“Mind is man, not body” ಎಂಬುದು ಪ್ರಾಜ್ಞರ ಮಾತು. ಬಹುಶಃ ಪ್ರತಿಯೊಬ್ಬನೂ ಮನನ ಮಾಡಿಕೊಳ್ಳಬೇಕಾದ ಸಂಗತಿ. ಮಾನವ ಜಗತ್ತನ್ನು ಅವಲೋಕಿಸಿದರೆ ಭೌತಿಕತೆಗಿಂತ ಭೌದ್ಧಿಕತೆಗೆ ಹೆಚ್ಚಿನ ಪ್ರಾಶಸ್ತ್ಯ. ಆದರೆ ನಿಜಕ್ಕೂ ಇದು ಪುರುಷನಿಗೆ ಮಾತ್ರ ಅನ್ವಯಿಸುತ್ತದೆಯೇ ಎಂಬ ಗೊಂದಲ ಮೂಡುತ್ತದೆ.ಯಾಕೆಂದರೆ ಸ್ತ್ರೀಯನ್ನು ಮಾನವ ಜಗತ್ತು ಭೌತಿಕ ಶರೀರವಾಗಿಯೇ ನೋಡಲು ಪ್ರಯತ್ನಿಸುವ ಸಂಗತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಹೆಣ್ಣು ಬರಿಯ ದೇಹ ಎಂಬ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಆಧುನಿಕತೆಯಲ್ಲಿ ಕಂಗೊಳಿಸುತ್ತಿರುವ ಜಗತ್ತಿನ ರೀತಿನೀತಿಗಳು ಬದಲಾದರೂ ಸ್ತ್ರೀ ಕುರಿತ ಸಮಾಜದ ದೃಷ್ಟಿಕೋನಗಳು ಬದಲಾಗಲು ಇನ್ನೆಷ್ಟು ಕಾಲವಾಗಬೇಕೋ? ತಿಳಿಯದು.
ಇಂತಹುದೇ ಒಂದು ಸನ್ನಿವೇಷ ನನ್ನ ಅನುಭವಕ್ಕೆ ಬಂದಿದ್ದು ವಾಟ್ಸಪ್ ಮೂಲಕ. ಮೊನ್ನೆ ಮೊನ್ನೆ ವಾಟ್ಸ್ಪಪ್‌ನಲ್ಲಿ ಅದೊಂದು ವಿಡಿಯೋ ವೈರಲ್ ಆಗಿ ಪ್ರಸಾರವಾಗುತ್ತಿತ್ತು. ಅದೆಂದರೆ ಯಾವುದೋ ಕಾಲೇಜಿನ ಹುಡುಗಿಯರು ಕ್ಲಾಸು ಬಂಕ್ ಮಾಡಿ ಕಾಲೇಜಿನ ಮುಖ್ಯದ್ವಾರದಿಂದ ಹೊರಹೋಗದೇ ಹಿಂದಿನಿಂದ ಕಾಲೇಜು ಕಂಪೌಂಡ ಹಾರಿ ಗುಂಪುಗುಂಪಾಗಿ ಹಾರಿ ಹಾರಿ ಹೋಗುತ್ತಿದ್ದ ದೃಶ್ಯವದು. ಅದನ್ನು ವೀಕ್ಷಿಸಿದಾಗ ಉಂಟಾದ ಮೊದಲ ನೋವು ಇಂದಿನ ಯುವ ಜನರಲ್ಲಿ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರಲ್ಲೂ ಸಾಮೂಹಿಕ ಕುಕೃತ್ಯ ಅಥವಾ ಅಪರಾಧಿ ಮನೋಭಾವ ಬೆಳೆಯುತ್ತಿರುವುದು. ಇನ್ನೊಂದು ಗಂಡು ಹೆಣ್ಣು ಬೇಧವಿಲ್ಲ ಎಂಬುದನ್ನು ಪ್ರದರ್ಶಿಸಲು ಯುವ ಜನತೆ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು. ಎರಡೂ ನಕರಾತ್ಮಕ ನಿಲುವುಗಳೇ.ಇವೆರಡಕ್ಕೂ ಮಿಗಿಲಾಗಿ ಕಿರಿಕಿರಿ ಕೊಟ್ಟ ಸಂಗತಿ ಎಂದರೆ ಆ ವಿಡಿಯೋ ಕೆಳಗಡೆ ಎಂಥಾ ಕಾಲ ಬಂತಪ್ಪ! ಈಗ ಹುಡುಗಿಯರು ಗೋಡೆ ಹಾರುತ್ತಾರಲ್ಲ! ಎಂಬ ಉದ್ಗಾರದ ಸಾಲುಗಳಿದ್ದದ್ದು. ನಿಜಕ್ಕೂ ಅದು ಕಾಲೇಜಿನ ಶಿಸ್ತು, ನೀತಿ ನಿಯಮಗಳ ಉಲ್ಲಂಘನೆಯೇ ಆಗಿತ್ತು. ಕಲಿಯಲು ಬರುವ ಯಾವ ವಿದ್ಯಾರ್ಥಿ ವ ವಿದ್ಯಾರ್ಥಿನಿ ಮಾಡಬಾರದ ಕೆಲಸ. ಆದರೆ ಗಮನ ಸೆಳೆದದ್ದು ಆ ಕೃತ್ಯವನ್ನು ಹುಡುಗ ಮಾಡಿದರೆ ಪರವಾಗಿರಲಿಲ್ಲ ಅದು ಸಹಜ ವರ್ತನೆಯೆಂಬಂತೆ ಪರಿಗಣಿಸುವ, ಹುಡುಗಿಯರು ಮಾಡಿದ್ದು ದೋಷ ಅಷ್ಟೇ ಅಲ್ಲ ಇದೊಂದು ಹೊಸ ವಿಚಾರವೆಂಬಂತೆ ನೋಡಿದ ಸಮಾಜದ ನೋಟ. ಇಲ್ಲಿ ಕೂಡಾ ಗಣಿಸಲ್ಪಟ್ಟಿದ್ದು ಆಕೆಯ ದೇಹ ಮತ್ತು ಆಕೆ ಪಾಲಿಸಬೇಕಾದ ಮಿತಿಗಳು. ಹೆಣ್ಣು ಗಂಡಿನಂತೆ ಹಾರುವುದು ಜಿಗಿಯುವುದು ನಿಷಿದ್ಧ ಎಂಬ ಭಾವ.ಆಕೆಯೂ ಮನುಷ್ಯಳು ಗಂಡಿನಂತೆ ಆಕೆಗೂ ಆ ರೀತಿಯ ಸಾಹಸಗಳ ಆಕಾಂಕ್ಷೆ ಸಹಜವೆಂಬುದನ್ನು ಪುರುಷ ಜಗತ್ತು ಮರೆತಿದೆ. ಆಕೆಯ ಕೋಮಲ ದೇಹ ಈ ಸಾಹಸವನ್ನು ಮೆರೆಯಲು ಬಯಸುತ್ತಿದ್ದರೂ ಜಗತ್ತು ಆಕೆಯನ್ನು ಕಟ್ಟಹಾಕುತ್ತದೆ.
ಗಂಡುಹೆಣ್ಣಿನ ವರ್ತನೆಗಳಲ್ಲಿ ನಡೆನುಡಿಗಳಲ್ಲಿ ಮಾತ್ರವಲ್ಲದೇ ಬಟ್ಟೆಬರೆಗಳ ವಿಷಯದಲ್ಲಿಯೂ ಈ ವ್ಯತ್ಯಾಸಗಳು ಗಹನವಾಗುತ್ತವೆ. ಅದು ಕೂಡಾ ಜಾಹಿರಾತು ಸಿನೇಮಾ ಲೋಕಗಳಲ್ಲಿ ಸ್ತ್ರೀ ಶೋಷಣೆಯ ಮುಖಗಳು ಭಿನ್ನ. ಜಾಹಿರಾತು ಜಗತ್ತು ಆಕೆಯನ್ನು ತುಂಡುಬಟ್ಟೆಯಲ್ಲಿ ಕುಣಿಸಿ, ಹೆಣ್ಣಿನ ಅಂಗ ಪ್ರದರ್ಶಿಸುತ್ತಾ ಆಕೆಯೊಂದು ಸರಕು ಎಂಬಂತೆ ಸರಕು ಮಾರಾಟದಲ್ಲಿ ದಾಳವೆಂಬಂತೆ ಬಳಸಿಕೊಳ್ಳುತ್ತದೆ. ಸಿನೇಮಾ ಜಗತ್ತಿನಲ್ಲಿ ವೀರ ಧೀರ ಪುರುಷನ ಕೂಡ ಆತನ ಪ್ರೇಮ ಕಾಮದ ಹಾಡಿಗೆ ಹೆಜ್ಜೆಹಾಕಲೊಂದು ಹೆಣ್ಣು ಪಾದವಾಗಿ ಆ ಹಾಡಿನ ತುಂಬಾ ಆಕೆಯ ದೇಹ ಸಿರಿಗಳ ಭಿನ್ನ ವಿಭಿನ್ನ ಪೋಸುಗಳೇ ತುಂಬಿದ್ದು ಇದೊಂದು ರೀತಿಯ ದೌರ್ಜನ್ಯ. ಆದರೆ ಈ ಕಾರ್ಪೋರೆಟ್ ಜಗತ್ತಿನಲ್ಲಿ ಬಹು ಸಂಖ್ಯೆಯಲ್ಲಿ ಸುಶಿಕ್ಷಿತ ಹೆಣ್ಣುಗಳೇ ದೌರ್ಜನ್ಯದ ಬಲಿಪಶುಗಳಾಗಿರುವುದು ವಿಪರ್ಯಾಸ. ಹಣದ ಮುಂದಿನ ದೀನತೆ ಅದು.
ಇನ್ನು ಗೃಹ ಜೀವನದ ವಿಚಾರವನ್ನೆ ತೆಗೆದುಕೊಂಡರೆ ಹೆಣ್ಣು ಗರತಿಯಾಗಿ ತಲೆತುಂಬಾ ಸೆರಗು ಹೊದ್ದು ಬದುಕುವ ಸಾಂಪ್ರದಾಯಿಕ ನಿಲುವನ್ನು ಬಹುತೇಕ ಪುರುಷರು ಬಯಸುತ್ತಾರೆ. ಅದು ಸುಶಿಕ್ಷಿತ ಪುರುಷ ಕೂಡಾ. ಪಟ್ಟಣವಾಸಿ ಜೀವನದಲ್ಲೂ ಈ ಮನಸ್ಥಿತಿಯ ಜನರಿರುವರು. ಹೆಂಡತಿಯಾದವಳು ತನ್ನಿಚ್ಛೆಯ ಬಟ್ಟೆಬರೆ ತೊಟ್ಟು ಸುಭಗಳಂತೆ ಇರಬೇಕೆಂದೇ ಗಂಡು ಬಯಸುತ್ತಾನೆ. ಗಂಡು ದೇಹದ ಬಗ್ಗೆ ಇಲ್ಲದ ಕಾಳಜಿ ಕಳಕಳಿ ಹೆಣ್ಣು ದೇಹದ ಬಗ್ಗೆ ತೋರುವ ಈ ರೂಪದ ದೌರ್ಜನ್ಯಕ್ಕೆ ಏನೆನ್ನೋಣ?
ಪುರುಷ ಬರಿ ಎರಡು ತುಂಡು ಬಟ್ಟೆಗಳಲ್ಲಿಯೇ ಹೆಚ್ಚಾಗಿ ಮಿಂಚುತ್ತಾನೆ. ಆಧುನಿಕ ಪ್ಯಾಂಟ್ ಶರ್ಟಳಾಗಿರಲಿ, ಇಲ್ಲವೇ ಮೇಲಂಗಿ ಧೋತಿ ಅಥವಾ ಮುಂಡು[ಲುಂಗಿ]ವೇ ಆಗಿರಲಿ.ಆ ಬಟ್ಟೆಗಳು ಅಲ್ಲಿಲ್ಲಿ ಅಡರಿಕೊಳ್ಳುವ ಇಲ್ಲ ತೊಡರಿಕೊಳ್ಳುವ ತೊಂದರೆಗಳಿಲ್ಲ. ಅದೇ ಸೀರೆಯಾಗಿದ್ದರೆ ಅದನ್ನು ಸಂಭಾಳಿಸುವುದೇ ಒಂದು ತಾಲೀಮು. ಕಾರಣವಿಷ್ಟೇ ಸೀರೆ ಆಗಾಗ ಅಲ್ಲಲ್ಲಿ ತೊಡರಿಕೊಳ್ಳುವಂತೆ ಈ ಪೋಷಾಕು ತೊಂದರೆ ಕೊಡದು. ಆರಾಮವಾಗಿ ಕೈಕಾಲು ಬಿಟ್ಟು ಕುಳಿತುಕೊಳ್ಳಬಹುದು. ಅಷ್ಟೇ ಅಲ್ಲ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವೇ. ಹಾಗಿದ್ದರೂ ಹೆಣ್ಣು ಸೀರೆ ಉಟ್ಟು ಬಂದರೇನೇ ಕಣ್ಣಿಗೆ ಚೆಂದ ಎಂಬ ಭಾವಕ್ಕೆ ಯಾರೂ ಹೊರತಲ್ಲದಂತೆ ನಮ್ಮ ಆಂತರ್ಯದಲ್ಲಿ ಅದು ಬೆಳೆತುಬಿಟ್ಟಿದೆ. ಸೌಂದರ್ಯದ ದೃಷ್ಟಿಯನ್ನು ಹೊರತುಪಡಿಸಿ ಸೀರೆ ಹೊರಗೆಲಸದ ಸಮಯದಲ್ಲಿ ಉಪಯುಕ್ತವಲ್ಲ. ಇಂದಿನ ಮಹಿಳೆ ಸಾಮಾನ್ಯವಾಗಿ ಪುರುಷ ಮಾಡುವ ಎಲ್ಲ ಕೆಲಸಕಾರ್ಯಗಳನ್ನು ಆತನಿಗಿಂತ ಸ್ವಲ್ಪಮಟ್ಟಿಗೆ ಹೆಚ್ಚಿಗೆ ಮುತುವರ್ಜಿಯಿಂದಲೇ ಮಾಡುತ್ತಾಳೆ. ಆ ಸಂದರ್ಭದಲ್ಲಿ ಸೀರೆಗಿಂತ ನೆಮ್ಮದಿದಾಯಕವೆನಿಸುವ ಪೋಷಾಕುಗಳು ಸೆಲ್ವಾರ ಕಮೀಜಗಳು ಇಲ್ಲ ಈ ಪ್ಯಾಂಟು ಶರ್ಟುಗಳು. ಅದರೊಂದಿಗೆ ಐದುವರೆ ಮೀಟರ ಸೀರೆ ಉಡುವ ಹೆಂಗಳೆಯರು ಪ್ಯಾಂಟು ಶರ್ಟು ಧರಿಸಿಕೊಂಡಾಗಲೆಲ್ಲಾ ಪ್ರೀನೆಸ್ ಆಸ್ವಾದಿಸುವುದಿದೆ. ಆದರೆ ಇವುಗಳು ದೇಹವನ್ನು ಮುಚ್ಚುವ ಬಟ್ಟೆಯಾಗಿದ್ದು ಆಕಾರದಲ್ಲಿ ಸರಳವಾಗಿರಬೇಕು ಎಂಬುದನ್ನು ಹುಡುಗಿಯರು ಮರೆಯುವಂತಿಲ್ಲ. ಅಸಭ್ಯವಾಗಿ ತೀರಾ ಮೈಗಂಟಿದ ಬಟ್ಟೆ ತೊಡುವುದು ಸಂಸ್ಕೃತಿಯಲ್ಲ ಸ್ವಾತಂತ್ರ್ಯದ ಕುರುಹಲ್ಲ. ಎಂಬುದು ಅಷ್ಟೇ ಸತ್ಯ.
ಮಹಿಳೆ ಸೀರೆಯಲ್ಲಿ ಸೌಭಾಗ್ಯವತಿಯಾಗಿ ಗೌರವಯುತ ಹೆಣ್ಣಾಗಿ ಕಾಣುವುದು ಭಾರತೀಯ ಮನಸ್ಸುಗಳ ಸಹಜ ಮನೋಧರ್ಮದ ಕಾರಣ. ಇದು ಮನಸ್ಥಿತಿ ಆಧಾರಿತ. ಭಾರತೀಯ ಸ್ತ್ರೀ ವಸ್ತ್ರ ಸಂಹಿತೆ ಸುಂದರ ಕಲ್ಪನೆ. ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಆಕೆ ಸುಂದರಿಯಾಗಿಯೂ ಕಾಣುವಳು. ದೇಹ ಸೌಂದರ್ಯ ಕಂಗೊಳಿಸುವಂತೆ ವಿನ್ಯಾಸಗೊಳಿಸಿದ ಸೀರೆ ಹಾಗೂ ಅದನ್ನು ಉಡುವ ಮಾದರಿ ಕೂಡಾ ಹೆಣ್ಣಿನ ಚೆಂದವನ್ನು ಜಗಕ್ಕೆ ತೋರಬಯಸುವಂತಿದೆ. ಕಾಲ ಬದಲಾಗುತ್ತಿದೆ. ಇಂದಿನ ಹೆಣ್ಣು ಮಕ್ಕಳು ಸೀರೆಯನ್ನು ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ ಉಟ್ಟು ನಲಿಯಬಯಸುತ್ತಾರೆ ಹೊರತು ನಿತ್ಯ ಜೀವನದ ಕೆಲಸ ಕಾರ್ಯಗಳ ಸಂದರ್ಭಗಳಲ್ಲಿ ಅಲ್ಲ. ಪುರುಷನಿಗೆ ಸಮಾನವಾಗಿ ಪ್ಯಾಂಟು ಶರ್ಟುಗಳಲ್ಲಿ ಮಿಂಚುವ ಲಲನೆಯರೇ ಹೆಚ್ಚು. ಅದೂ ಹಳ್ಳಿಗಳಿಗೂ ಲಗ್ಗೆ ಇಟ್ಟು ದಶಕಗಳಾಗಿವೆ.
ಸ್ತ್ರೀ ಮಾಡುವ ಇಲ್ಲವೇ ಅನುಭವಿಸುವ ಸಣ್ಣ ಸಣ್ಣ ಸಂಗತಿಗಳು ಆಕೆಯ ವರ್ತುಲದ ಆಚೆ ಇಚೆಗಿದ್ದರೆ ಸಮಸ್ಯೆಗಳಿಲ್ಲ. ಅದು ಬಿಟ್ಟು ಸಮಾಜ ವಿಧಿಸಿದ ಕಟ್ಟಳೆಗಳ ಹೊರತಾಗಿ ಹೆಣ್ಣೊಬ್ಬಳು ಸಂವಿಧಾನಬದ್ಧ ನಿಲುವನ್ನು ಗೃಹಿಸಿ ಸ್ವತಂತ್ರವಾಗಿ ವ್ಯವಹರಿಸುತ್ತಲೂ ಪುರುಷ ಜಗತ್ತಿನ ಮೂಲಭೂತವಾದಿ ಮನಸ್ಸುಗಳು ವ್ಯಗ್ರಗೊಳ್ಳುತ್ತವೆ. ಸಮಾಜದ ದಾತಾರರು ನಾವೇ ಎಂಬ ಅಸಂವಿಧಾನಾತ್ಮಕ ಕಾನೂನು ಅವರ ಬಾಯಲ್ಲಿ ಪುಂಖಾನುಪುಂಖವಾಗಿ ಕೂಗಿಕೊಳ್ಳಲಾರಂಭಿಸುತ್ತದೆ.ಇದರರ್ಥ ಹೆಣ್ಣು ಮತ್ತಾಕೆಯ ಭೌದ್ಧಿಕತೆಯನ್ನು ಗಂಡು ಹಳದಿಕಣ್ಣುಗಳಿಂದ ನೋಡುವುದು ಇಲ್ಲವೇ ಆಕೆ ಗಂಡಿಗೆ ಸಮಾನವಾಗಿ ತನ್ನದೇ ವಾದ ವೈಚಾರಿಕತೆಯನ್ನು ಬಿಂಬಿಸಿದರೆ ಅಸಭ್ಯವಾಗಿ ಕೊಂಕು ನುಡಿಗಳ ಮೂಲಕ ಲೇವಡಿ ಮಾಡುವುದು ನೋಡಿದರೆ ಸುಶಿಕ್ಷಿತ ಜಗತ್ತಿನ ಪುರುಷನ ಅನಾಗರಿಕ ವರ್ತನೆ ಎಂದರೆ ತಪ್ಪಾಗಲಾರದು. ನಾವಿಂದು ಆಧುನಿಕ ಜಗತ್ತಿನಲ್ಲಿದ್ದೇವೆ. ಹೇಗೆ ತಂತ್ರಜ್ಞಾನದ ಬದಲಾವಣೆಗಳನ್ನು ಐಶಾರಾಮದ ಜೀವನಕ್ಕೋಸ್ಕರ ಜಗತ್ತು, ಪ್ರಾಜ್ಞರೆಂಬವರೂ ಕೂಡಾ ಮುಕ್ತ ಮನಸ್ಸಿನಿಂದ ಅದು ನಿಸರ್ಗಕ್ಕೆ ಮಾರಕವಾಗಿದ್ದರೂ ಕೂಡಾ ಕಣ್ಣು ಮುಚ್ಚಿ ಅನುಸರಿಸುತ್ತಿರುವರೋ ಅಂತಹ ಮುಕ್ತತೆಯನ್ನು ಸ್ತ್ರೀ ಪುರುಷ ಸಮಾನತೆಯಲ್ಲಿ ಒಪ್ಪಿಕೊಳ್ಳಲು ಅವರಿಗಿನ್ನೂ ಸಾಧ್ಯವಾಗುತ್ತಿಲ್ಲ. ಹಾಗಾಗೇ ಇಂದಿಗೂ ಹೆಣ್ಣನ್ನು ದೇಹವೆಂದೆ ಪರಿಭಾವಿಸಲಾಗುತ್ತಿದೆ. ಹೆಣ್ಣಿನ ಪ್ರತಿಯೊಂದು ನಡೆನುಡಿ ಆಕೆಯ ಗಳಿಕೆ ಉಳಿಕೆ ಮತ್ತಾಕೆಯ ದೇಹ ಎಲ್ಲವೂ ತನ್ನ ಸುಪರ್ದಿಯಲ್ಲಿಯೇ ಇರಬೇಕೆನ್ನುವುದು ಗಂಡಿನ ಜನ್ಮತಃ ಅಭಿಲಾಷೆ ಇರಬಹುದೇ?
*****