ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ
ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ
ನಮ್ಮಮ್ಮ ಮಹತಾಯಿ ಭೂಮಿತಾಯೇ
ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ?
ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ
ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ
ಮೈಯ ಮಡಿಕೆ ಮಡಕೆಯ ಚಾಚಿ
ಶತಶತಮಾನದ ದಾಹ ಇಂಗದ ಬಾಯೇ
ಎಷ್ಟಾಯ್ತೆ ಮಳೆ ನಿನಗೆ ವರ್‍ಷಕೆಷ್ಟಾಯ್ತೆ!
ಮುಂಗಾರ ಮಿಂಚಿನಲಿ ಮಿಂಚುತ್ತ ನಡೆದವಳೇ
ಸ್ವಾತಿ ಚಿತ್ತಾ ಉತ್ತರಾ ಧನಿಷ್ಠಾ….
ಕೊನೆಗೊಮ್ಮೆ ಫಸಲಾಗಿ ಕೊಯ್ಲಾಗಿ
ಹಸಿರ ಚೆಲ್ಲಾಡಿ ಮೆರೆದವಳೇ
ಮತ್ತೇಕೆ ಬಾಯ್ ಬಾಯ್ ಬಿಡುವೆಯೇ?
ಮಾರ್‍ಗಶಿರಕೆಲೆಯುದುರಿಸಿ ಕೋಪ ತೋರುವೆಯೆ?
ವಸಂತನಾಗಮನಕೆಂದೇ ಕೋಗಿಲೆಯ
ಬಡಿದೆಬ್ಬಿಸಿ ಚೀರಿಸುವೆಯೆ?
ಮಲ್ಲಿಗೆ ಮಾವು
ಬದನೆ ಹೂವು ಎಲ್ಲ ಎಲ್ಲರಳಿ ನಗುತಿರಲು
ನೀ ಮಾತ್ರ ಬಾಯಾರಿ ಆಗಸಕೆ ಕಣ್ಣಾಗಿ ನಿಂತೆಯೇಕೆ?
ಮುಂಗಾರಿನ ಚಪಲ ನಿರೀಕ್ಷೆಯಲಿ
ಇಂದಾಗುವುತ್ಸವವ ಕೊಂದೆಯೇಕೆ?
ಬೆವರೊರೆಸಿಕೊಳ್ಳುತ್ತ ಶಪಿಸುತ್ತ ಚೀರುತ್ತ
ಬಿಸಿಲ ಬೇಗೆಯನಿಸಿ ದಣಿದೆಯೇಕೆ?


ಮಳೆಗಾಗಿ ಕಾಯುವ ಸೂಳೆ ಇಳೆ
ಎಷ್ಟು ಮಂದಿ ಇನಿಯರೇ ನಿನಗೆ
ಗೆದ್ದಾಳುವವರು? ಕೊಂದು ಬೆಂದು
ಮಡಿದು ಸ್ವರ್ಗ ಸೇರುವವರು?
ನಿನಗಾಗಿ ಹೊಡೆದಾಡುವವರು?
ಗೆದ್ದವರ ತೊತ್ತು ನೀನು ಸೆರಗ ಹಾಸಿ
ಕರೆವೆ ರಮಿಸಿ ರಮಣ ಎನುವೆ
ಯುಗಯುಗವುರುಳಿದರೂ ಕನ್ಯತ್ವ ಹರಿಯದವಳೇ
ಹಲವು ರಾಜರನು ನುಂಗಿ ನೀರು ಕುಡಿದವಳೇ
ರಕ್ತ ಸ್ನಾನದಲಿ ತೊಯ್ದವಳೇ ನವ ನವೋ
ನ್ಮೇಶ ಶಾಲಿನಿ ನವನವೋಲ್ಲೇಖನ ಶಾಲಿನೀ ಎಷ್ಟು
ಜನ ನಿನ್ನ ಬಗ್ಗೆ ಬರೆದರು ಮತ್ತೆ ಮತ್ತೆ ಬರೆದರು
ಎಷ್ಟು ಕೈ ಕತ್ತಿ ಹಿರಿದವು ಮತ್ತೆಷ್ಟು ಮಡಿದವು.|
ಸಿಂಹಾಸನ ಕೆತ್ತಿ ಕೂರಿಸಿ ಮೆರೆಸುವ
ಮುನಿಸು ತಿರುಗಿತೋ ಕಾಲಡಿಗೆ ಹಾಕಿ
ಹೊಸಕುವೆ ಮತ್ತೆ ಹೊಸ ಗಂಡನ
ಹುಡುಕುವೆ ವಲ್ಲಭಾ ಎನ್ನುವೆ
ಚಿರಯೌವನೀ ಚಿರ ಪ್ರಸವಿನೀ
ಮಾತಾ ನಮೋ ನಮಃ
ಎನೆಂದು ಹಾಡಲಿ ಎಷ್ಟೆಂದು ಹಾಡಲಿ
ನಿನ್ನ ಕಥನ?|


ಮಳೆಗಾಗಿ ಇಳೆಯೋ ಇಳೆಗಾಗಿ ಮಳೆಯೋ
ಬೀಜವೃಕ್ಷ ನ್ಯಾಯದ ಪರಿಧಿ ಬಲ್ಲ ಬ್ರಹ್ಮನಿಗೇ
ಸವಾಲು ಮುಗಿದೂ ಮುಗಿಯದ ಈ ಅವಿನಾಭಾವ
ಸಂಬಂಧ “ನನಗೂ ನಿನಗೂ ಅಂಟಿದ ನಂಟಿನ ಕೊನೆ
ಬಲ್ಲವರಾರು ಕಾಮಾಕ್ಷಿಯೇ” ಬೆದೆ ಬಂದಾಗೊಮ್ಮೆ
ಬೆರೆವೆ ಉಗಿ ಪೊರೆಯಾಗಿ ತೇಲುವ ಈ ನೆಲದ
ಧೂಳಿಗೇ ಗಟ್ಟಿಗೊಳುವೆ ಉಗಿ‌ಉಗಿ ಕೆಂಡವಾಗಿ ಉರಿದ
ಈ ಇಳೆಯ ಮೇಲೇ ತಂಪಾಗಿ ಸುರಿವೆ ಕಾದು ಕಾದು
ಕಾಯದಿದ್ದರೆ ಈ ಇಳೆ ಅಲ್ಲೇ ಇರುವೆ ಹಾಯಾಗಿ
ಬಿಳಿ ಮೋಡವಾಗಿ ತೇಲುವ ಮಳೆ ಕಾಯುವ ನೋಂಪಿ
ಹೊತ್ತ ನದಿಗಳೆಲ್ಲಾ ಕಾದು ಕಾದು ಈ ಇಳೆಯ
ಜನರನು ಸಾಯದಂತೆ ಕಾದು ಕಾದು ಅವರ
ನಾಗರಿಕತೆ ಸಂಸ್ಕೃತಿಗಳನ್ನು ಕಾದು ಕಾದು
ತಾವು ಮಾತ್ರ ಹರಿದು ಸಾಗರ ಸೇರಿವೆ ಅಲ್ಲಿಂದಲೇ
ಉಗಿಯಾಗಿ ಮೋಡವಾಗಿ ಮತ್ತೆ ಮಳೆಯಾಗಿ
ಇಳೆಗೇ ಸುರಿದಿವೆ|


ಅದ್ಯಾಕೇ ಹಾಗೆ ಗಡಗಡ ನಡುಗಿದೆ?
ಒಡಲೆಲ್ಲಾ ಬೇನೆ ಬೆಂಕಿಯೆ ನಿನಗೆ?
ಅಲ್ಲಲ್ಲಿ ಆಗಾಗ ಗಡಗಡನೆ ನಡುಗುತ್ತಿರುವ
ನಿನಗೆ ಮಾಘ ಮಾಸದ ಚಳಿಯೇನೇ
ಮಕ್ಕಳ ಮೇಲೆ ಕೋಪವೇನೇ
ಅಗೆದಗೆದು ನಿನ್ನೆಲ್ಲಾ ಚಿನ್ನ ಬೆಳ್ಳಿ ತೆಗೆ
ದರೆಂದು ಅತ್ತತ್ತು ನೀನು ಹಿಡಿದಿಟ್ಟ ಕಣ್ಣೀರನ್ನು
ತಣ್ಣೀರಾಗಿ ಕುಡಿದರೆಂದು ಬಾವಿಗಳ ತೋಡಿ
ತೋಡಿ ಗೋರಿದರೆಂದು ಕೋಪವ ಕಾರಲು ಬಾಯಿ
ಲ್ಲವೇ ನಿನಗೆ? ಹಕ್ಕಿಲ್ಲವೇ ನಿನ್ನ ಮಕ್ಕಳ ಮೇಲೆ
ಹೀಗೆ ನಂಬಿ ನಿಂತಿದ್ದ ಎಲ್ಲರನು ಎಲ್ಲವನು ಎತ್ತಿ
ಅಲ್ಲಾಡಿಸಿ ಬಿಸಾಡುವುದು? ಕಾಂಕ್ರೀಟಿನ
ಹುಡಿಯಡಿ ಕಿತ್ತ ಕೈಕಾಲು ಸಿಕ್ಕಿಸಿ ಎತ್ತಾ
ಕಿಸುವುದು? ಇದು ತರವೇ ನಿನಗೆ?
ಈ ಮಾರಣ ಹೋಮ?
ಸ್ವಂತ ಮಕ್ಕಳ ರಕ್ತ ಕಾಮ?
*****
ಶೂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಹಾ!
Next post ನನಗೂ ಆಸೆ ಕವಿತೆ ಬರೆಯಲು

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…