಂತೆ, ಅಂತೆಯ ಕಂತೆ!
ಇದನರಳಿಸಲು ಇನ್ನು ಮುಂದೆ ಹರಿಯುವವಂತೆ
ಶೋಣಿತದ ಹೊನಲಶ್ರುಜಲದ ವಾರಿಧಿಯೊಳಗೆ.
ಆನಂದದಿಂದುದ್ಭವಿಸಿ ಬಂದ ಧಾರುಣಿಯ-
ಲೊಂದು ಮಹದಾನಂದದಾಳಿಕೆಯ ನಿಲ್ಲಿಸಲು
ಮನೆಮನೆಯ ದೀಪವನು ನಂದಿಸುವದೇ ಹಾದಿ-
ಯೆಂಬುಸಿರು ದಿಟವಿರಲು,-ವಿಧಿಯು ರುಧಿರಪ್ರಿಯವು!
ವನಚರರ ಯುಗದೊಳೀ ಬೆಟ್ಟದೆಡೆ ಹಬ್ಬಿತ್ತು
ಕಾಡು ಮಿಗಗಳ ಭಯವು; ರೋಮದಾಳಿಕೆಯಲ್ಲಿ
ಹಿಂದುಳಿದ-ಮು೦ಬರಿದ ಜನತೆಗಳ ಗುದುಮುರಿಗೆ;
ಮಧ್ಯಯುಗದಲ್ಲಿದರ ಮುಡಿಗೆ ಕೋಂಟೆಯ ಕಟ್ಟಿ
ಬಾಳಿದರು ಒಲವು-ಚೆಲುವುಗಳ ಹೋಳಿಯನಾಡಿ.
ಇಂದಿಗೋ! ಕೊಲೆಯೆಂಬ ಭಿಲ್ಲಿಣಿಗೆ ತಾಯ್ನಾಡ
ಪ್ರೀತಿಯೆಂಬೊಂದು ಕುಂಕುಮದ ಬೊಟ್ಟಿಟ್ಟು ಕಾ-
ಡಿಗೆಯಿಟ್ಟು ಪಟ್ಟಗಟ್ಟಿಹರಿಲ್ಲಿ ಮತ್ತವಳ
ಸೇವೆಯಲಿ ತೀರಿರುವರಮರರಿಹರೆಂದುಸುರಿ.
ಹಾಡಿಕೊಂಡತ್ತರೇನರಣ್ಯರೋದನವಲ್ಲೆ?
ಹೊಂಗೆದಿರ ಮುಳುಗಿದನು. ಚಿಕ್ಕೆಗಳು ಬೆಳಗಿದವು.
ತಂತಿದೀಪಗಳೂರ ತುಂಬಿ ತಿಂತಿಣಿಸಿದವು.
ದೂರ ಕಂಡ ಸಮುದ್ರ ಮುಗಿಲ ಮರೆಯಾಗಿತ್ತೆ-
ಡಿನ್‌ಬರೋದಲಿ ರಾತ್ರಿ ಜ್ಯೋತಿಮಯವಾಗಿತ್ತು.
ಇತಿಹಾಸ ರಾಕ್ಷಸನ ವಿಕಟಹಾಸವ ನೆನೆದು
ತ್ವೇಷಗೊಂಡಿಹ ಮನಕೆ ಭವಿತವ್ಯತೆಯ ಬ್ರಹ್ಮ-
ರಾಕ್ಷಸನ ರೂಪದಾವಿರ್ಭಾವ ಬೇಡೆಂದು
ತೆರೆಮರೆಯನಿಳಿಬಿಟ್ಟು ತೋರಿಕೆಗೆ ನಡೆದಿದ್ದೆ
ಮಾನವರ ವರಿಸಿದ್ದ ಮಾಯೆಯೆಡೆಗೆ.
*****








