ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ
ಯಶೋದೆಯ ಜೋಗುಳದ ಹಾಡು
ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ
ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು
ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು
ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿದಿದೆ
ನಂದಗೋಕುಲದ ರಾತ್ರಿ ಮಲ್ಲಿಗೆಯೊಂದು
ಅರಳಿ ಕಿಲ ಕಿಲ ನಕ್ಕಿದೆ ಅದೇ ಪರಿಮಳ
ತುಂಬಿ ತಡೆಯದಾಗಿದೆ ತನ್ನ ಸಂತೋಷ
ನನ್ನ ಘ್ರಾಣೇಂದ್ರಿಯ
ನಂದಗೋಕುಲದಲೊಬ್ಬ ತುಂಟ ಚುರುಕಿನ ಹುಡುಗ
ಬೆಣ್ಣೆಯಲ್ಲಿ ಹಲ್ಲುತಿಕ್ಕಿ ಹಾಲಲ್ಲಿ ಮುಖ ತೊಳೆದಿದ್ದು
ಅದೋ ತೊಟ್ಟಿಕ್ಕುತ್ತಿದೆ ಇಲ್ಲಿ ಅದಕ್ಕೆ ಬಾಯ್ತೆರೆದ
ಈ ಗೋವುಗಳು ಬಯ್ತುಂಬುವ ತವಕಕ್ಕೆ
ಜೀವ ಸಲ್ಲಿಸಿವೆ
ತನ್ನ ವಿನೋದದಲ್ಲೇ ಮಗ್ನ ಆ ನಗ್ನ
ಕೃಷ್ಣನನ್ನು ಕೊಳಲೂದ ಕರೆಯಲು
ಅವನ ಉಸಿರಿನ ಹಾದಿ ಹಿಡಿದು
ಹಾರಿದೆ ನನ್ನ ಜೀವದ ಹಕ್ಕಿ
ನಂದಗೋಕುಲದ ಬಾಗಿಲುಗಳು ಬೇಡ
ಕಿಟಕಿ ತರೆದರೂ ಸಾಕು
*****