ಕೆಲವರು ಕಾಲದ ಜೊತೆಗೆ
ಸರಳರೇಖೆಯ ಹಾಗೆ ಬೆಳೆಯಬಲ್ಲರು
ಕೃಷ್ಣನ್ ಕುಟ್ಟಿ
ಬೆಳೆದಿದ್ದು ಬೇರೆಯ ಥರ
ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ
ಹದಿನೈದು ವರ್ಷದ ಹುಡುಗ
ತ್ರಿವೇಂದ್ರಮ್ ಸಮೀಪದ ಹುಡುಗ
ತ್ರಿವೇಂದ್ರಮ್ ತಲುಪಿದ ಹುಡುಗ
ತ್ರಿವೇಂದ್ರಮ್‍ನಲ್ಲಿ ನಿಂತ ಹುಡುಗ
ಈಗ ಹುಡುಗನಲ್ಲ ಆ ಹುಡುಗ

ಹುಡುಗರು ಬೆಳೆಯುತ್ತಾರೆ ಕಾಲದ ಜೊತೆಗೆ
ಹುಡುಗರು ಚಲಿಸುತ್ತಾರೆ ಬದುಕಿನ ಗತಿಗೆ
ಒಬ್ಬೊಬ್ಬರದೂ ಒಂದೊಂದು ಥರ
ಕೃಷ್ಟನ್ ಕುಟ್ಟಿ
ಕಡಲಿನ ಅಂಚಿಗೆ ಬಾಗಿದ
ವಯೋವೃದ್ಧ ತೆಂಗಿನ ಮರ

ಅವನ ಬದುಕೇ ಒಂದು ಕೋವಲಮ್ ಸಮುದ್ರ
ಮನೆಯ ಮಾಡಿನ ಹಾಗೆ ನೂರಾರು ಛಿದ್ರ
ಈಗ ಹುಡುಗನಲ್ಲ ಆ ಹುಡುಗ
ಅವನ ಪುಟ್ಟ ಕೂಸನ್ನು
ಎತ್ತಿ ಒಯ್ದಿದೆ ಮೃತ್ಯು ಎಂಬ ಭೀಕರ ಗಿಡುಗ

ಕೆಲವರು ಕಾಲದ ಜೊತೆಗೆ
ಸರಳರೇಖೆಯ ಹಾಗೆ ಚಲಿಸಬಲ್ಲರು
ಕೃಷ್ಣನ್ ಕುಟ್ಟಿ
ಬದುಕಿದ್ದು ಬೇರೆಯ ಥರ.
*****