ಪತ್ರ – ೮

ಪತ್ರ – ೮

ಪ್ರೀತಿಯ ಗೆಳೆಯಾ,

ಈ ದಿನ ಮನಸ್ಸಿಗೆ ಹೇಳಲಾಗದ ಖಿನ್ನತೆ, ಹೋದ ವರ್ಷ ಇಡೀ ವರ್ಷ ಕುತ್ತಿಗೆಯ ನೋವು, ಅಕ್ಕತಂಗಿಯರ ಆಪರೇಶನ್ಸ್, ನೆರೆಹಾವಳಿ, ಬದುಕುವ, ಸಾಯುವ, ನೋಟುವ ಎಲ್ಲಾ ಕ್ಷಣಗಳ ಹತ್ತು ಕಥೆಗಳಲ್ಲಿ ಕ್ರೋಡಿಕರಿಸಿ ಸಂಪಾದಕರಿಗೆ ಕಳುಹಿಸಿಕೊಟ್ಟಿದೆ. ಭರವಸೆಯ ಮೂಟೆಗಳು ಹರಿದು ಬಂದು, ಇವು ನೊಂದಬೆಂದ ನಮ್ಮಗಳ ಬದುಕಿನ ಮೆಟ್ಟಿಲುಗಳಾಗುತ್ತವೆ ಅಂತ ದಿನಾಲೂ ಕನಸು ಕಾಣುತ್ತಿದ್ದೆ. ಈ ದಿನ ಆಮಂತ್ರಣ ಪತ್ರಿಕೆ ನೋಡಿದ ತಕ್ಷಣ ತುಂಬ ಖೇದ ಆಯ್ತು. ಕೊನೆಯ ಕ್ಷಣಗಳವರೆಗೆ ಭರವಸೆ ಇಟ್ಟ ಮನಸ್ಸಿಗೆ ಬಹಳ ನೋವು ಆಯ್ತು. ಅಲ್ಲಿ ಪ್ರಭಾವಿ ರಾಜಕಾರಣಿಯ ಹಸ್ತಗಳಿವೆ ಅಂತ ನನಗೆ ಖಾತರಿಯಾಯ್ತು. ಈಗ ಶ್ರಾವಣದ ತೇಲುವ ಮೋಡಗಳ ನೋಡುತ್ತ ಈ ದುಗುಡ ಖಿನ್ನತೆಗಳು ನಿನಗೆ ರವಾನಿಸುತ್ತಿದ್ದೇನೆ. ಒಮ್ಮೊಮ್ಮೆ ಅನಿಸುತ್ತದೆ ನಮ್ಮ ಬರೆಯುವ ಸ್ವಾತಂತ್ರ್ಯ, ನಮ್ಮತನ, ಯಾರಾರೋ ಕೈಯಲ್ಲಿ ದುರುಪಯೋಗ ಆಗುತ್ತಿದೆಯೇ ಎಂದು? ಇದು ಕಾಲನ ಓಟ, ನೈತಿಕ ಅಧಃಪತನ ಪ್ರಜಾಪ್ರಭುತ್ವದ ಮತ್ತೊಂದು ಮುಖವೂ ಆಗಿದೆ ಎಂಬ ಸಂದೇಹ ಕಾಡುತ್ತದೆ. ಆದರೆ ಗೆಳೆಯಾ ವಿಚಾರ ಸ್ವಾತಂತ್ರವೇ ನಮ್ಮ ಆತ್ಮದ ಜೀವರಸ. ಅದು ವ್ಯಕ್ತಿಗಳ ಬೆಳವಣಿಗೆ ಇರುವ ಸಮಾನ ಅವಕಾಶ, ಬಡವರಿಗೆ ಸ್ವಾತಂತ್ರ್ಯ ಇರುವ ಒಂದೇ ಒಂದು ಸ್ಥಳವೆಂದರೆ ಅವರ ಮನೆ. ಇನ್ನೂ ತುಂಬಾ ಬರೆದುಕೊಂಡೇ ಇರಬೇಕು ಅನಿಸುತ್ತದೆ. ಆದರೆ ಆಯುಸ್ಯ ಬೇಕಲ್ಲ. ಅದಕ್ಕಾಗಿ ಸ್ವಲ್ಪ ಕಲುಕಿದೆ ಮನಸ್ಸು. ಮತ್ತೆ ಗೆಳೆಯಾ ನೀನು ಮೇಲಿಂದ ಮೇಲೆ ಹಾರಾಟ ನಡೆಸುವ ನೀಲಿ ಆಕಾಶದ ಮೋಡಗಳ ನಡುವೆ ನನ್ನದೊಂದು ಪುಟ್ಟ ಹಕ್ಕಿ ಹಾಡು ನಿನಗೆ ಕೇಳಿಸಬೇಕೆನಿಸುತ್ತದೆ. ಹೊಂಗನಸು ಕಳೆದು ಹೋದರೂ ಮತ್ತೆ ನಿನ್ನಂಥವರ ಸ್ನೇಹದಲ್ಲಿ ಅವುಗಳನ್ನು ಹುಟ್ಟು ಹಾಕಬಲ್ಲೆ. ವಿಶಾದಕ್ಕೊಂದು ವಿಷಯ ಸೂಚನೆ ನಿನ್ನಿಂದ ಬಂದೊಡನೆ ಮತ್ತೆ ಬರೆಯಲು ಪೆನ್ನು ಹಿಡಿದು ರೆಡಿಯಾಗುತ್ತೇನೆ.

ನಾವಿನ್ನೂ ಹಸಿವು, ಬಡತನಗಳಿಗೆ ಅಧಿಕಾರಿ, ರಾಜಕಾರಣಿಗಳಿಗೆ, ಗುಲಾಮರು. ಗಾಂಧಿಯನ್ನು ಕೊಂದ ಬಳಿಕ ಹುಟ್ಟಿದ ಬೆಳವಣಿಗೆ ಭಯ ಹುಟ್ಟಿಸುತ್ತದೆ. ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ವರ್ಗಗಳಿಗೆ ಶೋಷಣೆ, ಉಗ್ರಗಾಮಿಗಳ ಅಟ್ಟಹಾಸ, ನಕ್ಸಲ್ ಬೆಳವಣಿಗೆ, ಜಾತಿ ಮೇಳಗಳು, ಟಾಟಾ ಬಿರ್ಲಾಗಳು, ಬಹು ರಾಷ್ಟ್ರೀಯ ಕಂಪನಿಗಳ ಅಟ್ಟಹಾಸ, ದರೋಡೆಕೋರರ ಅಟ್ಟಹಾಸ, ಅಮಾಯಕರ ಮೇಲೆ ಪೊಲೀಸರ ಲಾಠಿಚಾರ್‍ಜು, ನ್ಯಾಯವನ್ನು ಮಾರುವ ಕೋರ್ಟು ಕಛೇರಿಗಳು ಎಲ್ಲವನ್ನು ನೋಡಿದಾಗ ಅನುಭವಿಸಿದಾಗ ಸ್ವಾತಂತ್ರ್ಯ ಯಾರಿಗೆ ಬಂತು ಗೆಳೆಯಾ? ಪ್ರತಿ ಜೀವಿಗೂ ಸ್ವಚ್ಚಗಾಳಿ ಪರಿಶುದ್ಧವಾದ ನೀರು ಹೊಂದುವುದು ಸ್ವಾತಂತ್ರ್ಯದ ಮೊದಲ ಮೆಟ್ಟಿಲು. ಇದು ದೊಡ್ಡ ಸಂಪತ್ತು, ಇದನ್ನು ಲೂಟಿ ಮಾಡಿದವು, ದೊಡ್ಡ ದುರಂತದ ಸುನಾಮಿ ಎದುರಿಸುವ ಕಾಲ ಇನ್ನು ದೂರ ಇಲ್ಲ. ನಾವು ಎಲ್ಲವನ್ನೂ ಸಂಪೂರ್ಣವಾಗಿ ರಾಜಕೀಯಕ್ಕೆ ಒಪ್ಪಿಸಿ ಗುಲಾಮರಾಗಿ ಬಿಟ್ಟಿದ್ದೇವೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಯಾವ ಸುಲಲಿತ ಬದುಕಿನ ಸೂತ್ರಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ಮೂಲ ಮನುಷ್ಯನಿಗೆ ಇರಬೇಕಾದ ಸಹನೆ ತ್ಯಾಗ ಪರೋಪಕಾರಿ ಗುಣಗಳು, ಕೋಪ ಸ್ವಾರ್ಥ ಇನ್ನೊಬ್ಬರನ್ನು ಬಗ್ಗು ಬಡಿಯುವ ಕೆಟ್ಟ ಚಾಳಿಗಳಾಗಿ ಬೆಳೆಯುತ್ತಿವೆ. ಹೀಗಾಗಿ ದೇಶದ ಎಲ್ಲೆಡೆ ಅಶಾಂತಿ, ನಿರಾಳವಾಗಿ ನಾವು ಕೆಂಪು ಕೋಟೆಯ ಮೇಲೆ ಸ್ವಾತಂತ್ರ್ಯದ ಧ್ವಜವನ್ನು ಹೇಗೆ ಹಾರಿಸೋದು? ಕಾಡಿನಲ್ಲಿ ಹಾರಾಡುವ ಒಂದು ಪಕ್ಷಿಯೂ ಇಂದು ನಮ್ಮ ಕಣ್ಣಿಗೆ ಬೀಳುವದಿಲ್ಲ. ವ್ಯವಧಾನವಿಲ್ಲದ ನಮ್ಮ ಬದುಕಿನ ಶೈಲಿ ನಾವು ನಡೆಯಬೇಕಾದ ಕಿರುದಾರಿಯನ್ನು ನಿರ್ಮಿಸುವುದೇ ಇಲ್ಲ. ಹೆದ್ದಾರಿಯಲ್ಲಿ ನಮ್ಮ ಮನೆ ಇಲ್ಲ. ಓಡುವ ಓಟದ ಸ್ಪರ್ಧೆಯಲ್ಲಿ ನಮ್ಮತನದ ಬೇರುಗಳು ಈ ಮಣ್ಣಲ್ಲಿ ಊರುವುದೇ ಇಲ್ಲ. ಇದಕ್ಕೆ ನಮ್ಮೆಲ್ಲರ ಉನ್ಮಾದವೇ ಕಾರಣ. ಈ ಸ್ಥಿತಿ ಇಳಿಯಬೇಕು. ಇದು ಪ್ರಧಾನದ ಹಾಗೂ ಗೊತ್ತಾಗದ ವೇಗವಾದುದರಿಂದ ನಾವು ಗಾಂಧೀ ತತ್ವದಿಂದ ಎಚ್ಚರಗೊಳ್ಳಬೇಕು. ಯಾಕೆಂದರೆ ಈಗ ಗಾಂಧೀ ಮತ್ತೊಮ್ಮೆ ಹುಟ್ಟಿಬರುವದಿಲ್ಲ ಅವರನ್ನು ನಾವು ಸ್ವಾತಂತ್ರ್ಯ ಸಿಕ್ಕ ಕೂಡಲೇ ಗುಂಡಿಕ್ಕಿ ಕೊಂದಿದ್ದೇವೆಯಲ್ಲ.

ಆಕಾಶವನ್ನು ಮೋಡಗಳನ್ನು ನೋಡುತ್ತ ಕುಳಿತಾಗ ನನಗೆ ಅಗಣಿತ ಪ್ರಶ್ನೆಗಳು ಕಾಡುತ್ತವೆ. ಭೂಮಿಯನ್ನು ಹುರಿದು ಹುಣಬೀಜ ಮಾಡಿದ ನಾವು ಇನ್ನು ಈ ನೀಲ ಆಕಾಶವನ್ನು ಹೀಗೇಕೆ ಕೈ ಹಚ್ಚದೇ ಬಿಟ್ಟಿದ್ದೇವೆ ಅಂತ ಅನಿಸಿಕೊಂಡರೆ ಮತ್ತೆ ಯುದ್ದ ವಿಮಾನಗಳು, ನಾಗರೀಕ ವಿಮಾನಗಳು, ಅವುಗಳ ಸಹಾಯದಿಂದ ಮನುಕುಲದ, ಅಮಾಯಕರ ನಾಶಮಾಡುವ ಮನಸ್ಸುಗಳು, ಸುರಿಯುವ ಬಾಂಬುಗಳು, ಉಗ್ರರ ಚಟುವಟಿಕೆಗಳು, ದೌರ್ಬಲ್ಯದ ದುರುಪಯೋಗ ಪಡಿಸಿಕೊಳ್ಳುವ ರಾಷ್ಟ್ರನಾಯಕರು, ಎಲ್ಲವೂ ಕಗ್ಗಂಟಾಗಿ ಉಸಿರು ಕಟ್ಟಿಸುತ್ತದೆ. ಗಡಿನಾಡಿ ನೀಲಬಾನತುಂಬ ಹಾರುವ ಹಕ್ಕಿಗಳಿಗೂ ನಿರ್ಬಂಧನೆ ಬಂದರೆ ಬಂದೀತು ಒಂದು ದಿನ, ಬಾವುಟ ಬಿಳಿಕಾರುಗಳು ಭೋ ಪರಾಕುಗಳ ಮಧ್ಯೆ ಕೊಳೆತ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ರೋಡಿಗೆ ಸುರಿದು ಮೋರೆ ಮುಸುಡಿ ಬಾಡಿದ ರೈತರ ಬೆವರುಗಳಿಗೆ, ಪೈಸೆಯಷ್ಟು ಕಿಮ್ಮತ್ತಿಲ್ಲ. ಎಲ್ಲ ಎದೆಗುದಿಗಳು, ಮನಸ್ಸಿನ ನಿರಾಳತೆಯನ್ನು ಕಸಿದುಕೊಂಡಿದೆ. ಮಹಾಮಸ್ತಕಾಭಿಷೇಕದಲ್ಲಿ ಪಡೆದುಕೊಂಡು ಕ್ಷಣಗಳನ್ನು ಅವುಗಳ ಶಾಂತಿಯನ್ನು, ಕಾಂತಿಯನ್ನು ಯಾರೂ ಯಾರೊಂದಿಗೂ ಹಂಚಿಕೊಂಡಿಲ್ಲ. ಎಂದಿನಂತಿಲ್ಲ ಈ ದಿನದ ಅಸ್ತಮ. ಸಮಯ ಹೆಜ್ಜೆ ಹೆಜ್ಜೆಗೂ ಮೈ ಒಳಗೆ ಇಳಿಯುವ ಅಂಧಕಾರ ದಣಿವನ್ನು ಹೆಚ್ಚಿಸಿದೆ. ಅನ್ವೇಷಣೆಯ ಹಾದಿಯ ತುಂಬ ಬರೀ ಕಲ್ಲುಗಳು, ಸರಿಲಾಗದ ಕಲ್ಲುಗಳು. ಎಲ್ಲೂ ಸಡಗರ ಸಂಭ್ರಮವಿಲ್ಲದ ಸ್ವಾತಂತ್ರ್ಯದ ಹಬ್ಬ. ಹಕ್ಕಿಗಳಿಗೂ ಕೂಡಾ ರಕ್ಕೆಬಿಚ್ಚಲು ಆತಂಕ, ವೇಷ, ಭಾಷೆ, ಭಾವಗಳ ಅಂತರ. ಎಂದೂ ಒಂದನ್ನೊಂದು ಬೆಸೆಯಲಿಲ್ಲ. ಸ್ವತಂತ್ರ್ಯ ಜೀವನಕ್ಕೆ ಸೋಪಾನ ಎಂದು ತಿಳಿದ ಪ್ರಗತಿಗಳೆಲ್ಲಾ, ತಪ್ಪು ನಿರ್ಧಾರಗಳಿಗೆ ಬಲಿಯಾಗಿವೆ. ಮೋಡಗಳು ಹಾಯಾಗಿ ಗಾಳಿಯೊಡನೆ ತೇಲಲು ಕೂಡಾ ಭಯ ಪಟ್ಟಿವೆ. ಮಳೆಹನಿಗಳು ಇಳಿಗೆ ಬರಬಾರದೆಂದು ಮುಷ್ಕರ ಹೂಡಿವೆ. ಹಿಂದಿನವರು ಕಂಡ ಸ್ವಾತಂತ್ರ್ಯ ಒಂದು ಅದ್ಭುತ ಸಮೂಹಗಾನದಲ್ಲಿ ಅಪಸ್ವರಗಳೇ ತುಂಬಿದ ಜಗದ ದ್ವಂದ್ವಕ್ಕೆ ಯಾವ ಹೆಸರು, ಯಾವ ದಿಕ್ಕು? ಎಲ್ಲಾ ಸಾಧ್ಯತೆಗಳು ಹಿತಗಳನ್ನು ನಾವು ಜೀವನದಲ್ಲಿ ಮಾಡುವ ಸತ್ಕರ್ಮದಲ್ಲಿ ಅಡಗಿವೆ. ಮನಸ್ಸಿಗೂ ಈ ಸರಿ ತಪ್ಪುಗಳ ಕಲ್ಪನೆ ಇದ್ದೇ ಇರುತ್ತದೆ. ಇಲ್ಲಿ ದೇಶದ ನಾಗರೀಕರ ವಿವೇಚನೆಧಾರೆ ಬಹಳ ಮುಖ್ಯ ಅನಿಸುತ್ತದೆ. Citizen ship concept ಬಹಳ ವಿಸ್ತಾರವಾಗಿ ನಾವು ಅರಿಯಬೇಕಾಗಿದೆ. ಹಾಗೆ ವ್ಯಾಪಾರ ವ್ಯವಹಾರದಲ್ಲೂ ನಾವು ಸಮತೋಲನ ಕಾಯ್ದುಕೊಳ್ಳಬೇಕಲ್ಲ.

ಪುಟ್ಟ ಮಕ್ಕಳು ಅಕ್ಕ ಪಕ್ಕ ಕುಳಿತುಕೊಳ್ಳಲು ಹಾಗೂ ತಂದ ತಿಂಡೀ ಡಬ್ಬಿಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಆಕ್ಷೇಪಣೆ ಮಾಡುವ ಪಾಲಕರು, ಮಕ್ಕಳಿಗೆ ಎಂತಹ ರಾಷ್ಟ್ರೀಯ ಭಾವ, ನಾಗರೀಕ ಪ್ರಜ್ಞೆ, ಸಾಮಾಜಿಕ ಕಳಕಳಿ ಕಲಿಸ್ಯಾರು. ಇದು ನಮ್ಮ ಸ್ವಾತಂತ್ರ್ಯದ ಪರಿಕಲ್ಪನೆ. ಯಾರನ್ನು ಯಾರು ನಂಬಿಯಾರು? ಹಾಗೆ ಬರವಣಿಗೆ ಮತ್ತು ಪ್ರಕಾಶನ ನಂಬಿಕೆ ಪ್ರೀತಿ ವಿಶ್ವಾಸ ಕಳೆದುಕೊಂಡ ಮೇಲೆ ಪ್ರೀತಿ ಮತ್ತು ವ್ಯವಹಾರ ಸಂಬಂಧಗಳು ಬರಿಬಾದು ಆಗಿ ಹೋಗ್ತವೆ. ಒಳಹೊರಗೆ ಹೊಯ್ದಾಟವಿದೆ. ದಿಕ್ಕು ಮನಸ್ಸು ಬದಲಾಗುತ್ತಿದೆ. ಮಣ್ಣಿನ ಸೆಳೆತಗಳಿಂದ ವಿಮುಖಹೊಂದುವ ವೇಗದ ಬದುಕಿಗೆ ಲಂಗು ಲಾಗಮು ಇಲ್ಲ. ಸರಿದುಹೋದ ನೋಟ, ಕೂಟ, ವಸ್ತುಗಳು ಎಲ್ಲವೂ ಕಳಪೆ, ಹಿಂದುಳಿದ ಡಸ್ಟಗಳಾಗಿ ಬಿದ್ದಿವೆ.

ಸೂರ್ಯನ ಹೊಂಗಿರಣಗಳ ಮನಿಷಾ ಮತ್ತೆ ವಿಸ್ಮಯಗಳನ್ನು ಹುಟ್ಟುಹಾಕಲಿ. ನಿನ್ನ ಬರವಣಿಗೆಗಳ ಮೂಲಕ, ಎದೆ ಕರಗುವ ದುಗುಡ, ದುಮ್ಮಾನಗಳು ದೂರವಾಗಲಿ. ನಿನ್ನ ಸ್ನೇಹದ ಹಸ್ತಗಳ ಬೆಚ್ಚನೆ ಭವರಸೆಗಳ ಮೂಲಕ, ಅಕ್ಕರೆಯ ಅಕ್ಷರಗಳು ಮತ್ತೆ ಹಸಿರು ಹುಲ್ಲಿನ ಹಾಸಿಗೆ ಹಾಸಲಿ. ಎಲ್ಲ ಮೂಲಗಳಿಂದ ಮುಕ್ತನಾಗುವ ಮುಕ್ತಕಗಳು ನಿನ್ನ ಹಾಡಿನ ಸರದಿಯಲ್ಲಿರಲಿ. ಯಾವುದೋ ಗಡಿರೇಖೆಗಳನ್ನು ಹುಟ್ಟು ಹಾಕದಿರಲಿ ನಿನ್ನ ನಿರ್ವಾಜ್ಯ ಗೆಳೆತನ.

ಸೂರ್ಯ ಚಂದ್ರನನ್ನು, ಮರದ ನೆಲವನ್ನು ಪ್ರೀತಿಸಿದರೆ, ಆಕಾಶ ಹಸಿರಿನತ್ತ ಬಾಗುತ್ತದೆ. ಹಸಿರು ಆಕಾಶವನ್ನು ಚುಂಬಿಸುತ್ತದೆ. ಕ್ಷಿತಿಜದಲ್ಲಿ. ವಸಂತದಲ್ಲಿ ಚಿಗುರಿಗಾಗಿ ಕೋಗಿಲೆ ಹಾಡುತ್ತದೆ. ಶಿಶಿರದಲ್ಲಿ ಚಿಗುರು ಬೆಚ್ಚನೆ ಗೂಡು ನಿರ್ಮಿಸುತ್ತದೆ. ಹೀಗೆ ಗಾಳಿ ಪಟವಾದ ಮನಸ್ಸು ಹಾರಾಡುತ್ತದೆ. ಲಯದ ಹಾಡಿನಲ್ಲಿ ಗೆಳೆತನದ ಚಿಕ್ಕಿಗಳಲ್ಲಿ ನೀನು ಒಳ್ಳೆಯ ಗೆಳೆಯಾ.

ಶಿವಮೊಗ್ಗದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕವಿಸ್ಸಾರರು ಅಧ್ಯಕ್ಷರಾಗಿದ್ದಾರೆ. ಅವರು “ಜೋಗದ ಸಿರಿ”. ಇದು ಸಮಸ್ತ ಕನ್ನಡಿಗರ ಹೃದಯದಲ್ಲಿ, ಶರಾವತಿ ನದಿ ಹರಿದು ತಂಪು ಗೊಳಿಸಿದೆ. ನಿಸ್ಸಾರ ಅಹಮ್ಮದರು ಸಂಪೂರ್ಣ ಕನ್ನಡ ಕವಿ. ತಿಳಿಗೊಳದಲ್ಲಿ ತೇಲಿದ ಕಮಲ. ಅವರ ಆಶಯ ಭಾಷಣದ ಬಗ್ಗೆ ನನಗೆ ಕುತೂಹಲವಿದೆ. ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ತಪ್ಪದೇ ಭಾಗವಹಿಸು. ನಮಗೆ ಕಾಮನಬಿಲ್ಲಾಗಿ ಹಿಡಿಯಲು ಸಿಗದ ಹಿರಿಯ ಲೇಖಕರು, ಸಾಹಿತಿಗಳು, ಬರಹಗಾರರು ಪ್ರಕಾಶಕರು, ಆತ್ಮೀಯರು, ಕವಿಗಳು, ನಾಟಕಕಾರರು, ಸಂಶೋಧಕರು ಊರವರು ವೃತ್ತಿ ಬಾಂಧವರು ಆ ಜಾತ್ರೆಯಲ್ಲಿ ಕಾಣಸಿಗುತ್ತಾರೆ. ಅವಕಾಶ ಸಿಕ್ಕರೆ ಮಾತನಾಡಿಸಲೂ ಬಹುದು. ಇದೇನು ಹುಚ್ಚು ಅನ್ನಬೇಡ, ಸಾಹಿತ್ಯದ ಗುಂಗು ಪ್ರೇರಣೆ ಹಪಹಪಿ ಎಲ್ಲವೂ ಅತಿರೇಕ.

ಹೊಯ್ದಾಡುವ ಮನಸ್ಸಿಗೆ ಶಾಂತಿ ಅರಿಸುವರು ಸಾಹಿತ್ಯ ಸಂಗೀತ ಕಲೆ ಅಂತ ಒಂದೊಂದು ಮಾರ್ಗವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಒಂದು ಘಟನೆಯನ್ನು ಮರೆಯಲು ಅಥವಾ ಅದು ಆ ಕ್ಷಣದಲ್ಲಿ ಹುಟ್ಟು ಹಾಕಿದ ವಿಚಾರಗಳು ತರ್ಕಗಳು, ಖುಷಿ, ಸತ್ಯ, ಆನಂದ, ದುಃಖ ಎಲ್ಲವನ್ನೂ ಒಂದು ಗುಂಗಿನಿಂದ ಹೊರತೆಗೆಯಲು ಕಥೆ, ಕವನ, ಪ್ರಬಂಧ ಪತ್ರ ಎಲ್ಲವೂ ತೇಲುತೆಪ್ಪವಾಗಬಹುದು. ನಮ್ಮ ಲೋಪಗಳು ಕಷ್ಟಗಳು ನಮ್ಮ ಪ್ರತಿಭೆಯನ್ನು ಒರೆಗಲ್ಲು ಹಚ್ಚುತ್ತವೆ.

ಒಂದು ಮಧುರವಾದ ಗೀತೆ, ಒಂದು ಒಳ್ಳೆಯ ಚಿತ್ರ, ಒಂದು ಹಿತವಾದ ವಾಕ್ಯ ನಮ್ಮನ್ನು ಇಡೀ ದಿವಸ ಉಲ್ಲಾಸಿತರನ್ನಾಗಿ ಇಡಬಲ್ಲದು. ಮುದುಡಿದ ನನ್ನ ಮನಸ್ಸಿಗೆ ಈ ದಿನ ಟ್ಯಾಗೋರರ ಗೀತಾಂಜಲಿಯ ಸಾಲುಗಳು ಹಿತನೀಡಿದವು. ನಿನ್ನ ಪುಸ್ತಕದ ಬಿಡುಗಡೆಯ ಕಾರ್ಡು ಬಂತು. ಮನತುಂಬಿ ಬಂತು. ಅಮ್ಮನ ಕೈಯಲ್ಲಿ ಎಳೆಕಂದನ ಪಾದಗಳು ಎಷ್ಟೊಂದು ಬೆಚ್ಚಗಾಗಿವೆ. Classic ಚಿತ್ರ. ಇನ್ನು ಬಹಳ ದಿನಗಳವರೆಗೆ ಆ ಚಿತ್ರದ ಗುಂಗು ನನ್ನನ್ನು ಹಿತವಾಗಿ ಇಡುತ್ತದೆ. ಅದಕ್ಕಾಗಿ ನಿಂಗೆ ತುಂಬು ಮಮತೆಯ ಪ್ರೀತಿ, ಸಂಜೆಗಳು ಹೀಗೆ ಹಿತದಗುಂಗಿನಲ್ಲಿ ಕಳೆಯಲಿ.

ನಿನ್ನ,
ಕಸ್ತೂರಿ
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಕ್ಲೇಸ್
Next post ಧೂಳು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…