ಮೂಲ: ಟಿ ಎಸ್ ಎಲಿಯಟ್


ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ
ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ.
ಆರು ಗಂಟೆ.
ಹೊಗೆವ ಹಗಲುಗಳ ಉರಿದುಳಿದ ತುಂಡುಗಳು,
ಗಾಳಿ ಮಳೆ ಇರಚಲು :
ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು
ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ಹಾಳೆ
ಕಾಲುಕಾಲಿಗೆ ಸುತ್ತಿ ಅಡರುತ್ತವೆ;
ಕಿಟಕಿಗಳಿಬಿಟ್ಟ ಚಾಪೆಪರದೆಯ ಮೇಲೆ
ಹೊಗೆಗೂಡುಗಳ ಮೇಲೆ
ಮಳೆಯ ಹನಿ ಪಟಪಟನೆ ಬಡಿಯುತ್ತವೆ;
ಬೀದಿಮೂಲೆಗೆ ನಿಂತ ಒಂಟಿ ಜಟಕಾ ಕುದುರೆ
ಹಬೆಯುಸಿರು ಬಿಟ್ಟು ನೆಲಕ್ಕೆ ಕಾಲೆತ್ತಿ ಬಡಿದು
ಬೀದಿ ದೀಪದ ಕಂಬ ಹೊತ್ತುತ್ತವೆ.


ನಸುಕಿಗೇ ತೆರೆದ ಕಾಫಿಸ್ಟಾಲಿನ ಕಡೆಗೆ
ಧಾವಿಸುವ, ಮರದಹುಡಿಹೆಜ್ಜೆ ಮೆಟ್ಟಿದ ರಸ್ತೆ೧
ಹಬ್ಬಿಸುವ ಬಿಯರಿನ ಹಳಸಲು ಪರಿಮಳಕ್ಕೆ
ಎಚ್ಚತ್ತ ಮುಂಜಾವು.
ಹೊತ್ತು ಸರಿದಂತೆ
ಬದುಕು ತೊಡುವ ಅದೆಷ್ಟೊ ಹಗಲುವೇಷದ ಜೊತೆಗೆ
ಸಜ್ಜಾಗಿರುವ ಸಾವಿರಾರು ಕೊಠಡಿಗಳಲ್ಲಿ
ಕಿಟಕಿಗಳ ಕೊಳೆಪರದೆ ಬದಿಗೆ ಸರಿಸುತ್ತಿರುವ
ತೋಳುಗಳ ನೆನಪು.


ಹೂದಿಕೆ ತೆಗೆದೆಸೆದೆ ನೀನು೨, ಹಾಸಿಗೆ ಮೇಲೆ ಅಂಗಾತ
ಮಲಗಿ ಕಾದೆ; ಆಗ ಮಂಪರಿನಲ್ಲಿ ಇರುಳು
ತೋರಿಸಿತು ನಿನಗೆ ನಿನ್ನಂತರಾತ್ಮದ ಸಹಸ್ರ
ತುಚ್ಛ ಬಿಂಬಗಳನ್ನ;
ಒಳಛಾವಣಿಯ ಮೇಲೆ ಮಿಂಚಿಹೋದವು ಅವು.
ಇಡಿ ಜಗತ್ತೇ ಮತ್ತೆ ಮರಳಿಬಂದಾಗ
ಬೆಳಕು ಬಾಗಿಲಸಂದಿ ತೂರಿ ಒಳಹೊಕ್ಕಾಗ
ಬಚ್ಚಲ ಗಟಾರದಲ್ಲಿ ಗುಬ್ಬಚ್ಚಿಗಳ ಕೀಚು
ಕೇಳಿಸಿತು ಕಿವಿಗೆ;
ಮಂಚದ ಅಂಚಿಗೆ ಕೂತು, ಕೂದಲಲ್ಲಿ ಹಾಳೆಯನ್ನಿಟ್ಟು
ಗುಂಗುರು ತೀಡುತ್ತಲೋ, ಇಲ್ಲವೇ ನಿನ್ನ
ಕೊಳೆಯಾದ ಎರಡೂ ಅಂಗೈಗಳಿಂದ
ಹೆಜ್ಜೆಗಳ ಹಳದಿ ತಳವನ್ನು ಸವರುತ್ತಲೋ ಇದ್ದ ನಿನಗೆ
ಸ್ವತಃ ಬೀದಿಗೇ ಇರದ ಅದರ ನಿಜದರ್ಶನ
ಆಗಿದ್ದಿರಬೇಕು.


ನಗರದ ಬಡಾವಣೆಯ ತುದಿಗಿರುವ ದಿಗಂತಕ್ಕೆ
ಚಾಚಿಕೊಂಡಿದೆ ಅವನ ಅಂತರಾತ್ಮ, ಅಥವಾ
ಗಂಟೆ ನಾಲ್ಕಕ್ಕೆ ಐದಕ್ಕೆ ಆರಕ್ಕೆ
ಬಿಡುವೇ ಇಲ್ಲದೆ ನಡೆವ ಹೆಜ್ಜೆಗಳ ಅಡಿಬಿದ್ದು
ಜಜ್ಜಿಹೋಗಿದೆ; ಪೈಪಿನೊಳಗೆ ತಂಬಾಕನ್ನು
ತುಂಬುತ್ತಿರುವ ಮೋಟು ಚೌಕ ಬೆರಳು,
ಸಂಜೆ ಪತ್ರಿಕೆಗಳು, ಕೆಲವೊಂದು ಖಾತ್ರಿಗಳ ಭರವಸೆ ಹೊತ್ತ ಕಣ್ಣು
ಮತ್ತೆ ಲೋಕದ ಜೊತೆಗೆ ತೊಡಗಲೆಳಸುತ್ತಿರುವ
ಕಪ್ಪಾದ ರಸ್ತೆಯ ಅಂತಸ್ಸಾಕ್ಷಿ,
ಈ ಪ್ರತಿಮೆಗಳ ಸುತ್ತ ಮುಗಿಬಿದ್ದ ಭ್ರಮೆಗಳನ್ನು
ಕಂಡು ಕಲಕಿದೆ ನನ್ನ ಚಿತ್ತ
ಕಲ್ಪನೆಗೆ ಸುಳಿಯುವುದು ತೀರ ಕೋಮಲ ಪ್ರಕೃತಿ
ಸಂತತ ಅನುಭವಿಸುವ ಅಪಾರ ನೋವು.

ಕೈಯೆತ್ತಿ ಬಾಯೊರಸಿಕೊಳ್ಳುತ್ತ ನಕ್ಕು ಬಿಡು.
ಖಾಲಿ ಸೈಟುಗಳಲ್ಲಿ ಅತ್ತಿತ್ತ ಸುತ್ತಾಡುತ್ತ
ಪುಳ್ಳೆ ಹಕ್ಕುವ ಗೊಡ್ಡು ಮುದುಕಿಯರ ಹಾಗೆ
ಸುತ್ತುತ್ತಿವೆ ಲೋಕಗಳೂ
*****
೧೯೧೫

ಎಲಿಯಟ್ ಈ ಕವನದ ಮೊದಲ ಎರಡು ಭಾಗಗಳನ್ನು ಹಾರ್ವರ್ಡ್‌ನಲ್ಲಿ ಇದ್ದಾಗ (೧೯೧೦ರ ಅಕ್ಟೋಬರಿನಲ್ಲಿ ಬರೆದ. ಮೂರನೆಯ ಭಾಗವನ್ನು ಪ್ಯಾರಿಸ್ಸಿನಲ್ಲಿ (೧೯೧೧ರ ಜುಲೈನಲ್ಲಿ) ಮತ್ತು ನಾಲ್ಕನೆಯ ಭಾಗವನ್ನು ಹಾರ್ವರ್ಡ್‌ನಲ್ಲಿ (೧೯೧೧ ರಲ್ಲಿ) ರಚಿಸಿದ. ಮೂರನೆಯ ಭಾಗ ಮತ್ತು ನಾಲ್ಕನೆಯ ಭಾಗಗಳಿಗೆ ಕ್ರಮವಾಗಿ ‘ಮುಂಜಾವು’ ಮತ್ತು ‘ಸಂಜೆ’ ಎಂಬ ಉಪಶೀರ್ಷಿಕೆಗಳಿದ್ದವು. ಮೊದಲ ಮೂರು ಭಾಗಗಳು ಮುಗಿದಿದ್ದಾಗ ಕವಿ ಅವುಗಳೆಲ್ಲವನ್ನೂ ಸೇರಿಸಿ ‘ರಾಗ್ಸ್ ಬರಿಯಲ್ಲಿ ಪ್ರೆಲ್ಯೂಡ್ಸ್‌ ಎಂಬ ಹೆಸರು ಕೊಟ್ಟಿದ್ದ. ‘ರಾಗ್ಸ್ ಬರಿ’ ಎನ್ನುವುದು ಬಾಸ್ಟನ್ನಿನ ಒಂದು ಉಪನಗರ. ಮುಂದೆ ನಾಲ್ಕು ಭಾಗಗಳೂ ಒಟ್ಟಾಗಿ ಪ್ರೆಲ್ಯೂಡ್ಸ್ ಎಂಬ ಶೀರ್ಷಿಕೆ ಸಹಿತ ೧೯೧೫ರಲ್ಲಿ ಅಚ್ಚಾದವು. ಎಲಿಯಟ್ ಕವಿಯ ಪ್ರಥಮ ಹಂತದ ಉತ್ತಮ ರಚನೆಗಳಲ್ಲಿ ಇದೂ ಒಂದು.

ಪೋಲಿಷ್ ಸಂಗೀತ ಸಂಯೋಜಕ ಜೊಪಿನ್ ರಚಿಸಿದ ಪಿಯಾನೊ ಗೀತ ಭಾಗಗಳ ಒಂದು ಗುಚ್ಛಕ್ಕೆ, ಪ್ರೆಲ್ಯೂಡ್ಸ್ ಎಂಬ ಹೆಸರಿದೆ. ಎಲಿಯಟ್‌ನ ‘ಪ್ರೋಟ್ರೈಟ್ ಆಫ್ ಎ ಲೇಡಿ’ ಕವನದಲ್ಲಿ ಅದು ಪ್ರಸ್ತಾಪಿತವಾಗಿದೆ. ಆದರೆ ಈ ಕವನದ ಶೀರ್ಷಿಕೆ ಜೊಪಿನ್ ರಚನೆಗೆ ಸಂಬಂಧಿಸಿ ಫ್ರೆಂಚ್ ಕವಿ ಲ್ಯಾಪೋರ್ಜ್ ಬರೆದ ‘ಪ್ರೆಲ್ಯೂಡ್ಸ್ ಆಟೋಬಯಾಗ್ರಫಿಕ್ಸ್’ ಎಂಬ ಕೃತಿ ಈ ಶೀರ್ಷಿಕೆಯ ಹಿನ್ನೆಲೆಗಿದೆ. ತಾನು ಬಳಸುವ ನಗರಜೀವನದ ಪ್ರತಿಮೆಗಳಿಗೆ ಮೂಲವಾದ ಅನುಭವ ಸಾಮಗ್ರಿ ತನ್ನ ಬಾಲ್ಯಜೀವನದಿಂದ ದೊರೆತದ್ದೆಂದು ಹೇಳುವಲ್ಲಿ ಎಲಿಯಟ್ ಇದನ್ನು ಸೂಚಿಸುತ್ತಾನೆ. ವರ್ಡ್ಸ್‌ವರ್ತ್ ಕವಿಯ ಪ್ರಲ್ಯೂಡ್ ಪದ್ಯವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ತಾನು ಮುಂದೆ ಬರೆಯಲಿರುವ ಕವಿತೆಗಳಿಗೆ ಬರಹ ಶ್ರುತಿರೂಪವಾದದ್ದೆಂದು ಕವಿಯ ಅಭಿಪ್ರಾಯ ಇರಬಹುದು.

೧ ಧಾವಿಸುವ ಮರದಹುಡಿಹೆಜ್ಜೆ ಮೆಟ್ಟಿದ ರಸ್ತೆ : ಅನೇಕ ಬಾರುಗಳು ಮತ್ತು ಕಾಫಿಸ್ಟಾಲುಗಳಲ್ಲಿ ಮಹಡಿ ಮೆಟ್ಟಲುಗಳ ಮೇಲೆ ಮತ್ತು ಅಂಗಡಿ ಮುಂಭಾಗದಲ್ಲಿ (ಕೊಳೆ ತಗೆಯಲು ಸುಲಭವಾಗಲೆಂದು) ಮರದ ಹುಡಿ ಚೆಲ್ಲಿರುವುದುಂಟು. ಆ ಹುಡಿ ಓಡಾಡುವವರ ಅಂಗಾಲಿಗೆ ಮೆತ್ತಿಕೊಂಡು ರಸ್ತೆಗೂ ಬಂದಿರುತ್ತದೆ.

೨ ಹೊದಿಕೆ ತೆಗೆದೆಸೆದೆ ನೀನು: ಇದುವರೆಗೆ ಯಾರನ್ನೂ ಉದ್ದೇಶಿಸದೆ, ಕೇವಲ ಒಂದು ನಿರೂಪಣೆ ಮಾತ್ರವಾಗಿ ಸಾಗುತ್ತಿದ್ದ ಕವಿತೆ ಇಲ್ಲಿ ಇದ್ದಕ್ಕಿದ್ದಂತೆ ಧಾಟಿ ಬದಲಾಯಿಸಿ ಎದುರಿಗಿರುವ ಯಾರನ್ನೋ ಉದ್ದೇಶಿಸಿ ಮಾತಾಡುತ್ತಿರುವ ರೀತಿಗೆ ಹೊರಳಿ ಬಿಡುತ್ತದೆ. ನಿರೂಪಣೆಯ ಸಂಭಾಷಣೆಗೆ ಹೊರಳಿ ನಾಟಕೀಯವಾಗುತ್ತದೆ.