ಅಮೀನಗಡದ ಸಂತೆ

ಅಮೀನಗಡದ ಸಂತೆ

ಅಮೀನಗಡದ ಸಂತೆ ದೊಡ್ಡದು. ಸುತ್ತಲಿನ ಇಪ್ಪತ್ತು ಹರದಾರಿ ಇಷ್ಟು ದೊಡ್ಡ ದನಗಳ ಸಂತೆ ಕೊಡುವದಿಲ್ಲ. ಅದರಲ್ಲಿ ಈ ವರ್ಷ ಬರ ಬಿದ್ದು ದುರ್ಭಿಕ್ಷಾದ್ದರಿಂದ ದನದ ಸಂತೆಗೆ ಮತ್ತಿಷ್ಟು ಕಳೆ ಏರಿತ್ತು. ಈ ಹೆಸರಾದ ಸಂತೆಯಲ್ಲಿ ಮತ್ತಾವ ವಸ್ತುಗಳನ್ನು ಕೊಳ್ಳುವ ಅಥವಾ ಮಾರುವ ವ್ಯವಹಾರವಾಗುವದಿಲ್ಲ. ಆದರೆ ಎಲ್ಲಿ ನೋಡಿದಲ್ಲಿ ದನಗಳು ಮಾತ್ರ ಕಾಣುವವು.

ಈ ವರ್ಷ ಕರಿಸಾಲವೆಂದು ಮೊದಲೇ ಹೇಳಿದ್ದೇವೆ. ಆದ್ದರಿಂದ ಸಂತೆಯಲ್ಲಿ ಒಂದು ಹಿಂಡುವ ಎಮ್ಮೆ ಅಥವಾ ಆಕಳವನ್ನು ತಕ್ಕೊಂಡು ಅದರ ಹೈನವನ್ನು ಉಣ್ಣ ಬೇಕೆಂಬ ಅಭಿಲಾಷೆಯಿಂದ, ಎಮ್ಮೆ ಆಕಳನ್ನು ಹುಡುಕುವ ಸವಿಗಾರರು ಅಲ್ಲಿ ಕಂಗೊಳಿಸುವ ಬಗೆ ಹ್ಯಾಗೆ? ಮನೆಯಲ್ಲಿ ಬೇಕಾದಷ್ಟು ಹತ್ತೀಕಾಳುಂಟು. ಒಂದು ಸಣ್ಣ ಹೋರಿಗರುವನ್ನು ವೈದು, ಮೆಯಿಸಬೇಕೆಂಬ ಲವಲವಿಕೆಯುಳ್ಳ ಒಬ್ಬ ಒಕ್ಕಲಿಗನು ಸಹ ಆ ಸಂತೆಯಲ್ಲಿ ಇದ್ದಿಲ್ಲ. ಇದೇ ವರ್ಷ ಹೆಗಲು ಹೆಚ್ಚಿದ ಬಿಳೆ ಹೊಸ ಹೋರಿಯ ಜೋಡಿಗೆ ಅದರಂಥ ಬಿಳೇ ಹೋರಿಯನ್ನೇ ಕೊಳ್ಳುವ ಉಬ್ಬು ಯಾರ ಮೋರೆಯ ಮೇಲೂ ಹೊಳೆಯುತ್ತಿದ್ದಿಲ್ಲ.

ನದೀ ವಂಡೆಯೆ ಮಡಿಯಲ್ಲಿ ಕಟ್ಟಿ ಮೆಯಿಸಿದ್ದರಿಂದ ತೆನ್ನ ಮೆಚ್ಚಿನ ಆಕಳವು ಕೈಯಿಟ್ಟರೆ ಮಾಸುವದೆಂದು ಅದರ ಮೇಲೆ ಜೂಲು ಹಾಕಿ ಮಾರಾಟಕ್ಕೆ ತಂದ ಆಕಳ ಒಡೆಯನು ಆ ಸಂತೆಯಲ್ಲಿ ಇದ್ದಿಲ್ಲ. ಗೋದಿಯ ಹುಗ್ಗೀ ತಿನಿಸಿದ್ದರಿಂದ ತನ್ನ ಹೋರಿ ಕಸಿವಿನದು, ಬೇಕಾದರೆ ಕಲ್ಲೆಳಸಿ ನೋಡಿ ಪರೀಕ್ಷಿಸಿ ಹೋರಿಯನ್ನು ಕೊಳ್ಳಬೇಕಂದು ಅಭಿಮಾನದಿಂದ ಹೇಳುವ ಸೌಭಾಗ್ಯವು ಆ ಸಂತೆಯಲ್ಲಿ ಯಾರ ಪಾಲಿಗೂ ಬಂದಿದ್ದಿಲ್ಲ.

ಒಣ ಚಿಪ್ಪಾಡಿ ಮೆದ್ದು, ಅಸ್ಥಿಮಾತ್ರ ಅವಶೇಷವಾದ, ಉಣ್ಣೆ, ಚಿಕ್ಕಾಡುಗಳಿಂದ ಮುತ್ತಿದ, ಮತ್ತು ಕಣ್ಣಲ್ಲಿ ಜೀವ ಹಿಡಿದ ಸಣ್ಣ ಬೊಡ್ಡ ದನಗಳನ್ನು ಹರಕ ಹಗ್ಗಗಳಿಂದ ಕಟ್ಟಿಕೊಂಡು ಬಂದು, ಒಕ್ಕಲಿಗರು ಸಂತಿಯಲ್ಲಿ ಕೆಳಗೆ ಮೋರಿ ಮಾಡಿ ಕುಳಿತಿದ್ದರು. ಅಂಥ ಸಂತೆಯಲ್ಲಿ ಸಹ ಗಿರಾಕಿಗಳಿಗೆ ಕಡಿಮೆಯಿದ್ದಿಲ್ಲ. ಆದರೆ ಆ ಗಿರಾಕಿಗಳು ಮಾತಾಡಿಸಿದ ಕೂಡಲೆ ದನಗಳನ್ನು ತಂದ ಒಕ್ಕಲಿಗರು ನಿದ್ದೆಯಿಂದ ಎದ್ದು ಗಾಬರಿಯಾಗಿ ನೋಡುವಂತೆ ಗಿರಾಕಿಗಳನ್ನು ನೋಡುತ್ತಿದ್ದರು. ಯಾಕಂದರೆ ಗಿರಾಕಿಗಳು ಬಹುತರವಾಗಿ ಕಟುಕರಿದ್ದರು. ಒಂದು ಕಾಲಕ್ಕೆ ಹೊಟ್ಟೆಯ ಮಕ್ಕಳಿಗಿಂತ ಹೆಚ್ಚಿನ ಪ್ರೀಕಿಯಿಂದ ಬೆಳೆಸಿದ ದನಗಳನ್ನು ಈಗ ಅವುಗಳ ಮರುಕ ನೋಡಲಾರದೆ ತಮ್ಮ ಹೊಟ್ಟೆಯ ಸಲುವಾಗಿ ಕಟಕರಿಗೆ ಮಾರುವ ಪ್ರಸಂಗ ಒದಗಿದ್ದರಿಂದ ಒಕ್ಕಲಿಗರ ಹೃದಯದಲ್ಲಿ ಬೆಂಕಿ ಬಿದ್ದಿತ್ತು. ಕೂತಲ್ಲಿಯೇ ಭೂಮಿ ಒಡೆದು ತಮ್ಮನ್ನು ನುಂಗಿದರೆ ಒಳಿತಾಗುವದೆಂದು ಸಹ ಒಮ್ಮೊಮ್ಮೆ ಅವರಿಗೆ ಅನಿಸುತ್ತಿತ್ತು. ಗಿರಾಕಿ ಹತ್ತಿರ ಬಂದ ಕೂಡಲೆ ಅವರ ಕೂಡ ಮಾತಾಡುವದೂ ಬೇಡ ಬೆಲೆಯಗೋಸ್ಕರ ವಾದಿಸುವದೂ ಬೇಡ, ಕೈಯಲ್ಲಿಯ ದನಗಳನ್ನು ಬಿಟ್ಟು ದೂರ ಓಡಿಹೋಗಬೇಕೆಂಬ ಬುದ್ಧಿಸಹ ಕೆಲವರಿಗೆ ಆಗುತ್ತಿರಬಹುದು. ಆದರೆ ಮಾಡುವದೇನು? ‘ಕಣ್ಣುಮರೆ ಮಣ್ಣುಮರೆ’ ಎಂಬ ಗಾದೆಯಂತೆ ಒಮ್ಮೆ ದನಗಳನ್ನು ಕಣ್ಣುಮರೆ ಮಾಡಿದರೆ ಸಾಕು ಇಷ್ಟೇ ಎಲ್ಲರ ವಿಚಾರ. ಇರಲಿ.

ವ್ಯಾಪಾರಕ್ಕೆ ಪ್ರಾರಂಭವಾಯಿತು. ಐದು ಸೂಲ ಸೊಗಸಾದ ಹೈನ ಮಾಡಿದ ಎಮ್ಮೆಯನ್ನು ಕೇವಲ ಅದರ ತೊಗಲಿನ ಬೆಲೆಗೆ ೫ ರೂಪಾಯಿಗಳಿಗೆ ಕಟಕನಿಗೆ ಕೊಟ್ಟು, ಅದನ್ನು ಆತನು ಎಳಕೊಂಡು ಹೋಗುವಾಗ್ಗೆ ಅತ್ತೆಯ ಮನೆಗೆ ಹೋಗುವ ಮಗಳ ಕಡೆಗೆ ನೋಡುವಂತೆ ಅದನ್ನು ನೋಡುತ್ತ ಒಬ್ಬ ಒಕ್ಕಲಿಗನು ಒಂದೆಡೆಯಲ್ಲಿ ಕೂತಿದ್ದನು. ಪ್ರತಿ ಸಲ ಹೋರಿಯನ್ನೇ ಈದು ಓಂದು ಕಾಲಕ್ಕೆ ತನ್ನಮೇಲೆ ಬಂಗಾರದ ಮಳೆಗರೆದ ದೊಡ್ಡಗೋಮಾತೆಯನ್ನು ಕಟಕರ ಕೈಗೆ ಕೊಟ್ಟು, ತನ್ನ ತಾಯಿ ಸತ್ತಂತೆ ಮನದಲ್ಲಿಯೇ ಕೊರಗುವ ದೈವಗೇಡಿಯು ಮತ್ಕೊಂದೆಡೆಯಲ್ಲಿದ್ದನು. ಮಳೆಗಾಳಿಗಳಲ್ಲಿ ಅಧವಾ ಛಳಿ ಬಿಸಲುಗಳಲ್ಲಿ ಯಾವಾಗಲೂ ಮೈಮುರಿ ದುಡಿದು ತನ್ನ ಸಂಸಾರದಲ್ಲಿ ಒಡಹುಟ್ಟಿದ ತಮ್ಮನಂತೆ ಸಹಾಯ ಮಾಡಿದ, ಎತ್ತುಮಾರಿದ ಮತ್ತೊಬ್ಬನು ಭ್ರಾತೆೃವಿಯೋಗದ ದುಃಖವನ್ನು ಅನುಭವಿಸುತ್ತಿದ್ದನು. ಆಯಿತು ಸಂತೆ ಮುಗಿಯಿತು. ತಮ್ಮ ತಮ್ಮ ಪಾವಡದಲ್ಲಿ ರೂಪಾಯಿಗಳನ್ನು ಕಟ್ಟಿಕೊಂಡು ಒಕ್ಕಲಿಗರು ತಮ್ಮ ತಮ್ಮ ಹಳ್ಳಿಗಳಿಗೆ ಹೊರಟರು. ಈ ಹಣದಿಂದ ಅವರ ಕಣ್ಣುಗಳು ಆನಂದಾಶ್ರುಗಳಿಂದ ತುಂಬದೆ ದುಃಖಾಶ್ರುಗಳಿಂದ ತುಂಬಿದ್ದವು. ರೂಪಾಯಿಗಳ ಗಂಟು ಕೆಂಡದಂತೆ ಅವರ ತಲೆಯನ್ನು ಸುಡುತ್ತಿತ್ತು. ಮನೆಗೆ ಹೋಗಲಿಕ್ಕೆ ಅವರ ಹೆಜ್ಜೆಗಳು ಕಿತ್ತಲೊಲ್ಲವು. ಮನೆಗೆ ಹೋದ ಕೂಡಲೆ ‘ಹಂಬಾ’ ಎಂದು ಮೇವು ಹಾಕಲಿಕ್ಕೆ ಕರೆಯುವ ಆಕಳವು ಇಂದು ಮನೆಯಲ್ಲಿ ಇಲ್ಲ. ಈ ವಿಚಾರದಿಂದ ಅವರ ಹೃದಯವು ಕರಗಿ ನೀರು ನೀರು ಆಗಿತ್ತು. ಯಾರಾದರೂ ಪ್ರಿಯರಾದಂಥವರ ಅಂತ್ಯ ವಿಧಿ ಮುಗಿಸಿ ಸ್ಮಶಾನದಿಂದ ಮನೆಗೆ ತಿರುಗಿ ಹೋಗುವಂತೆ ಒಕ್ಕಲಿಗರು ತಮ್ಮ ತನ್ಮು ಮನೆಗೆ ಹೋದರು. ಅವರ ಸಂತೆ ಮುಗಿಯಿತು.

ಸಂತೆಯಲ್ಲಿ ಕೊಂಡ ದನಗಳನ್ನು ಹೊಡಕೊಂಡು ಕಟಕರು ಹೊರಟಿದ್ದರು. ಸಂತೆಯಲ್ಲಿ ಕೊಂಡಕೂಡಲೆ ಅವುಗಳಿಗೆ ಮೇವು ಹಾಕುವ ನೆನಪು ಅಥವಾ ಸಮಯ ಕಟಕರಿಗೆ ಸಿಗದ್ದರಿಂದ ಸಂಜೆಯ ವರೆಗೆ ದನಗಳು ಉಪವಾಸ ಇದ್ದವು. ಈ ಮಾದರಿಯ ಉಪವಾಸವು ಅವುಗಳಿಗೆ ಹೊಸದಲ್ಲ. ಆದರೆ ಮನೆಯಲ್ಲಿ ಉಪವಾಸ ಕಟ್ಟಿದರೂ ಮೇಲಿಂದಮೇಲೆ ಹತ್ತರ ಬಂದು ಮೈಮೇಲೆ ಕೈಯಾಡಿಸುವ ಮರುಕಿನ ಒಡೆಯನಿದ್ದನು. ಕಟಕರ ಕೈಸೇರಿದ ಮೇಲೆ ಕೇಳುವವರಾರು? ಮೈ ದಡವಿ ಮಾತಾಡಿಸುವದಂತೂ ಕನಸಿನಲ್ಲಿಯೇ. (ದೂರೇ ಉಳಿಯಿತು).

ಏನೂ ಪ್ರಯಾಸ ತಟ್ಟದೆ ಹಿಂಡುದನಗಳನ್ನು ಹೊಡಕೊಂಡು ಹೋಗುವ ಸುಲಭ ಉಪಾಯವು ಕಕರಿಗೆ ಗೊತ್ತಿದೆ. ಒಂದೊಂದು ಹಗ್ಗದಿಂದ ನಾಲ್ಕೈದು ಸಣ್ಣದೂಡ್ಡ ದನಗಳನ್ನು ತೊಡಕಿಸಿ ಕಟ್ಟುವ ಯುಕ್ತಿಯಿಂದ ಅವರ ಕೆಲಸವು ಹಗುರಾಗಿತ್ತು. ಈ ತೊಡಕುಗಳಲ್ಲಿ ಎರಡು ಮೂರು ದುಷ್ಟ ದನಗಳಕೂಡ ಒಂದೆರಡು ಸುಷ್ಟ ದನಗಳು ಸಿಕ್ಕರೆ ಅವುಗಳ ಬೊಗಳೆ ನೋಡಲಾರರು. ಒಂದನ್ನೊಂದು ಎಳೆಯುತ್ತ, ಎಡವುತ್ತ, ತುಳಿಯುತ್ತ ಮತ್ತು ಒಮ್ಮೊಮ್ಮೆ ಇರಿಯುತ್ತ ಆ ದನಗಳ ಹಿಂಡುಸಾಗಿತು. ತನ್ನ ಕೂಡ ತೊಡಕಿಸಿದ ಅಡನಾಡಿದನಗಳನ್ನು ಎಳೆದೆಳೆದು ಅಥವಾ ಹೊಟ್ಟೆಯಲ್ಲಿ ಕೂಳಿಲ್ಲದೆ ದಣೆದು ಯಾವದಾದರೊಂದು ಹೋರಿ ನಿಂತು ಬಿಟ್ಟರೆ ಕೈಯಲ್ಲಿಯ ಬಡಿಗೆಯಿಂದ ಕಟಕರ ಹುಡುಗನು ಚಿರ್ಚಿನಂತೆ ಆ ಹೋರಿಯ ಮೇಲೆ ಸಾಗಿ ಹೋಗುತ್ತಿದ್ದನು. ಕೂಡಲೆ ಆ ಹೋರಿ ಮುಂದೆ ಧಾವಿಸುಕ್ತಿತ್ತು. ತಮ್ಮ ಮುಂಚಿನ ಒಡೆಯನು ತಮ್ಮನ್ನು ಏಕೆ ಬಿಟ್ಟನು? ಈಗಿನವನು ತಮ್ಮನ್ನು ಏಕೆ ಹೀಗೆ ಪೀಡಿಸುವನು? ತಾವು ಎರಿ ಏಕೆ ಹೋಗುತ್ತಿರುವವು? ಇವೆಲ್ಲ ತಿಳೆಯದೆ ದಾರೀ ಹಿಡಿದು ನಡೆಯುವ ದನಗಳನ್ನು ನೋಡಿದರೆ ಯಾರ ಹೃದಯದಲ್ಲಾದರೂ ಔದಾಸೀನ್ಯದ ಕತ್ತಲೆಯು ಪಸರಿಸದೆ ಇರಲಾರದು.

ಆ ದನಗಳ ಸಮೂಹದ ಮುಂಭಾಗದಲ್ಲಿ ಒಂದು ಎತ್ತು ನಡೆದಿತ್ತು. ಅದು ಇಣಿಗೂಡಿಸಿ ಪೂರ ಎಂಟು ಗೇಣು ಇದ್ದದ್ದರಿಂದ, ಅದರ ಜೊತೆಗೆ ತೊಡಕಿಸಲಿಕ್ಕೆ ಬೇರೆ ದನಗಳು ಸಿಗದ್ದರಿಂದ, ಅದನ್ನೊಂದನ್ನೇ ಬಿಟ್ಟಿರಬಹುದು. ಅಥವಾ ಅದನ್ನು ನೋಡಿದ ಕೂಡಲೆ ಕಟಕರ ಮನಸ್ಸಿನಲ್ಲಿ ಸಹ ಪೂಜ್ಯಭಾವ ಹುಟ್ಟಿ, ಅಂಥ ಸಂಭಾವಿತ ಮತ್ತು ಭವ್ಯ ಎತ್ತಿಗೆ ಹಗ್ಗಹಚ್ಚಿ ಅದರ ಅಪಮಾನ ಮಾಡಬಾರದೆಂದು ಅವರು ಬಿಟ್ಟಿರಬಹುದು. ತುಂಬಿದ ಕೊಡದಂತೆ ಕಾಣುವ ಅದರ ಇಣಿಯ ಮೇಲೆ ಕಟಕರು ತಮ್ಮ ಉಳಿದ ಹೆಗ್ಗಗಳ ಸುರಳಿಯನ್ನು ಹಾಕಿದ್ದರು. ಎತ್ತು ಅತಿಶಯ ಸೊರಗಿದ್ದರಿಂದ ಅದರ ತಿಗದ ಮೇಲಿನ ಎಲವಿನ ಮೇಲೆ ಸಹ, ಹಗ್ಗದ ಸುರಳಿ ಇಡುವಂತೆ ಇತ್ತು. ಎಷ್ಟು ಸೋತಿದ್ದರೂ ಸಹ ಅದು ತನ್ನ ನಡಿಗೆಯ ಅಂದ ಬಿಟ್ಟಿದ್ದಿಲ್ಲ. ತನ್ನ ಬೆನ್ನಮೇಲೆ ಅಂಬಾರಿಯನ್ನು ಹೊತ್ತು ಅದರಲ್ಲಿ ಸಾರ್ವಭೌಮರು ಮೆರೆಯುವಾಗ ಪಟ್ಟದಾನೆ ಎಷ್ಟು ಅಭಿಮಾನದಿಂದ ಮತ್ತು ಗಾಂಭೀರ್ಯದಿಂದ ಪದನ್ಯಾಸ ಮಾಡುವದೊ ಅಷ್ಟು ಗಾಂಭೀರ್ಯದಿಂದ ಈ ಎತ್ತು ನಡೆದಿತ್ತು. ಎಷ್ಟೇ ಸಾವಕಾಶ ನಡೆದರೂ ಅದರ ಹೆಜ್ಜೆಗಳು ದೊಡ್ಡವಾದ್ದರಿಂದ ಎಷ್ಟೊಸಲ ಮಿಕ್ಕದನಗಳು ಹಿಂದೆ ಉಳಿಯುತ್ತಿದ್ದವು. ಆಗ್ಗೆ ಆ ಎತ್ತು ತನ್ನ ಚಿಕ್ಕಪುಟ್ಟ ಬಾಂಧವರನ್ನು ಕಾಯುತ್ತ ನಿಲ್ಲುತ್ತಿತ್ತು. ಈ ದನಗಳು ತಮ್ಮೊಳಗೆ ಹೊಡೆದಾಡುವದನ್ನು ನೋಡಿ ಅದಕ್ಕೆ ಆಶ್ಚರ್ಯವಾಗುವಂತೆ ಕಾಣುತ್ತಿತ್ತು. ಈ ಎತ್ತಿನ ಜನ್ಮಕಾಲಕ್ಕೆ ಅದರ ತಾಯಿಗೆ ಎಷ್ಟು ಅನಂದ ಆಗಿದ್ದೀತು. ಅದರಂತೆ ಆಕಳ ಒಡಯನಿಗಾದರೂ ಚೆೊಚ್ಚಿಲ ಗಂಡುಮಗೆ ಹುಟ್ಟಿದಂತೆ ಅನಿಸಿರಬಹುದು. ಇದು ಸ್ವಲ್ಪದೊಡ್ಡವಾದ ಮನೆಯಲ್ಲಿಯ ಚಿಕ್ಕಮಕ್ಕಳು ತಮ್ಮ ಎಡೆಯಲ್ಲಿಯ ಬೆಣ್ಣಿರೊಟ್ಟಿಯನ್ನು ಪ್ರೇಮದಿಂದ ಇದಕ್ಕೆ ತಿನಿಸಿರಬಹುದು. ಇದು ದೊಡ್ಡದು ಆದಾದಹಾಗೆ ಕಾರ್ಹುಣ್ಣಿವಿಗೆ ಮತ್ತು ಮಣ್ಣೆತ್ತಿನ ಅಮಾಸಿಗೆ ಇದನ್ನು ತೊಳೆದು ಪೂಜಿಸಿ ಶೃಂಗಾರ ಮಾಡುವದರಲ್ಲಿ ಮನೆಯಲ್ಲಿಯ ಎಲ್ಲರೂ ಪ್ರಹರಗಟ್ಟಲೆ ತೊಡಕಿರಬಹುದು. ಇದಕ್ಕೆ ದೃಷ್ಟಿ ತಾಕಬಾರದೆಂದು ಕಾಲಲ್ಲಿ ಕರಿ ಕಟ್ಟಿರಬಹುದು. ಮತ್ತು ಕೊರಳಲ್ಲಿಯ ಕಣ್ಣಿಗೆ ಗೊಂಬೀ ಕಟ್ಟಬಹುದು. ದೊಡ್ಡ ದೊಡ್ಡ ಬಂಡಿಗಳನ್ನು ಎಳೆಯುವ ಮೇಲಾಟದಲ್ಲಿ ಮಿಗಿಲಾದ್ದರಿಂದ ಇದಕ್ಕೆ ಬಹುಮಾನ ಮಾಡಿ ಇದರ ಕೊರಳಲ್ಲಿ ಹುಲ್ಲಿನ ಸರಬಿ (ಬಹುಮಾನ ಸೂಚಕ ಕಣ್ಣೆ) ಕಟ್ಟಿ ಮೆರವಣಿಗೆ ತೆಗೆದಿರಬಹುದು. ತನ್ನ ಒಡಯನ ಬೇಸಾಯದಲ್ಲಿ ಇದು ಹಲವು ತರದಿಂದ ನೆರವಾಗಿರಬಹುದು. ಆದರೆ ದೈವಗತಿಗೆ ಯಾರು ಏನು ಮಾಡುವರು? ಆ ಎತ್ತಿಗೆ ಈಗ ತನ್ನ ಪೂರ್ವಾಯುಷ್ಯದ ನೆನಪು ಆಗುತ್ತಿದ್ದೀತು. ದನಗಳ ಸ್ಮರಣಶಕ್ತಿ ಪ್ರಬಲವಿರುತ್ತದೆಂದು ಅನುಭವ ಉಂಟು.- ಪೂರ್ವಾಯುಷ್ಯ ನೆನಸಿ ಪಾಪ ಏನು ಮಾಡೀತು ಪಾಲಿಗೆ ಬಂದುದನ್ನು ಅದುಭವಿಸಿಯೇ ತೀರಬೇಕು. ನಮಗಂತು ಆ ಆನೆಯಂಥ ಎತ್ತನ್ನು ಆ ದನಗಳ ಹಿಂಡನ್ನು ನೋಡಿ, ಅನೇಕ ವರ್ಷ ಸೌಖ್ಯದಿಂದ ಮತ್ತು ಐಶ್ಚರ್ಯಗಳಿಂದ ಪ್ರಪಂಚ ಮಾಡಿ ಕಡಗೆ ದುಷ್ಕಾಳ ಮೂಲಕ ಕುಟುಂಬ ಸಹಿತ ಗುಳೆ ಹೋಗುನ ಮಾನಧನ ಪ್ರಪಂಚಕನ ನೆನಪು ಆಯಿತು.
****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡುಗೆಯ ರುಚಿಗೆ ಮಾತ್ರ ಗಮನಕೊಟ್ಟರೆ ಸಾಕಾ?
Next post ಅಲ್ಲಮ ಪ್ರಭು

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…