ಚಂಚಲನೇತ್ರರ ಮಠವಿರುವ ಕುಮುದಪರವು ಶ್ರೀಮದ್ವೀರ ನರ ಸಿಂಹರಾಯನ ವಸಂತನಗರವೆಂದು ವಾಡಿಕೆಯಾಗಿ ಕೆರೆಯಲ್ಪಡುವ ರಾಜ್ಯದ ಒಂದು ಪಟ್ಟಣವಾಗಿರುತ್ತದೆ. ಇದರಂತೆಯೇ ಇನ್ನೂ ಐದು ಪಟ್ಟಣಗಳು ಆ ನಗರಕ್ಕೆ ಇರುವುವು. ಅವುಗಳ ಹೆಸರುಗಳು:- ಅರಸನ ಅರಮನೆ ಇರುವ ನೃಸಿಂಹಪುರ, ಅವನ ನೆಂಟರಿಷ್ಟರು ಇರುವ ಕೋಮಲಪುರ, ಸೈನ್ಯದ ಮುಖ್ಯ ಸ್ಥಾನವಾದ ಕ್ಷತ್ರಿಯಪುರ, ವ್ಯಾಪಾರ ಪ್ರಾಮುಖ್ಯಸ್ಥಳವಾದ ವರ್ತಕಪುರ, ವಿವಿಧ ಧಾನ್ಯ ದವಸಗಳು ಬೆಳೆಯುವ ಪ್ರಧಾನ ಊರಾದ ಶಾಂತಿಪುರ. ಹೀಗೆ ಐದು ಪಟ್ಟಣಗಳೂ ಅವುಗಳ ಉಪಪಟ್ಟಣಗಳೂ ಹಳ್ಳಿಪಳ್ಳಿಗಳೂ ಕಾಡುಪ್ರದೇಶಗಳೂ ಅಸಂಖ್ಯಾತವಾಗಿರುವ ಆ ದೊಡ್ಡ ರಾಜ್ಯಕ್ಕೆ ಷಟ್ಪುರ ನಗರವೆಂಬ ಪುರಾತನ ಹೆಸರು ಇರುವದು. ಈ ಆರು ಪಟ್ಟಣಗಳಲ್ಲಿ ಕೋಮಲಪುರ ಬಿಟ್ಟು, ಬೇರೆ ಐದು ಪುರಗಳಲ್ಲಿ ಪ್ರತಿ ಒಂದರಲ್ಲಿಯೂ ಬಹು ಮಂದಿ ಬ್ರಾಹ್ಮಣರು ವೇದಜ್ಞರಾಗಿ ಅಗ್ರಹಾರಗಳಲ್ಲಿ ಉಪಜೀವನ ನಡಿಸಿ ಕೊಂಡಿರುವರು.
ಒಂದೊಂದು ಪಟ್ಟಣಕ್ಕೆ ಒಂದೊಂದು ಸನ್ಯಾಸಿಯ ಮಠ ವಿರುವುದು. ನೃಸಿಂಹಪುರದಲ್ಲಿ ಜ್ಞಾನಸಾಗರತೀರ್ಧರು, ವರ್ತಕಪುರದಲ್ಲಿ ಅಚಲನೇತ್ರರು, ಕ್ಷತ್ರಿಯಪುರದಲ್ಲಿ ಪೂರ್ವಾನಂದತೀರ್ಥರು, ಶಾಂತಿಪುರದಲ್ಲಿ ಹರಿಪದಾಂಬುಜ ತೀರ್ಥರು ಹೀಗೆ ನಾಲ್ಕು ಯತಿಗಳು. ಕುಮುದ ಪುರದ ಚಂಚಲನೇತ್ರರು ಕೂಡಿ ಐವರು ಯತಿಗಳು ಐಶ್ಚರ್ಯದಲ್ಲಿಯೂ ವಿದ್ಯೆಯಲ್ಲಿಯೂ ಒಬ್ಬರಿ ಗೊಬ್ಬರು ಮಿಗಿಲೆನಿಸಿಕೊಂಡರು. ಇವರೆಲ್ಲರಿಗೂ ಅವಾವ ಮಠಕ್ಕೆ ಸೇರಿದ ಶಿಷ್ಯರ ಮೇಲೆ ಪೂರ್ಣವಾದ ಅಧಿಕಾರವಿರುವದಾದರೂ ನೃಸಿಂಹಪುರಮಠಕ್ಕೆ ಬಂದು ಹೆಚ್ಚಿನ ಸ್ವಾತಂತ್ರ್ಯವಿರುವದು. ಬೇರೆ ನಾಲ್ಕು ಮಠಾಧಿಪತಿಗಳ್ಯಾರಾದರು ಶಿಷ್ಯನನ್ನು ಆರಿಸಿ ಆಶ್ರಮಕೊಡುವ ಮುಂಚೆಯೇ ಮುಕ್ತರಾದರೆ ಅಂಥ ಮಠಕ್ಕೆ ಯೋಗ್ಯನಾದವನೊಬ್ಬಗೆ ಆಶ್ರಮ ಕೊಡುವ ಸ್ವತಂತ್ರವು ಆ ಒಂದು ಮಠಕ್ಕೆ ಮಾತ್ರವಿರುವದು. ಹಾಗೆಯೇ ತಕ್ಕ ಕಾರಣಗಳದ್ದರೆ ಬೇರೆ ಮಠ ಗಳ ಅನುಮತಿಯಿಂದ ಯಾವದೊಂದು ಮಠದ ಅಯೋಗ್ಯ ಶಿಷ್ಯನನ್ನು ತ್ಯಜಿಸಿ ಇನ್ನೊಬ್ಬಗೆ ನೃಸಿಂಹಪುರದ ಸನ್ಯಾಸಿಗಳು ಆಶ್ರಮ ಕೊಡಬಹುದು ಈ ಸನ್ಯಾಸಿಗಳು ತಾವೇ ಒಂದು ದೊಡ್ಡ ಅನ್ಯಾಯಮಾಡಿದರೆ ಉಳಿದ ನಾಲ್ಕು ಮಠದವರು ಅವರನ್ನು ವಿಚಾರಮಾಡಿ, ರಾಜ್ಯವೊಡೆಯನ ಪರಿಮುಖಿಶಿಕ್ಷೆಗೆ ಗುರಿಪಡಿಸಬಹುದು. ಈಗ ವಿವರಿಸುವ ಈ ಕಟ್ಟು ಬಹು ಪುರಾತನದ್ದು. ಅದು ಈ ವರೆಗೆ ಯಾವನೊಬ್ಬ ಸನ್ಯಾಸಿಯಿಂದಾದರೂ ಭಂಗವಾಗದೆ ಅನು ಸರಿಸೋಣಾಗಿಯದೆ.
ವೇದವ್ಯಾಸ ಉಪಾಧ್ಯನು ಚಂಚಲನೇತ್ರರಿಂದ ಉಂಟಾದ ಅನ್ಯಾಯ ವನ್ನು ಸಹಿಸಲಕ್ಕೆ ಕೂಡದೆ, ಅವರು ಮಾಡುವ ಅನಾಚಾರ ಮುಂತಾದ ನ್ಯೂನತೆಗಳನ್ನು ನೃಸಿಂಹಪುರ ಮಠಾಧಿಪತಿಗಳ ತಿಳುವಳಿಕೆಗೆ ತರುವ ಗೋಸ್ಟರ ಒಂದು ಬಿನ್ನವತ್ತಳೆಯನ್ನು ಬರೆದು, ಜ್ಞಾನತೀರ್ಥ ಶ್ರೀಪಾದಂಗ ಳವರ ಸನ್ನಿಧಿಗೆ ಒಪ್ಪಿಸಿದನು. ಅವರು ಅದನ್ನು ಓದಿಸಿನೋಡಿ ಇಡೀ ನಗರ ದಲ್ಲಿ ಅತಿ ಪವಿತ್ರರೆನಿಸಿಕೊಂಡ ಯತಿಶ್ರೇಷ್ಠರಾದ ಚಂಚಲನೇತ್ರರು ಆ ಬಿನ್ನಹಪತ್ರದಲ್ಲಿ ಬರೆದಿರುವ ಹಾಗೆ ದುಷ್ಕೃತೃಗಳನ್ನು ಮಾಡಿ ತಮ್ಮ ಮಠಕ್ಕೂ ತಮ್ಮ ಸುನಾಮಕ್ಕೂ ಲಾಂಛನ ತಗಲುವಂತೆ ನಡಕೊಳ್ಳುವ ದಾಗಿ ನಂಬಲಿಕ್ಕೆ ಸರ್ವಧಾ ಮನಸ್ಸು ಒಡಂಬಡದೆ, ವೇದವ್ಯಾಸ ಉಪಾಧ್ಯ ನನ್ನು ತೀರಾ ಧಿಕ್ಕರಿಸಿ,- “ಎಲೋ, ಕುಹಕಿಯೇ! ಸುಚರತರಾದ ಯತಿಗ ಳನ್ನು ದ್ವೇಷಮೂಲಕವಾಗಿ ಅಥವಾ ಬೇರೆಯವರ ದುರ್ಭೋಧನೆಯಿಂದ ನಾಯಿಬೊಗಳುವಂತೆ ನಿಂದಿಸುವಿಯಾ? ನಿನ್ನ ಮುಖಾವಲೋಕನ ಮಾಡಿ ದರೇನೇ ಸಚೇಲಸ್ನಾನಮಾಡಬೇಕಾಗುವುದು. ನಮ್ಮ ಕಣ್ಣೆದುರು ನಿಲ್ಲದೆ ನಡೆದು ಬಿಡು, ಇಲ್ಲವಾದರೆ ಹರಿಕಾರರನ್ನು ಕರೆದು, ನಿನ್ನನ್ನು ದಬ್ಬಿಸಿಬಿಡ ಬೇಕಾಗುವದು” ಎಂದು ಆತಿ ರೋಷದಿಂದ ಹೇಳಿದರು.
ವೇದವ್ಯಾಸ ಉಪಾಧ್ಯನು ಕೊಂಚವಾದರೂ ಹೆದರದೆ, ಘಟ್ಟಿಯಾಗಿ ನಿಂತು ಕೊಂಡು.- “ಪರಾಕೇ! ನೀತಿ ಮಾಡುವಿರೆಂಬ ಆಶೆಯಿಂದ ವಾದಾ ಕ್ರಾಂತನಾಗಿರುವ ಕಿಂಕರನಾದ ನನ್ನನ್ನು ಕ್ಷಣತಾಮಸವಿಲ್ಲದೆ ತುಚ್ಛೀಕರಿಸಿ; ಅನುಗ್ರಹಿಸಿದ. ಶ್ವಾನೋಪನಾಮವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಕೋಥೇನೆ. ಸಮರ್ಥರ ಮನೆಯ ಶ್ವಾನಕ್ಕೆ ಸರ್ವರೂ ಮರ್ಯಾದೆ ಕೊಡುವ ರೆಂಬ ವಚನವಿದೆ. ಆದುದರಿಂದ ನಾನು ಸರ್ವಧಾ ಕುಗ್ಗದೆ ಚರಣಾರವಿಂದ ಗಳಿಗೆ ನಮಿಸುತ್ತೇನೆ” ಎಂದು ಯತಿಶ್ರೇಷ್ಟರಿಗೆ ಪ್ರಣಾಮಮಾಡಿ, ಮೋರೆ ಸಣ್ಣದು ಮಾಡಿಕೊಂಡು, ಬೇಗನೆ ಬೀದಿಗೆ ಬಂದು ಬಿಟ್ಟನು. ಅಲ್ಲಿ ಕಾಣಸಿಕ್ಕಿದ ಸ್ನೇಹಿತನೊಬ್ಬನು ಸ್ನಾನಕ್ಕೆ ತನ್ನಲ್ಲಿಗೆ ದಯಮಾಡ ಬೇಕೆಂದು ಅಪೇಕ್ಷಿಸಿ, ವೇದವ್ಯಾಸನನ್ನು ಕರತಂದು ಸನ್ಮಾನ ಉಪಚಾರ ಗಳಿಂದ ದಿವ್ಯ ಭೋಜನವನ್ನಿತ್ತು, ತೃಪ್ವಿಪಡಿಸಿದ ನಂತರ ವ್ಯಾಕುಲದ ಮುದ್ರೆ ಒತ್ತಲ್ಪಟ್ಟಿರುವ ಅವನ ಮುಖವನ್ನು ನೋಡಿ, ಅವನ ಸಂಕಷ್ಟದ ಪರಿಯನ್ನು ತಿಳಿದು ಸಿಟ್ಟುಗಾರರಾದ ಜ್ಞಾನಸಾಗರ ತೀರ್ಥರ ದರ್ಶನಕ್ಕೆ ಉಚಿತವಾದ ಸಮಯವು ಭಿಕ್ಷೆಯಾದ ಮೇಲೆ ಎಂಬ ಗುಟ್ಟು ತಿಳಿಯದೆ, ಅವರನ್ನು ಅಕಾಲದಲ್ಲಿ ಕಂಡುದರಿಂದ ಬಂದ ದೋಷಕ್ಕೆ ತತ್ಕಾಲನಿವಾರ ಣೋಪಾಯವಿಲ್ಲದ ಕಾರಣ ಉಳಕೆ ಮೂರು ಮರಾಧಿಪತಿಗಳನ್ನು ಕಂಡು, ಕಾರ್ಯಸಾಧನೆ ಮಾಡಿಕೊಳ್ಳುವದು ಉತ್ತಮವೆಂದು ಆ ಸ್ನೇಹಿತನು ಹೇಳಿದ ಬದ್ದಿಯನ್ನನುಸರಿಸಿ ಉಪಾಧ್ಯನು ಮರುದಿವಸ ಕ್ಷತ್ರಿಯಪುರಕ್ಕೆ ಹೊರಟು, ಸೂರ್ಣಾನಂದತೀರ್ಥರ ಭೇಟಿ ವಡೆಯುವದಕ್ಕೆ ಅವರ ಮಠಕ್ಕೆ ಬಂದನು.
ಆವಾಗಲೇ ಯತಿಗಳು ಭಿಕ್ಷೆತಕ್ಕೊಂಡಾಗಿ ಕೊಂಚ ನಿದ್ರೆ ಗೈಯುವ ದಕ್ಕ ಇಚ್ಛಿಸುವ ಸಮಯವಾಯಿತು. ಯಾರೊಬ್ಬನನ್ನೂ ಕೇಳದೆ, ವೇದ ವ್ಯಾಸನು ಅವರ ಸಿಂಹಾಸನದ ಕೋಣೆಗೆ ಪ್ರವೇಶಿಸಿ ಪ್ರಣಾಮಮಾಡಿದನು. ಅರೆನಿದ್ರೆಯಿಂದ ತೂಗುವ ಕಣ್ಣುಗಳಂದ ಪೂರ್ಣಾನಂದರು ಅವನನ್ನು ನೋಡಿ ನಾರಾಯಣ ನಾಮವನ್ನು ಅರ್ಧ ಧ್ವನಿಯಿಂದ ಉಚ್ಚರಿಸಿ, ಕೂರಿಸಿ ಕೊಂಡು, ಅವನನ್ಯಾರೆಂದು ತಿಳಿದು, ಬಂದ ಉದ್ದಿಶ್ಯ ಕೇಳಿದರು. ಉಪಾಧ್ಯನು ಬಾಯಿಯಿಂದ ಹೆಚ್ಚು ಮಾತಾಡದೆ ವಿಜ್ಞಾಪನಾವತ್ರವನ್ನು ಸಮ್ಮುಖದಲ್ಲಿ ಇರಿಸಿದನು. ಯತಿಗಳು ಅದನ್ನು ತಾವೇ ಓದಿನೋಡಿ, ನಿದ್ರಾಭಂಗವಾದ ಕೆಟ್ಟ ಸಮಯದಲ್ಲಿ ಹುಟ್ಟಿದ ಸಿಟ್ಟಿನಿಂದ ಉಪಾಧ್ಯನ ಮುಖದ ಮೇಲೆ ಆ ಪತ್ರವನ್ನು ಬಿಸಾಡಿ-“ಪರಿಶುದ್ಧರಾದ ಚಂಚಲನೇತ್ರ ಶ್ರೀಪಾದಂಗಳವರ ಮೇಲೆ ಚಾಡಿಮಾತುಗಳಿಂದ ನಮಗೆ ವೈರ ಉಂಟಾಗುವ ಹಾಗಿನ ಕುಯುಕ್ತಿ ನಡಿಸುವದಕ್ಕಾಗಿ ಬಂದಿಯಾ? ಕತ್ತೆ! ತೊಲಗು” ಎಂದು ಅಪ್ಪಣೆ ಕೊಟ್ಟರು. ಶ್ವಾನೋಪನಾಮಕ್ಕೆ ಗಾರ್ದಭೋಪನಾಮ ಕೂಡಿಸಿಕೊಂಡ ಹಾಗಾಯಿತು. ಹೆಚ್ಚುಮಾತಾಡಿದರೆ ಅಂಗುಷ್ಠ ಮತ್ತು ತರ್ಜಸಿ ಬೆರಳುಗಳನ್ನು ಅರ್ಧ ಚಂದ್ರಾಕೃತಿಯಾಗಿ ಬಿಡಿಸಿಕೊಂಡು, ಕುತ್ತಿಗೆಯ ಸಮಾಸಕ್ಕೆ ತರುವದಕ್ಕೆ ಸಿದ್ದವಾಗಿರುವ ಹೆರಿಕಾರರನ್ನು ನೋಡಿ, ವೇದವ್ಯಾಸ ಉಪಾಧ್ಯನು ದಾರಿಯ ಮೇಲೆ ಬಂದು ನಿಂತು ತಂಗಾಳಿಯನ್ನು ಉಶ್ವಾಸಿಸಿಕೊಂಡನು.
ಮುಖ್ಯವಾಗಿ ತಾನು ಮನೆಯಿಂದ ಹೊರಟ ಮುಹೂರ್ತವು ಕೆಟ್ಟದ್ದಾ ಗಿರಬೇಕು. ಹಾಗಲ್ಲದಿದ್ದರೆ ಹೀಗೆ ಅಪಜಯಸ್ತ್ರೀಯು ತನ್ನ ಬೆನ್ನು ಹಿಡಿಯು ವದಕ್ಕಿರಲಿಲ್ಲವೆಂದು ಸಂತಾಪವಡುತ್ತಿರುವ ಸಮಯದಲ್ಲಿ ಮತ್ತೊಬ್ಬ ಸ್ನೇಹ ತನು ರಾತ್ರಿ ಊಟಕ್ಕೆ ತನ್ನಲ್ಲಿಗೆ ಕರಕೊಂಡು ಹೋಗಿ ದಿವ್ಯ ಊಟದಿಂದ ಗೆಳೆಯನನ್ನು ಸಂತೋಷಪಡಿಸಿ, ಅವನು ಆ ಪುರಕ್ಕೆ ಬಂದ ಉದ್ದೇಶವನ್ನು ಅರಿತು ಹೆಚ್ಚು ಪಶ್ಚಾತ್ತಾಪಪಟ್ಟನು. ಉದ್ವೇಗದಿಂದ ಸಂಕಲ್ಪಸಿದ್ಧಿಯಾಗು ವುದಿಲ್ಲ. ಸಂಸ್ಥಾನಾಧಿಪತಿಗಳ ದರ್ಶನಪಡೆಯುವದಕ್ಕೆ ಸರಿಯಾದ ಕಾಲ ವನ್ನು ಬಲ್ಲವರಿಂದ ತಿಳಿದು ಅವರ ಪಾರುಪತ್ಯಗಾರರನ್ನು ಮುಂದಾಗಿ ಕಂಡು, ಅವರ ಸಹಾಯದ ಬಲವನ್ನು ದೊರಕಿಸಿಕೊಳ್ಳದೆ ಒಮ್ಮಿಂದೊಮ್ಮೆ ಎದುರಿಗೆ ಬೀಳುವದು ಕಾರ್ಯಹಾನಿಯ ಮುಖ್ಯಕಾರಣನೆಂದು ಈ ಸ್ನೇಹಿತನು ಸೂಚನಾರೂಪವಾಗಿ ಆಡಿದ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ವ್ಯಾಕುಲದಿಂದ ಮುಖಕಂದಿದ ಅ ಬ್ರಾಹ್ಮಣನು ಮರುದಿವಸ ಮುಂಜಾನೆ ವರ್ತಕಪುರಾಭಿಮುಖನಾದನು
ಅಲ್ಲಿಗೆ ತಲ್ಪುತ್ತಲೇ ನೆಟ್ಟಿಗೆ ಮಠಕ್ಕೆ ಹೋಗುವುದು ಸರಿಯಲ್ಲವಾದು ದರಿಂದ ಮಠದ ಪಾರುಪತ್ಯಗಾರ ವೆಂಕಟರಾಮಾಚಾರ್ಯನ ಭೇಟಿಯನ್ನು ಮಾಡುವ ಬಯಕೆಯಿಂದ ವೇದವ್ಯಾಸಉಪಾಧ್ಯನು ಅವನ ಮರೆಗೆ ಹೋಗು ವಾಗ ವೃದ್ಧಿಸೂತಕದ ದೆಶೆಯಿಂದ ಮಠಪ್ರವೇಶಮಾಡಲಿಕ್ಕೆ ಅವನಿಗೆ ಸಂದ ರ್ಭವಿಲ್ಲವೆಂದು ತಿಳಿದು ಒಂತು. ಸೂತಕ ನಿವಾರಣೆಯಾಗುವ ವರೆಗೂ ಪರ ಊರಲ್ಲಿರಲಿಕ್ಕೆ ಮನಸ್ಸಿಲ್ಲದೆ ಅವನು ಬೈಸಾರಿ ಸಮಯ ಗುರುದರ್ಶನಕ್ಕೆ ಹೊರಟನು. ಅಚಲನೇತ್ರರ ಪೂರ್ವಾಶ್ರಮದ ಸಹೋದರಿಯ ಗಂಡನು ಅಂದು ತೀರಿಕೊಂಡನೆಂಬ ದುಃಖಕರವಾದ ವಾರ್ತೆಯು ಸಿಕ್ಕಿ ಬಹು ಚಿಂತಾ ಕ್ರಾಂತರಾಗಿ ಅವರು ಕುಂತಿರುವ ಸಮಯ ಉಪಾಧ್ಯನು ದಂಡ ಪ್ರಣಾಮ ಮಾಡಿ, ನಿಂತು ಕೊಂಡನು. “ಧಾರಪ್ಪಾ! ಯಾಕೆ ಬಂದಿಯೊ” ಎಂಬ ಪ್ರಶ್ನೆ ಗಳಿಗೆ ಉತ್ತರಕೊಟ್ಟು, ತನ್ನ ಕೈಯಲ್ಲಿರುವ ಬಿನ್ನವತ್ತಳೆಯನ್ನು ಸ್ವಾಮಿಗಳ ಎದುರು ಇರಿಸಿದಾಗ ಗುರುಗಳು ಅದನ್ನು ಬಿಡಿಸಿನೋಡಿ– “ಇವನ್ಯಾರೋ ಮುದಿಕಾಗೆ. ತಪೋಬಲಿಗಳಾದ ಚಂಚಲನೇತ್ರರನ್ನು ನಿರ್ನಿಮಿತ್ತವಾಗಿ ನಿಂದಿಸುವವನು. ಇವನನ್ನು ಹೊರಗೆ ದೂಡಿರಿ” ಎಂದು ಆಜ್ಞೆ ಮಾಡಿದರು. ಸಾವಕಾಶಮಾಡದೆ ಹರಿಕಾರನು ಉಪಾಧ್ಯನನ್ತು ರಟ್ಟೆಹಿಡಿದು, ಅಂಗಳಕ್ಕೆ ಇಳಸಿ ಬಿಟ್ಟನು.
ಬಾಯಿಮುಚ್ಚಿ ಉಪಾಧ್ಯನು ಬೀದಿಗೆ ಇಳಿದು ಕಣ್ಣೀರು ಸುರಿಸುತ್ತಾ ಒಂದು ಅತ್ವತ್ಥ ವೃಕ್ಷದ ಅಡಿಯಲ್ಲಿ ನಿಂತಿರುವ ವೇಳೆಯಲ್ಲಿ ಅವನ ಸಹಾ ಧ್ಯಾಯಿ ಸುಂದೂರು ಭೀಮಾಚಾರ್ಯನು ಸಮಿಪಿಸಿ, ನಮಸ್ಕಾರಮಾಡಿ ಬಡವನಾದ ತನ್ನ ಗೃಹಕ್ಕೆ ದಯಮಾಡಿ, ಭೋಜನಸುಖವನ್ನು ಪಡೆಯ ಬೇಕೆಂದು ಬೇಡಿಕೊಂಡನು. ವೇದವ್ಯಾಸನು ಸಹಾಧ್ಯಾಯಿಯ ಮನೆಯಲ್ಲಿ ಮೃಷ್ಟಾನ್ನ ಭೋಜನಗೈದು, ಪ್ರಾಣಸ್ನೇಹಿತನು ತನ್ನ ಆಗತಿಯ ಕುರಿತು ಮಾಡಿದ ಪ್ರಶ್ನೆಗಳಿಗೆ ಕೊಟ್ಟ ಪ್ರತ್ಯುತ್ತರಗಳಿಂದ ಅವನಿಗುಂಟಾದ ವ್ಯಸನವು ಭಾರಿಯಾಗಿ ತೋರಿ. ಆಚಾರ್ಯನು ಅದರ ನಿವಾರಣೆಯ ಯುಕ್ತಿಯನ್ನು ಮಾಡಲಿಕ್ಕೆ ಪವಿತ್ರಕರ್ತನಾಗಬೇಕೆಂದು ನಿಶ್ಚಯಿಸಿ– “ಇಷ್ಟು ಸಣ್ಣ ಕೆಲಸಕ್ಕೆ ಹೆದರುವಿಯಾ! ಭೀಮಾಚಾರ್ಯನ ಜೀವ ಒಂದಿದ್ದರೆ ನಿನ್ನ ಸಂಗಡ ಯಮಲೋಕದ ತನಕವಾದರೂ ಬಂದು ಜಯಶ್ರೀಯು ನಿನ್ನನ್ನು ವರಿಸುವಂತೆ ಪ್ರಯತ್ನಮಾಡುವೆನು?” ಎಂದು ಭಾಷೆಕೊಟ್ಟು ಮರುದಿನ ಸಾಯಂಕಾಲದ ವರೆಗೂ ಅವನನ್ನು ತನ್ನಲ್ಲಿಯೇ ನಿಲ್ಲಿಸಿಕೊಂಡು ಕಡಬು ಕಾಯಿಹಾಲು ಹಸಿಗೇರುಬೀಜದ ಪಲ್ಯ ಮೊದಲಾದ ರುಚಿಕರವಾದ ಹಲವು ಶಾಕಗಳು ಎರಡು ಬಗೆ ಹುಳಿ ಎರಡು ಬಗೆ ತೊವ್ವೆ ಎರಡು ಬಗೆ ಸಾರು ಪರಮಾನ್ನ ಸಕ್ರೆಭಕ್ಷ ಎಲೆ ಅಲಂಕಾರಕ್ಕೆ ಕೋಸಂಬರಿ ಸುದಾಹಾಕಿ ವೇದ ವ್ಯಾಸ ಉಪಾಧ್ಯನ ಒಡಲಲ್ಲಿರುವ ಪರಮಾತ್ಮನನ್ನು ತೃಪ್ತಿಪಡಿಸಿದನು.
ಮರುದಿನ ಬೆಳಗಾಗುತ ಉಪಾಧ್ಯನು ಭೀಮಾಚಾರ್ಯನನ್ನು ಬೇಗನೆ ಎಬ್ಬಿಸಿ ಅವನ ಸಂಗಡ ಶಾಂತಿಪುರಕ್ಕೆ ಹೋಗಿ, ಒಂದು ಬಿಡಾರವನ್ನು ಹೊಕ್ಕನು. ಹಾಗೆಯೇ ಗುರುದರ್ಶನ ಮಾಡಿಬಿಡೋಣವೇವೆಂದು ಕೇಳಲು “ನೀನು ಬಹು ಉದ್ವೇಗಿ; ನಿನ್ನ ಮತಿಹೀನತೆಯಿಂದಲೇ ಕಾರ್ಯಸಾಧನೆಯು ಕೆಟ್ಟುಹೋಗಿ “ಶ್ವಾನ” *ಗಾರ್ದಭ? “ಕಾಕ” ಹೀಗೆ ಮೂರು ಅಡ್ಡ ಹೆಸರುಗನನ್ನು ಸಂಪಾದಿಸಿ, ತ್ರಯೋಪನಾಮಿ ಉಪಾಧ್ಯನಾಗಿದ್ದೀ. ಇನ್ನು ಕೋಣನೆನ್ನಿಸಿಕೊಳ್ಳುವ ಬಿರುದೊಂದು ಉಳಿದದೆ. ಅದು ಸಿಕ್ಕಿತೇ ಊರಿಗೆ ಮರಳಬಹುದೆಂ”ದು ಭೀಮಾಚಾರ್ಯನು ಉಪಾಧ್ಯಗೆ ಹೀನಿಸಿದನು. ಉಪಾ ಧನು ಸ್ವಲ್ಪ ಲಜ್ಜಾಯಮಾನನಾದರೂ– “ಪುನಃ ಕಾಚೇನ ಕೋಚಯ’” ಎಂಬ ವಚನಕ್ಕೆ ಸರಿಯಾಗಿ– “ನಿಮ್ಮ ಅಧಿಕಪ್ರಸಂಗ ಅಂತಿರಲಿ, ನಿಮಗೆ ನನ್ನ ಸಂಗಡ ಬರಲಿಕ್ಕೆ ಸಂದರ್ಭವಾಗದಾದರೆ ನಾನೇ ಹೋಗಿಬರುವೆನು” ಎ೦ದು ಹೊರಟನು. “ಇವನಿಗೆ ಮುಂದಾಗಿ ಧೈರ್ಯಕೊಟ್ಟು ಕೆಟ್ಟೆನಲ್ಲಾ! ಹ್ಯಾಗಾದರೂ ಅವನನ್ನು ಸಂಬಾಳಸ ಹೋದರೆ ಮರ್ಯಾದಿ ಕಳಕೊಂಡ ಹಾಗುಗುವುದು ಎಂಬ ಭಯದಿಂದ ಭೀಮಾಚಾರ್ಯನು ಉಪಾಧ್ಯನ ಬೆನ್ನುಹಿಡದು ಅಗೋ! ಮುಂಚೆ ಗುರುಗಳ ಸಂದರ್ಶನದಿಂದ ಹೆಚ್ಚು ಪ್ರಯೋಜನವಿರದು. ಅವರ ಮಠದ ಪಾರುಪತ್ಯಗಾರ ಬಾಲಮುಕುಂದಾ ಚಾರ್ಯನ ಭೇಟಿ ತಕ್ಕೊಂಡು, ಅವನ ಅಲೋಚನೆ ದೊರಕಿದ ಮೇಲೆ ಮುಂದಿನ ಅನುಸಂಧಾನ ನೋಡೋಣ?” ಎಂದು ಹೇಳಿದ ಬುದ್ಧಿಯು ವೇದ ವ್ಯಾಸ ಉಪಾಧ್ಯಗೆ ವಧ್ಯವಾಯಿತು
ಹಾಗೆಯೇ ಸಹಾಧ್ಯಾಯಿಗಳೀರ್ವರೂ ಬಾಲಮುಕುಂದಾಚಾರ್ಯನ ಗೃಹಕ್ಕೆ ಹೋಗಿ, ಅವನಿಗ ವಿನಯಪೂರ್ವಕ ನಮಸ್ಥಾರಮಾಡಿದರು ವೇದ ವ್ಯಾಸನು ಬಂದ ಕೆಲಸದ ಸ್ವಭಾವವನ್ನು ಭೀಮಾಚಾರ್ಯನು ಬಾಲ ಮುಕುಂದಾಚಾರ್ಯಗೆ ವಿವರಿಸಿದನು. ಬೇರೆ ಮೂರು ಮಠಾಧಿಪತಿಗಳನ್ನು ಕಂಡಿಯೋ ಎಂದು ಬಾಲಮುಕುಂದನು ಉಪಾಧ್ಯಗೆ ಮಾಡಿದ ಪ್ರಶ್ನೆಗೆ ಲೋಪವಿಲ್ಲದ ಪ್ರತ್ಯುತ್ತರವನ್ನು ಭೀಮಾಚಾರ್ಯನೇ ಕೊಟ್ಟನು. ಆ ವೇಳೆ ಬಾಲಮುಕುಂದಗೆ ಕಿಸ್ಸನೆ ನೆಗೆಬಂದರೂ ನಗೆಯನ್ನು ತಡೆದಿಟ್ಟು ತನ್ನಿಂದಾಗ ಬೇಕಾದ ಸಹಾಯ ಯಾವದೆಂದು ಕೇಳಿದನು. “ಸರ್ವವೂ ತಮ್ಮಿಂದಾಗ ಬೇಕು” ಎಂದು ಭೀಮಾಚಾರ್ಯನು ಅವನ ಸ್ವಾಭಾವಿಕ ವಾಚಾಲತ್ವದಿಂದ ಹೇಳಿಕೊಂಡನು. ಉಪಾಧ್ಯಗೆ ಕೂಡುವಷ್ಟು ಸಹಾಯಮಾಡಲಿಕ್ಕೆ ತುಂಬಾ ಮನಸ್ಸಿದ್ದರೂ ತನ್ನ ಧನಿಗಳು ಸಾಧುಯತಿಗಳೆಂಬದರಿಂದ ತನ್ನ ಪ್ರಯತ್ನ ಪೂರ್ಣವಾಗಿ ನಡಿಯುವದೆಂಬ ಧೈರ್ಯ ಸರ್ವಧಾ ಹೇಳವಲ್ಲೆನೆಂದು ಅವನು ಪ್ರತ್ಯುತ್ತರಕೊಟ್ಟನು.
ವಾಗ್ದೇವಿಯು ಅತೀ ಸುಂದರಸ್ತ್ರೀ ಎಂಬದು ಉಪಾಧ್ಯನ ಸಂಭಾಷಣೆ ಯಿಂದ ತಿಳಿದುಬಂದುದರಿಂದ ಕೋಮಲಂಂಗಿಯರಾದ ಜವ್ವನೆಯರಿಗೆ ಭಯಾನಕನಾಗಿ ತೋರುವ ಆತಿ ಮನೋಹರ ಪುರುಷನಾದ ಬಾಲಮು ಕುಂದನು ಅವಳ ಮುಖನಿರೀಕ್ಷಣೆಯ ಸುಖವನ್ನಾದರೂ ಪಡೆಯಬೇಕೆಂದು ಇಚ್ಛೆಯುಳ್ಳ ವನಾದನು. ಅದನ್ನು ಪೂರೈಸಿಕೊಳ್ಳುವದಕ್ಕೆ ಅನುಕೂಲವಾಗುವ ಹಾಗಿನ ಸಮಯವು ಇದೇ. ವೇದವ್ಯಾಸನ ಬಿನ್ನವತ್ತಳೆಯ ನೆವನಹಿಡಿದು, ಮಠಾಧಿಪತಿಗಳ ಕಡೆಯಿಂದ ಗೃಹಸ್ಥರು ಕುಮುದಪುರದಲ್ಲಿ ಸಭೆಮಾಡಿ, ಒಂದು ಅನ್ವೇಷಣವನ್ನು ಮಾಡುವ ಹಾಗೆ ನಿರೂಪವಾದರೆ ತನ್ನ ಬಯಕೆಯು ತೀರುವದು.. ಈ ಮರುಳ ಉಪಾಧ್ಯನು ಕಾರ್ಯಸಾಧನೆಯ ಕ್ರಮವೇ ತಿಳಿಯದೆ, ಯದ್ವಾತದ್ವಾ ಮಾಡಿಹಾಕಿಬಿಟ್ಟನಲ್ಲ! ಇದು ಮಹತ್ಕಾರ್ಯ ಇದರಲ್ಲಿ ತನ್ನ ಧನಿಗಳೊಬ್ಬರೇ ಮುಂದರಿಸಲಕ್ಕೆ ಸಂದರ್ಭವಿಲ್ಲ! ಏನು ಉಪಾಯ ವರ್ತಿಸಬಹುದೆಂಬ ಚಿಂತೆಯು ಅವನಿಗೆ ತಗಲಿಕೊಂಡಿತು ಆದರೆ ತನ್ನಮನೋಭಾವವನ್ನು ವ್ಯಕ್ತಪಡಿಸದೆ ಸುಮ್ಮಗಿದ್ದು, ಸಾಯಂಕಾಲ ದೀವಟಿಗೆ ಸಲಾಮಿನ ಕಾಲ ಮಠಕ್ಕೆ ಬಂದರೆ ಸ್ವಾಮಿಗಳಿಗೆ ಕಾಣಲಿಕ್ಕೆ ಅನುಕೂಲವಿರುವದೆಂದು ಭೀಮಾಚಾರ್ಯಗೆ ತಿಳಿಸಿದನು.
*****
ಮುಂದುವರೆಯುವುದು