ಮೊನ್ನಿಽನ ಬರದಾಗ ಕುಸುಬಿಽಯ ಮಾರಿದರಲ್ಲ|
ಕೋಲು ಕೋಲೆಣ್ಣ ಕೋಲ ||೧||

ಅಣ್ಣಾಗಾದರು ಮಕ್ಕಳಿಲ್ಲ ತಮ್ಮಽಗಾದರೂ
ಮಕ್ಕಳಽವ| ಕೋ ||೨||
* * *

ಏ ಅಣ್ಣಾ ಏ ಅಣ್ಣಾ ಸೊಲಗಿ ಜ್ವಾಳಾ
ಕಡಾ ಕೊಡು| ಕೋ ||೩||

ಸೊಲ್ಲಿಗಿ ಜ್ವಾಳಾ ಕಡನೆ ಕೊಟ್ಟಽರ ನಟ್ಟ ಕಡಿಯಽಲಿ
ಹ್ವಾದೇನಂದಾ| ಕೋ ||೪||

ಬಿರಿ ಬಿರಿ ಹ್ವಾದಽನಲ್ಲ ಗಾದ ಮೆತ್ತಿಗಿ
ತಗೆದಽನಲ್ಲ! ಕೋ ||೫||

ಗಾದ ಮೆತ್ತಗಿ ತಗೆದಽನಲ್ಲ ಸೊಲ್ಲಿಗಿ ಜ್ವಾಳಾ
ಕೊಟ್ಟಽನಲ್ಲ| ಕೋ ||೬||

ಸೊಲ್ಲಿಗಿ ಜ್ವಾಳಾ ಒಯ್ದ ಕೇರಿ ಹೆಣತಿ
ಕೈಯಲಿ ಕೊಟ್ಟಾನಲ್ಲಾ| ಕೋ ||೭||

ಒಲೀಮ್ಯಾಲ ಎಸಽರನಿಟ್ಟು ಒಡಿಲಾಕಾದರು
ಕುತ್ತಽಳಲ್ಲ| ಕೋ ||೮||

ನೆರಮನಿ ನೆಗಿಯಾಣಿ ಬೆಂಕಿಗಾದರು
ಬಂದಾಳಽಲ್ಲ| ಕೋ ||೯||

ಬೆಂಕಿಽಗಾದರು ಬಂದಽಳಲ್ಲಽ ಜ್ವಾಳದ
ಗುರುತಾ ಹಿಡಿಽದಳಲ್ಲಽ| ಕೋ ||೧೦||

ಒಲಿಮ್ಯಾಲಿನ ಎಸಽರದಾಗ ಹಿಡಿಗಲ್ಲ
ವಗೆದಽಳಲ್ಲ| ಕೋ ||೧೧||

ಬೀಸಿದ ಹಿಟ್ಟಿನಾಗ ಬೂದಿ ಮಣ್ಣಾ
ಕಲಸ್ಯಾಳಲ್ಲ| ಕೋ ||೧೨||

ಮರದಾಗಿನ ಜ್ವಾಳಗೋಳು ಉಡಿಯಲ್ಲಾದರು
ತಕ್ಕೊಂಡಽಳ। ಕೋ ||೧೩||
* * *

ಎಂಟು ಮಕ್ಕಳ ಕರಕೊಂಡು ತವರಮನಿಗಿ
ಹೋಗೀದಾಳ| ಕೋ ||೧೪||

ಏ ಅತಿಗಿ ಏ ಅತಿಗಿ ಸೇರ ಜ್ವಾಳಾ
ಕಡಾ ಕೊಡ| ಕೋ ||೧೫||

ಸೇರ ಜ್ವಾಳಾ ನಮ್ಮಲ್ಲಿಲ್ಲಾ ಹೇರ ಜ್ವಾಳಾ
ನಮ್ಮಲ್ಲಿಲ್ಲಾ| ಕೋ ||೧೬||

ಆಟ್ಟು ಮಕ್ಕಳ ಕೈಽಯಾಗ ತುತ್ತ ರೊಟ್ಟಿ
ಕೊಡು ಅವ್ವಾ। ಕೋ ||೧೭||

ತುತ್ತ ರೊಟ್ಟಿ ಬೇಡಲಿಕ್ಕ ಬಿಕ್ಕಿಗಾರೆ
ಬಂದಿದಿಯಾನ| ಕೋ ||೧೮||

ಅಸೂ ಮಕ್ಕಳ ಕರೆದುಕೊಂಡು ಅಳೂತ
ಕರೂತ ಮನಿಽಗಿ ಬಂದ್ಳ| ಕೋ ||೧೯||

ತಾಳಿನಾರೆ ತಗೊಂಡಾಳ ಅಂಗಡೀಗಾರೆ
ಹೋಗಿದಾಳ। ಕೋ ||೨೦||

ಅದ್ದನಕ್ಕಿ ಕೊಡಿರೆಪ್ಪಾ ದುಡ್ಡಿಽನಿಸಾ
ಕೊಡಿರೆಪ್ಪಾ| ಕೋ ||೨೧||

ಆದ್ದಽನಕ್ಕಿ ಯಾರಿಽಗವ್ವಾ ದುಡ್ಡಿಽನಿಸಾ
ಯಾರಿಽಗವ್ವಾ| ಕೋ ||೨೨||

ಅದ್ದನಕ್ಕಿ ಮಕ್ಕಳಿಗೆಪ್ಪಾ ದುಡ್ಡಿನಿಸಾ
ಹೆಗ್ಗಣಿಗೆಪ್ಪಾ| ಕೋ ||೨೩||

ಅದ್ದನಕ್ಕಿ ತಕ್ಕೊಂಡಾಳ ಮನಿಽಗಾರೆ
ಬಂದೀದಾಳ| ಕೋ ||೨೪||

ಕುದುಕುದು ಬಾನಿನಾಗ ದುಡ್ಡಿಽನಿಸಾ
ಸುರುವೀದಾಳ| ಕೋ ||೨೫||

ನೀಲವ್ಗ ನಿಂಬೆವ್ಗ ಒಂದೇ ಎಡಿ
ಮಾಡಿದಾಳ| ಕೋ ||೨೬||

ಗಂಗವ್ಗ ಗೌರವ್ಗ ಒಂದೇ ಎಡಿ
ಮಾಡಿದಾಳ| ಕೋ ||೨೭||

ಬೀಮಣಗ ಕಾಽಮಣಗೆ ಒಂದೇ ಎಡಿ
ಮಾಡಿದಾಳ| ಕೋ ||೨೮||

ರಾಮಣ್ಣಾ ಲಕ್ಷ್ಮೀಮಣಗ ಒಂದೇ ಎಡಿ
ಮಾಡಿದಾಳ| ಕೋ ||೨೯||

ಗಂಡ ಹೆಂಡಽರ ನಡುವ ಒಂದೇ ಎಡಿ
ಮಾಡಿದಾಳ| ಕೋ ||೩೦||

ನೀಲವ್ಗ ನಿಂಬೆವ್ಗ ತನ್ನ ಬಲಕ
ಹಾಕಿದಾಳ| ಕೋ ||೩೧||

ಗಂಗವ್ಗ ಗವರವ್ಗ ತನ್ನ ಎಡಕ
ಹುಕಿದಾಳ| ಕೋ ||೩೨||

ರಾಮಣಗ ಲಕ್ಷುಮಣಗ ಗಂಡನ ಬಲಕ
ಹಾಕಿದಾಳ| ಕೋ ||೩೩||

ಬೀಮಣಗ ಕಾಮಣಗ ಗಂಡನ ಎಡಕ
ಹಾಕಿದಾಳ| ಕೋ ||೩೪||

ಗಂಡ ಹೆಂಡಽರಿಗಿ ನಟ್ಟ ನಡು
ಹಾಸಿದಾಳ| ಕೋ ||೩೫||
* * *

ಬಾಗಿಲಿಕ್ಕಽಲಕ್ಹೋಗಿ ಏನಂತಾಳ
ನೀಲವ್ವಾ| ಕೋ ||೩೬||

ಮಾಯಽದ ನನ್ನ ಆಣ್ಣಾ ಮಲ್ಲಡಕಾರೆ
ಹೋಗೀದಾನ| ಕೋ ||೩೭||

ದಿಕ್ಕಿಗಿಲ್ಲದ ಬರ ನಮ್ಮ ಮಕ್ಕಳ
ಸುತ್ತ ಬಂದಿತ್ತೇನ| ಕೋ ||೩೮||

ರಾಜಾಕಿಲ್ಲದ ಬರ ನಮ್ಮ ರಾಯರ
ಸುತ್ತ ಬಂದಿತ್ತೇನ| ಕೋ ||೩೯||
* * *

ಏ ಅವ್ವಾ ಏ ಅವ್ವಾ ನೀಲಾನ ಸುದ್ದಿ
ಕೇಳೀರೇನ! ಕೋ ||೪೦||

ಮೊನ್ನೆ ಯಾರೆ ಬಂದಿದಳಪ್ಪಾ ಸೇರ
ಜ್ವಾಳಾ ಬೇಡಿದಳಪ್ಪಾ| ಕೋ ||೪೧||

ಸೇರ ಜ್ವಾಳಾ ಬೇಡಿದರ ಹೇರ
ಜ್ವಾಳಾ ಕೊಡುದಿತ್ತ| ಕೋ ||೪೨||

ಮಕ್ಕುವಳಽಗಿತ್ತಿ ಬಡಿವ್ಯಾದರ
ಇದ್ದಾಳವ್ವ| ಕೋ ||೪೩||

ಹೇರು ಜ್ವಾಳಾ ತೆಗೆದುಕೊಂಡು ತಂಗೀ
ಊರಿಗೆ ಹೋಗಿದಾನ| ಕೋ ||೪೪||

ನೀರಿಗಿ ಬಂದ ಅವ್ವಗಳಿರ್ಯಾ ನೀಲನ
ಸುದ್ದಿ ಕೇಳಿದಿರೇನ| ಕೋ ||೪೫||

ಅಕಿ ಸುದ್ದಿ ಕೇಳೆಲ್ಲಪ್ಪಾ ಅಕಿ ಮನಿಗಿ
ಹೋಗಿಲ್ಲಪ್ಪಾ| ಕೋ ||೪೬||

ಹೇರ ಜ್ವಾಳಾ ತೆಗೆದುಕೊಂಡು ತಂಗಿ
ಮನಿಗಿ ಬಂದಿದಾನ| ಕೋ ||೪೭||

ಹೊತ್ತು ಹೊಂಟು ಇಟ್ಟೊತ್ತಾಯ್ತು ತಂಗಿ
ಸುಳಿವ ಕಾಣಲಿಲ್ಲ| ಕೋ ||೪೮||

ಬೆಳಽಗನಾಗಿ ಇಟ್ಟೊತ್ತಾಯ್ತು ಬೀಗನ
ಸುಳುವ ಕಾಣಲಿಲ್ಲ| ಕೋ ||೪೯||

ಬಿಸಽಲ ಬಿದ್ದು ಇಟ್ಟೊತ್ತಾಯ್ತು ಮಕ್ಕಳ
ಸುದ್ದಿ ಕಾಣಲಿಲ್ಲ| ಕೋ ||೫೦||

ಬಾಗಿಲ ತೆರಿದು ನೋಡೂತನಾ ಹತ್ತು
ಹೆಣಾ ಬಿದ್ದೀದಾವ| ಕೋ ||೫೧||

ಹತ್ತರ ಗೂಡ ಹೆನ್ನೊಂದಂತ ಪೇಟಗಟಾರ
ಮಾಡಿಕೊಂಡ| ಕೋ ||೫೨||

ನೀಲವ್ವನ ನಿಂಬೆವ್ವನ ನಿಂಬಿ
ಬನದಾಗಿಟ್ಟಿದಾರ| ಕೋ ||೫೩||

ಗಂಗವ್ವನ ಗೌರವ್ವನ ಬಾಳೀ
ಬನದಾಗಿಟ್ಟಿದಾರ| ಕೋ ||೫೪||

ರಾಮಣಗ ಲಕ್ಷ್ಮೀಮಣಗ ತೆಂಗಿನ
ಬನದಾಗಿಟ್ಟಿದಾರ| ಕೋ ||೫೫||

ಬೀಮಣಗ ಕಾಮಣಗ ಪೇರೂ
ಬನದಾಗಿಟ್ಟಿದಾರ| ಕೋ ||೫೬||

ಗಂಡಹೆಂಡಽರನೊಯ್ದು ಶಿವನ
ಪಾದದಲಿಟ್ಟೀದಾರ| ಕೋ ||೫೭||

ಮಾಯಽದ ಅಣ್ಣನ ಒಯ್ದು ತಂಗೀ
ವಾದದಲಿಟ್ಟೀದಾರ| ಕೋ ||೫೮||
*****

ಇಬ್ಬರು ಅಣ್ಣ ತಮ್ಮಂದಿರಿರುತ್ತಾರೆ. ಅಣ್ಣ ಶ್ರೀಮಂತ, ತಮ್ಮ ಬಡೆವ. ಅಣ್ಣನಿಗೆ ಮಕ್ಕಳಿಲ್ಲ ತಮ್ಮನಿಗೆ ಬಹಳ ಮಕ್ಕಳು. ತಮ್ಮನು ಅಣ್ಣನಿಗೆ “ಒಂದು ಪಡಿಜೋಳವನ್ನು ಕಡವಾಗಿ ಕೊಡು ನಿನ್ನ ಹೊಲದಲ್ಲಿ ಕೆಲಸವನ್ನು ಮಾಡುವೆನು ಎಂದನು. ಆ ಮಾತಿಗೆ ಅಣ್ಣನು ಒಪ್ಪಿ ಅದರಂತೆ ಮಾಡಿದನು. ತಮ್ಮನ ಹೆಂಡತಿಯು ಆ ಜೋಳವನ್ನು ತನ್ನ ಮನೆಯಲ್ಲಿ ಒಡೆಯುತ್ತಿದ್ದಾಗ ಭಾವನ ಹೆಂಡತಿಯು ಬಂದು ಅವು ತಮ್ಮ ಜೋಳವೆಂದು ಗುರುತಿಸಿ ನುಚ್ಚಿನ ಗಡಿಗೆಯನ್ನು ಒಡೆದು ಇದ್ದ ಬೋಳವನ್ನು ತೆಗೆದುಕೊಂಡು ಹೋಗುತ್ತಾಳೆ. ಆ ಮೇಲೆ ಬಡವನ ಹೆಂಡತಿಯು ತನ್ನ ಎಂಟೂ ಮಕ್ಕಳನ್ನು ಕರೆದುಕೊಂಡು ತವರುಮನೆಗೆ ಹೋಗುತ್ತಾಳೆ. ಅಲ್ಲಿ ತನ್ನ ಅಣ್ಣನ ಹೆಂಡತಿಗೆ ಒಂದು ಸೇರು ಜೋಳವನ್ನು ಕಡ ಬೇಡುತ್ತಾಳೆ. ಕೊಡದಿರಲು ಹುಡುಗರಿಗೆ ತುತ್ತು ರೊಟ್ಟಿಯಾದರೂ ಕೊಡೆಂದು ಕೇಳಿದಾಗ “ತುತ್ತು ರೊಟ್ಟೀ ಬೇಡಲಿಕ್ಕೆ ಬಿಕ್ಕೆಗೆ ಬಂದಿದ್ದಿಯಾ?” ಎಂದು ಅತ್ತಿಗೆಯು ಎನ್ನುವಳು. ನಂತರ ಬಡವಿಯು ಅಂಗಡಿಗೆ ಹೋಗಿ ಕೊರಳಲ್ಲಿಯ ತಾಳಿಯನ್ನು ಕೊಟ್ಟು ವಿಷವನ್ನೂ ಅಕ್ಕಿಯನ್ನೂ ಕೊಂಡುತರುವಳು. ವಿಷಹಾಕಿ ಮಾಡಿದ ಬೋನವನ್ನು ಮಕ್ಕಳೊಡನೆ ಆ ಗಂಡಹೆಂಡರು ಉಣ್ಣುವರು. ಉಂಡು ಬರವನ್ನು ಶಪಿಸುತ್ತ ಬಾಗಿಲಿಕ್ಕಿಕೊಂಡು ಮಲಗಿಬಿಡುವರು. ಮಲ್ಲಾಡಕ್ಕೆ ಹೋದ ಆಕೆಯ ಅಣ್ಣನು ತಿರುಗಿಬಂದು ತಂಗಿಯ ಸುದ್ದಿಯನ್ನು ಕೇಳಿದಾಗ ಅವನ ತಾಯಿಯು ಎಲ್ಲವನ್ನೂ ಹೇಳುವಳು. ಅದನ್ನು ಕೇಳಿ, ಕೆಡಕೆನಿಸಿ ತಂಗಿಯ ಮನೆಗೆ ಬರುವರು. ಬಂದು ನೋಡಿ ತನ್ನ ಜೀವವನ್ನು ಇಟ್ಟು ಕೊಳ್ಳುವುದಕ್ಕೆ ಹೇಸಿ ತಾನೂ ಅವರೊಡನೆ ಸಾಯುತ್ತಾನೆ.

ಛಂದಸ್ಸು:- ಸಾಂಗತ್ಯಕ್ಕೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಸೊಲಗಿ=ಪಡಿ ಆಥನಾ ಸೇರು. ಗಾದ ಮೆತ್ತಿಗೆ=ಕಣಜದ ಬಾಯಿಯ ಮೆತ್ತಿಗೆ. ಹೆಣತಿ-ಹೆಂಡತಿ. ಇಸಾ-ವಿಷ. ಎಡಿ=ಅಗಲ. ಪೇಟಗಟಾರ ಮಾಡಿಕೊ=ಹೊಟ್ಟೆಯಲ್ಲಿ ಕಠಾರಿಯಿಂದ ಇರಿದುಕೊ. ಅಟ್ಟು=ಅಷ್ಟು. ತುತ್ತು=ತುಣುಕು. ಅಸೂ=ಅಷ್ಟು. ಬಾನಿನಾಗ=ಬೋನದಲ್ಲಿ.