ಮೂಲ: ಟಿ ಎಸ್ ಎಲಿಯಟ್
ಇಲ್ಲಿಂದ ಮರ್ತ್ಯಲೋಕಕ್ಕೆ ಎಂದೂ ಮರಳದವನಿಗೆ ನಾನು ಉತ್ತರಿಸುತ್ತಿದ್ದೇನೆ ಎಂದು ಯೋಚಿಸಿದ್ದರೆ ಈ ಜ್ವಾಲೆ ನಿಶ್ಚಲವಾಗಿ ನಿಲ್ಲುತ್ತಿತ್ತು. ಆದರೆ ಈ ಕೂಪದಿಂದ ಎಂದೂ ಯಾರೂ ಜೀವಂತವಾಗಿ ಹಿಂತಿರುಗಿಲ್ಲ ಎಂದು ಕೇಳಿದ್ದೇನೆ. ಇದು ನಿಜವಾಗಿದ್ದರೆ ಯಾವ ಅಪಕೀರ್ತಿಯ ಭಯವೂ ಇಲ್ಲದೆ ನಾನು ನಿನಗೆ ಉತ್ತರ ಕೊಡುತ್ತೇನೆ.೨
(ಡಾಂಟೆಗೆ ಅವನ ಮಾರ್ಗದರ್ಶಕ ನರಕದಲ್ಲಿ ಹೇಳಿದ್ದು)
ಹಾಗಿದ್ದ ಮೇಲೆ ಹೋಗೋಣ ನಡಿ ಇಬ್ಬರೂ೩
ಸಂಜೆ ಮೈಚಾಚಿದೆ ಬಾನಿನೆದುರು
ಟೇಬಲ್ಲ ಮೇಲೆ ಮದ್ದಿನ ನಿದ್ದೆಯಲ್ಲಿರುವ ರೋಗಿಯಂತೆ೪
ಹಾದು ಹೋಗೋಣವಂತೆ
ಜನ ಕರಗಿ ಅರ್ಧ ಬರಿದಾದ ಬೀದಿಗಳನ್ನ,
ಕರಿದ ಚಾಕಣದ ಹೊಲಸು ರೆಸ್ಟೊರೆಂಟುಗಳನ್ನ,
ಅಗ್ಗದ ಹೊಟೇಲಿನಲ್ಲಿ ರಾತ್ರಿಗಷ್ಟೇ ಸಿಗುವ
ನೆಮ್ಮದಿಯ ಸುಳಿವಿರದ ಗದ್ದಲದ ಗೂಡನ್ನ,
ಮೋಸಗೊಳಿಸುವ ಪ್ರಶ್ನೆಯತ್ತ ಕರೆದೊಯ್ಯುವ
ಬಳಲಿಸುವ ವಾದಗಳ ಥರದ ಬೀದಿಗಳನ್ನ
“ಏನು ಅದು” ಎಂದೆಲ್ಲ ಕೇಳಬೇಡ
ಹೋಗೋಣ, ಖುದ್ದು ನೋಡೋಣ.
ರೂಮಿನಲ್ಲಿ ಮಹಿಳೆಯರ ಓಡಾಟ ಅತ್ತಿತ್ತ೫
ಮೈಕೆಲೇಂಜಲೊ ಮಾತನ್ನಾಡುತ್ತ.೬
ಕಿಟಕಿ ಗಾಜಿನ ಮೇಲೆ ಬೆನ್ನು ತಿಕ್ಕುತ್ತಿರುವ ಹಳದಿ ಮಂಜು೭
ಕಿಟಕಿ ಗಾಜಿನ ಮೇಲೆ ಮುಸುಡಿಯುಜ್ಜುತ್ತಿರುವ ಹಳದಿ ಹೊಗೆ
ಸಂಜೆಮೂಲೆಗಳಲ್ಲಿ ನಾಲಿಗೆ ತೀಡಿ ಕಡೆಗೆ
ಕೊಳೆಗಟಾರಗಳಲ್ಲಿ ನಿಂತ ಹೊಂಡಗಳಲ್ಲಿ ಸುಳಿದಾಡಿತು;
ಚಿಮಣಿ ಕೊಳವಿಗಳಿಂದ ಕರಿ ಕಿಟ್ಟ ಬಿತ್ತು ಅದರ ಬೆನ್ನ ಮೇಲೆ
ನಿಂತ ಛಾವಣಿಯಿಂದ ಕಾಲು ಜಾರಿ, ಥಟ್ಟನೆಗರಿತು ಕೆಳಗೆ;
ಅಕ್ಟೋಬರಿನ ರಾತ್ರಿ ಎಷ್ಟು ಹಿತ ಎನ್ನಿಸಿ
ಸುತ್ತಿಕೊಂಡಿತು ಮತ್ತೆ ಮನೆ ಸುತ್ತಲೇ,
ನಿದ್ದೆ ಹೋಯಿತು ಅಲ್ಲೆ.
ಕಿಟಕಿಗಾಜಿನ ಮೇಲೆ ಬೆನ್ನು ತೀಡಿ
ರಸ್ತೆಯಲ್ಲಿ ಹಾಯುವ ಹಳದಿ ಹೊಗೆಗೆ ಒಂದು
ಕಾಲವಿದ ಖಂಡಿತ,೮
ಎಲ್ಲದಕ್ಕೂ ಒಂದು ಕಾಲವಿದೆ, ಕಾಲವಿದೆ
ಸಂಧಿಸಲಿರುವ ಮುಖವ ಸಂಧಿಸಲು ಮುಖವನ್ನು ಸಿದ್ಧಗೊಳಿಸುವುದಕ್ಕೆ;
ಕಾಲವಿದೆ ಹತ್ಯೆಗೆ ಕಾಲವಿದೆ ಸೃಷ್ಟಿಗೆ,
ಪ್ರಶ್ನೆಯೊಂದನ್ನೆತ್ತಿ ನಿಮ್ಮ ತಟ್ಟೆಯ ಮೇಲೆ ಥಟ್ಟನೆ ಬಿಡುವ ಕೈಯ
ಕೆಲಸಗಳಿಗೆ, ಅದರ ದಿವಸಗಳಿಗೆ ಕಾಲವಿದೆ ಖಂಡಿತ;
ಕಾಲವಿದೆ ನಿಮಗೆ ಕಾಲವಿದೆ ನನಗೆ,
ಕಾಲವಿದೆ ನೂರು ಹೊಯ್ದಾಟಗಳಿಗೆ,
ನೂರು ದರ್ಶನಗಳಿಗೆ ಮರುವಿಮರ್ಶನಗಳಿಗೆ,
ತಿಂಡಿ ತೀರ್ಥಗಳು ಶುರುವಾಗಲಿಕ್ಕೆ.
ರೂಮಿನಲ್ಲಿ ಮಹಿಳೆಯರ ಓಡಾಟ ಅತ್ತಿತ್ತ
ಮೈಕಲೇಂಜಲೊ ಮಾತನ್ನಾಡುತ್ತ.
ಕಾಲವಿದ ಖಂಡಿತ
“ಧೈರ್ಯವಿದೆಯೇ ನನಗೆ”. ಎಂದು ಬೆರಗಾಗಲು
“ಧೈರ್ಯವಿದೆಯೇ ನನಗೆ”?
ಮಧ್ಯೆ ಇಷ್ಟಗಲ ಬೊಕ್ಕಾದ ತಲೆಹೊತ್ತು
ಹಿಂದಿರುಗಿ ಮೆಟ್ಟಲನ್ನಿಳಿದು ಬರಲು
(ಅವರೆನ್ನುವರು : “ಅವನ ತಲೆಗೂದಲೆಷ್ಟೊಂದು ಉದುರಿರುವುದು!)
ನನ್ನ ಬೆಳಗಿನ ಕೋಟು, ಗದ್ದದ ತನಕ ನೇರ ದೃಢವಾಗಿ ನಿಂತಿರುವ ನನ್ನ ಕಾಲರ್,
ಸಾದಾ ಪಿನ್ ತೊಟ್ಟು ಸೆಟೆದಂತೆ ನಿಂತ
ಬಲು ದುಬಾರಿಬೆಲೆಯ ಸರಳ ನೆಕ್ ಟೈ
(ಅವರೆನ್ನುವರು : “ಆದರೂ ಅವನ ಕೈಕಾಲು ಎಷ್ಟು ತೆಳುವು!”)
ಧೈರ್ಯವಿದೆಯೇ ನನಗೆ ಕಲಕಿಬಿಡಲು ವಿಶ್ವವನ್ನೆ?
ಒಂದು ಕ್ಷಣದಲ್ಲಿ ಕಾಲವಿದೆ
ನಿರ್ಧಾರ ತಿದ್ದಿ ನಿರ್ಧಾರಗಳ ಹೂಡಲು
ಅವು ಕೂಡ ಕ್ಷಣದಲ್ಲಿ ಬದಲಾಗಲು.
ನಾನು ಅವರನ್ನೆಲ್ಲ ಎಂದೋ ಬಲ್ಲೆ, ಬಲ್ಲೆ ಅವರನ್ನೆಲ್ಲ :-
ಬಲ್ಲೆ ಮುಸ್ಸಂಜೆ ಮಧ್ಯಾಹ್ನ ಬೆಳಗುಗಳನ್ನ,
ಕಾಫಿ ಚಮಚಗಳಲ್ಲಿ ಅಳೆದು ಸುರಿದಿದ್ದೇನೆ ನನ್ನ ಬದುಕನ್ನ;೯
ಆ ಕೊಠಡಿಯಿಂದ ಈ ಕಡೆಗೆ ಹಾಯುವ ಮಧುರ ಗಾನದ ಅಲೆಗಳ ಕೆಳಗೆ
ಸವೆಯುತ್ತ ಸಾಯುತ್ತಲಿರುವ ದನಿಗಳ ಬಲ್ಲೆ; ಎಂದ ಮೇಲೆ
ಹೇಗೆ ಹೀಗೇ ಎಂದು ಮೊದಲೆ ತೀರ್ಮಾನಿಸಲಿ?೧೦
ಆ ಕಣ್ಣುಗಳನ್ನೆಲ್ಲ ಎಂದೋ ಬಲ್ಲೆ, ಎಲ್ಲವನ್ನೂ ಬಲ್ಲೆ –
ಸೂತ್ರದಂತಿರುವ ಮಾತೊಳಗೆ ನಮ್ಮನ್ನು ಸಿಕ್ಕಿಸುವ ಕಣ್ಣನ್ನು;
ಸಿಕ್ಕು ಮೊಳೆತುದಿಗೆ ಮೈಚಾಚಿ ಬಿದ್ದಿರುವಾಗ
ಗೋಡೆಗೆ ನನ್ನನ್ನಿಟ್ಟು ಮೈಗೆ ಮೊಳೆಹೊಡೆದು ನಾನು ಒದ್ದಾಡುತ್ತಿರುವಾಗ,
ಉರಿದುಳಿದ ನನ್ನ ಬಾಳಿನ ರೀತಿನೀತಿಗಳ
ಕೊನೆಕೊನೆಯ ಮೋಟುಗಳ
ಹೊರಕ್ಕೆ ಎಸೆಯುವುದನ್ನು ಹೇಗೆ ಆರಂಭಿಸಲಿ?
ಹೇಗೆ ತೀರ್ಮಾನಿಸಲಿ?
ಆ ತೋಳುಗಳನ್ನೆಲ್ಲ ನಾನು ಬಲ್ಲೆ ಅವೆಲ್ಲವನ್ನೂ ಬಲ್ಲೆ –
ಬಳೆ ತೊಟ್ಟ ಬಿಳಿಯ ಬತ್ತಲೆ ತೋಳುಗಳನ್ನು
(ಲ್ಯಾಂಪು ಬೆಳಕಲ್ಲಿ ಮಾತ್ರ ಕಂದುಬಣ್ಣದ ರೋಮ ಇರುವಂಥವನ್ನು)
ಯಾಕೆ ನಾ ಹೀಗೆಲ್ಲ ಮಾತು ಹೊರಳಿಸುತ್ತಿರುವೆ?
ಯಾವ ಸೆರಗಿಂದಲೋ ಇತ್ತ ಹಾಯುತ್ತಿರುವ ಪರಿಮಳವೆ ಕಾರಣವೆ?
ಟೇಬಲ್ಲ ಮೇಲೆ ಚಾಚಿರುವ ಅಥವಾ ಶಾಲು ಹೊದ್ದಿರುವ ತೋಳುಗಳೆ
ಹಾಗಿದ್ದ ಮೇಲೆ ನನಗನಿಸಿದ್ದೆ ಸರಿಯೆಂದು ಭಾವಿಸಿಕೊಂಡುಬಿಡಲೆ?
ಪ್ರಾರಂಭಿಸಲಿ ಹೇಗೆ?
……….
ಹೇಳಲೇ ಎಲ್ಲ?
ಸಂಜೆಗತ್ತಲೆಯಲ್ಲಿ ಸಣ್ಣಗಲ್ಲಿಗಳಲ್ಲಿ ಹಾದು ಹೋಗಿದ್ದೇನೆ,
ತುಂಡು ತೋಳಿನ ಷರಟು ತೊಟ್ಟು ಕಿಟಕಿ ಹೊರಕ್ಕೆ
ಬಾಗಿ ನಿಂತಿರುವ ಏಕಾಂಗಿ ಗಂಡಸರ
ತಂಬಾಕು ಪೈಪುಗಳಿಂದ ಮೇಲಕ್ಕೇಳುವ ಹೊಗೆಯ ಗಮನಿಸಿದ್ದೇನೆ…..
ಮೌನದ ಕಡಲ ಮೇಲೆ ಸರ್ರನೆ ಜಾರಬಲ್ಲ
ಜೋಡಿಪಂಜಗಳು ನನಗಿದ್ದಿದ್ದರೆ
………
ನೀಳ ಬೆರಳುಗಳು ಮೈಸವರಿ ನೇವರಿಸಿ
ಹಾಯಾಗಿ ನಿದ್ರಿಸಿದೆ ಮಧ್ಯಾಹ್ನ, ಸಂಜೆ,
ದಣಿದು ಮಲಗಿದೆ ಪಾಪ, ಕೈಕಾಲು ಚಾಚಿ
ನಮ್ಮ ಬದಿಗೆ, ಇಲ್ಲೆ, ನೆಲದ ಮೇಲೆ;
ಅಥವಾ ಆ ರೀತಿ ಸುಳ್ಳೇ ನಟಿಸುತ್ತಿದೆ
ಟೀ ಕೇಕು ಐಸ್‌ಕ್ರೀಮು ಮುಗಿದಮೇಲೆ
ಆ ಗಳಿಗೆಯನ್ನು ಅದರ ತುದಿತನಕ ಒಯ್ಯಲು
ಕೆಚ್ಚಿದೆಯೆ ನನಗೆ?
ಎಷ್ಟೋಸಲ ಅತ್ತು ಉಪವಾಸ ಮಾಡಿರುವೆ,
ಅತ್ತು ಪ್ರಾರ್ಥನೆ ಸಲ್ಲಿಸಿರುವೆ, ಅಷ್ಟಾದರೂ
ತಟ್ಟೆಯಲ್ಲಿ (ಕೊಂಚ ಬೋಳಾದ) ನನ್ನದೆ ತಲೆಯ
ಇಟ್ಟು ತಂದದ್ದನ್ನು ನೋಡಿದ್ದರೂ
ನಾನು ಪ್ರವಾದಿಯಲ್ಲ – ಇದು ಭಾರಿ ವಿಷಯವೂ ಅಲ್ಲ;
ನನ್ನ ಘನತೆಯ ಗಳಿಗೆ ಮಿಡುಕಿ ಹೊಯ್ದಾಡಿದ್ದ ನಾನು ಬಲ್ಲೆ,
ಅಮರ ಪರಿಚರ ನನ್ನ ಕೋಟು ಜಗ್ಗಿ೧೧
ನಕ್ಕಿದ್ದ ನೋಡಿರುವೆ ಆದರೂ…..
ಎರಡೆ ಮಾತಲ್ಲಿ ಹೇಳಲೆ? ನಾನು ಹೆದರಿದೆ.
ಇರಲಿ, ಇಷ್ಟೆಲ್ಲಕ್ಕೆ ತಕ್ಕದ್ದೆ ಹೇಳು ಅದು,
ಮುರಬ್ಬ ಚಹ ತಿನಿಸುಗಳು ಮುಗಿದ ಮೇಲೆ,
ಪಿಂಗಾಣಿ ತಟ್ಟೆ ಲೋಟಗಳ ಮಧ್ಯೆ,
ನನ್ನ ಮತ್ತು ನಿನ್ನ ಮಾತಿನ ಮಧ್ಯೆ
ತಕ್ಕದ್ದೆ ಹೇಳು
ಒಂದು ಕಿರುನಗೆ ಸಹಿತ ಆ ವಿಷಯವನ್ನು
ಸೂಚಿಸಿಯೆ ಬಿಟ್ಟರೆ ಯೋಗ್ಯವಾದೀತೆ?
ಚೆಂಡೊಂದರಲ್ಲಿ ಇಡಿ ವಿಶ್ವವನ್ನೇ ತುರುಕಿ
ಯಾವುದೋ ಗಹನ ಪ್ರಶ್ನೆಯ ದಿಕ್ಕಿನಲ್ಲಿ ತೂರಿದರೆ ಹೇಗೆ?
“ಲ್ಯಾಜರಸ್ ನಾನು, ಸತ್ತವರ ನಡುವಿಂದ ಎದ್ದು ಬಂದವನು೧೨
ಎಲ್ಲ ತಿಳಿಸಲು ನಿಮಗೆ ಮರಳಿ ಬಂದವನು,
ಎಲ್ಲ ತಿಳಿಸುವೆ” ಎನಲು
ತನ್ನ ತಲೆದಿಂಬನ್ನು ಸರಿಪಡಿಸಿಕೊಳ್ಳುತ್ತ ಆಕೆ
“ಅಲ್ಲವೇ ಅಲ್ಲ, ನನ್ನ ಮಾತಿನ ಅರ್ಥ ಖಂಡಿತ ಅದಲ್ಲ”
ಎಂದುಬಿಟ್ಟರೆ ಹೇಗೆ?
ಇರಲಿ, ಇಷ್ಟೆಲ್ಲಕ್ಕೆ ತಕ್ಕದ್ದೆ ಹೇಳು ಅದು,
ಸೂರ್ಯಾಸ್ತಗಳು ಮುಗಿದು ಮನೆಯಂಗಳದ ಮಾತುಕಥೆಯೆಲ್ಲ ಮುಗಿದು
ಚಹ ಮುಗಿದು ನಾವೆಲ್ಲು ಮುಗಿದು ಅಂಗಳದ ನೆಲವನ್ನು ಸವರುತ್ತ
ಸರಿವ ಲಂಗಗಳೆಲ್ಲ ಮುಗಿದು
ಇಷ್ಟೆಲ್ಲ ಮುಗಿದು ಇದಕ್ಕೂ ಮೀರಿದಿನ್ನೆಷ್ಟೊ ಮುಗಿದ ಮೇಲೆ
ತಕ್ಕದ್ದು ಅಂತ ಅನ್ನಿಸಬಹುದೆ ಹೇಳು ಅದು?
ತಿಳಿಸುವುದೆ ಅಸಾಧ್ಯ ನನ್ನ ಮಾತಿನ ಅರ್ಥ
ಮಾಯಾಲಾಂದ್ರವೊಂದು ತೆರೆಮೇಲೆ ನರಗಳನ್ನು
ನಾನಾ ವಿನ್ಯಾಸದಲ್ಲಿ ಬಿಂಬಿಸುವಂತಲ್ಲದೆ೧೩
ಆಗ ತಲೆದಿಂಬ ಪಕ್ಕಕ್ಕೆ ಸರಿಸುತ್ತಲೋ, ಶಾಲನ್ನೆಸೆಯುತ್ತಲೋ
ಕಿಟಕಿಯತ್ತ ತಿರುಗಿ ಯಾರೋ
“ಅಲ್ಲವೇ ಅಲ್ಲ,
ನಾ ಹೇಳಿದುದರರ್ಥ ಖಂಡಿತ ಅದಲ್ಲ” ಎಂದುಬಿಟ್ಟರೆ ಹೇಗೆ?
ಈ ಪ್ರಯತ್ನಗಳೆಲ್ಲ ತಕ್ಕುದ್ದೆನಿಸೀತೆ ಹೇಗೆ?
ಅಲ್ಲ, ನಾನಲ್ಲ ಆ ರಾಜಕುಮಾರ ಹ್ಯಾಮ್ಲೆಟ್೧೪
ಅಂಥ ಪಾತ್ರಕ್ಕೆ ನಾನು ಹೇಳಿಸಿದವನೆ ಅಲ್ಲ
ನಾಟಕವನ್ನೊಂದಿಷ್ಟು ಮುಂದೆಳೆಯಲು,
ಒಂದೊ ಎರಡೋ ದೃಶ್ಯ ಶುರುಮಾಡಲು,
ರಾಜಪುತ್ರನಿಗೆ ಉಪದೇಶ ಕೊಡಲು
ನಡುವೆ ಬರುವ ಅವನ ಸಹ ಅನುಚರ;
ಸಂದೇಹವೇ ಇಲ್ಲ ಅನುಕೂಲಕ್ಕೊದಗುವಾತ,೧೫
ಉಪಯೋಗ ಬಿದ್ದಲ್ಲಿ ಖುಷಿಪಡುವವ,
ವ್ಯವಹಾರ ಕುಶಲಿ, ಹುಷಾರಿ, ಸೂಕ್ಷ್ಮಗ್ರಾಹಿ
ಜಟಿಲ ಪದವಚನ ಪರಿಣತ,೧೬ ಕೊಂಚ ದಡ್ಡ,
ಒಮ್ಮೊಮ್ಮೆ ನಿಜದಲ್ಲಿ ಪೂರ್ತಿ ಹಾಸ್ಯಾಸ್ಪದ, ಕೆಲವೊಮ್ಮೆ ವಿದೂಷಕ.೧೭
ಮುದುಕನಾದೆ…. ನಾನು ಮುದುಕನಾದೆ…
ಪ್ಯಾಂಟುತುದಿ ಮೇಲಕ್ಕೆ ಮಡಿಸಿ ತೊಡುವೆ.
ಉಳಿದ ತಲೆಗೂದಲನ್ನು ಹಿಂದೆ ಬಾಚಲೆ ಹೇಗೆ,
ಸೇಬು ತಿಂದೇನೆ ನಾನು ಧೈರ್ಯವಾಗಿ?
ಬಿಳಿಯ ಫ್ಲ್ಯಾನೆಲ್ ಪ್ಯಾಂಟುತೊಟ್ಟು ನಡೆಯುವೆ ಕಡಲ ದಂಡಮೇಲೆ.
ಮತ್ಸ್ಯಕನ್ನೆಯರೆಲ್ಲ ಒಬ್ಬರೊಬ್ಬರ ಮುಂದೆ ಹಾಡುವುದ ಕೇಳಿರುವೆ
ನನಗಾಗಿ ಅವರು ಹಾಡುವುದಿಲ್ಲ ಎನ್ನಿಸಿದೆ೧೮
ಗಾಳಿ ಕಡಲನ್ನು ಕಪ್ಪು ಬಿಳುಪಾಗಿ ಸೀಳುವಾಗ
ಮತ್ಸ್ಯಕನ್ನೆಯರೆಲ್ಲ ತೆರೆಗಳ ಸವಾರಿ ಏರಿ
ಅಲೆಗಳ ಬಿಳಿಕೂದಲನ್ನು ಹಿಂದಕ್ಕೆ ತೂರಿ ಸಾಗುವುದ ನೋಡಿರುವೆ
ಕಂದುಗೆಂಪಿನ ಕಡಲ ಹಾವಸೆಯನ್ನುಟ್ಟ ಕಡಲ ಕನ್ನೆಯರೊಡನೆ೧೯
ಕಡಲ ಕೋಣೆಗಳಲ್ಲಿ ನಾವು ಅಲೆದಿದ್ದೇವೆ;
ಮರ್ತ್ಯಧ್ವನಿಗಳು ನಮ್ಮನ್ನೆಬ್ಬಿಸುವವರೆಗೆ, ಮತ್ತೆ ಮುಳುಗುತ್ತೇವೆ.೨೦
*****
೧೯೧೭
೧ ಜೆ. ಆಲ್‌ಫ್ರೆಡ್ ಫ್ರುಫ್ರಾಕನ ಪ್ರೇಮಗೀತೆ : ಎಲಿಯಟ್ ಈ ಕವನವನ್ನು ಬರೆದಿದ್ದು ಪ್ಯಾರಿಸ್‌ನಲ್ಲಿ; ೧೯೧೦-೧೯೧೧ ಈ ಕವನ ಆರಂಭಗೊಂಡು ಪೂರ್ತಿಯಾದ ಅವಧಿ, ಫ್ರೆಂಚ್ ಕವಿ ಲ್ಯಾಫೋರ್ಜ್, ಇಟ್ಯಾಲಿಯನ್ ಕವಿ ಡಾಂಟೆ ಮತ್ತು ತತ್ವಶಾಸ್ತ್ರಜ್ಞ ಹೆನ್ರಿ ಬರ್ಗ್‌ಸನ್ – ಈ ಮೂವರ ಬರೆಹದ ಪ್ರಭಾವ ಈ ಕವನದ ಮೇಲಿದೆ.
ಹಸ್ತಪ್ರತಿಯಲ್ಲಿ ಈ ಕವನದ ಶೀರ್ಷಿಕೆ ‘ಫ್ರುಫ್ರಾಕ್ – ನಾರಿಯರ ನಡುವೆ’ ಎಂದಿತ್ತು. ಕಿಪ್ಲಿಂಗ್ ಕವಿಯ ‘ಹರ್‌ದಯಾಳನ ಪ್ರೇಮಗೀತೆ’ ಎಂಬ ಕವಿತೆಯ ಶೀರ್ಷಿಕೆ ಈ ಕವನದ ಹೆಸರನ್ನು ಬದಲಿಸಲು ಕಾರಣವಾಯಿತು. ಷಿಕಾಗೋದ ‘ಪೊಯೆಟ್ರಿ’ ಪತ್ರಿಕೆಯಲ್ಲಿ ಫ್ರುಫ್ರಾಕ್ ಕವನ ಪ್ರಕಟವಾದಾಗ ಅದರ ಸಂಪಾದಕಿಯಾದ ಹ್ಯಾರಿಯೆಟ್ ಮನ್ರೋಗೆ ಕವಿಯೇ ಹೀಗೆ ತಿಳಿಸಿದ್ದಾನೆ. I am convinced that it would never have been called `Love song’ but for a title of Kipling’s that stuck obstinately in my head: “The Love Song of Har Dyal’. The poem was originally entitled Prufrock among the Women.
೨ ಇಲ್ಲಿಂದ ಮರ್ತ್ಯಲೋಕಕ್ಕೆ… ಉತ್ತರಕೊಡುತ್ತೇನೆ : ಈ ಅವತರಣಿಕೆಯನ್ನು ‘ಡಿವೈನ್ ಕಾಮೆಡಿ’ ಕಾವ್ಯದಿಂದ (ಇನ್‌ಫರ್ನೊ XXVII-61-66) ತೆಗೆದು ಕೊಳ್ಳಲಾಗಿದೆ. ನರಕದಲ್ಲಿ ಶಿಕ್ಷೆಗೊಳಗಾಗಿರುವ ಮೊನ್ಟಿಫೆಲ್ಟ್ರೊ ತನ್ನ ದುಃಖವನ್ನೂ ಜಗತ್ತು ತನಗೆ ಮಾಡಿದ ಅನ್ಯಾಯವನ್ನೂ ಡಾಂಟೆಯೆದುರು ಹೇಳಿಕೊಳ್ಳುತ್ತಾನೆ. ಅದಕ್ಕೆ ಮೊದಲು ಅವನು ಹೇಳುವ ಮಾತು ಇದು.
ಅವತರಣಿಕೆ ಮತ್ತು ಕವಿತೆಯ ಸಾಲುಗಳು ಈ ಕವನದ ಸಂಬಂಧದಲ್ಲಿ ಡಾಂಟೆಯ ಪ್ರಾಮುಖ್ಯವನ್ನು ಮತ್ತು ಕವನ ಪಡೆದುಕೊಂಡ ಸ್ವರೂಪವನ್ನು ಸೂಚಿಸುತ್ತವೆ.
೩ ಹಾಗಿದ್ದಮೇಲೆ ಹೋಗೋಣ ನಡಿ ಇಬ್ಬರೂ : ಈ ಕವನದಲ್ಲಿ ಉತ್ತಮ ಪುರುಷದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಅವನು ಉದ್ದೇಶಿಸಿರುವ ವ್ಯಕ್ತಿ-ಇಬ್ಬರೂ ಬೇರೆ ಬೇರೆಯಲ್ಲ, ಒಂದೇ ವ್ಯಕ್ತಿತ್ವದ ವಿಭಿನ್ನ ಅಂಶಗಳು ಕಾವ್ಯನಾಯಕನೇ ತನ್ನ ಇನ್ನೊಂದು ಒಳ ವ್ಯಕ್ತಿತ್ವಕ್ಕೆ ಹೇಳುವ ಮಾತು ಇದು. ವಾಸ್ತವವಾಗಿ ಇದು ಫ್ರುಫ್ರಾಕನ ಸ್ವಗತ, ಹೆನ್ರಿ ಬರ್ಗ್‌ಸನ್ ಎಂಬ ಫ್ರೆಂಚ್ ತತ್ವಶಾಸ್ತ್ರನ double self ಪರಿಕಲ್ಪನೆಯ ಪ್ರಭಾವ ಇಲ್ಲಿ ಕಾಣುತ್ತದೆ. ಎಲಿಯಟ್ ಪ್ಯಾರಿಸ್ಸಿನಲ್ಲಿದ್ದಾಗ ಪ್ರತಿ ವಾರ ಬರ್ಗ್‌ಸನ್ನನ ಉಪನ್ಯಾಸಗಳಿಗೆ ತಪ್ಪದೆ ಹೋಗುತ್ತಿದ್ದ; ಅವನ ಬರಹಗಳನ್ನು ಅಧ್ಯಯನ ಮಾಡಿದ್ದ.
೪ ಸಂಜೆ ಮೈಚಾಚಿದೆ… ರೋಗಿಯಂತೆ : ಇದು ಆಗಿನ ಕಾಲದ ಇಂಗ್ಲಿಷ್ ಕಾವ್ಯಕ್ಕೆ ಅಪರಿಚಿತವಾಗಿದ್ದ ಮಾತಿನ ರೀತಿ; ಇಂಗ್ಲೆಂಡಿನಲ್ಲಿ ‘ಗದ್ಯಕ’, ‘ಅಕಾವ್ಯ’ ಎಂದು ಕರೆಸಿಕೊಳ್ಳಬಹುದಾಗಿದ್ದದ್ದು.
೫ ರೂಮಿನಲ್ಲಿ ಮಹಿಳೆಯರ ಓಡಾಟ ಅತ್ತಿತ್ತ: ಈ ಸಾಲು ಫ್ರೆಂಚ್ ಕವಿ ಲ್ಯಾಪೋರ್ಜನ
ಕವನವೊಂದರ ಸಾಲಿನ ಪದಶಃ ಅನುವಾದ. ಸಾಲಿನ ಕಡೆಯ ಒಂದೆರಡು ಪದಗಳನ್ನು ಎಲಿಯಟ್ ಬದಲಾಯಿಸಿಕೊಂಡಿದ್ದಾನೆ. “In the room the women come and go/Talking of the masters of the Sienese School”
ಎನ್ನುವುದು ಲ್ಯಾಫೋರ್ಜ್‌ನ ಮಾತು (ಫ್ರೆಂಚ್ ಕವನದ ಇಂಗ್ಲಿಷ್ ಅನುವಾದ). ಇದು ಎಲಿಯಟ್‌ನಲ್ಲಿ In the room women come and go/Talking of Michelangelo ಎಂದಾಗಿದೆ.
ಈ ಸಾಲಿನ ಆರಂಭದೊಡನೆ ಇದ್ದಕ್ಕಿದ್ದಂತೆ ಕವನದ ದೃಶ್ಯವೇ ಬದಲಾಗುತ್ತದೆ. ಇದು ಕವಿಯ ಮಾತೂ ಇರಬಹುದು ಅಥವಾ ಫ್ರುಫ್ರಾಕನ ಮಾತೂ ಇರಬಹುದು. ಫ್ರುಫಾಕನ ಮಾತನ್ನುವುದೇ ಸಮರ್ಪಕ. ಇಡೀ ಕವನವೇ ಫ್ರುಫ್ರಾಕನ ಸ್ವಗತವೆನ್ನುವುದು ಇನ್ನೂ ಹೆಚ್ಚು ಸಮರ್ಪಕ.
೬ ಮೈಕಲೇಂಜಲೊ ಮಾತನಾಡುತ್ತ : ಮೈಕಲೇಂಜಲೊ (೧೪೭೫-೧೫೬೪) ಇಟಲಿಯಲ್ಲಿದ್ದ ಜಗತೃಸಿದ್ಧ ಶಿಲ್ಪಿ, ಚಿತ್ರಕಾರ ಮತ್ತು ಕವಿ. ಗಂಡಿನ ನಗ್ನದೇಹದ ಮಾಟ, ನಿಲುವು, ಸೌಂದರಗಳು ಮೈಕೆಲೇಂಜಲೋನ ಕೆಲವು ಶಿಲ್ಪಗಳಲ್ಲಿ ಆಕರ್ಷಕವಾಗಿ ರೂಪು ಪಡೆದಿವೆ.
೭ ಕಿಟಕಿ ಗಾಜಿನ ಮೇಲೆ….. ಹಳದಿ ಮಂಜು : ಎಲಿಯಟ್, ಸೇಂಟ್ ಲೂಯಿಸ್ ನಗರದಲ್ಲಿ ಹುಟ್ಟಿ ಅಲ್ಲೇ ಹದಿನೇಳು ವರ್ಷ ಬೆಳೆದ, ಮಿಸಿಸಿಪ್ಪಿ ನದಿ ಆ ನಗರವನ್ನು ಹಾದು ಹೋಗುತ್ತದೆ. (ಚಳಿ ದಿನಗಳ) ಸಂಜೆಯಲ್ಲಿ ಕಾರ್ಖಾನೆಗಳು ಇರುವ ದಿಕ್ಕಿನಿಂದ ದಟ್ಟ ಹೊಗೆ ಮತ್ತು ಮಂಜು ಮಿಸಿಸಿಪ್ಪಿ ನದಿಯ ಮೇಲೆ ಅಡ್ಡಸಾಗುತ್ತವೆ. (ಹೊಗೆ-ಮಂಜುಗಳ ಪ್ರಸ್ತಾಪ ‘ಪೋಟ್ರೇಟ್ ಆಫ್ ಎ ಲೇಡಿ’ ಕವನದ ಆರಂಭದಲ್ಲಿಯೂ ಬರುತ್ತದೆ).
೮ ಕಿಟಕಿಗಾಜಿನ ಮೇಲೆ ಬೆನ್ನು…. ಒಂದು ಕಾಲವಿದೆ ಖಂಡಿತ : ೨೪ ರಿಂದ ೫೧ನೆಯ ಸಾಲುಗಳವರೆಗಿನ ಕವನ ಭಾಗದಲ್ಲಿ ಕವಿ `ಎಲ್ಲದಕ್ಕೂ ಒಂದು ಕಾಲವಿದೆ’ ಎಂಬ ಮಾತನ್ನು ಬಗೆ ಬಗೆ ರೀತಿಯಲ್ಲಿ ಪುನರಾವೃತ್ತಿ ಮಾಡುತ್ತಾನೆ. ಇದು ಎಕ್ಲಿಸಿಯಾಸ್ಟಸ್‌ನಲ್ಲಿ ಬರುವ ಉಪದೇಶಕನ ಮಾತನ್ನು ನೆನಪಿಸುತ್ತದೆ. ‘To everything there is a season and a time to every purpose under the heaven; a time to be born, and a time to die; a time to plant and a time to pluck… a time to kill and a time to heal; a time to weep and a time to laugh…’ ಎಕ್ಸಿಸಿಯಾಸ್ಟಸ್ (III 1-7)
೯ ಕಾಫಿ ಚಮಚಗಳಲ್ಲಿ ಅಳೆದು ಸುರಿದಿದ್ದೇನೆ ನನ್ನ ಬದುಕನ್ನ: ಲ್ಯಾಫೋರ್ಜ್ ಕವಿಯ sip each day your cup of nothingness ಎಂಬ ಸಾಲು ಇಲ್ಲಿ ನೆನಪಾಗುತ್ತದೆ.
೧೦ ಹೇಗೆ ಹೀಗೇ ಎಂದು ಮೊದಲೇ ತೀರ್ಮಾನಿಸಲಿ? : ಫ್ರುಫ್ರಾಕ್ ಸೂಕ್ಷ್ಮ ಸಂವೇದನೆಗಳ ವ್ಯಕ್ತಿ. ಅತಿಯಾದ ಜಿಜ್ಞಾಸೆ, ತರ್ಕ, ಪ್ರತಿಯೊಂದು ವಿಷಯಕ್ಕಿರುವ ವಿವಿಧ ಸಾಧ್ಯತೆಗಳ ಅರಿವು ಅವನಿಗಿರುವುದರಿಂದ ಬಹಳ ಹಿಂಜರಿಕೆಯ ಪ್ರಕೃತಿಯುಳ್ಳವನು. ಇದರಿಂದ ಅವನು ಯಾವ ತೀರ್ಮಾನ ತೆಗೆದುಕೊಳ್ಳಲೂ ಅಸಮರ್ಥನಾಗಿದ್ದಾನೆ.
೧೧ ಅಮರ ಪರಿಚರ ನನ್ನ ಕೋಟು ಜಗ್ಗಿ : ಇಲ್ಲಿಯ ‘ಅಮರ ಪರಿಚರ’ ಸಾವಿನ ಮೂರ್ತರೂಪ. ಜಾನ್ ಬನ್ಶನ್‌ನ ‘ದಿ ಪಿಲಿಗ್ರಿಮ್ಸ್ ಪ್ರೋಗ್ರೆಸ್’ನಲ್ಲಿ heavenly foot man ಎಂಬ ಪದ ಬರುತ್ತದೆ. ಆ ಮಾತಿನ ಪ್ರಭಾವದಿಂದ ರೂಪು ಪಡೆದ ಪದ eternal foot man ಆಗಿದೆ.
೧೨ ಲ್ಯಾಜರಸ್ ನಾನು, ಸತ್ತವರ ನಡುವಿಂದ ಎದ್ದು ಬಂದವನು : ಬೈಬಲ್ಲಿನಲ್ಲಿ ಇಬ್ಬರು ಲ್ಯಾಜರಸ್ ಬರುತ್ತಾರೆ. ಒಬ್ಬನು ಏಸುವಿನ ಭಕ್ತರಾದ ಮೇರಿ ಮತ್ತು ಮಾರ್ಥಾರ ಸೋದರ, ಅವನು ಸತ್ತು ನಾಲ್ಕು ದಿನಗಳಾದ ಮೇಲೆ ಏಸು ಅವನನ್ನು ಮತ್ತೆ ಬದುಕಿಸುತ್ತಾನೆ. ಆದರೆ ಅವನು ತಾನು ಸತ್ತಿದ್ದ ಅವಧಿಯಲ್ಲಿ ತನಗಾದ ಅನುಭವ ಏನನ್ನೂ ಹೇಳುವುದಿಲ್ಲ (ಜಾನ್ XI, ೧-೪೪), ಇನ್ನೊಬ್ಬ ಲ್ಯಾಜರಸ್ ಭಿಕ್ಷುಕ. ಇವನಿಗೆ ಸಂಬಂಧಿಸಿದಂತೆ ಡೈವ್ಸ್ ಎಂಬ ಒಬ್ಬ ಶ್ರೀಮಂತನೂ ಬರುತ್ತಾನೆ. ಲ್ಯಾಜರಸ್ ಸ್ವರ್ಗಕ್ಕೂ ಡೈವ್ಸ್ ನರಕಕ್ಕೂ ಹೋಗುತ್ತಾರೆ. ನರಕ ಹೇಗಿದೆಯೆನ್ನುವುದನ್ನು ತನ್ನ ನಾಲ್ಕುಜನ ಸೋದರರಿಗೂ ತಿಳಿಸಿ ಅವರನ್ನು ಎಚ್ಚರಿಸಲು ಡೈವ್ಸ್ ಬಯಸುತ್ತಾನೆ. ಇದಕ್ಕಾಗಿ ಲ್ಯಾಜರಸ್‌ನನ್ನು ಮತ್ತೆ ಭೂಮಿಗೆ ಕಳಿಸಬೇಕೆಂದು ಡೈವ್ಸ್ ಅಬ್ರಹಾಮನನ್ನು ಕೇಳುತ್ತಾನೆ. ಅವನು ಒಪ್ಪುವುದಿಲ್ಲ. ಮೋಸೆಸ್ ಮತ್ತು ಪ್ರವಾದಿಗಳ ಉಪದೇಶಕ್ಕೆ ಕಿವಿಗೊಟ್ಟಲ್ಲದೆ, ಸತ್ತವನು ಎದ್ದು ಬಂದು ಮಾತಾಡಿದರೂ ಅವರು ಬದಲಾಗುವುದಿಲ್ಲ ಎಂದು ಅಬ್ರಹಾಂ ಹೇಳುತ್ತಾನೆ. (ಲ್ಯೂಕ್ XVI, ೧೯-೩೧)
೧೩ ಮಾಯಾಲಾಂದ್ರವೊಂದು.. ಹಾಗಲ್ಲದೆ : ಎಲಿಯಟ್ ತನ್ನ ಬಾಲ್ಯದ ಓದಿನಿಂದ ಬಳಸಿಕೊಂಡ ಒಂದು ಚಿತ್ರ. St. Louis Globe-Democrat ೧೮೯೭ರ ಜನವರಿಯಲ್ಲಿ Seeing the Brain ಎಂಬ ಲೇಖನ ಪ್ರಕಟಿಸಿತ್ತು. ಅದರಲ್ಲಿ ಪ್ರಖರವಾದ ದೀಪವೊಂದರ ಮುಂದೆ ಕುಳಿತ ಮನುಷ್ಯನ ಮಿದುಳನ್ನು ತರೆಯ ಮೇಲೆ ಬಿಂಬಿಸಿದ ಚಿತ್ರವಿತ್ತು. ಎಲಿಯಟ್ ಆ ಲೇಖನ ಓದಿದ್ದನೆಂದು ತಿಳಿದಿದೆ.
೧೪ ಅಲ್ಲ, ನಾನಲ್ಲ ಆ ರಾಜಕುಮಾರ ಹ್ಯಾಮ್ಲೆಟ್ : ಈ ಸಾಲಿನಿಂದ ಆರಂಭವಾಗುವ ಹತ್ತು ಸಾಲುಗಳ ‘ಹ್ಯಾಮ್ಲೆಟ್ ಭಾಗ’ ಎಜ್ರಾಪೌಂಡನ ದೃಷ್ಟಿಯಲ್ಲಿ ಈ ಕವನಕ್ಕೆ ಅಷ್ಟೇನೂ ಅಗತ್ಯವಾದ ಭಾಗವಾಗಿರಲಿಲ್ಲ. ಪೌಂಡನ ಅಭಿಪ್ರಾಯಗಳನ್ನು ಬಹಳ ಗೌರವಿಸುತ್ತಿದ್ದ (ಅವನ ಸಲಹೆಯಂತೆ ಮುಂದೆ ‘ವೇಸ್ಟ್ ಲ್ಯಾಂಡ್’ ಕವನದ ಅನೇಕ ಸಾಲುಗಳನ್ನೇ ತೆಗೆದು ಆ ಕವನವನ್ನು ಪ್ರಕಟಿಸಿದ) ಎಲಿಯಟ್ ಅವನ ಅಭಿಪ್ರಾಯ ಗೊತ್ತಿದ್ದೂ ಈ ಭಾಗವನ್ನು ತೆಗೆಯಲಿಲ್ಲ. ಜನವರಿ ೧೯೧೫ರಲ್ಲಿ ಷಿಕಾಗೋದ ‘ಪೊಯೆಟ್ರಿ’ ಪತ್ರಿಕೆಯ ಸಂಪಾದಕಿ ಹ್ಯಾರಿಯೆಟ್ ಮನ್ರೋಗೆ ಬರೆದ ಕಾಗದದಲ್ಲಿ ಪೌಂಡ್ ಹೀಗೆ ಹೇಳಿದ್ದಾನೆ. ‘ಅವು ಮೊದಲಿನಿಂದಲೂ ಎಲಿಯಟ್‌ಗೆ ಪ್ರಿಯವಾಗಿದ್ದ ಸಾಲುಗಳು. ಅವನ್ನು ತೆಗೆಯಲು ಅವನು ಒಪ್ಪುವುದಿಲ್ಲ. ಆದರೆ ತೊಂದರೆಯೇನಿಲ್ಲ. ಬಹಳ ಜನ ಓದುಗರು ಇಡೀ ಕವನದಲ್ಲಿ ಮೊದಲು ಮೆಚ್ಚುವುದು ಆ ಭಾಗವನ್ನೇ. ಆದುದರಿಂದ ಅದು ಇದ್ದರೂ ಅಂಥ ಹಾನಿಯೇನಿಲ್ಲ.’
ಷೇಕ್ಸ್‌ಪಿಯರನ ‘ಹ್ಯಾಮ್ಲೆಟ್’ ನಾಟಕದ ನಾಯಕ ಪಾತ್ರ ಹ್ಯಾಮ್ಲೆಟ್. ಫ್ರುಫ್ರಾಕನಲ್ಲಿ ಹ್ಯಾಮ್ಲೆಟ್‌ನಲ್ಲಿದ್ದ ಅತಿ ಜಿಜ್ಞಾಸೆಯ ಪ್ರವೃತ್ತಿಯಿದೆ. ಯಾವುದೇ ನಿರ್ಣಯಕ್ಕೆ ತಲುಪಲೂ ಕಷ್ಟವಾಗುವ ಈ ಜಿಜ್ಞಾಸೆಯಿಂದಾಗಿಯೇ ಹ್ಯಾಮ್ಲೆಟ್ ತಾನು ಮಾಡಬೇಕಾದ ಕೆಲಸಗಳನ್ನು ಮಾಡಲಾರದೇ ಹೋಗುತ್ತಾನೆ. ಹ್ಯಾಮ್ಲೆಟ್‌ನಂತೆಯೇ ತಾನೂ ಖಚಿತ ತೀರ್ಮಾನಗಳಿಗೆ ಬರಲಾರದ ವ್ಯಕ್ತಿ ಎಂದು ಫ್ರುಫ್ರಾಕನಿಗೆ ಅನ್ನಿಸಿದೆ. ಆದ್ದರಿಂದಲೇ ನಾನು ಹ್ಯಾಮ್ಲೆಟ್ ಅಲ್ಲ ಎಂದು ಥಟ್ಟನೆ ಹೇಳುತ್ತಿದ್ದಾನೆ. ಅಲ್ಲದೆ ಹ್ಯಾಮ್ಲೆಟ್ ಒಬ್ಬ ರಾಜಕುಮಾರ, ತಾನು ಅವನಂತಲ್ಲ ಒಬ್ಬ ಸಾಮಾನ್ಯ ವ್ಯಕ್ತಿ ಎಂಬುದನ್ನೂ ಅವನು ಈ ಮೂಲಕ ಸೂಚಿಸುತ್ತಿದ್ದಾನೆ.
೧೫ ಸಂದೇಹವೇ ಅಲ್ಲ ಅನುಕೂಲಕ್ಕೊದಗುವಾತ : ಅತಿ ಸೂಕ್ಷ್ಮ ಸ್ವಭಾವದ, ಸ್ವವಿಮರ್ಶೆ ಅತಿ ಎನ್ನಿಸುವಷ್ಟಿರುವ ವ್ಯಕ್ತಿ ತನ್ನ ಬಗ್ಗೆ ತಾನೇ ಮಾಡಿಕೊಳ್ಳುತ್ತಿರುವ ವ್ಯಂಗ್ಯದನಿಯ ಆತ್ಮವಿಮರ್ಶೆ ಇಲ್ಲಿಂದ ಮುಂದಿನ ನಾಲ್ಕು ಸಾಲುಗಳಲ್ಲಿದೆ.
೧೬ ಜಟಿಲಪದವಚನ ಪರಿಣತ: ಎಲಿಯಟ್ ಇಲ್ಲಿ ಬಳಸಿರುವ full of high sentence ಎಂಬ ಮಾತಿಗೆ ಚಾಸರನ ‘ಕ್ಯಾಂಟರ್ ಬರಿ ಟೇಲ್ಸ್’ನಲ್ಲಿ ಬರುವ ful of hy sentence ಎಂಬ ಪದಪುಂಜ ಮೂಲವಾಗಿರಬಹುದು. ‘ಟೇಲ್ಸ್’ನ ಉಪೋದ್ಘಾತ ಭಾಗದಲ್ಲಿ ಕಾಣಿಸಿಕೊಳ್ಳುವ ಆಕ್ಸ್‌ಫರ್ಡಿನ ವಿದ್ವಾಂಸ ಕ್ಲರ್ಕ್‌ನ ಸಂಭಾಷಣೆಯ ವರ್ಣನೆಯಲ್ಲಿ ಈ ಮಾತು ಬರುತ್ತದೆ. ‘ಉದಾತ್ತ ಕಲ್ಪನೆಗಳ’, ‘ವಿದಗ್ದ ಶೈಲಿಯ’ ಎಂದು ಅಲ್ಲಿ ಇದಕ್ಕೆ ಅರ್ಥ.
೧೭ ಕೆಲವೊಮ್ಮೆ ವಿದೂಷಕ : ಎಲಿಯಟ್ ಬಳಸಿರುವ fool ಎಂಬ ಪದಕ್ಕೆ ಇಲ್ಲಿ ವಿದೂಷಕ ಎಂದು ಅನುವಾದ ಮಾಡಿದೆ. fool ಎಲಿಜಬೆತನ್ ನಾಟಕಗಳಲ್ಲಿ ಬರುವ ಒಂದು ಸಿದ್ಧಪಾತ್ರ. ಈತ ಕೆಲಮಟ್ಟಿಗೆ ನಮ್ಮ ಸಂಸ್ಕೃತ ನಾಟಕಗಳ ವಿದೂಷಕನನ್ನು ಹೋಲಿದರೂ ಸ್ವಲ್ಪ ಭಿನ್ನ. ಸಾಮಾನ್ಯವಾಗಿ ರಾಜಸಭೆಯಲ್ಲಿ ವಿನೋದ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ಈ ಪಾತ್ರದ ಹರಟೆಮಾತುಗಳು ಹೊರಗೆ ಪೆದ್ದು ಮಾತುಗಳಂತೆ ಕಂಡರೂ ಒಮ್ಮೊಮ್ಮೆ ಅವು ವಿವೇಕದ ಮಾತಾಗಿಯೂ ಹೊಳಲುಗೊಡುತ್ತವೆ. ಹ್ಯಾಮ್ಲೆಟ್‌ನ ಆಸ್ಥಾನ ವಿದೂಷಕನ ಹೆಸರು ‘ಯೋರಿಕ್’. ಬಾಲ್ಯದಲ್ಲಿ ಅವನನ್ನು ನೋಡಿದ್ದ ಹ್ಯಾಮ್ಲೆಟ್ ಯೋರಿಕ್ ಸತ್ತು ಅನೇಕ ವರ್ಷಗಳಾದ ಮೇಲೂ ಅವನನ್ನು ಪ್ರೀತಿ ಮರುಕಗಳಿಂದ ನೆನಪಿಸಿಕೊಳ್ಳುತ್ತಾನೆ. (ಹ್ಯಾಮ್ಲೆಟ್ V-I)
೧೮ ನನಗಾಗಿ ಅವರು ಹಾಡುವುದಿಲ್ಲ ಎನ್ನಿಸಿದೆ : ತನಗೆ ವಯಸ್ಸಾಗಿದೆ ಎಂಬ ಅರಿವು ಫ್ರುಫ್ರಾಕನಿಗಿದೆ. ೧೩೦-೧೩೪ ಸಾಲುಗಳಲ್ಲಿ ತಾನು ಮುದುಕನಾಗಿರುವುದನ್ನೂ ಆದರೂ (ಉಳಿದ ತಲೆಗೂದಲನ್ನೇ ಆಗಿನ ಫ್ಯಾಷನ್ನಿನಂತೆ ಹಿಂದಕ್ಕೆ ಬಾಚಿ) ಯುವಕನಂತೆ ಬಿಳಿಯ ಪ್ಲಾನೆಲ್ ಪ್ಯಾಂಟನ್ನು ತೊಟ್ಟು (ಫ್ಯಾಶನ್ನಿಗನುಗುಣವಾಗಿ) ಅದರ ತುದಿ ಮಡಿಸಿಕೊಂಡು ಕಡಲ ದಂಡೆಯ ಮೇಲೆ ಓಡಾಡುವ ತನ್ನ ಚಪಲವನ್ನೂ ಅವನು ಹಿಂಜರಿಯುತ್ತಲೇ ತೋಡಿಕೊಳ್ಳುತ್ತಾನೆ. ತಾನು ವಯಸ್ಸಾದವನು, ಶಕ್ತಿಹೀನ ಎಂಬ ಅರಿವು ಇರುವುದರಿಂದಲೇ ‘ಮತ್ಸಕನ್ನೆಯರು ತನಗಾಗಿ ಹಾಡುತ್ತಿಲ್ಲ’ ಎಂದು ಅವನಿಗೆ ಅನ್ನಿಸಿದೆ. ಇಲ್ಲಿಯ ಮತ್ಸಕನ್ನೆಯರು ಅವನ ಮನಸ್ಸಿನ ಅನಂತ ದಾಹಗಳ ಸಂಕೇತವೂ ಆಗಿದ್ದಾರೆ.
ಜ್ಞಾನಸಾಧನೆಗಾಗಿ ಜಗತ್ತಿನ ತುದಿತನಕ ನೌಕಾಯಾನ ಹೊರಟ ಗ್ರೀಕ್ ವೀರ ಯೂಲಿಸಿಸ್‌ನನ್ನು ಮಧ್ಯದಲ್ಲಿ ಪಕ್ಷಿಕನೈಯರು (Sirens) ತಮ್ಮ ಮೋಹಕ ಗಾಯನದಿಂದ ಮರುಳುಮಾಡಿ ಸೆಳೆಯುತ್ತಾರೆ. (ನೋಡಿ, The Fairie Queene II, XII Ulysses and the Siren by Samuel Daniel ೧೫೬೨-೧೬೧೯) ಅರ್ಧಪಕ್ಷಿ ಅರ್ಧ ದೇಹದ (ಗ್ರೀಕ್ ಪುರಾಣಗಳ) ಈ ಮೋಹಿನಿಯರ ಜೊತೆಗೆ ಕವಿ ಎಲಿಜಬೆತನ್ ಕಾವ್ಯಯುಗದ ಮತ್ಸಕನ್ಯೆಯರನ್ನೂ (mermiads) ಸೇರಿಸಿ ತುಂಬ ಧ್ವನಿಪೂರ್ಣವಾದ ಪ್ರತಿಮೆಯೊಂದನ್ನು ಸೃಷ್ಟಿಸಿದ್ದಾನೆ. ಕವನದ ಕೊನೆ ಹಠಾತ್ತಾಗಿ ಎತ್ತರದ ನೆಲೆಗೇರಿದೆ. ಜಾನ್ ಡನ್ ಕವಿಯ Song ಎಂಬ ಪದ್ಯದಲ್ಲಿ ಬರುವ Teach me to heare Mermaids singing ಎಂಬ ಸಾಲು ಇಲ್ಲಿ ನೆನಪಾಗುತ್ತದೆ. ಎಲಿಯಟ್‌ನ ಕಡೆಯಿಂದ ಇದು ಸಿಂಬಲಿಸ್ಟ್ ಸಾಹಿತ್ಯ ಚಳುವಳಿಯ ವಿಷಯಕ್ಕೂ ಅನ್ವಯವಾಗುವಂತಿದೆ.
೧೯ ಕಂದುಗೆಂಪಿನ… ಕಡಲ ಕನ್ನೆಯರೊಡನೆ: ಫ್ರುಫ್ರಾಕನ ಮತ್ತು ಅವನ ಅಂತರಂಗದ ಸ್ವಗತ ಕೊನೆಮುಟ್ಟುತ್ತಿದೆ. ತಾನೇ ಕಲ್ಪಿಸಿಕೊಂಡ, ಹಗಲುಗನಸಿನ ಒಳ ಮನೆಯಲ್ಲಿ ಕುಳಿತು ಸೃಷ್ಟಿಸಿಕೊಂಡ ದೃಶ್ಯದ ಮಾಯೆ ತೀರುತ್ತ ಬಂದಿದೆ. ವಾಸ್ತವಲೋಕ ಮತ್ತೆ ಧುತ್ತೆಂದು ಅವನ ಎದುರು ನಿಲ್ಲಲಿದೆ. ಅವನು ಅದನ್ನು ಎದುರಿಸಲಾರ. ಅವಾಸ್ತವವೇ ಆದರೂ ಈ ಅಂತಸೃಷ್ಟಿಯೇ ಇರಲಿ ಎಂಬ ಅವನ ಅನ್ನಿಸಿಕೆ. ಆದ್ದರಿಂದ ಅದರಲ್ಲಿಯೇ ‘ನಾವು ಮತ್ತೆ ಮುಳುಗುತ್ತೇವೆ’ ಎಂದ ಮಾತಿನಿಂದ ಕವನ ಕೊನೆಯಾಗುತ್ತದೆ.
೨೦ ೧೯೧೫ರಲ್ಲಿ ಫ್ರುಫ್ರಾಕ್ ಪ್ರಕಟವಾದಾಗ ಪದ್ಯದ ಕೊನೆಯಲ್ಲಿ ಚುಕ್ಕಿಗಳ ಒಂದು ಸಾಲು ಇತ್ತು. ಹಸ್ತಪ್ರತಿಯಲ್ಲಿಯೂ ಹೀಗೇ ಇದ್ದಿರಬೇಕು. ಇದು ಪದ್ಯ ಅಪೂರ್ಣ ಎಂದು ಸೂಚಿಸುವಂತಿತ್ತು. ಮುಂದಿನ ಮುದ್ರಣದಲ್ಲಿ ಪದ್ಯ ಕೊಂಚ ಬದಲಿದ್ದು, ಸ್ನೇಹಿತ ಕಾನ್ರಾಡ್ ಐಕಿನ್‌ನ ಸಲಹೆಯಂತೆ ಅದನ್ನು ತಿದ್ದಿದ್ದಾಗಿ ಕವಿ ಹೇಳಿಕೊಂಡಿದ್ದಾನೆ.