ಕೂಸು ಒಪ್ಪಿಸುವ ಹಾಡು

ಒಂಭತ್ತು ತಿಂಗಳು ನಿನ್ನ ತುಂಬಿಕೊಂಡು ತಿರುಗೇನಽ|
ಹಂಬಲಿಸೀ ನಿನ್ನಽ ಹಡೆದೇನ| ಸೋ ||
ಹಂಬಲಸೀ ನಿನ್ನಽ ಹಡೆದೇನಽ ಚಿತ್ರದ
ಗೊಂಬಿ ನಿನಗೊಪ್ಪಿಸಿ ಕೊಡಲ್ಹ್ಯಾಂಗ| ಸೋ ||೧||

ಹತ್ತು ತಿಂಗಳು ನಿನ್ನಽ ಹೊತ್ತುಕೊಂಡು ತಿರುಗೇನಽ
ಮುತ್ತುಽ ಸುರುವಿದರಽ ಬರಿ ಉಡಿಯಽ| ಸೋ ||
ಮುತ್ತುಽ ಸುರುವಿದರ ಬರಿ ಉಡಿಯಽ ನನ ಮಗಳ|
ಅತ್ತೇರಿಗೊಸ್ಪಿಸಿ ಕೊಡಲ್ಹ್ಯಾಂಗಽ| ಸೋ ||೨||

ಹರಿಯಾಗೆದ್ನಮ್ಮಗಳು ಹಾಲಾ ಭಾನುಣ್ಣೂಳು|
ತೂಗಮಂಚದಲಿ ಮಲಗೂಳ| ಸೋ ||
ತೂಗ ಮಂಚದಲಿ ಮಲಗೂಳ ನಮ್ಮಗಳು|
ನಗುನಗುತ ಮನೆಯ ಬೆಳಗೂಳ| ಸೋ ||೩||

ಮುಂಜಾನೆದ್ನಮ್ಮಗಳು ತುಪ್ಪಾ ಬಾನುಣ್ಣೂಳು|
ಪಟ್ಟಮುಂಚದಲಿ ಮಲಗೂಳ| ಸೋ ||
ಪಟ್ಟಮಂಚದಲಿ ಮಲಗೂಳ ನಮ್ಮಗಳು|
ಕಟ್ಟೂತ ಕತೆಯ ಹೇಳೂಳ | ಸೋ ||೪||

ತೊಟ್ಟೀಲ ತೂಗಂದ್ರ ಸಿಟ್ಟೀಲೆ ಕೂಡೋಳಽ|
ಬಟ್ಟಲ ಬೆಳಗಾಕ ಆರಿಯಾಳ| ಸೋ ||
ಬಟ್ಟಲ ಬೆಳೆಗಾಕಽ ಅರಿಯಾದ ಮಗಳನ್ನಽ|
ಕೊಟ್ಟೇನು ಮಾವನ ಕೈಯೊಳಗ| ಸೋ ||೫||

ಮಸರೂ ಅನ್ನಾ ಕಲಸೀ ತುಸುನಽ ಉಣ್ಣಂತ್ಹೇಳಿ|
ರಾಸೀಯ ಉಣಸೀ ಸಲಹಿದೆ| ಸೋ ||
ರಾಸೀಯ ಉಣಸಿ ಸಲಹೀದೆ ನನ ಮಗಳ|
ಕೂಸಽ ನನ ಮನಿಗೆ ಎರವಾದೆ| ಸೋ ||೬||

ಕುಂಬಳಕಾಯೀ ಒಯ್ದು ಕುಡಗೋಲ್ಗೆ ಕೊಟ್ಟಂಗೆ|
ಇಂದ ನಮ್ಮಗಳ ಕೊಡತೀವ| ಸೋ ||
ಇಂದ ನಮ್ಮಗಳ ಕೊಡೆತೀವ ಪಾರ್ವಽತಿ|
ಕಂದನ ಸರಿಮಾಡಿ ಸಲಹವ್ವಾ ಸೋ ||೭||

ನಿಂಬೀಯಽನೇ ಹಣ್ಣಾ ನೆಂಬಿ ಗಿಣಿ ಒಯ್ದಾಂಗ|
ಇಂದ ನಮ್ಮಗಳ ಕೊಡತೀವ| ಸೋ ||
ಇಂದ ನಮ್ಮಗಳ ಕೊಡತೀವ ಪಾರ್ವಽತಿ|
ಕಂದನ ಸರಿಮಾಡಿ ಸಲಹವ್ವಾ| ಸೋ ||೮||

ಒಂದರಬಿ ಹಾಸೀದ ಒಂದರಬಿ ಹೊಚ್ಚೀದ|
ಇಂದರನ ಮಾಡಿ ಸಲಹೀದ| ಸೋ ||
ಇಂದರನ ಮಾಡಿ ಸಲಹಿ ಸಾಕಿದ ಮಗಳ |
ಇಂದೀಗಿ ನಮಗೆ ಎರವಾದ್ಯಾ| ಸೋ ||೯||

ಆರರಬಿ ಹಾಸಿದ್ದೆ ಆರರಬಿ ಹೊಚ್ಚಿದ್ದೆ|
ಆರೊರಸ ಮಗಳ ಸಲಹೀದ| ಸೋ ||
ಆರೊರಸ ಮಗಳ ಸಲಹೀದ ಪಾರ್ವಽತಿ|
ಇಂದೀಗೆ ನಮಗ ಎರವಾದ್ಯಾ| ಸೋ ||೧೦||

ಎಕ್ಕೀಯ ಗಿಡದಾಗ ಹಕ್ಕೀ ಬೋರ್ಯಾಡಿದಾಂಗಽ|
ಅಕ್ಕ ನೀಲವ್ವನ ಬಳಗಾವು| ಸೋ ||
ಅಕ್ಕಽ ನೀಲವ್ವನ ಬಳಗಽದ ಕಣ್ಣೀರು|
ಒಕ್ಕುಂದ್ಹೊಳೆಯಾಗೀ ಹೆರಿದಾವ್ವ| ಸೋ ||೧೧||

ಎಣ್ಣೀಯ ಕೊಡಕ ಸಣ್ಣಿರಿವಿ ಕವಿದ್ಹಾಂಗ|
ಕನ್ನೆ ಕಂದವ್ವನ ಬಳಗದ| ಸೋ
ಕನ್ನೆ ಕಂದವ್ವನ ಬರ ಕಣ್ಣನ ನೀರಾ|
ಸಣ್ಣ ಮುತ್ತಾಗಿ ಸುರಿದಾವ| ಸೋ ||೧೨||

ತುಪ್ಪಽದ ಕೊಡಕ ಕಟ್ಟಿರಿವಿ ಕವಿದಾಂಗ|
ಮಿತ್ರಿ ಕಂದವ್ವನ ಬಳಗಾದ| ಸೋ ||
ಮಿತ್ರಿ ಕಂದವ್ವನ ಬಳಗಾದ ಕಣ್ಣಾನ ನೀರಾ|
ಉತ್ರಿ ಮಳಿಯಾಗಿ ಸುರಿದಾವ| ಸೋ ||೧೩||

ಕಣಗೀಲ ಗಿಡದಾಗ ಗಿಣಿ ಹಿಂಡು ಕುಂತಾಂಗಽ|
ಸಣ್ಣ ನೀಲವ್ವನಽ ಬಳಗಾವು| ಸೋ ||
ಸಣ್ಣ ನೀಲವ್ವನ ಬಳಗದ ಕಣ್ಣೀರು|
ಹನ್ನೊಂದ್ಹೊಳಿಯಾಗೀ ಹರಿದಾವ| ಸೋ ||೧೪||

ಕಪ್ಪುರ ಗುಡ್ಡಕ ಬೆಂಕಿ ತಪ್ಪದಲೇ ಕೊಟ್ಟಾಂಗವ- |
ರಪ್ಪನ ಹೊಟ್ಟಿ ತಳಮಳಿಸಿ| ಸೋ ||
ಅಪ್ಪನ ಹೊಟ್ಟಿಽ ತಳಮಳಿಸಿ ಮಗಳ ನಿನ್ನ|
ಒಪ್ಪೀಸಿ ನಾವು ಕೊಡತೇವ| ಸೋ ||೧೫||

ಸುಡುವ ಬೆಂಕಿಗೆ ಎಣ್ಣೀ ಕೊಡವ ಸುರುವಿದ್ಹಾಂಗ|
ಹಡದವ್ವನ್ಹೊಟ್ಟಿ ತಳಮಳಿಸಿ| ಸೋ ||
ಹೆಡದವ್ವನ್ಹೊಟ್ಟಿ ತಳಮಳಿಸಿ ಮಗಳೆ ನಿನ್ನಾ |
ಕೊಡತೇವೊಪ್ಪೀಸಿ ಇವರೀಗಿ | ಸೋ ||೧೬||

ಸುಣ್ಣಽದ ಭಟ್ಟ್ಯಾಗ ಥಣ್ಣೀರಾ ಹೊಯ್ದ್ಹಾಂಗಽ|
ಅಣ್ಣನ ಹೊಟ್ಟಿ ಹೊಯ್ದಾಡೆ| ಸೋ ||
ಅಣ್ಣನ ಹೊಟ್ಟಿ ಹೊಯ್ದಾಡೆ `ನನ ತಂಗಿ|
ನನ್ನ ಮನಿಗಿಂದಽ ಎರವಾದೆ’| ಸೋ ||೧೭||

ಸಣ್ಣಽ ತಮ್ಮಾಗಿದ್ರ ತಣ್ಣಽಗ ಇರತಿದ್ದೇ|
ಮಾನ್ಯೆದ್ಹೊಲದಾಗಽ ಸರಿಪಾಲು| ಸೋ ||
ಮಾನ್ಯೆದ್ಹೊಲದಾಗಽ ಸರಿಪಾಲು ತಕ್ಕೊಂಡು|
ಚಿನ್ನಾ ನನ್ನ ಹೆಂತೇಲಿ ಇರತಿದ್ದೇ| ಸೋ ||೧೮||

ಒಮ್ಮನ ಮದ್ದಿಗೆ ಬೆಂಕಿ ಒಮ್ಮಿಲೇ ಕೊಟ್ಟ್ಹಾಂಗಽ|
ತಮ್ಮನಽ ಹೊಟ್ಈಟ ತಳಮಳಿಸೆ| ಸೋ ||
ತಮ್ಮನ ಹೊಟ್ಟೀ ತಳಮಳಿಸೆ `ಅಕ್ಕಾ ನನಗ|
ರಮ್ಮೀಸಿ ಹಣ್ಣು ಕೊಡುತಿದ್ದೇ | ಸೋ ||೧೯||

ಹಿರಿಯ ಅಣ್ಣಾಗಿದ್ರ ಸರಿಯಾಗಿರುಽತಿದ್ದೆ|
ಎರಿಯ ಹೊಲದಾಗಽ ಸರಿಪಾಲು| ಸೋ ||
ಎರಿಯ ಹೊಲದಾಗಽ ಸರಿಪಾಲು ತಕ್ಕೊಂಡು ||
ಧೋರಿಯೇ ನನ್ಹಂತೇಲಿರತಿದ್ದೇ | ಸೋ ||೨೦||

ಅತ್ತೀನ ಕರಿರೆವ್ವಾ ಅತಿಗೀನ ಕರಿರೆವ್ವಾ|
ನಾದಿನಿನ ಕರಿರೆವ್ವಾ ಹೊರೀಯಾಕ| ಸೋ ||
ನಾದಿನಿನ ಕರಿರೆವ್ವಾ ಹೊರಿಯಾಕ ಅವರೀಗೆ|
ಪ್ರೀತಿಯ ಮಗಳನ್ನು ಕೊಡರೆವ್ವಾ| ಸೋ ||೨೧||

ನಮ್ಮ ಮಗಳಲ್ಲವ್ವಾ ನಿಮ್ಮ ಮಗಳೀಕೆಂದು|
ಛೆಂದಾಗಿ ಮಗಳನ್ನ ಸಲಹವ್ವಾ | ಸೋ ||
ಛೆಂದಾಗಿ ಮಗಳನ್ನ ಸಲಹವ್ವಾ ಅನ್ನೂತ|
ಅತ್ತೆವ್ನ ಕಯ್ಯಾಗ ಕೊಡರೆವ್ವಾ | ಸೋ ||೨೨||

ಹೆಣ್ಣನ ನಿಮಗಾಗಿ ಬಣ್ಣವ ನಮಗಾಗಿ|
ಎಣ್ಹೋಳಿಗಿ ತುಪ್ಪ ಸಭೆಗಾಗಿ||
ಎಣ್ಹೋಳಿಗಿ ತುಪ್ಪ ಸಭೆಯ ಸಾಕ್ಷೆವ ಹೇಳಿ|
ಇಂದ ನಮ್ಮಗಳ ಕೊಡೆತೀವ ||೨೩||

ಹಂದಽರ್ಹಂದರ ಸಾಕ್ಷಿ ಹಂದರ ತಳವಲ ಸಾಕ್ಷಿಽಽ|
ಹಂದರದಾಗಿರುವಽ ದೈವ ಸಾಕ್ಷಿ||
ಹಂದರದಾಗಿರುವ ದೈವ ಸಾಕ್ಷವ ಹೇಳಿ|
ಇಂದ ನಮ್ಮಗಳ ಕೊಡತೀವ ||೨೪||

ಎಣ್ಣಿ ನೀಡಲಿ ಬ್ಯಾಡ ನೆತ್ತಿ ಖಸಿಯಲಿ ಬ್ಯಾಡಾಽ|
ಅನ್ನಿಗರ ಮಗಳಂದನಬ್ಯಾಡ||
ಅನ್ನಿಗರ ಮಗಳೆಂದನಬ್ಯಾಡೆ ತಂಗೆನ್ವಾ|
ಬಾಲಽನ ಸರಿಯ ಬಗಿಯವ್ವಾ ||೨೫||

ತುಪ್ಪ ನೀಡಲಿ ಬ್ಯಾಡ ನೆತ್ತಿ ಖಸಿಯಲಿ ಬ್ಯಾಡ|
ಎಂಥವರ ಮಗಳಂತ ಕರಿಬ್ಯಾಡ||
ಎಂಥವರ ಮಗಳಂತ ಕರಿಬ್ಯಾಡ ತಂಗೆವ್ವಾಽಽ|
ಪುತ್ರನ ಸರಿಯ ಬಗಿರೆವ್ವಾ ||೨೬||

ಹೆಣ್ಣ ಇವರಿಗಾದ್ಯಾ ಹೊನ್ನಽ ಇವರಿಗಾದ್ಯಾ|
ಎಣ್ಹೋಳಿಗಿ ತುಪ್ಪಾ ಜನಕಾದ್ಯಾ| ಸೋ ||
ಎಣ್ಹೋಳಿಗಿ ತುಪ್ಪಾ ಜನಕಾಗಿ ಗಂಡಿನ ತಂದಿ|
ಸಣ್ಣ ನಗೀ ನಗತಾ ನಡದಾನಽ|| ಸೋ ||೨೭||

ಸಣ್ಣ ನಗೀ ನಗತಾ ನಡದಾನು ಬಂಕನಾಥಾ|
ಹೆಣ್ಣೊಲ್ಲ ಇನ್ನ ಜಲಮಾಕಽ| ಸೋ ||೨೮||
*****

ಕೂಸು ಒಪ್ಪಿಸುವ ಹಾಡು

ವರನ ತಾಯಿತಂದೆಗಳಿಗೆ ಸರ್ವಜನಸಾಕ್ಷಿಯಾಗಿ ವಧುವಿನ ತಾಯಿತಂದೆಗಳು ಮಗಳನ್ನು ಒಪ್ಪಿಸಿಕೊಡುವರು. ಮದುವೆಯ ವಿಧಾನಗಳಲ್ಲಿ ಇದು ಕೊನೆಯದು. ಆ ಸಮಯದಲ್ಲಿ ಹೆಣ್ಣುಮಕ್ಕಳು ಈ ಹಾಡನ್ನು ಹಾಡುತ್ತಿರುತ್ತಾರೆ. ಆಗ ಕಣ್ಣೀರು ಸುರಿಸದೆ ಒಬ್ಬರೂ ಉಳಿಯಲಾರರು. ಇದೊಂದು `ಮಹಾ ಭಾವಗೀತ.’ ಹುಟ್ಟಿದ ಮನೆಯಿಂದ ಹೆಣ್ಣುಮಕ್ಕಳನ್ನು ಹೊರಗೆ ನೂಕುವಂತಿರುವ ಈ ಲಗ್ನವೆಂಬುದರ ಸತ್ಯಸ್ವರೂಪವು ಆಗ ಒಡೆದು ಕಾಣುತ್ತಿರುತ್ತದೆ.

ಈ ಹೆಣ್ಣು ಒಪ್ಪಿಸುವ ವಿಧಾನಕ್ಕೆ `ನಾಗೋಲಿ ಚೌಗೋಲಿ’ ಎಂದು ಹೆಸರಿದೆ. ಈ ವಿಧಾನ ಮುಗಿದ ಬಳಿಕ ಬೀಗರು ಮದುವೆಯ ಮನೆಯಲ್ಲಿ ನೀರು ಸಹ ಕುಡಿಯದೆ ತಮ್ಮ ಊರ ಹಾದಿಯನ್ನು ಹಿಡಿಯುತ್ತಾರೆ. ಆದ್ದರಿಂದ `ನಾಗೋಲಿ ಚೌಗೋಲಿ’ ಎಂಬುದರ ಅರ್ಥವು `ನಾಗಾಲ ಚೌಗಾಲ’ (ನಾಗಾಲೋಟ) ಎಂದು ಇರಬಹುದು. “`ನಾಗೋಲಿ ಚೌಗೋಲಿ’ ಆದ ಬಳಿಕ ನಾಯಿ ಸಹ ನೀರು ಕುಡಿಯುವುದಿಲ್ಲ” ಎಂದು ಗಾದೆಯ ಮಾತಿದೆ.

ಛಂದಸ್ಸು:- ತ್ರಿಪದಿಯಾಗಿದೆ.

ಶಬ್ದ ಪ್ರಯೋಗಗಳು:- ಹರಿಯಾಗ=ಬೆಳಗಿಗೆ. ಹಾಲಾಬಾನ=ಹಾಲೂ ಅನ್ನ. ಬೆಳಗಾಕ=ಉಜ್ಜುವುದಕ್ಕೆ; ತೊಳೆಯುವುದಕ್ಕೆ. ನೆಂಬಿ=ನಂಬಿ. ಬಳಗಾದ=ಬಳಗವಿದೆ. ಮಾನ್ಯದ ಹೊಲ=ಉಂಬಳಿಯ ಹೊಲ. ಒಮ್ಮನ=ನಾಲ್ಕು ಸೇರು. ಹಂತೀಲಿ=ಹತ್ತರ. ಬಣ್ಣ=ಸೀರೆ. ತಳವಲ=ತಳಿರು ತೋರಣ. ಖಸಿ=ಕುಕ್ಕು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ
Next post ರಾಮಿಯ ಗಂಡು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys