ಭ್ರಮಣ – ೩

ಭ್ರಮಣ – ೩

ತೇಜಾ ತನ್ನ ಮನೆಯಲ್ಲಿ ಟೇಬಲಿನ ಎದುರು ಕುಳಿತಿದ್ದ. ಟೇಬಲ್ ಲ್ಯಾಂಪ್ ಪ್ರಖರವಾದ ಬೆಳಕನ್ನು ಚೆಲ್ಲುತ್ತಿತ್ತು. ಅವನೆದುರು ಹಲವಾರು ಕಪ್ಪು ಬಿಳುಪು ಮತ್ತು ಬಣ್ಣದ ಫೋಟೋಗಳಿದ್ದವು. ಪ್ರತಿ ಫೋಟೋವನ್ನು ತದೇಕಚಿತ್ತದಿಂದ ನೋಡುತ್ತಿದ್ದ. ಅವು ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗಧಾಂಬೆ ಎಂದು ಕರೆಯಲ್ಪಡುವ ಯುವತಿಯ ಫೋಟೋಗಳು. ಪೋಲೀಸ್ ಖಾತೆಯವರಿಗೆ ಕಲ್ಯಾಣಿಗೆ ಹುಟ್ಟಿಕೊಂಡ ಅಷ್ಟು ಹೆಸರುಗಳು ಮಾತ್ರ ಗೊತ್ತು ಇನ್ನೂ ಎಷ್ಟು ಹೆಸರುಗಳಲ್ಲಿ ಅವಳು ಯಾವ ಯಾವ ಕೆಲಸಗಳನ್ನು ಮಾಡಿದ್ದಾಳೆಂಬ ಮಾಹಿತಿ ಇಲ್ಲ. ಅವಳು ಎಂಟು ವರ್ಷದವಳಾಗಿದ್ದಾಗಿನಿಂದ ಬಿ.ಎಸ್.ಸಿ. ಪಾಸಾಗುವವರೆಗಿನ ಫೋಟೋಗಳನ್ನು ಸಂಗ್ರಹಿಸುವಲ್ಲಿ ಸಫಲವಾಗಿತ್ತು ಪೋಲೀಸ್ ಖಾತೆ. ದೊಡ್ಡ ಕಣ್ಣುಗಳ ಸುಂದರ ಹುಡುಗಿ. ಅದೂ ಅಲ್ಲದೇ ಒಳ್ಳೆಯ ಮನೆತನದವಳು. ಇಂತಹವಳು ಕ್ರಾಂತಿಕಾರಿ ಚಳುವಳಿ ಸೇರಿದ್ದೇಕೆಂಬುವುದೇ ಆಶ್ಚರ್ಯ. ಎಲ್ಲಾ ಫೋಟೋಗಳನ್ನು ನೋಡಿದ ಅವನು ಬರೀ ಅದರಿಂದಲೇ ದಣಿದಂತೆ ಕುರ್ಚಿಯ ಹಿಂದೆ ತಲೆ ಆನಿಸಿ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಬಿಟ್ಟ.

ಅವಳ ಫೋಟೋಗಳನ್ನು ಜಾಗ್ರತೆಯಾಗಿ ಒಂದುಕಡೆ ಜೋಡಿಸಿ ಕವರಿನಲ್ಲಿಟ್ಟು ಕಲ್ಯಾಣಿಯ ಬಗ್ಗೆ ವಿವರವಿದ್ದ ಫೈಲನ್ನು ಬಿಚ್ಚಿದ ತೇಜಾ. ಮತ್ತೆ ತಲೆ ಟೇಬಲಿನ ಮೇಲೆ ಬಾಗಿತು. ಬಿ.ಎಸ್.ಸಿ, ಕೊನೆಯ ವರ್ಷದ ಪರೀಕ್ಷೆಗಳು ಮುಗಿದ ಎರಡು ದಿನಗಳ ನಂತರವೇ ಮನೆಯಿಂದ ಕಾಣೆಯಾಗಿದ್ದಳು ಕಲ್ಯಾಣಿ. ಅವಳ ಮನೆಯವರು ಗಾಬರಿಯಾಗದಿರಲೆಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಳು. ತನ್ನ ಬಗ್ಗೆ ಗಾಬರಿಯಾಗಬಾರದು, ತಾನು ಎಲ್ಲಿದ್ದರೂ ಸುಖವಾಗಿರುತ್ತೇನೆ, ತನ್ನ ಇನ್ನು ಮರೆತುಬಿಡಬೇಕೆಂದು ಮಾತ್ರ ಇತ್ತು ಅದರಲ್ಲಿದ್ದ ವಕ್ಕಣೆ. ಬೆಳೆದ ಸುಂದರ ಮಗಳು ಹೀಗೆ ಏಕಾ‌ಏಕಿ ಮನಬಿಟ್ಟು ಹೋಗಿದ್ದು ಅವರ ತಂದೆ ತಾಯಿಯರಲ್ಲಿ ಸ್ವಾಭಾವಿಕವಾಗಿ ಗಾಬರಿ ಹುಟ್ಟಿಸಿತ್ತು. ಮೊದಲು ಅವರ ತಲೆಯಲ್ಲಿ ಬಂದದ್ದು ಯಾರನ್ನಾದರೂ ಕಟ್ಟಿಕೊಂಡು ಓಡಿಹೋಗಿರಬಹುದೇ ಎಂಬ ವಿಚಾರ. ಆದರೆ ಅದಕ್ಕೆ ಅವರಲ್ಲಿ ಯಾವ ಆಧಾರವೂ ಇರಲಿಲ್ಲ. ಗಂಭೀರವಾಗಿ ತನ್ನ ಓದಿನಲ್ಲಿ ತನ್ಮಯಳಾಗಿರುತಿದ್ದ ಅವಳು ಒಂದೊಂದು ಸಲ ಇವರೆಗೂ ತನ್ನಷ್ಟು ಬುದ್ಧಿ ಇರುವ ಯಾವ ಗಂಡೂ ತನಗೆ ಭೇಟಿಯಾಗಿಲ್ಲವೆಂದು ಹೇಳುತ್ತಿದ್ದಳು. ಬೇರೆ ಹುಡುಗಿಯರ ಹಾಗೆ ಸಿನಿಮಾಗಳಿಗೆ ಹೋಗುವುದು, ಹೊಸ ಮಾದರಿಯ ಬಟ್ಟೆಗಳನ್ನು ತೊಟ್ಟು ಮೆರೆಯುವ ಚಟವಿರಲಿಲ್ಲ. ಯಾರೋಡನೆ ಎಷ್ಟು ಬೇಕೋ ಅಷ್ಟು ಮಾತಾಡುತಿದ್ದ ಅವಳಿಗೆ ಯಾವ ವಿಶೇಷ ಸ್ನೇಹಿತ, ಸ್ನೇಹಿತೆಯರೂ ಇರಲಿಲ್ಲ. ಅದರಿಂದ ಯಾರೊಡನಾದರೂ ಓಡಿಹೋಗಿರಬಹುದು ಎಂಬ ವಿಚಾರಕ್ಕೆ ಅರ್ಥವಿಲ್ಲವೆನಿಸಿತ್ತು.

ಕಲ್ಯಾಣಿಯು ಚಿಕ್ಕಂದಿನಲ್ಲೇ ಅವಳೊಬ್ಬ ವಿಶೇಷ ಹುಡುಗಿ ಎಂಬ ನಿರ್ಣಯಕ್ಕೆ ಬಂದಿದ್ದರವರ ತಂದೆ. ಅಷ್ಟು ಬುದ್ಧಿವಂತ ಚೂಟಿ ಹುಡುಗಿಯನ್ನು ತಾವು ಮೊದಲೆಂದೂ ನೋಡಿಲ್ಲವೆಂದು ಮಾತಾಡಿಕೊಂಡಿದ್ದರು. ಅವರ ಅಕ್ಕಪಕ್ಕದವರು ಮತ್ತು ಬಂಧುಬಳಗ, ಹೈಸ್ಕೂಲನ್ನು ತಲುಪುತ್ತಿದಂತೆ ಅವಳು ಸ್ಕೂಲಿನ ಪುಸ್ತಕಗಳಿಗಿಂತ ಹೆಚ್ಚು ಬೇರೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದಳು. ಅದನ್ನು ಗಮನಿಸಿದ್ದರೂ ಹೆಚ್ಚು ತಲೆಕೆಡಿಸಿ ಕೇಳಲು ಹೋಗಿರಲಿಲ್ಲ ಅವಳ ತಂದೆ. ಯಾಕೆಂದರೆ ಅವಳು ಓದದಿದ್ದರೂ ಫಸ್ಟ್ ಕ್ಲಾಸಿನಲ್ಲಿ ಪಾಸಾಗುತ್ತಾಳೆ ಎಂಬ ನಂಬಿಕೆ ಅವರಿಗೆ.

ಮಗಳು ಕಾಣೆಯಾದ ವಿಷಯ ಮನೆಯವರು ಪೋಲೀಸಿನವರಿಗೆ ತಿಳಿಸಲಿಲ್ಲ. ಬುದ್ಧಿವಂತಳಾದ ಮಗಳು ಎಂದಾದರೂ ತಿರುಗಿ ಬರಬಹುದೆಂಬ ಆಸೆ. ಅವಳು ಮನೆಬಿಟ್ಟು ಹೋದ ಕೆಲದಿನಗಳು ತಾಯಿ ತನ್ನ ಮನದಲ್ಲಿನ ಶೋಕವನ್ನೆಲ್ಲಾ ಹೊರಗೆಡಹಿದ್ದರು. ತಂದೆ ದಿಕ್ಕು ತೋಚದಂತೆ ಮೌನಿಯಾಗಿದ್ದರು. ಅಣ್ಣ ಅತ್ತಿಗೆಯರದೂ ಅದೇ ಗತಿ. ಬರುಬರುತ್ತಾ ಅವಳು ಮನೆಯಲ್ಲಿ ಇಲ್ಲದಿರುವಿಕೆ ಮಾಮೂಲಾಗಿಬಿಟ್ಟಿತು. ತಮ್ಮ ಊಹೆಗಳಲ್ಲಿ ತೇಲಿಹೋಗಿ ಬಾಯಿಗೆ ಬಂದಂತೆ ಆಡಿಕೊಂಡ ನಾಲುಗೆಗಳೂ ದಣಿದು ಹೊಸ ವಿಷಯಗಳ ಕಡೆ ಗಮನಹರಿಸಿದವು.

ದೊಡ್ಡಣ್ಣನ ತಂಡದವರೊಡನೆ ಒಬ್ಬ ಹೆಣ್ಣು ಇದ್ದಾಳೆಂಬ ಸುದ್ದಿ ಆಂಟಿ ರವೂಲ್ಯಷನರಿ ಸ್ಕ್ವಾಡಿನವರ ಕಿವಿಗೆ ಬಿದ್ದಾಗ ಅವಳಾರಿರಬಹುದೆಂಬ ಅನ್ವೇಷಣೆ ಆರಂಭಿಸಿತು ಪೋಲೀಸ್ ಖಾತೆ. ಕಾಲೇಜಿನ ಯೂನಿಯನ್‌ಗಳಿಂದ ಮಾಹಿತಿ ಪಡೆದ ಅವರಿಗೆ ಕಲ್ಯಾಣಿಯ ಮನೆ ತಲುಪಲು ಹದಿನೈದು ದಿನಗಳು ಹಿಡಿದವು. ಅವಳ ತಂದೆ, ತಾಯಿಯರ, ಅಕ್ಕಪಕ್ಕದವರ ಬಂಧು ಬಾಂಧವರ ವಿಚಾರಣೆ ನಡೆಸಿ ಕ್ರಾಂತಿಕಾರಿ ಕಲ್ಯಾಣಿ ಫೈಲನ್ನು ಸಿದ್ಧಪಡಿಸಿತ್ತು ಆಂಟಿ ರೆವಲ್ಯೂಷನರಿ ಸ್ಕ್ವಾಡ್. ಆಗ ಯಾರೂ ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆಯಾಗಿ ಇಷ್ಟು ಬೃಹದಾಕಾರ ತಾಳಿ ಬಿಡಬಹುದೆಂದು ಎಣಿಸಿರಲಿಲ್ಲ.

ದೊಡ್ಡಣ್ಣನ ತಂಡ ಬಿರುಕು ಬಿಟ್ಟು ಎರಡಾಯಿತು. ಅದರಲ್ಲಿನ ಕೆಲವರು ಆರಾಮದ ಜೀವನಕ್ಕೆ ಮಾರುಹೋಗಿ ಧನವಂತರ ಸುಲಿಗೆ ಆರಂಭಿಸಿದರು. ದೊಡ್ಡಣ್ಣ ತನ್ನ ಮಿಕ್ಕ ಹಿಂಬಾಲಕರೊಡನೆ ಚಳುವಳಿಯನ್ನು ಮುಂದುವರೆಸಿದ. ಅವರಲ್ಲಿ ಕಲ್ಯಾಣಿಯೂ ಇದ್ದಳೆಂದು ಬೇರೆ ಹೇಳಬೇಕಾಗಿಲ್ಲ. ಪೋಲೀಸ್‌ರೊಡನೆ ನಡೆದ ಎನ್‌ಕೌಂಟರಿನಲ್ಲಿ ದೊಡ್ಡಣ್ಣ ಮತ್ತು ಅವನ ಒಬ್ಬ ಸಂಗಡಿಗ ಪ್ರಾಣ ನೀಗಿದರು, ಇಬ್ಬರು ಶರಣಾಗತರಾದರು. ಕಲ್ಯಾಣಿ ಮತ್ತು ಕೆಲವರು ತಪ್ಪಿಸಿಕೊಂಡು ಕಾಡಿನಲ್ಲಿ ಮಾಯವಾದರು. ಈಗ ಕಲ್ಯಾಣಿಯ ನಾಯಕತ್ವದಲ್ಲಿ ರೂಪುಗೊಂಡ ಕ್ರಾಂತಿಕಾರಿ ತಂಡ ಯಾರಿಗೂ ಬಗ್ಗದೇ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಆಕೆಯನ್ನು ಬಂಧಿಸುವ, ಕಾಡಿನಲ್ಲಿ ಪತ್ತೆ ಹಚ್ಚುವ ಎಲ್ಲಾ ಯತ್ನಗಳೂ ವಿಫಲವಾಗಿದೆ. ಅದಕ್ಕೆ ಕಾರಣ ಅವಳಿಗಿರುವ ಜನರ ಬೆಂಬಲ.

ಇದೆಲ್ಲಾ ಕಲ್ಯಾಣಿ ಕಾಣೆಯಾದ ಎರಡು ವರ್ಷಗಳಲ್ಲಿ ನಡೆದುಹೋದ ಘಟನೆಗಳು. ತಮ್ಮ ಮಗಳು ಕ್ರಾಂತಿಕಾರಿಯಾಗಿದ್ದಾಳೆಂಬ ಸುದ್ದಿ ತಿಳಿಯುತ್ತಲೇ ಅವಳು ತಮ್ಮ ಮಗಳೇ ಅಲ್ಲ ಎಂದು ಘೋಷಿಸಿಬಿಟ್ಟರವರ ತಂದೆತಾಯಿ. ಅವರೇನೇ ಎಂದರೂ ಸ್ಕ್ವಾಡಿನವರು ಮೊದಮೊದಲು ಅವರ ಮನೆಯ ಮೇಲೆ ನಿಗಾ ಇಡುತ್ತಿದ್ದರು. ಒಂದು ತಿಂಗಳವರೆಗೆ ನಡೆದ ಆ ಕೆಲಸ ಯಾವ ಫಲವನ್ನು ಕೊಡದಾಗ ಅದನ್ನು ಕೈಬಿಡಲಾಗಿತ್ತು.

ಟೇಬಲ್ ಲ್ಯಾಂಪನ್ನು ಆರಿಸಿ ಕುರ್ಚಿಯಿಂದ ಎದ್ದ ತೇಜಾ, ತಲೆಯಲ್ಲಿ ಸ್ವಲ್ಪ ನೋವು ಆರಂಭವಾಗಿತ್ತು. ಆರಾಮಾಸನದಲ್ಲಿ ಕುಳಿತು ಎದುರಿನ ಸ್ಟೂಲಿನ ಮೇಲೆ ಕಾಲು ಚಾಚಿದ. ಕಲ್ಯಾಣಿಯೇ ಅವನ ಮೈಮನವೆಲ್ಲಾ ಆಕ್ರಮಿಸಿಬಿಟ್ಟಿದ್ದಳು. ನಾಜೂಕಾಗಿ ಮೈಬಳಕಿಸುತ್ತಾ, ಮನೆಯ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಪ್ರೀತಿಯ ಪತಿಯೊಡನೆ ಚಲ್ಲಾಟವಾಡುತ್ತಿರಬೇಕಾದ ಹುಡುಗಿ ಕಾಡಿನಲ್ಲಿ ಮಶೀನ್‌ಗನ್‌ಗಳನ್ನು, ಎ. ಕೆ. ೪೭ ಗಳನ್ನು ಹಿಡಿದು ಏನು ಮಾಡುತ್ತಿದ್ದಾಳೆ ಎನಿಸಿದಾಗ ಫೋಟೋದಲ್ಲಿದ್ದ ಅವಳ ಮುಖ ಅವನ ಮೆದುಳಿನಲ್ಲೆಲ್ಲಾ ತುಂಬಿಬಿಟ್ಟಿತ್ತು.

ಆ ಯೋಚನೆಯಿಂದ ಹೊರಬಂದ ತೇಜಾ ಅವಳ ಬಳಿ ತಲುಪುವುದು ಹೇಗೆಂಬ ಚಿಂತನೆ ಆರಂಭಿಸಿದ. ತನ್ನ ಪ್ರತಿ ನಿರ್ಣಯಕ್ಕೂ ಪೋಲೀಸ್ ಖಾತೆ ಯಾವ ಬಗೆಯ ಪ್ರಶ್ನೆಗಳನ್ನೂ ಕೇಳದೇ ಬೆಂಬಲ ನೀಡುವುದೆಂಬ ಆಶ್ವಾಸನೆ ನೀಡಿದ್ದರು ಸ್ಕ್ವಾಡ್‌ನ ಮುಖ್ಯಸ್ಥರಾದ ಶ್ರೀವಾಸ್ತವ. ಇಡೀ ಪೋಲೀಸ್ ಅಧಿಕಾರಿ ವರ್ಗದಲ್ಲಿ ಅವರು ಅವನಿಗೆ ಬಹಳ ಪ್ರಿಯರು ಯಾರಿಗೂ ಎಂತಹದಕ್ಕೂ ಅಂಜುವವರಲ್ಲ. ಅದಕ್ಕೆ ಅಂತಹ ಪ್ರತಿಭಾವಂತ ಅಧಿಕಾರಿಯನ್ನು ನಿರ್ಜೀವ ಕೆಲಸ ಕೊಟ್ಟು ಮೂಲೆಗುಂಪಾಗಿ ಕೂಡಿಸಿಡಲಾಗಿದೆ. ಆಂಟಿ ರೆವಲ್ಯೂಷನರಿ ಸ್ಕ್ವಾಡಿನಲ್ಲಿ ಯಾವ ವಿಶೇಷ ಕೆಲಸವೂ ಇಲ್ಲ. ಅಲ್ಲಿ ಮೇಲಿನ ಆದಾಯದ ಮಾತೇ ಇಲ್ಲ. ಆದರೆ ಅವರಿಗಿರುವ ಯೋಗ್ಯತೆ, ಈಗಿರುವ ಮುಖ್ಯಮಂತ್ರಿಯವರಿಗೆ ಗೊತ್ತು. ಆ ಕಾರಣವಾಗಿ ಕ್ರಾಂತಿಕಾರಿಯರ ಬಗ್ಗೆ ಅವರು ತೆಗೆದುಕೊಂಡ ನಿರ್ಣಯವೇ ಅಂತಿಮ.

ಬುದ್ಧಿವಂತಿಕೆಯಿಂದ ಅವಳು ಎಲ್ಲಿರಬಹುದೆಂಬುವುದು ಅರಿಯಬೇಕು. ಬಾಹುಬಲ ತೋರಲು ಹೋದರೆ ಯಾವ ಕ್ಷಣದಲ್ಲಾದರೂ ತಾನು ಅವರ ಗುಂಡಿಗೆ ಗುರಿಯಾಗಬಹುದೆಂದು ಎಚ್ಚರಿಸಿದ್ದಾರೆ. ಅದೇ ಯಾವ ವಿಧಾನ ಉಪಯೋಗಿಸಬೇಕು. ಇದು ತಾನೊಬ್ಬನೇ ಮಾಡಬೇಕಾದ ಕೆಲಸ. ಯೋಚನೆಗಳಿಂದ ಅವನು ಬೆಚ್ಚಿಬೀಳವಂತೆ ಮಾಡಿತು ಫೋನಿನ ಸದ್ದು. ಬಲವಂತವಾಗಿ ಎಂಬಂತೆ ಎದ್ದು ದೂರದ ಟೇಬಲ್ಲಿನ ಮೇಲಿದ್ದ ಫೋನಿನ ರಿಸೀವರ ಎತ್ತಿದ್ದ.

“ಹಲೋ”

“ಏನು ಮಾಡುತ್ತಿದ್ದಿ.”

ಅದು ಕುಶಾಲನ ಕಂಠ. ಕಲ್ಯಾಣಿಯ ಯೋಚನೆಯಿಂದ ಹೊರಬಂದ ತೇಜಾ ಲವಲವಿಕೆಯ ದನಿಯಲ್ಲಿ ಹೇಳಿದ.

“ಒಬ್ಬ ಸುಂದರಿಯ ಕನಸು ಕಾಣುತ್ತಿದ್ದೆ. ನೀನೆಲ್ಲಿಂದ ಮಾತಾಡುತ್ತಿದ್ದೆ.”

“ಯಾರು ಆ ಅದೃಷ್ಟವಂತೆ!… ಮನೆಯಿಂದ. ಯಾರೂ ಇಲ್ಲ. ಅವಳು ಮಕ್ಕಳನ್ನು ಕರೆದುಕೊಂಡು ಅಮ್ಮನ ಮನೆಗೆ ಹೋಗಿದ್ದಾಳ” ಬೇಸರವಿತ್ತು ಕುಶಾಲನ ದನಿಯಲ್ಲಿ. ಕೂಡಲೇ ಹೇಳಿದ ತೇಜಾ.

“ವಿಸ್ಕಿ ತಗೊಂಡು ಇಲ್ಲಿ ಬಂದುಬಿಡು. ಆ ಸುಂದರಿಯ ವಿಷಯ ವಿವರವಾಗಿ ಹೇಳುತ್ತೇನೆ.”

“ಈಗ ಬಂದೆ. ನನಗೂ ಈಗ ಅಂಥಹ ಕಥೆಗಳನ್ನು ಕೇಳುವ ಆಸಕ್ತಿ” ಎಂದ ಕುಶಾಲ್ ಸಂಪರ್ಕ ಮುರಿದ.

ಕುಶಾಲ್ ಮತ್ತು ತೇಜಾರ ಪರಿಚಯ ಇಬ್ಬರೂ ಪೋಲೀಸ್ ಖಾತೆ ಸೇರಿದ ಮೇಲೆ ಆಗಿತ್ತು. ಇಬ್ಬರೂ ಒಂದೇ ಬ್ಯಾಚಿನಲ್ಲಿ ಟ್ರೈನಿಂಗ್ ಮುಗಿಸಿದ್ದರು. ಇಬ್ಬರ ಯೋಚನೆಗಳೂ ಒಂದೇ ಆದ ಕಾರಣ ಪರಿಚಯ ಈಗ ಗಾಢ ಸ್ನೇಹದಲ್ಲಿ ಮಾರ್ಪಟ್ಟಿತ್ತು. ಪೋಲೀಸ್ ಖಾತೆ ಸೇರಿದ ಮಗ ಎಲ್ಲಿ ತಪ್ಪುದಾರಿ ಹಿಡಿಯುತ್ತಾನೊ ಎಂಬ ಗಾಬರಿಯಲ್ಲಿ ಅವನ ತಂದೆ ತಾಯಿ ಬೇಗ ಮದುವೆ ಮಾಡಿಬಿಟ್ಟಿದ್ದರು. ಈಗವನಿಗೆ ಇಬ್ಬರು ಮಕ್ಕಳು. ಸರಕಾರದ ಜಾಹಿರಾತಿನಂತೆ ಒಂದು ಗಂಡು, ಒಂದು ಹೆಣ್ಣು. ಮಗನಿಗೆ ಐದು ವರ್ಷ ಮಗಳಿಗೆ ಎರಡು, ತೇಜಾ ಕುಶಾಲನದು ಎಷ್ಟು ಗಾಢಸ್ನೇಹವೆಂದರೆ ಅವನೂ ಅವರ ಮನೆಯ ಸದಸ್ಯನಂತೆ ಆಗಿಬಿಟ್ಟಿದ್ದ. ತೇಜಾ, ಮಕ್ಕಳೊಡನೆ ಮಗುವಾಗಿ ಆಡುತ್ತಿದ್ದ ಅವನನ್ನು ನೋಡಿದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ ಕುಶಾಲನ ಮನೆಗೆ ಹೋದರೆ ಅವರಿಂದ ಮುಕ್ತಿ ಹೊಂದಿ ಬರುವದೇ ಕಷ್ಟವಾಗುತ್ತಿತ್ತು.

ಪಟ್ಟಣದ ಹೊರ ವಲಯದ ಪೋಲೀಸ್ ಸ್ಟೇಷನ್‌ನಲ್ಲಿದ್ದ ಕುಶಾಲ ಅಲ್ಲಿ ಹೆಚ್ಚು ಕೆಲಸವಿರಲಿಲ್ಲ. ಅವರ ಸ್ನೇಹದ ವಿಷಯ ಕೂಡ ಇಡೀ ಪೋಲೀಸ್ ಖಾತೆ ಮಾತಾಡಿಕೊಳ್ಳುವಂತಿತ್ತು. ತಮ್ಮ ತಮ್ಮಲ್ಲಿ ಅವರು ತಮಗೆ ಗೊತ್ತಿದ್ದ ಗೋಪ್ಯ ವಿಷಯಗಳು ಹಂಚಿಕೊಳ್ಳುತ್ತಿದ್ದರು. ಆದರದು ಬೇರಾರಿಗೂ ಗೊತ್ತಾಗುತ್ತಿರಲಿಲ್ಲ. ಎಷ್ಟೋ ಸಲ ಕ್ಲಿಷ್ಟವಾದ ಕೇಸುಗಳಲ್ಲಿ ತೇಜಾನ ಸಲಹೆ ಪಡೆಯುತ್ತಿದ್ದ ಕುಶಾಲ. ಅವನು ತನಗಿಂತ ಬುದ್ಧಿವಂತನೆಂದು ಯಾವ ಸಂಕೋಚವೂ ಇಲ್ಲದೇ ಒಪ್ಪಿಕೊಂಡಿದ್ದ.

ಈಗ ಕುಶಾಲನೊಡನೆ ಮಾತಾಡುತ್ತಾ ಮನವನ್ನು ಹಗುರಗೊಳಿಸಿ ಕೊಳ್ಳಬಹುದು. ಕಲ್ಯಾಣಿಯ ಬಗ್ಗೆ ಮಾತು ನಡೆದಾಗ ಮುಂದಿನ ಯೋಜನೆ ತಾನಾಗೇ ರೂಪುಗೊಳ್ಳಬಹುದು ಎಂಬ ಯೋಚನೆಯಲ್ಲಿ ತೊಡಗಿದ್ದಾಗ ಮನೆ ಎದುರು ವಾಹನ ನಿಂತ ಸದ್ದಾಯಿತು. ಬಾಗಿಲು ತೆಗೆದಾಗ ಕುಶಾಲ ಸ್ಕೂಟರನ್ನು ಸ್ಟ್ಯಾಂಡಿಗೆ ಎಳೆಯುತ್ತಿದ್ದ. ಬಾಗಿಲನ್ನು ಪೂರ್ತಿ ತೆಗೆದು ಒಳಕೋಣೆಗೆ ಬಂದ ತೇಜಾ ಫ್ರಿಜ್‌ನಿಂದ ನೀರಿನ ಬಾಟಲುಗಳನ್ನು ತೆಗೆದಿಟ್ಟು ಅಡುಗೆಮನೆಯಿಂದ ಪ್ಲೇಟು ಮತ್ತು ಗಾಜಿನ ಗ್ಲಾಸುಗಳನ್ನು ತಂದ, ಅವನವನ್ನು ಸರಿಯಾಗಿ ಜೋಡಿಸುತ್ತಿದ್ದಂತೆ ಒಳಬಂದ ಕುಶಾಲ ಮುಂಬಾಗಿಲು ಹಾಕಿ ಅವನನ್ನು ಸೇರಿಕೊಂಡು ಪಾಲಿಥೀನ್ ಬ್ಯಾಗನ್ನು ಟೇಬಲಿನ ಮೇಲಿಡುತ್ತಾ ಬಹು ಹುರುಪಿನ ದನಿಯಲ್ಲಿ ಕೇಳಿದ.

‘ಯಾವ ಸುಂದರಿಯ ಕನಸು ಕಾಣುತ್ತಿದ್ದೆ ಮೊದಲು ಹೇಳು?’

ನಗುತ್ತಾ ಉತ್ತರಿಸಿದ ತೇಜಾ

“ಅದಕ್ಕೆ ಮೂಡ್ ಬರಬೇಕು. ಒಂದು ಪೆಗ್ ಹೊಟ್ಟೆಯಲ್ಲಿ ಇಳಿಯಲಿ” ಸೋಫಾದಲ್ಲಿ ಕುಳಿತ ಕುಶಾಲ ತಿಂಡಿಯನ್ನು ಪ್ಲೇಟಿಗೆ ಹಾಕಿ ವಿಸ್ಕಿ ಬಾಟಲಿನ ಮುಚ್ಚಳ ಬಿಚ್ಚುತ್ತಿದ್ದಾಗ ಪಾಲಿಥಿನ್ ಚೀಲವನ್ನೇ ನೋಡುತ್ತಾ ಕೇಳಿದ ತೇಜಾ.

“ಇನ್ನೂ ಏನೇನು ತಂದಿದ್ದಿ”

“ಮನೆ ಊಟ ಸಾಕಾಗಿದೆ. ಅದಕ್ಕೆ ಹೊರಗಿನ ಊಟ” ತನ್ನ ಕೆಲಸ ನಿಲ್ಲಿಸದೇ ಹೇಳಿದ ಕುಶಾಲ. ಎರಡು ಗ್ಲಾಸುಗಳಲ್ಲಿ ಪೇಯ ಹಾಕಿ ಅದರಲ್ಲಿ ನೀರು ಬೆರೆಸಿ ಅವನ್ನು ಇಬ್ಬರೂ ಎತ್ತಿಕೊಂಡಾಗ ಅವನ ಗ್ಲಾಸಿಗೆ ತನ್ನ ಗ್ಲಾಸನ್ನು ತಾಕಿಸುತ್ತಾ ಹೇಳಿದ ಕುಶಾಲ

“ನಿನ್ನ ಸ್ವಪ್ನ ಸುಂದರಿಯ ಶ್ರೇಯಕ್ಕೆ”

ಅದಕ್ಕೆ ಏನೂ ಹೇಳಲಿಲ್ಲ ತೇಜಾ. ಎರಡೂ ಗ್ಲಾಸುಗಳು ಒಂದಕ್ಕೊಂದು ತಾಕಿದನಂತರ ಗ್ಲಾಸಿನಲ್ಲಿದ್ದ ಅರ್ಧದಷ್ಟನ್ನು ಬರಿದು ಮಾಡಿ ಟೇಬಲಿನ ಮೇಲಿಟ್ಟ ತೇಜ. ಒಂದು ಗುಟುಕು ಕುಡಿದು ತನ್ನ ಮಿತ್ರನ ಮುಖವನ್ನೇ ನೋಡುತ್ತಾ ಬಹು ಆಸಕ್ತಿಯ ದನಿಯಲ್ಲಿ ಕೇಳಿದ ಕುಶಾಲ

“ಈಗಲಾದರೂ ಹೇಳು ಯಾರು ನಿನ್ನ ಸ್ವಪ್ನ ಸುಂದರಿ?”

“ಕಲ್ಲಕ್ಕ” ಎಂದ ತೇಜಾ ಗಂಭೀರ ದನಿಯಲ್ಲಿ. ಆಶ್ಚರ್ಯ ತುಂಬಿಬಂತು ಕುಶಾಲನ ಮುಖದಲ್ಲಿ ಅಯೋಮಯದಲ್ಲಿರವಂತಹ ದನಿಯಲ್ಲಿ ಕೇಳಿದ

“ಯಾರಂದಿ?”

“ಕಲ್ಲಕ್ಕ” ತನ್ನದೇ ಯೋಚನೆಯಲ್ಲಿರುವಂತೆ ಮತ್ತೆ ಹೇಳಿದ ತೇಜಾ.

“ಕಲ್ಲಕ್ಕ! ಅಂದರೆ ಯಾವ ಕಲ್ಲಕ್ಕ, ಎಲ್ಲಿಯವಳು?” ಮಿತ್ರನ ಗಂಭೀರ ಮುಖ ನೋಡಿ ಆತುರದ ದನಿಯಲ್ಲಿ ಕೇಳಿ ಇನ್ನೊಂದು ಗುಟುಕು ಕುಡಿದ.

“ನಿನಗೆ ಯಾವ ಕಲ್ಲಕ್ಕ ಗೊತ್ತು?” ಮಾತು ಮುಗಿಸಿ ತಿಳಿಯಾದ ನಗೆ ನಕ್ಕ ತೇಜಾ. ಕೆಲಕ್ಷಣ ಮಿತ್ರನ ಮುಖವನ್ನು ನೋಡಿ ಹಗುರ ನಗೆ ನಕ್ಕು ಕೇಳಿದ ಕುಶಾಲ

“ನೀನಾ ಕ್ರಾಂತಿಕಾರಿ ಕಲ್ಲಕ್ಕನ ವಿಷಯ ಮಾತಾಡುತ್ತಿಲ್ಲ ತಾನೆ?”

“ಅವಳ ಕನಸುಗಳೇ ಕಾಣುತ್ತಿದ್ದೆ” ತೇಜಾನ ತುಟಿಗಳು ವಿಚಿತ್ರ ನಗೆಯಿಂದ ಅಗಲವಾದವು. ಮಾತು ಮುಗಿಸಿ ಗ್ಲಾಸನ್ನು ಎತ್ತಿಕೊಂಡ

“ಅವಳ ಕನಸು! ಯಾಕೆ…”

“ಅವಳನ್ನು ಅವಳ ತಂಡವನ್ನು ಮುಗಿಸುವ ಜವಾಬ್ದಾರಿ ನನಗೆ ಒಪ್ಪಿಸಲಾಗಿದೆ”

ಕುಶಾಲನ ಮುಖದಲ್ಲಿ ಅಪನಂಬಿಕೆಯ ಭಾವ ತುಂಬಿಬಂತು. ಅದರಿಂದ ಚೇತರಿಸಿಕೊಳ್ಳಲು ಅವನಿಗೆ ಹಲವು ಕ್ಷಣಗಳು ಹಿಡಿದವು. ನಂತರ ಅಂತಹದೇ ಅಪನಂಬಿಕೆಯ ದನಿಯಲ್ಲಿ ಕೇಳಿದ.

“ನೀ ಹುಡುಗಾಟವಾಡುತ್ತಿಲ್ಲ ತಾನೆ?”

“ಇಲ್ಲ! ಅವಳನ್ನು ಆದಷ್ಟು ಬೇಗ ಮುಗಿಸಬೇಕು. ಅದು ಹೇಗೆಂಬುದರ ಕನಸುಗಳನ್ನೇ ಕಾಣುತ್ತಿದ್ದೆ” ಗಂಭೀರದ ದನಿಯಲ್ಲಿ ಹೇಳಿದ ತೇಜಾ.

“ಅದು ನಿನ್ನೊಬ್ಬನಿಂದ ಸಾಧ್ಯವೇ? ಅವಳು ಮೊನ್ನೆ ಮಾಡಿದ ಮೂರು ಘೋರ ಕೊಲೆಗಳ ಬಗ್ಗೆ ಓದಿದ್ದೀಯಾ?” ತಾ ಕೇಳುತ್ತಿರುವುದು ಇನ್ನೂ ನಂಬಲಾಗುತ್ತಿಲ್ಲ ಎಂಬಂತಿತ್ತು ಕುಶಾಲನ ಮಾತು. ಮಿತ್ರನ ಮುಖವನ್ನೇ ಕೆಲಕ್ಷಣಗಳು ದಿಟ್ಟಿಸಿ ಗ್ಲಾಸಿನಲ್ಲಿ ಮಿಕ್ಕ ಪೇಯ ಮುಗಿಸಿ ಹೇಳಿದ ತೇಜಾ.

“ಇದು ಆಫಿಶಿಯಲ್ ಅಸಾಯನ್‌ಮೆಂಟ್! ನಾಳಿದಿಂದಲೇ ಕೆಲಸ ಆರಂಭಿಸಬೇಕು. ಅವಳು ಮಾಡಿಸಿದ ಕೊಲೆಗಳ ಬಗ್ಗೆಯೇ ಅಲ್ಲ. ಅವಳ ಪೂರ್ತಿ ಚರಿತ್ರೆ ಗೊತ್ತು. ಹೇಳು ಈಗೇನು ಹೇಳುತ್ತಿ, ನನ್ನ ಕನಸಿನ ಸುಂದರಿಯ ಬಗ್ಗೆ”

“ನೀನು ಅವಳನ್ನು ಮುಗಿಸುವ ಕನಸು ಕಾಣುತ್ತಿದ್ದಿ! ಅವಳು ಸುಂದರಳಂತೂ ಖಂಡಿತ ಇರಲಿಕ್ಕಿಲ್ಲ. ಅದೇನೇ ಆಗಲಿ ನಿನಗೆ ಶುಭವಾಗಲಿ” ಎಂದ ಕುಶಾಲ.

ಮುಂದೆ ಕುಡಿತ ಕಡಿಮೆ ಮಾತುಗಳು ಹೆಚ್ಚಾದವು. ಹಗುರದನಿಯಲ್ಲಿ ಆವರೆಗೆ ನಡೆದ ಎಲ್ಲವನ್ನೂ ವಿವರಿಸಿದ ತೇಜಾ, ಮಿತ್ರ ಈ ಕೆಲಸ ಮಾಡಲು ನಿರಾಕರಿಸಬೇಕಾಗಿತ್ತು ಎಂದುಕೊಂಡ ಕುಶಾಲ, ಆದರೆ ಅವನಿಗೆ ತೇಜಾನ ಸ್ವಭಾವ ಚೆನ್ನಾಗಿ ಗೊತ್ತಿತ್ತು. ಯಾರೂ ಮಾಡಲು ಸಾಧ್ಯವಾಗದಂತಹ ಕೆಲಸಗಳನ್ನು ಅವನು ಮಾಡಲು ಮುಂದಾಗುತ್ತಿದ್ದ. ಅವನಿಗೆ ತನ್ನ ಬುದ್ಧಿ ಉಪಯೋಗಿಸಲು, ಸಾಹಸ ತೋರಲು ಅವಕಾಶ ಬೇಕಷ್ಟೆ, ಅದೂ ಅಲ್ಲದೇ ಸಿ.ಸಿ.ಎಲ್.ನಲ್ಲಿ ಇಷ್ಟು ಕಾಲ ಕೆಲಸ ಮಾಡಿ ಅವನಿಗೆ ಬೇಸರ ಉಂಟಾಗಿರಬಹುದು.

ತೇಜಾ ಅವನಿಗೆ ತಾ ಹಾಕಿಕೊಂಡ ಯೋಜನೆಯ ಬಗ್ಗೆ ಹೇಳಿದ. ಅದಕ್ಕೆ ತನ್ನ ಸಲಹೆಗಳನ್ನೂ ಸೇರಿಸಿದ ಕುಶಾಲ. ಈ ಕಲ್ಯಾಣಿ ಸಾಮಾನ್ಯ ಕ್ರಾಂತಿಕಾರಿ ಅಲ್ಲವೆಂಬುದು ಅವನಿಗೂ ಗೊತ್ತಿತ್ತು. ಅವನು ಎದುರಿಸಬಹುದಾದ ಅಪಾಯಯಗಳ ಬಗ್ಗೆ ಕೂಡ ಬಹಳ ಹೊತ್ತು ಮಾತಾಡಿದರು.

ಎರಡೆರಡು ಪೆಗ್‌ಗಳನ್ನು ಮಾತ್ರ ಕುಡಿದ ಅವರು ಮಾತಾಡುತ್ತಲೇ ಊಟ ಮುಗಿಸಿದರು. ಊಟ ಮುಗಿದ ನಂತರ ಕೂಡ ಮಾತುಗಳು, ಅವರು ಮಾತಾಡುತ್ತಾ ಕುಳಿತರೆ ಸಮಯ ಹೇಗೆ ಸರಿದು ಹೋಗುತ್ತದೆಯೋ ಅವರಿಗೇ ಗೊತ್ತಾಗುತ್ತಿರಲಿಲ್ಲ. ಹೋಗುವ ಮುನ್ನ ಅವನನ್ನು ಭೇಟಿಯಾಗುವುದಾಗಿ ಹೇಳಿ ಕುಶಾಲನನ್ನು ಹೊರಗೆ ಕಳಿಸಿದಾಗ ರಾತ್ರಿಯ ಒಂದಾಗುತ್ತಿತ್ತು.

ಬಾಗಿಲು ಹಾಕಿಕೊಂಡ ತೇಜ ಮಂಚದಲ್ಲಿ ಮಲಗಿದಾಗ ಕಲ್ಯಾಣಿ ಕರಾಳರೂಪ ತಾಳಿ ಅವನೆದುರು ನಾಟ್ಯವಾಡುತ್ತಿದ್ದಳು. ಅಂತಹದೇ ಯೋಚನೆಯಲ್ಲಿ ನಿದ್ದೆ ಅವನನ್ನು ಆವರಿಸಿತು.
* * *

ತೇಜಾ ಎದ್ದಾಗ ಏಳೂವರೆ ದಾಟಿತ್ತು ಸಮಯ. ಈಗಲೇ ಬಹಳ ತಡವಾಯಿತೆಂದುಕೊಳ್ಳುತ್ತಾ ಲಗುಬಗೆಯಿಂದ ಬೆಳಗಿನ ವಿಧಿಗಳನ್ನು ಮುಗಿಸಿದ. ರಾತ್ರಿ ಮಲಗುವ ಮುನ್ನವೇ ಬೆಳಗ್ಗೆ ಏನು ಮಾಡಬೇಕೆಂಬುವುದನ್ನು ನಿರ್ಧರಿಸಿದ್ದ.

ಸ್ನಾನ ಮುಗಿದ ಕೂಡಲೇ ಕಪ್ಪು ಪ್ಯಾಂಟಿನ ಮೇಲೆ ಹಳದಿ ಟೀಶರ್ಟ್‌ನ್ನು ತೊಟ್ಟು ಅದರ ಮೇಲಿಂದ ಸ್ವೆಟರ್ ಕೋಟು ಧರಿಸಿ ಮನೆಯಿಂದ ಹೊರಬಿದ್ದ. ಕಾಲಿಗೆ ಪೋಲೀಸ್ ಸಂಕೇತವಾದ ಷೂಗಳಿಲ್ಲ. ಅದರಿಂದ ಯಾರೂ ಅವನನ್ನು ಪೋಲೀಸ್ ಅಧಿಕಾರಿ ಎಂದು ಗುರುತಿಸುವುದು ಕಷ್ಟ. ಆ ಉಡುಪಿನಲ್ಲಿ ಇನ್ನೂ ಆಕರ್ಷಕವಾಗಿ ಕಾಣುತ್ತಿದ್ದ ತೇಜಾ.

ಪೋಲೀಸ್ ಜೀಪಿನಲ್ಲಿ ಅವನು ಸೆಂಟ್ರಲ್ ಜೈಲಿಗೆ ಬಂದಾಗ ಒಂಬತ್ತಾಗುತ್ತಿತ್ತು. ಅವನು ಪೋಲೀಸರ ಸಮವಸ್ತ್ರದಲ್ಲಿ ಇರದಿದ್ದರೂ ಪೋಲೀಸ್ ಖಾತೆಗೆ ಸೇರಿದ ಬಹುಜನ ಅವನನ್ನು ಗುರುತಿಸುತ್ತಿದ್ದರು. ದೊಡ್ಡ ಗೇಟಿನ ಬಳಿ ನಿಂತಿದ್ದ ಸಶಸ್ತ್ರ ಪೋಲೀಸಿನವರು ಅವನಿಗೆ ಶಿಸ್ತಿನ ಸೆಲ್ಯೂಟ್ ಹಾಕಿ ಚಿಕ್ಕ ಬಾಗಿಲು ತೆಗೆದರು. ಅವರ ಮೂಲಕ ಅವನು ಒಳಗೆ ಹೋಗುತ್ತಲೇ ಮತ್ತೆ ಮುಚ್ಚಿಕೊಂಡಿತು ಚಿಕ್ಕ ಬಾಗಿಲು.

ಎಲ್ಲಾ ಸರಕಾರಿ ಕಾರ್ಯಾಲಯಗಳಲ್ಲಿರುವಂತೆ ಅಲ್ಲೂ ಅವ್ಯವಸ್ಥೆ. ಜೈಲರ್ ಸಾಹೇಬರು ಇರಲಿಲ್ಲ. ಅವರ ಸಹಾಯಕನನ್ನು ಹುಡುಕಿ ಅವರಿಗೆ ತಾನ್ಯಾವ ಕೆಲಸದ ನಿಮಿತ್ತ ಬಂದಿದ್ದೇನೆಂದು ಅವನಿಗೆ ವಿವರಿಸಲು ಅರ್ಧಗಂಟೆ ಹಿಡಿಯಿತು. ಅವನ ಮಾತನ್ನು ಅರ್ಥ ಮಾಡಿಕೊಂಡ ಆತ ಬೇಸರದಿಂದ ಎಂಬಂತೆ ದಾರಿ ತೋರಲು ಮುಂದೆ ನಡೆದ.

ಕ್ರಾಂತಿಕಾರಿಯರನ್ನು ಪ್ರತ್ಯೇಕ ಸೆಲ್‌ಗಳಲ್ಲಿ ಬಂಧಿಸಿಡಲಾಗಿತ್ತು. ದೊಡ್ಡಣ್ಣನ ತಂಡದವರಿಬ್ಬರು ಅಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅವರಿಬ್ಬರೂ ಬೇರೆ ಬೇರೆ ಸೆಲ್‌ಗಳಲ್ಲಿದ್ದರು. ಆ ಒಂದು ಸೆಲ್‌ನ ಬೀಗ ತೆಗೆಯುವಂತೆ ಹೇಳಿದ ತೇಜಾ, ಅದಕ್ಕಾಗಿ ಇನ್ನೂ ಸ್ವಲ್ಪ ಹೊತ್ತು ಕಾಯಬೇಕಾಯಿತು. ಕೂಗಿ ಯಾರನ್ನೊ ಕರೆಯುತ್ತಿದ್ದ ಸಹಾಯಕ ಜೈಲರ್.

ಸೆಲ್‌ನ ಒಳಗಿದ್ದ ವ್ಯಕ್ತಿಯ ಹೆಸರು ರಮೇಶ. ಐವತ್ತನ್ನು ಸಮೀಪಿಸುತ್ತಿದ್ದಿರಬಹುದು ಅವನ ವಯಸ್ಸು, ಆದರೆ ಅದಕ್ಕಿಂತ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ, ಮುಖದಲ್ಲಿ ಸುಕ್ಕುಗಳು, ಕಣ್ಣಿಗೆ ದಪ್ಪನೆಯ ಕನ್ನಡಕ. ಅವನು ಹಳ್ಳಿಗನಲ್ಲ ಪಟ್ಟಣವಾಸಿಯೇ.

ಕೊನೆಗೂ ಸೆಲ್‌ನ ಬಾಗಿಲು ತೆಗೆದುಕೊಂಡಿತು. ತೇಜಾ ಅದರೊಳ ಹೋಗುತ್ತಿದ್ದಂತೆ ಮತ್ತದು ಮುಚ್ಚಿಕೊಂಡಿತು. ಆಗ ತಲೆ ಎತ್ತಿ ತನ್ನ ದಪ್ಪನೆಯ ಕನ್ನಡಕದ ಮೂಲಕ ಅವನನ್ನು ನೋಡಿದ ರಮೇಶ.

“ಹೇಗಿದ್ದಿ ರಮೇಶ್!” ಅವನ ಬದಿಗೆ ನೆಲದ ಮೇಲೆ ಕೂಡುತ್ತಾ ಬಹು ಆಪ್ಯಾಯದನಿಯಲ್ಲಿ ಕೇಳಿದ ತೇಜಾ. ಅದಕ್ಕೆ ಏನೂ ಹೇಳದೇ ತನ್ನ ಕನ್ನಡಕ ತೆಗೆದು ಅದನ್ನು ಒರೆಸುವ ಕೆಲಸದಲ್ಲಿ ತೊಡಗಿದ ರಮೇಶ, ಕನ್ನಡಕ ತೆಗೆದಾಗ ಅವನ ಕಣ್ಣುಗಳು ಇನ್ನೂ ಭಯ ಹುಟ್ಟಿಸುವಂತಿದ್ದವು. ಕಣ್ಣಿನ ಗುಡ್ಡುಗಳು ದೇಹದಿಂದ ಹೊರಬರಲು ಯತ್ನಿಸುತ್ತಿದ್ದಂತೆ ಕಾಣುತ್ತಿದ್ದವು.

“ನನ್ನ ಗುರುತಿಸಲಿಲ್ಲವೇ?… ಇನ್ನೂ ನೀನು ನಿನ್ನ ಸ್ವಭಾವವನ್ನು ಬದಲಿಸಲಿಲ್ಲ” ಹಳೆಯ ಸ್ನೇಹಿತನಂತೆ ತಾನೇ ಇನ್ನೊಮ್ಮೆ ಮಾತಾಡಿದ ತೇಜಾ. ಕನ್ನಡಕವನ್ನು ಒರೆಸುವ ಕೆಲಸವನ್ನು ಮುಂದುವರೆಸೇ ಇದ್ದ ಆ ಕ್ರಾಂತಿಕಾರಿ ಅವನ ಕಡೆ ತಿರುಗಿಯೂ ನೋಡಲಿಲ್ಲ. ಈಸಲ ಗೊಂದಲಕ್ಕೊಳಗಾದವನಂತೆ ಹೇಳಿದ.

“ವೇಷ ಬದಲಾಗಿದೆ ಎಂದು ನೀನು ಗುರುತಿಸಲಿಕ್ಕಿಲ್ಲ. ನೆನಪಿಸಿಕೊ ನಾನು ನಿಮಗೆ ಸಹಾಯ ಮಾಡಿದೆ”

ಕನ್ನಡಕವನ್ನು ಶುಚಿಗೊಳಿಸುವುದು ಮುಗಿಸಿದ ರಮೇಶ ಅದನ್ನು ಕಣ್ಣಿಗೆ ಏರಿಸಿಕೊಂಡು ನಿರ್ಭಾವ ದನಿಯಲ್ಲಿ ಹೇಳಿದ.

“ಇನ್ಸ್‌ಪೆಕ್ಟರ್ ಉತೇಜ್ ನೀನು ನಿನ್ನ ಸಮಯ ವ್ಯರ್ಥ ಮಾಡುತ್ತಿದ್ದಿ”.

ಇಷ್ಟು ಕಾಲದಿಂದ ಜೈಲಿನಲ್ಲಿರುವ ಇವನಿಗೆ ತನ್ನ ಹೆಸರು ಹೇಗೆ ಗೊತ್ತಾಯಿತೆಂಬ ಆಶ್ಚರ್ಯ ತೇಜ್‌ನಿಗೆ. ಅ ಭಾವ ಅವನ ಮುಖದಲ್ಲಿ ಬರಲಿಲ್ಲ. ಒಂದು ಬಗೆಯ ಕರುಣೆಯ ದನಿಯಲ್ಲಿ ಹೇಳಿದ.

“ಅರ್ಥವಿಲ್ಲದ ಹೋರಾಟ ನಡೆಸಿ, ನಡೆಸಿ ನಿಮ್ಮ ಮತಿ ಭ್ರಮಿಸಿದೆ. ನಾನು ಇನ್ಸ್‍ಪೆಕ್ಟರ್ ತೇಜಾನಲ್ಲ. ನಿನ್ನಿಂದ ಸಹಾಯ ಕೋರಲು ಬಂದಿದ್ದೆ. ನಿನ್ನ ಭೇಟಿಯಾಗಲೇ ಸಾವಿರಾರು ಖರ್ಚಾಯಿತು. ಅದಕ್ಕೆ ಪ್ರತಿಫಲವಾಗಿ ಇಂತಹ ಮಾತು… ಇನ್ನೂ ಸ್ವಲ್ಪ ದಿನವಾದರೆ ನೀ ಹುಚ್ಚನಾಗುವೆ.”

ದಪ್ಪನೆಯ ಕನ್ನಡಕ ಅವನ ಕಡೆ ತಿರುಗಿತು. ಅದರಲ್ಲಿಂದ ಹೊರಬರಲು ತವಕಿಸುತ್ತಿರುವಂತಹ ಕಣ್ಣುಗಳು ಆಸಕ್ತಿಯನ್ನು ತೋರುತ್ತಿರುವಂತೆ ಕಂಡವು. ಎಡಗೈಯಿಂದ ತನ್ನ ಕುರುಚಲು ಗಡ್ಡ ನೀವಿಕೊಳ್ಳುತ್ತಾ ಉತೇಜ್‌ನ ಮೇಲೆ ಉಪಕಾರ ಮಾಡುತ್ತಿರುವಂತಹ ದನಿಯಲ್ಲಿ ಹೇಳಿದ ಕ್ರಾಂತಿಕಾರಿ ರಮೇಶ್.

“ಏನು ಬೇಕು ಹೇಳು ಇನ್ಸ್‌ಪೆಕ್ಟರ್.”

ಅವನ ಮಾತು ಮುಗಿಯುತ್ತಲೇ ಸೆಲ್‌ನ ಆಚೆ ಒಮ್ಮೆ ಕಣ್ಣಾಡಿಸಿ ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ.

“ಆಯುಧಗಳಿವೆ. ಅವನ್ನು ಕಾಳಿಗೆ ಒಪ್ಪಿಸಬೇಕು ಹೇಗೆ.”

ಗೆಲುವಿನ ಮುಗಳ್ನಗೆ ಹಾಯಿತವನ ತುಟಿಗಳ ನಡುವೆ. ಭಾವರಹಿತ ದನಿಯಲ್ಲಿ ಹೇಳಿದ ರಮೇಶ.

“ನೀನವಳನ್ನು ಹುಡುಕುತ್ತಾ ಹೋಗು! ನಿನಗೇ ಹುಚ್ಚು ಹಿಡಿಯುತ್ತದೆ. ಒಂದು ಮಾತು ಚೆನ್ನಾಗಿ ನೆನಪಿಡು ಇನ್ಸ್‌ಪೆಕ್ಟರ್, ಯಾರೂ ಅವಳ ಹತ್ತಿರ ಹೋಗಲು ಸಾಧ್ಯವಿಲ್ಲ. ನಮ್ಮಲ್ಲಿ ಅದೊಂದೇ ಆಶಾಕಿರಣ ಈಗ ಬೆಳಗುತ್ತಿರುವುದು… ಹೋಗು ನನ್ನ ಸಮಯ ಹಾಳು ಮಾಡಬೇಡ.”

ಈಗ ತನ್ನ ಮಾತಿನ ಸರಣಿಯನ್ನು ಬೇರೆ ದಿಕ್ಕಿನಲ್ಲಿ ತಿರುಗಿಸಬೇಕು ವಿಧಿ ಇಲ್ಲ ಎಂದುಕೊಂಡು ತೇಜಾ ಹೇಳಿದ.

“ಯಾತರ ಆಶಾಕಿರಣ! ರಾಜಕೀಯ ಪಾರ್ಟಿಗಳ ಹಾಗೆ ನಿಮ್ಮಲ್ಲೇ ಹತ್ತಾರು ತುಂಡುಗಳಾಗಿವೆ. ಶರಣಾಗತರಾದ ಹಲವರು ಬಡವರ ಬವಣೆಯನ್ನು ಮರೆತು ರಾಜಭೋಗ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ದರೋಡೆಗಳನ್ನು ಮಾಡಲು, ಚಿಲ್ಲರೆ ರೌಡಿಗಳಂತೆ ಜನರನ್ನು ಸುಲಿಯಲು ಆರಂಭಿಸಿದ್ದಾರೆ. ಅಂತಹದರಲ್ಲಿ ನೀನು ಆಶಾಕಿರಣದ ಮಾತಾಡುತ್ತಿ! ಯಾತರ ಆಶಾಕಿರಣ! ನೀವೆಲ್ಲಾ ಸೇರಿ ಈ ಕ್ರಾಂತಿಗೆ ಅರ್ಥವಿಲ್ಲವೆಂದು ತೋರಿಸಿಕೊಟ್ಟಿದ್ದೀರಿ” ಭಾವೋದ್ವೇಗದಿಂದ ತುಂಬಿದ ಅವನ ಮಾತು ಮುಗಿಯುತ್ತಿದ್ದಂತೆ ಮತ್ತೆ ಕನ್ನಡಕ ತೆಗೆದ ರಮೇಶ. ಅವನ ನೋಟ ಸೆಲ್‌ನ ಹೊರಗಡೆ ನೆಟ್ಟಿತ್ತು. ಮೆಲ್ಲನೆ ನಿರ್ವಿಕಾರ ದನಿಯಲ್ಲಿ ಬಂತವನ ಮಾತು.

“ಪ್ರತಿ ದೊಡ್ಡ ಚಳುವಳಿಯಲ್ಲಿ ಕೆಲವು ಹುಳುಗಳು ಹುಟ್ಟಿಕೊಳ್ಳುತ್ತಾರೆ. ಯರೆಹುಳುಗಳಂತೆ ಅವರುಗಳು ಹುಟ್ಟಿದಷ್ಟು ಶೀಘ್ರವಾಗೇ ಇಲ್ಲವಾಗುತ್ತಾರೆ. ಆದರೆ, ಅವರಂತಹವರ ಕಾರಣವಾಗಿ ಚಳುವಳಿ ನಿಲ್ಲುವುದಿಲ್ಲ. ಅದಕ್ಕೆ ಇನ್ನೂ ಬಲ ಬರುತ್ತದೆ. ಅದರ ಪ್ರತೀಕವೇ ಕಲ್ಲಕ್ಕ.”

“ನೀವು ಮೊದಮೊದಲು ಕೆಲ ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಅದನ್ನು ನಾ ಒಪ್ಪುತ್ತೇನೆ. ಅದರಿಂದ ಸರಕಾರ ಕೂಡ ಪಾಠ ಕಲಿತಿದೆ. ಅದರಲ್ಲೂ ಯಾವ ಸಂದೇಹವೂ ಇಲ್ಲ. ಆದರೆ ಈಗ ಸರಕಾರ ಬಡಬಗ್ಗರಿಗಾಗಿ ಇನ್ನೂ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರಿಂದ ನಿಮಗೆ ಜನಸಾಮಾನ್ಯರಲ್ಲಿ ಮನ್ನಣೆ ಇಲ್ಲ. ನನ್ನ ಮಾತು ಕೇಳು ರಮೇಶ್ ಈ ಚಟುವಟಿಕೆ, ಕ್ರಾಂತಿಗೆ ಈಗ ಅರ್ಥವಿಲ್ಲ. ನಾನು ಕಲ್ಲಕ್ಕನನ್ನು ಕಾಣಬೇಕು ಅದು ಹೇಗೆ ಹೇಳು” ಈಗಲೂ ತೇಜಾನ ದನಿ ಭಾವೋದ್ವೇಗದಿಂದ ತುಂಬಿತ್ತು. ಕೆಲಕ್ಷಣಗಳ ಮೌನದ ನಂತರ ಮಾತಾಡಿದ ರಮೇಶ.

“ನೀನು ನಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದ್ದಿ ಅದಕ್ಕೆ ಹೇಳುತ್ತಿದ್ದೇನೆ. ಕಲ್ಲಕ್ಕ ಎಲ್ಲಿ ಸಿಗಬಹುದೆಂಬುವುದು ನನಗೂ ಗೊತ್ತಿಲ್ಲ, ಆದರೆ ಒಂದು ಮಾತು ಹೇಳುತ್ತೇನೆ ನೆನಪಿಡು, ಆಕೆ ಒಂದುವೇಳೆ ನಿನ್ನ ಕಡೆ ಕೋಪದಿಂದ ನೋಡಿದರೆ ಯಾವ ಆಯುಧದ ಅವಶ್ಯಕತೆ ಇಲ್ಲದೇ ನೀ ಸಾಯುತ್ತಿ. ಸಾಯುವ ಮನಸ್ಸಿದ್ದರೆ ಮಾತ್ರ ಅಂತಹ ಧೈರ್ಯ ಮಾಡು”

ಇನ್ನು ಇವನೊಡನೆ ಮಾತಾಡಿ ಯಾವ ಪ್ರಯೋಜನವೂ ಇಲ್ಲವೆನಿಸಿತ್ತು ತೇಜಾನಿಗೆ, ಜೈಲಿನ ಪ್ರಹರಿಯನ್ನು ಕರೆದು ಆ ಸೆಲ್‌ನಿಂದ ಹೊರಬಿದ್ದ. ಇಷ್ಟು ವಯಸ್ಸಾದ ಇವನು ಕಲ್ಯಾಣಿಯ ಭಕ್ತನಾಗಲು ಯಾವುದೋ ಬಲವಾದ ಕಾರಣವಿರಲೇಬೇಕೆನಿಸಿತು. ಅಲ್ಲಿಂದ ಮಿಕ್ಕಿಬ್ಬರನ್ನೂ ಹುಡುಕುತ್ತಾ ಹೋದ.

ಸಿಂಗಣ್ಣ ಬಹಳ ಬಡಕಲು ವ್ಯಕ್ತಿ. ಅವನ ವಯಸ್ಸು ಮುವತೈದಿರಬಹುದು. ಚಿಕ್ಕ ಕಣ್ಣುಗಳು ಯಾವಾಗಲೂ ನಿದ್ದೆಯ ಗುಂಗಿನಲ್ಲೋ, ಗಾಢ ಯೋಚನೆಯಲ್ಲೋ ಇರುವಂತೆ ಕಂಡುಬರುತ್ತಿದ್ದವು. ತೇಜಾ ಅವನ ಸೆಲ್ ಅನ್ನು ಪ್ರವೇಶಿಸಿದಾಗ ಅವನು ಚಾಪೆಯಲ್ಲಿ ಉರುಳಿಕೊಂಡಿದ್ದ. ಜೈಲಿನ ಪೇದೆಗೆ ಹೇಳಿ ಒಂದು ಸ್ಟೂಲನ್ನು ತರಿಸಿಕೊಂಡ ತೇಜಾ. ಅವನು ಅದರ ಮೇಲೆ ಕೂಡುತ್ತಿದ್ದಂತೆ ಎದ್ದು ಗೋಡೆಗೊರಗಿ ಕುಳಿತ ಸಿಂಗಣ್ಣ ಬೇಸರದ ದನಿಯಲ್ಲಿ ಕೇಳಿದ.

“ಏನು ಬೇಕು?’

“ಕಾಫಿ ಕುಡಿಯುತ್ತೀಯಾ?” ಅವನ ಮಾತನ್ನು ಕೇಳಿಸಿಕೊಳ್ಳದವನಂತೆ ಕೇಳಿದ ತೇಜಾ. ಅದಕ್ಕೆ ಅವನೇನೂ ಉತ್ತರಿಸಲಿಲ್ಲ. ಮೊದಲೇ ಪೇದಗೆ ಎರಡು ಕಾಫಿಗಳನ್ನು ಕಳುಹಿಸುವಂತೆ ಹೇಳಿ ಬಂದಿದ್ದ ಅವನು, ಗೋಡೆಗಾನಿ ಕುಳಿತ ಸಿಂಗಣ್ಣನನ್ನು ಪರೀಕ್ಷಾತ್ಮಕವಾಗಿ ನೋಡತೊಡಗಿದ. ಅವನಿಗೆ ಯಾವುದೋ ಕಾಯಿಲೆ ಇರುವಂತೆ ಕಂಡುಬರುತ್ತಿತ್ತು.

‘ಡಾಕ್ಟರ್ ಬಂದು ನಿನ್ನ ಪರೀಕ್ಷಿಸಿ ಎಷ್ಟು ದಿನಗಳಾದವು?’ ಮಾತು ಹೇಗೆ ಆರಂಭಿಸಬೇಕೆಂದುಕೊಳ್ಳುತ್ತಾ ಕೇಳಿದ ತೇಜಾ. ಆ ಮಾತು ತನಗೆ ಕೇಳಿಸದವನಂತೆ ಕೇಳಿದ ಸಿಂಗಣ್ಣ.

“ಕಾಫಿ ಏನಾಯಿತು?”

“ಬರುತ್ತದೆ. ನಾ ಕೇಳಿದ ಪ್ರಶ್ನೆಗೆ ಉತ್ತರಿಸು.”

“ಯಾರು ಬಂದು ಪರೀಕ್ಷಿಸಿ ಏನು ಮಾಡುವುದಿದೆ. ಸಾವನ್ನು ಆಹ್ವಾನಿಸುತ್ತಾ ಕುಳಿತಿದ್ದೇನೆ… ಯಾರು ನಿನ್ನ ಕಳಿಸಿದ್ದು?” ತನ್ನ ಸಾವು ಹತ್ತಿರದಲ್ಲೇ ಇದೆ ಎಂಬಂತೆ ಧ್ವನಿಸಿತು ಅವನ ಮೊದಲ ಮಾತು. ಪ್ರಶ್ನೆಯಲ್ಲಿ ಆಸಕ್ತಿ ಹೊಂಚು ಹಾಕಿತ್ತು.

“ಕಲ್ಲಕ್ಕ” ಎಂದ ತೇಜಾ ಅವನ ಮುಖಭಾವವನ್ನೇ ಪರೀಕ್ಷಿಸತೊಡಗಿದ. ಅವನ ದೇಹದಲ್ಲಿ ಒಮ್ಮೆಲೆ ಎಲ್ಲಿಲ್ಲದ ಚೇತನ ಬಂದಂತೆನಿಸಿತು. ಚಾಪೆಯ ಇನ್ನೂ ಮೇಲೆ ಸರಿದು ಸರಿಯಾಗಿ ಕುಳಿತ.

ಕಲ್ಲಕ್ಕನಿಗೆ ಸಾವಿಲ್ಲ! ಅವರು ಯಾರನ್ನಾದರೂ ನನ್ನ ಸಹಾಯಕ್ಕೆ ಕಳಿಸುತ್ತಾರೆಂದು ಗೊತ್ತಿತ್ತು… ನೀವು ಯಾರು?” ಅವನ ಮಾತಿನ ಧೋರಣೆ ಒಮ್ಮೆಲೆ ಬದಲಾಗಿತ್ತು. ಮುಖದಲ್ಲೂ ಒಂದು ಬಗೆಯ ಉತ್ಸಾಹದ ಭಾವ. ಬಲಹೀನತೆಯ ಕಾರಣ ಇವನ ಮನಸ್ಥಿತಿಗೇನಾದರೂ ಆಗಿರಬಹುದೇ ಎಂಬ ಅನುಮಾನ ಬಂತು. ಮುಖದ ಮೇಲಿಂದ ನೋಟ ಸರಿಸದೇ ಅವನನ್ನು ಪರೀಕ್ಷಿಸುವಂತಹ ದನಿಯಲ್ಲಿ ಕೇಳಿದ

“ನಾನ್ಮಾರಿರಬಹುದು ಊಹಿಸು ನೋಡುವ?”

“ಪೋಲೀಸಿನವರೇ! ಇನ್ಯಾರಿರುತ್ತೀರಿ?” ತಕ್ಷಣ ಬಂತವನ ಉತ್ತರ.

“ಪೋಲೀಸಿನವರತ್ತಿ… ಕಲ್ಲಕ್ಕ ಹೇಳಿದರೆ ನಿನಗ್ಯಾಕೆ ಸಹಾಯ ಮಾಡಬೇಕು”

ಅದೇ ಧೋರಣೆಯಲ್ಲಿ ಕೇಳಿದ ತೇಜ. ಅವನ ಮಾತು ಮುಗಿಯುತ್ತಿದ್ದಂತೆ ವಿಚಿತ್ರ ನಗೆ ನಕ್ಕ ಕ್ರಾಂತಿಕಾರಿ ಬಡಕಲು ಸಿಂಗಣ್ಣ. ನಕ್ಕಾಗ ಅವನ ಕಣ್ಣುಗಳು ಮುಚ್ಚಿಕೊಂಡುಹೋದಂತೆ ಕಂಡವು. ಹುಚ್ಚಿನ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ ಎನಿಸಿತು ತೇಜಾನಿಗೆ. ನಗುವನ್ನು ಬಲವಂತವಾಗಿ ಎಂಬಂತೆ ನಿಲ್ಲಿಸಿ ಕೇಳಿದ.

“ಅದು ನೀನೇ ಹೇಳಬೇಕು.”

ಅದಕ್ಕೇನೂ ಉತ್ತರಿಸದೇ ಅವನ ಚಲನವಲನಗಳನ್ನೇ ಗಮನಿಸುತ್ತಿದ್ದ. ನಗೆ ಮಾಯವಾದ ಮುಖದಲ್ಲಿ ಒಂದು ತರಹದ ನಿರ್ಭಾವುಕ ಭಾವ ಬಂತು. ಕಣ್ಣುಗಳನ್ನು ನೋಡುತ್ತಿದ್ದ ತೇಜಾನಿಗೆ ಇವನು ಕುರುಡನಾಗಿರಬಹುದೇ ಎಂಬ ಅನುಮಾನ ಬಂತು ತೇಜಾನಿಗೆ. ಹಲವು ಕ್ಷಣಗಳು ಹಾಗೇ ಸಲಾಕೆಗಳ ಹಿಂದೆ ನೋಡುತಿದ್ದ ಅವನು ಒಮ್ಮೆಲೇ ಏನೋ ನೆನಪಾದಂತೆ ಕೇಳಿದ.

“ಕಾಫಿ ಏನಾಯಿತು?’

“ಅವಸರ ಬೇಡ, ಬರುತ್ತದೆ” ಸಮಾಧಾನಪಡಿಸುವಂತಹ ದನಿಯಲ್ಲಿ ಹೇಳಿದ ತೇಜ.

ಕಲ್ಲಕ್ಕ ಹೇಳಿದಂತೆ ಕೇಳಿ ಇಲ್ಲದಿದ್ದರೆ ಅವರು ಹೇಳಿದಂತೆ ಮಾಡುತ್ತಾರೆ ಯಾರನ್ನೂ ಉಳಿಸುವುದಿಲ್ಲ.” ಕಾಫಿಯನ್ನು ಮರೆತು ಹಿತೋಪದೇಶ ಮಾಡುತ್ತಿರುವಂತಹ ದನಿಯಲ್ಲಿ ಹೇಳಿದ ಸಿಂಗಣ್ಣ.

“ಕಲ್ಲಕ್ಕ ಅಷ್ಟು ಕೆಟ್ಟವಳೆ?” ಇದೇ ಸಮಯ ಉಪಯೋಗಿಸಬೇಕೆಂದುಕೊಂಡು ಕೇಳಿದ ತೇಜಾ.

“ಮರ್ಯಾದೆ ಇಂದ ಅವರ ಹೆಸರು ಎತ್ತಿರಿ!… ಅವರು ಎಷ್ಟು ಕೆಟ್ಟವರೋ ಅಷ್ಟೇ ಒಳ್ಳೆಯವರು. ಅವರು ಒಳ್ಳೆಯವರಲ್ಲದಿದ್ದರೆ ನಿಮ್ಮನ್ನು ಇಲ್ಯಾಕೆ ಕಳುಹಿಸುತ್ತಿದ್ದರು” ಮೊದಲ ಮಾತನ್ನು ಆಜ್ಞೆಯಂತೆ ಎರಡನೇಯದನ್ನು ಕಲ್ಲಕ್ಕನ ಮೇಲಿನ ಗೌರವವನ್ನು ವ್ಯಕ್ತಪಡಿಸುತ್ತಿರುವಂತೆ ಧ್ವನಿಸಿತ್ತವನ ಮಾತು.

“ಕಲ್ಲಕ್ಕನ ತಂಡದವರ ಬಳಿ ಎಂತೆಂಥಹ ಆಯುಧಗಳಿವೆ?” ಅವನ ಮಾತು ಮುಗಿಯುತ್ತಲೆ ಇನ್ನೊಂದು ಪ್ರಶ್ನೆ ಹಾಕಿದ. ಅವನ ಮಾತು ಮುಗಿಯುತ್ತಿದ್ದಂತೆ ನಗೆ ಆರಂಭಿಸಿದ ಸಣಕಲು ಸಿಂಗಣ್ಣ. ಆ ನಗೆಯಿಂದ ಅವನ ದೇಹದ ಎಲ್ಲಾ ಅಂಗವೂ ನಡುಗುತ್ತಿರುವಂತೆ ಕಂಡುಬಂತು. ಸಹನೆಯಿಂದ ಅವನ ದೀರ್ಘ ನಗು ನಿಲ್ಲುವವರೆಗೂ ಸುಮ್ಮನಿದ್ದ ತೇಜಾ, ಅವನ ಈ ನಗುವಿಗೆ ಕಾರಣ ಪೋಲೀಸಿನವರು ಕೊಟ್ಟ ಹಿಂಸೆ ಇರಬಹುದೇ ಎನಿಸಿತು. ಮಾತಾಡಿದಾಗ ಸೆಲ್‌ನ ಹೊರಗೇ ಇತ್ತವನ ನೋಟ.

“ಆಯುಧಗಳು… ಆಯುಧಗಳು ತಗೊಂಡೇನು ಮಾಡುತ್ತಿರಿ!… ಇಲ್ಲಿ… ಇಲ್ಲಿ… ಇಷ್ಟು ಆಯುಧಧಾರಿ ಕಾವಲುಗಾರರಿದ್ದರೂ ಈ ಜೈಲಿನಿಂದ ಪಾರಾಗುವುದು ಕಷ್ಟವೆಂದುಕೊಂಡಿರಾ. ಇಲ್ಲಾ… ಕಷ್ಟವಲ್ಲ… ಮನಸು ಮಾಡಿದರೆ ಅದು ಬಹು ಸುಲಭ ಅದಕ್ಕೆ ಬುದ್ದಿ ಬೇಕು. ಆಯುಧಗಳು ಬೇಕಾಗಿಲ್ಲ. ಕಲ್ಲಕ್ಕನ ಬಳಿ ಅದಿದೆ ಅಪಾರವಾದ ಬುದ್ಧಿಶಕ್ತಿ. ಅದರೆದುರು ಯಾವ ಆಯುಧವೂ ಕೆಲಸ ಮಾಡಲಾರದು”

ಒಂದೇ ಉಸಿರಿನಲ್ಲಿ ಎಂಬಂತೆ ಮಾತಾಡಿದ್ದ ಸಿಂಗಣ್ಣ, ಸಾಯುವಂತೆ ಬಡಕಲಾಗಿರುವ ಅವನ ಕಂಠ ಬಹಳ ದೊಡ್ಡದಾಗಿತ್ತು. ಇವನಿಂದ ಏನು ವಿಷಯಗಳು ಸಂಗ್ರಹಿಸಲು ಸಾಧ್ಯ ಎಂದು ತೇಜಾ ಯೋಚಿಸುತ್ತಿದ್ದಾಗ ಹುರುಪಿನ, ಸಂತಸದ ದನಿಯಲ್ಲಿ ಕೂಗಿದ ಸಿಂಗಣ್ಣ.

“ಕಾಫಿ… ಕಾಫಿ… ಕಾಫಿ ಬಂತು ಕಾಫಿ.”

ಚಿಕ್ಕ ಮಕ್ಕಳಂತಹ ಅವನ ಚೀತ್ಕಾರಕ್ಕೆ ಹಿಂತಿರುಗಿದ ತೇಜಾ, ಸೆಲ್‌ನ ಬೀಗ ತೆಗೆಯುತ್ತಿದ್ದ ಪ್ರಹರಿಯ ಹೆಗಲಿಗೆ ಪ್ಲಾಸ್ಕು ನೇತಾಡುತ್ತಿತ್ತು. ಸಲಾಕೆಗಳ ಬಾಗಿಲನ್ನು ನೂಕಿ ಕೆಳಗಿಟ್ಟ ಎರಡು ಕಪ್ಪುಗಳನ್ನೂ ತೆಗೆದು ಅವರ ಹತ್ತಿರ ಬಂದ. ಅವನು ಕಪ್ಪುಗಳಲ್ಲಿ ಕಾಫಿ ಹಾಕುತ್ತಿರುವಾಗ ಕೇಳಿದ ತೇಜಾ-

“ಇವನ ತಲೆ ಸರಿಯಾಗಿದೆ ತಾನೆ?”

“ಸರಿಯಾಗಿಲ್ಲದೇ ಎನ್ ಸರ್! ನಾಟಕವಾಡುತ್ತಾನೆ ನಾಟಕ. ಈಗಾಗಲೇ ಎರಡು ಸಲ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ನಮ್ಮ ಅದೃಷ್ಟ ಚೆನ್ನಾಗಿತ್ತು ಸಿಕ್ಕಿಬಿದ್ದ” ಸಿಟ್ಟಿನ, ಎತ್ತರದ ದನಿಯಲ್ಲಿ ಹೇಳಿದ ಆ ಪ್ರಹರಿ, ಅವನ ಮಾತು ಮುಗಿಯುತ್ತಲೇ ಮತ್ತೆ ತನ್ನದೇ ನಗುವನ್ನು ನಗಲಾರಂಭಿಸಿದ ಸಿಂಗಣ್ಣ. ಅದು ನಿಲ್ಲುವುದೇ ಇಲ್ಲವೇನೋ ಎಂಬಂತೆ ಸಾಗಿದಾಗ ಬೂಟುಗಾಲಿನಿಂದ ಅವನನ್ನು ಒದ್ದು ಹೇಳಿದ ಜೈಲಿನ ಪೇದೆ.

“ಬಾಯಿ ಮುಚ್ಚು ಬೋಳಿಮಗನೆ! ಮುಚ್ಚು ಬಾಯಿ! ಬಹಳವಾಯಿತು ನಿನ್ನ ನಾಟಕ.”

ಆ ಒದೆಯ ಪರಿಣಾಮವಾಗಿಯೋ, ಅವನ ಆಗಿನ ಮನಸ್ಥಿತಿಯ ಕಾರಣವಾಗಿಯೋ ಸಿಂಗಣ್ಣ ನಗೆ ನಿಲ್ಲಿಸಿ ಹೇಳಿದ.

“ಹೌದು! ಎಲ್ಲರೂ ನಾಟಕವಾಡುತ್ತಿದ್ದಾರೆ. ಹಣದ ಬಲದಿಂದ ಹುಟ್ಟಿದ ನಾಟಕ. ತಮ್ಮ ತಮ್ಮ ಖುಷಿಗಳ ಸಲುವಾಗಿ ಬಡವರನ್ನು ಇಷ್ಟಬಂದಂತೆ ಕುಣಿಸಿ, ಕುಣಿಸಿ ನಾಟಕವಾಡುತ್ತಿದ್ದಾರೆ. ಈ ನಾಟಕ ಹೆಚ್ಚು ದಿನ ನಡೆಯುವುದಿಲ್ಲ. ಅದರ ಕೊನ ಸಮೀಪಿಸುತ್ತಿದೆ. ತೀರಾ ಸಮೀಪ.”

ಬಹು ನಾಟಕೀಯವಾಗಿ ಒಬ್ಬ ನಟನಂತ ಕೈಗಳನ್ನು ಆಡಿಸುತ್ತಾ, ಮುಖದ ಹಾವಭಾವಗಳನ್ನು ಬದಲಾಯಿಸುತ್ತಾ ಮಾತಾಡಿದ್ದ ಸಿಂಗಣ್ಣ.

“ಮೊದಲಿದನ್ನು ಕುಡಿ” ಎಂದು ಅವನ ಮುಖದೆದುರು ಕಾಫಿಯ ಕಪ್ಪನ್ನು ಹಿಡಿದ ಜೈಲಿನ ಪ್ರಹರಿ, ಮತ್ತೆ ಒಮ್ಮೆಲೆ ಅವನ ಮುಖಭಾವ ನಾಟಕೀಯ ಪರಿವರ್ತನೆ ಹೊಂದಿತು. ನಡುಗುವ ಎರಡೂ ಕೈಗಳಿಂದ ಕಪ್ಪನ್ನು ತೆಗೆದುಕೊಂಡು ಬಿಸಿಬಿಸಿ ಕಾಫಿಯನ್ನು ನೀರಿನಂತೆ ಗಟಗಟನೆ ಕುಡಿದು ಮುಗಿಸಿ ಕಪ್ಪನ್ನು ಕೆಳಗಿಟ್ಟ, ತನ್ನ ಕಪ್ಪಿನಲ್ಲಿದ್ದ ಒಂದು ಗುಟುಕು ಕಾಫಿ ಕುಡಿದ ತೇಜಾ ಒಬ್ಬ ಇಷ್ಟು ನಟನೆ ಮಾಡಲು ಸಾಧ್ಯವೇ ಎಂದು ಯೋಚಿಸುವಂತಾಯಿತು. ಆಗ ತಾನು ಸೆಲ್‌ನಲ್ಲಿ ಬಂದಾಗ ಅವನಾಡಿದ ಮೊದಲಮಾತು ನೆನಪಾಯಿತು. ಒಂದು ವೇಳೆ ನಟನೆಯೇ ಇದ್ದರೆ ಇಂತಹ ನಟನೆ ಏಕೆಂಬ ಆಶ್ಚರ್ಯ. ತಾನೂ ಕಾಫಿಯನ್ನು ಕುಡಿದು ಇನ್ನೂ ಅಲ್ಲೇ ನಿಂತಿದ್ದ ಪ್ರಹರಿಗೆ ಕಪ್ಪನ್ನು ಹಿಂತಿರುಗಿಸುತ್ತಾ ಕೇಳಿದ

“ಅವನ ಕೈಗಳು, ದೇಹ ಇಷ್ಟೇಕೆ ನಡುಗುತ್ತಿದೆ?”

“ಅದು ನಾಟಕ ಸರ್! ಅವನಿಗೇನೂ ಆಗಿಲ್ಲ, ನೀವು ಹುಶಾರಾಗಿರಿ. ಅವನು ಏನು ಬೇಕಾದರೂ ಮಾಡಬಹುದು.” ತೇಜಾನನ್ನು ಎಚ್ಚರಿಸುವಂತೆ ಹೇಳಿ ಹೊರಹೋದ ಪ್ರಹರಿ ಮತ್ತೆ ಸೆಲ್‌ಗೆ ಬೀಗ ಹಾಕಿದ. ಅವನು ಕಣ್ಮರೆಯಾಗುತ್ತಲೆ ಸಿಟ್ಟಿನ ಆವೇಶದ ದನಿಯಲ್ಲಿ ಮಾತಾಡತೊಡಗಿದ ಸಿಂಗಣ್ಣ, ಅವನ ಮುಖ ಭಾಗದಲ್ಲಿ ಮತ್ತೊಮ್ಮೆ ಇನ್ನೊಂದು ನಾಟಕೀಯ ಬದಲಾವಣೆಯಾಗಿತ್ತು.

“ಹೌದು! ಹುಷಾರಾಗಿರಿ! ಎಲ್ಲರೂ ಹುಷಾರಾಗಿರಿ! ಬಡಬಗ್ಗರನ್ನು ಗುಲಾಮರಂತೆ, ಸಾಕುನಾಯಿಗಳಂತೆ ಉಪಯೋಗಿಸಿಕೊಳ್ಳುತ್ತಿರುವ ಎಲ್ಲರೂ ಸಾಯುತ್ತೀರಿ! ಹುಷಾರಾಗಿರು ನೀನೂ ಸಾಯುತ್ತಿ!”

ಮಾತು ಮುಗಿಯುತ್ತಿದ್ದಂತೆ ತಲೆಯನ್ನು ತೇಜಾನ ಕಡೆ ತಿರುಗಿಸಿದ. ಅವನ ಚಿಕ್ಕ ಕಣ್ಣುಗಳು ಇನ್ನೂ ಚಿಕ್ಕವಾದಂತೆ ಕಂಡವು. ಅವನ ಮಾತಿನ ಧೋರಣೆಗೆ ಚಕಿತನಾದಂತೆ ಕೇಳಿದ ತೇಜಾ,

“ನಾನ್ಯಾಕೆ ಸಾಯುತ್ತೀನಿ?”

ಆ ಮಾತು ಮುಗಿಯುತ್ತಿದ್ದಂತೆ ಮಿಂಚಿನ ಗತಿಯಲ್ಲಿ ಚಾಪೆಯಿಂದ ಎದ್ದ ಸಿಂಗಣ್ಣ ತೇಜಾನ ಕೋಟಿನ ಕಾಲರನ್ನು ಎರಡೂ ಕೈಗಳಿಂದ ಹಿಡಿದು ಎಳೆದು ತನ್ನ ತಲೆಯಿಂದ ಅವನ ಮುಖವನ್ನು ಜಜ್ಜಲು ಹೋದ, ತೇಜಾನ ಬಲಗೈ ಅವನ ಕುತ್ತಿಗೆಯ ಮೇಲೆ ಬಂತು. ಸಿಂಗಣ್ಣನ ತಲೆಯನ್ನು ದೂರವಿಡಲು ಅವನು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಬೇಕಾಯಿತು. ಈ ಸಣಕಲ ವ್ಯಕ್ತಿಯ ಬಳಿ ಇಷ್ಟು ಶಕ್ತಿ ಇರಬಹುದೆಂದು ಯಾರೇ ಆಗಲಿ ಊಹಿಸುವುದೂ ಅಸಾಧ್ಯ. ಕಾಲರಿನ ಮೇಲಿಂದ ಕೈ ತೆಗೆದ ಸಿಂಗಣ್ಣ ಅವನ ಹೊಟ್ಟೆಗೆ ಗುದ್ದಲು ಹೋದಾಗ ಅವನನ್ನು ದೂರ ನೂಕಿ ಸೊಂಟದ ಮೇಲೆ ಬಲವಾಗಿ ಒದ್ದ, ತೂರಾಡುತ್ತಾ ಹೋದ ಅವನು ಸೆಲ್‌ನ ಗೋಡೆಯ ಆಸರೆ ಪಡೆದ. ಕೋಟನ್ನು ಸರಿಮಾಡಿಕೊಳ್ಳುತ್ತಾ ತೇಜಾ ದಿಗ್ಬ್ರಾಂತಿಯಿಂದ ಅವನನ್ನೇ ನೋಡುತ್ತಿದ್ದಾಗ ಕೋಪಾವೇಶದ ದನಿಯಲ್ಲಿ ಹೇಳಿದ ಸಿಂಗಣ್ಣ.

“ನೀನು ಮೊದಲು ಸಾಯುತ್ತಿ! ಯಾಕೆಂದರೆ ಕಲ್ಲಕ್ಕನನ್ನು ಹುಡುಕಲು ಹೊರಟಿರುವಿ! ಅದಕ್ಕೆ ಮೊದಲು ಸಾಯುತ್ತಿ!”

ಅವನ ಹುಚ್ಚು ಆವೇಶವನ್ನು ಹೋಗಲಾಡಿಸಲೆಂಬಂತೆ ಸಮಾಧಾನದ ದನಿಯಲ್ಲಿ ಅವನಿಗೆ ತಿಳಿಹೇಳುವಂತೆ ಹೇಳಿದ ತೇಜಾ.

“ಅಷ್ಟು ಆವೇಶ ಬೇಡ! ಸಮಾಧಾನ ಮಾಡಿಕೋ! ನಾ ನಿಮ್ಮ ಕಲ್ಲಕ್ಕನನ್ನು ಹುಡುಕಲು ಹೊರಟಿಲ್ಲ.”

“ಇಂತಹ ನಾಟಕಗಳನ್ನು ನಾ ಬಹಳ ನೋಡಿದ್ದೇನೆ! ತೊಲಗಿಲ್ಲಿಂದ, ತೊಲಗು” ಅಬ್ಬರಿಸಿದ ಕ್ರಾಂತಿಕಾರಿ ಸಣಕಲು ಸಿಂಗಣ್ಣ, ಅವನ ದೇಹದ ಯಾವ ಅಂಗದಲ್ಲೂ ಈಗ ಸ್ವಲ್ಪವೂ ನಡುಕವಿರಲಿಲ್ಲ. ಆ ಗದ್ದಲ ಕೇಳಿದ ಜೈಲಿನ ಪ್ರಹರಿ ಆಗಲೇ ಲಗುಬಗೆಯಿಂದ ಬೀಗ ತೆಗೆದು ಒಳಬಂದಿದ್ದ. ಅವನು ಏನು ಮಾಡಬಹುದು ಎಂದು ತೇಜಾ ಯೋಚಿಸುತ್ತಿರುವಾಗಲೇ ಗೋಡೆಗಾನಿ ನಿಂತ ಸಿಂಗಣ್ಣನ ಮುಖಕ್ಕೆ ಬಲವಾಗಿ ಗುದ್ದಿ ಹೇಳಿದ.

“ಮಲಗು… ಮಲಗು… ಬೋಳಿಮಗನೇ ದಿನ ದಿನಕ್ಕೆ ನಿನ್ನ ಸೊಕ್ಕು ಹೆಚ್ಚಾಗುತ್ತಿದೆ.”

ಅದಕ್ಕೆ ಪ್ರತಿಯಾಗಿ ಹೊಡೆಯದೇ ಅಬ್ಬರಿಸಿದ ಸಿಂಗಣ್ಣ.

“ಹೊಡೆಯಿರಿ! ಎಷ್ಟು ಹೊಡೆಯುತ್ತೀರೋ ಹೊಡೆಯಿರಿ! ನಮ್ಮನ್ನೆಲ್ಲಾ ಒಂದೇ ಕಡೆ ಸೇರಿಸಿ ಮುಗಿಸಿಬಿಡಿ! ನಿಮ್ಮಗಳ ಪೀಡೆ ತೊಲಗುತ್ತದೆ.”

ಅವನ ಆ ಅಬ್ಬರ ರೋಧನದಂತೆ ಧ್ವನಿಸಿತು. ಅಲ್ಲಿ ನಿಲ್ಲಲು ಮನಸಾಗದೇ ಸೆಲ್‌ನಿಂದ ಹೊರಬಿದ್ದ ತೇಜಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ತನ
Next post ಚಿತೆಗೇರಲಿಲ್ಲ ಹೂವುಗಳು

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…