ಪ್ರೀತಿಯಾ ಗೆಳೆಯಾ,
ಈ ದಿನ ಶ್ರಾವಣಮಾಸದ ಕೊನೆಯ ಸಂಜೆ ಸುತ್ತೆಲ್ಲಾರಾಡಿ ನೀರು ತುಂಬಿಕೊಂಡು ಕೃಷ್ಣ ಭೀಮೆಯರು, ಮುಟ್ಟಾದ ಹೆಂಗಸರ ಹಾಗೆ ಕಿರಿ ಕಿರಿ ಮಾಡಿಕೊಂಡು ತುಂಬಿ ಹರಿಯುತ್ತಿದ್ದಾರೆ. ಈ ಸಂಜೆ ಸುಮಾರು ನಾಲ್ವತ್ತೆರಡು ವರ್ಷಗಳಿಂದ ದಣಿದ ಮನಸ್ಸುಗಳಿಗೆ, ದುಡಿದ ಕೈಗಳಿಗೆ ಕವಿ ರಾಷ್ಟ್ರಪತಿ, ವಿಶಿಷ್ಟ ಮಣ್ಣಿನೆ ವಾಸನೆ ಸೂಸಿ, ಇಡೀ ರಾಷ್ಟ್ರಕ್ಕೆ ಏಷ್ಯಾದ ಅತಿದೊಡ್ಡ ಅಣೆಕಟ್ಟು ಆಲಮಟ್ಟಿ ಜಲಾಶಯವನ್ನು ಸಮರ್ಪಿಸಿದರು. ತಮ್ಮೆಲ್ಲ ಮೂಲ ಬೇರುಗಳನ್ನು ತ್ಯಾಗಮಾಡಿದ, ಜನರಿಗೆ ಶ್ರಾವಣದ ಎಷ್ಟು ಹಸಿರು ಸಂಜೆಗಳ ಹಾಯಿಯನ್ನು ಎದೆಗೆ ತಾಕಿಸುತ್ತದೆಯೋ ಕಾದು ನೋಡಬೇಕು. ರಾಷ್ಟ್ರಪತಿ ದೇಶಕ್ಕೆ ಸಮರ್ಪಿಸಿದಾಗ ಅಲ್ಲಿ ನೆರೆದವರ ಎದೆಯಲ್ಲಿ ಭೂಮಿಯಲ್ಲಿ ಸ್ಪರ್ಶಕ್ಕೆ ಲಘು ಕಂಪನಗಳು ಹುಟ್ಟಿದವು. ತೆಳುಮೋಡಗಳು ಆಕಾಶದಲ್ಲಿ ತೇಲಿದವು.
ಸಮಶೃತಿಗೊಂಡ ಭೂಮಿ ಹೊಸ ಅನುಭವಕ್ಕೆ ಎದೆ ತೆರೆದುಕೊಂಡು, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾಳೆ. ಎಂತಹ ಘನಹದ, ನಾದದ ಲಯಗಳು. ರಾಷ್ಟ್ರಪತಿಯವರ ಮಾತುಗಳಲ್ಲಿ ವ್ಯಕ್ತವಾಗಿದ್ದವು, ಬದ್ಧತೆ ನಡೆವ ದಾರಿಗಳನ್ನು ದೀಪಗಳನ್ನು ಕಲಾಂರು ತಮ್ಮ ಭಾಷಣದಲ್ಲಿ ನಿರೂಪಿಸಿದ್ದರು. ಬದುಕು ಕಟ್ಟುವ ಸವಿಕನಸುಗಳಿಗೆ ಬಯಲ ಹಸಿರು ಎಷ್ಟು ಮುಖ್ಯ, ಕೊಡುವ ತೆಗೆದುಕೊಳ್ಳುವ ದಿವ್ಯ ಮೌನದಲ್ಲಿ ನಮ್ಮ ಮನೆ ನೆರೆಮನೆ, ರಾಜ್ಯಗಳ ಜನಪದದ ಬದುಕಿಗೆ ಎಂತಹ ಹಾಯಿ ಎಂಬುದನ್ನು, ಸೀಮೆದಾಟಿ ಹರಿದು ಬಂದ ಮಣ್ಣು ಕಸು, ಕಾಳು ಮಳೆ ಮೋಡ ಗಾಳಿ ಹಾಯ್ದು ಸೂಸುವ ಬದುಕಿನ ತುಂತುರುಗಳು ಅಂದಾಗ, ಇಲ್ಲಿ ಅರಳಿದ ಸೂರ್ಯಕಾಂತಿ ಹೂಗಳು, ಖುಷಿಯಿಂದ ಸೀಟಿ ಕೇಕೆ ಹಾಕಿ ನಕ್ಕವು. ದೇಶಿ ಒರತೆಗಳು, ಎಲ್ಲೆಲ್ಲೂ ಹರಿಯುವ ತಿಳಿನೀರ ಊಟೆಗಳು, ಕಣ್ಣುಗಳು ಸೋಲುತ್ತವೆ. ಕಾಮನ ಬಿಲ್ಲಿನ ಬಣ್ಣಗಳ ನೋಡಲು ನಡೆಯಬೇಕು. ನಾನು ನೀವೆಲ್ಲರೂ ಈ ಹಾದಿಗುಂಟ ಕೈಕೈ ಹಿಡಿದು, ಅನುಭವ ಮಂಟಪ ಸೇರಲು ಎಂಬ ಭಾವಗಳು ವ್ಯಕ್ತವಾದಾಗ ಎಲ್ಲರಲ್ಲೂ ಶ್ರಾವಣದ ತುಂತುರು ಮಳೆ ಸುರಿಸಿತು. ಮತ್ತೆ ಎಲ್ಲರ ಕಣ್ಣ ತುಂಬೆಲ್ಲಾ ದೀಪಾವಳಿಯ ನೀಲಾಂಜನಗಳು.
ಗೆಳೆಯಾ ಈ ದಿನದ ನಡುಗೆ ಹಿಂದೆ ನೋಡದ ನಡುಗೆಗಳು. ಇಲ್ಲಿ ಬಯಲು ಭೂಮಿಗೆ ಋತು ಸಂಹಾರ. ಎದೆ ಮೀಟದವಳಿಗೆ ಅಂಗಳದ ತುಂಬೆಲ್ಲಾ ಬರೀ ದುಂಡುಮಲ್ಲಿಗೆ ಮೊಗ್ಗುಗಳು. ಮೊಗ್ಗಿನ ಜಡೆ ಹಾಕಿಕೊಳ್ಳಲು ಸಂಭ್ರಮಿಸಲು ಕಂಪು ಸೂಸಲು ಒಡಲು ತುಂಬುವಳ ಬಸಿರು, ಅರ್ಮೂತದಿಂದ ಮೂರ್ತವಾಗುವ ಚಿಗುರು ಹಸಿರು. ಗೂಡು ಮಾಡು ಎಲ್ಲವೂ ಮೂಡುವ ಕಾತುರ ಕಳವಳ.
ಪ್ರಗತಿಯ ಹಕ್ಕಿ ಹಾರಬೇಕು ಗೆಳೆಯಾ, ರೆಕ್ಕೆ ಬೀಸುತ ಗಗನದಗಲ, ಕಂಡ ಜನರು ಚೆಂದ ಅನ್ನಬೇಕು ಬೆರಗು ಗೊಂಡು, ಉಘೆ ಉಘೆ ಅಂತ ಕೂಗಬೇಕು. ಸಿರಿ ಸಿರಿ ಒಡಲು ತುಂಬಿ ಬಂಡೀ ತುಂಬ ಸಾಮಾನುಗಳು ತುಂಬಬೇಕು. ಎಲ್ಲರ ಬದುಕಿನ ಬಂಕಗಳಿಗೆ ಕಮಾನು ಕಟ್ಟಬೇಕು. ಗುಬ್ಬಿಗಳು ಆರಿಸಿ ತರಬೇಕು ತರಗೆಲೆಗಳ ಗೂಡುಕಟ್ಟಲು, ಕವಿಯ ಎದೆಯ ತುಂಬೆಲ್ಲಾ ಶಬ್ದಗಳ ಊಟಿ ಪುಟಿಯಬೇಕು, ಸಡಗರದ ಕವಿತೆಗಳು ಚಿಗುರಬೇಕು. ಇದು ಸಡಗರದ ಹಬ್ಬ, ಘನೀಕರಿಸಿದ ಲೆಕ್ಕಗಳೆಲ್ಲಾ ಕೂಡಿಸಿ ಕಳೆಯುವದರಲ್ಲಿ ಸರಿಯಾದ ಉತ್ತರ ಸಿಗಬೇಕು. ೧೦,೦೦೦ ಕೋಟಿ ರೂಪಾಯಿಗಳಿಗೆ, ಒಂದು ನಿಗದಿಯಾದ ಕಾರಣ, ಗುರಿ ಮುಟ್ಟುವ ಪರಿಣಾಮ ಎರಡೂ ಕ್ರಿಯೆಗಳನ್ನು, ಕ್ರೀಯಾಶೀಲರನ್ನಾಗಿ ಮಾಡುವ ನೇರದಾರಿಗಳು ಏರುದಿಬ್ಬ, ಹಸಿರು ಬಯಲು, ಕೆಂಪುದಾರಿ, ಕಪ್ಪು ಗುಡ್ಡ, ಕುರಿ, ಆಡು, ದನ, ಬಂಕಕ್ಕೆ ಕಟ್ಟಿದ ಜೋಕಾಲಿಗಳು, ಹರಿದ ಹಳ್ಳ, ತೇಲಿದ ಒಣತರಗೆಲೆಗಳು, ಎಲ್ಲೋ ಅರಳಿದ ಅನ್ನದವಾಸನೆ, ಎದೆಗೆ ಅಮರಿದ ದುಃಖದ ವಾಸನೆ, ಬುದ್ಧನ ಏಕಾಂತ, ಗಾಂಧೀಜಿಯ ಉಪವಾಸ, ರಾಜಧಾನಿಯ ರಣಕಹಳೆ, ಪುಟ್ಟನ ಅಜ್ಜನ ಊರು, ಎಲ್ಲವನ್ನೂ ಪ್ರಗತಿ ಕಾಲ ಮತ್ತು ಕಾಯುವಿಕೆಯಲ್ಲಿ ಮುಟ್ಟಿ ಹಾಕಿದೆ.
ಉಟ್ಟಬಟ್ಟೆ, ಹೊದ್ದ ಹೊದಿಕೆ, ಕುದ್ದ ಅನ್ನ, ಮುಚ್ಚಿದ ಬಾಗಿಲು ಬಿಟ್ಟ ನಿಟ್ಟುಸಿರು, ಗಿರಿಗಿಟ್ಟಿ ಆಟ, ಹರಿದು ಹಾಯ್ದ ಧ್ವನಿಗಳು ಹಾಕಿದ ಫರದೆ, ಎಲ್ಲೋ ಬಸಿದ ನೆನಪುಗಳು, ಎಲ್ಲವನ್ನೂ ಸೃಷ್ಟಿಯ ಒಡಲಿಗೆ ಸುರಿದು ಅಬೋಅಂತ ನಿಂತ ಜನಪದಕ್ಕೆ ಎಷ್ಟು ತಬ್ಬಿಕೊಂಡು ಸಂತೈಸಿದ್ದರೂ ಮಾಯಲಾಗದ ನೋವುಗಾಯ. ರಾಷ್ಟ್ರಪತಿ ಮೆಲ್ಲನೆ ಕನಸುಗಳನ್ನು ಕೃಷ್ಣೆಯಲ್ಲಿ ತೇಲಿಬಿಟ್ಟರು. ತಬ್ಬಾಬ್ಬಾದ ಮನೆಮಂದಿಗೆ ಅಜ್ಜ ದೈರ್ಯ ಹೇಳಿದ ಹಾಗೆ. ಕೃಷಿ ಆರ್ಥಿಕ ಪ್ರಗತಿಗೆ ಹೇಗೆ ದಾರಿತೋರಿಸಿ ಕೊಡ ಬಲ್ಲದು ಅಂತ ಒಂದು ಯೋಜನೆಯ ಸ್ಟ್ರಾಟಜೀ ವಿವರಿಸಿ ಹೇಳಿ ಸಮಾಧಾನಿಸಿದು. ಜನ ಪ್ರತಿನಿಧಿಗಳು ಹಂದಾಡದೇ ಬೀಸುಕಲ್ಲಿಗೆ ಗೂಟ ಬಡಿದವರ ಹಾಗೆ ಕುಳಿತಿದ್ದರು. ಬೆಳಿಗ್ಗೆ ಏಳುವದರೊಳಗೆ ಎಲ್ಲ ತಮ್ಮ ತಮ್ಮ ಮಂತ್ರಿಗಳ ಖುರ್ಚಿ, ಅಧಿಕಾರ ಕಳೆದುಕೊಳ್ಳುತ್ತೇವೋ ಅಂತ ಕುಂಡೆಯಲ್ಲಿ ಕುರು ಆದವರತರಹ ಕುಳಿತಿದ್ದರು. ಕಳಕಳಿ ಮನುಷ್ಯನ ಆಲಾಪ ನಡೆದೇ ಇತ್ತು, ಎಲ್ಲಾ ಪ್ರಲಾಪಗಳ ನಡುವೆ, ಹಡೆದ ತಾಯಿ ತನ್ನ ಕಂದನೆಡೆಗೆ ತೃಪ್ತಿ ಅಂತಃ ಕರಣದಿಂದ ನೋಡಿದ ಹಾಗೆ ನೋಡಿದ ದಿವ್ಯ ಮಾನಶಾಂತಿ ಅವರ ಕಣ್ಣುಗಳಲ್ಲಿದ್ದವು. ಅವರು ಆ ಕಾರ್ಯಕ್ರಮದಿಂದ ಸಂಜೆ ಐದುಮೂವತ್ತಕ್ಕೆ ನಿರ್ಗಮಿಸಿದರು. ಅವರ ನಗೆ ದೇವದೂತನದಾಗಿತ್ತು. ಎಲ್ಲರ ಆತ್ಮದ ಕರೆಗಳನ್ನು ಅವರು ಎದೆಯೊಳಗೆ ಘನೀಕರಿಸಿಕೊಂಡಿದ್ದರು. ಈ ಸಂಜೆಯಲ್ಲಿ ನಕಾಶೆಯಲ್ಲಿನ ಉತ್ತರ ದಕ್ಷಿಣ, ಪೂರ್ವ ಪಶ್ಚಿಮ ಗುಡ್ಡಗಾಡು ಮರಳುಗಾಡು, ಬಯಲು ಸೀಮೆ, ಕರಾವಳಿ ಕಡಲು ಎಲ್ಲವೂ ಒಂದು ಗೂಡಿ ಒಂದು ಹೆರಿಗೆ ಮನೆಯ ನೋವು, ಗಡಿಬಿಡಿ, ಸಡಗರ, ಸಂಭ್ರಮ, ನೀನು ನನ್ನೊಟ್ಟಿಗೆ ಇರಬೇಕಿತ್ತು ಈ ಸಂಜೆ.
ಎಲ್ಲಾ ಕನಸುಗಳನ್ನು ಆಳಕ್ಕೆ ಅಳಿಸುವ ಕ್ರಿಯೆ, ಇಂತಹ ಜಾಗದಲ್ಲಿ ಸೂಕ್ಷ್ಮ. ಅತೀಸೂಕ್ಷ್ಮ ಭಾವಗಳ, ಮನಸ್ಸುಗಳ ಒಂದೇ ಜಾಗದಲ್ಲಿ ಪ್ರತಿಫಲನ ನಿಯಮಗಳನ್ನು ಹೇಳುವಸಾರ, ಬಯಸಿದ ಅನುಭವ ಬಯಸದ ಕನಸುಗಳು, ಎದುರಿಸಿದ ಉತ್ತರಿಸಲಾಗದ ಪ್ರಶ್ನೆಗಳು ಜಾತ್ರೆಯಲ್ಲಿ ಸಿಗದ ಸಾಮಾನುಗಳು, ಗಿಜಿಗುಡುವ ಸಂತೆಯ ಗದ್ದಲ, ಹೊಲದ ಒಂಟಿ ಬೇವಿನ ಮರದ ಬಡ್ಡಿಗೆ ಒರಗಿ ಕುಳಿತ ಮೌನ, ಸವೆದು ಹೋಗುವ ಜಿಡ್ಡು. ಸೋರಿಹೋದ ಬಂಡೀ ಬದುಕು, ಈ ಕ್ಷಣಗಳಲ್ಲಿ ಮತ್ತೆ ಒತ್ತಿ ಒತ್ತಿ ಮೂಡಿ ಬಂದವು, ಚಿತ್ರಗಳು ಮನಸ್ಸಿನಲ್ಲಿ, ಮಹಾನ್ ಭೌತ ವಿಜ್ಞಾನಿ ಹಾಂಕಿಂಗ್‍ರ ವಿಚ್ಛಗಳಂತೆ ನಮ್ಮ ರಾಷ್ಟ್ರಪತಿಗಳ ವಿಚಾರದ ಹರವು ಇತ್ತು.
ಇದೇ ಹೊತ್ತು ಅಂತರಂಗದ ಕಲರವಕ್ಕೆ ಅಬೂತವಾದ ರಾಗಗಳನ್ನು ಶಹನಾಯ್‍ನಿಂದ ಹೊರಡಿಸಿ, ಸಮಸ್ತ ಭಾರತೀಯರ ಮನಸ್ಸುಗಳಲ್ಲಿ ಇಬ್ಬನಿ ಹನಿಯ ತಂಪು, ಅರ್ದತೆ ತುಂಬಿದ ಗಂಧರ್ವ ಪುರುಷ, ಬಿಸ್ಮಿಲ್ಲಾಖಾನರ ತುಂಬು ಜೀವನ ಕೊನೆಗೊಂಡದ್ದು ಒಂದು ಯುಗದ ಅಂತ್ಯ, ಹೊಸ ಪುಟಗಳು ಚರಿತ್ರೆಗೆ ಸೇರುವ ಹೊತ್ತಿಗೆ, ಪರಂಪರೆಯ ಒಂದುಕೊಂಡಿ ಕಳಚಿಕೊಂಡಿತು. ಹಸಿದು ಬಂದವನಿಗೆ ಷಡ್ರಸವನುಮಿಸಲು ಬೇಕು ಎಂಬ ನಿಯಮವನ್ನು ಇಡೀ ಬದುಕಿನಲ್ಲಿ ಒಂದು ಗೂಡಿಸಿ ಕೊಂಡು ಅಕ್ಷರಸಃ ಪಾಲಿಸಿದ ಖಾನ್ ಸಾಹೇಬರ ರಾಗಗಳು ಇನ್ನು ಕೇಳುವದಾದರೂ ಹೇಗೆ? ನಮ್ಮ ಶಾಲೆಯ ಪ್ಯೂನ್ ಹನುಮಂತ ಭಜಂತ್ರಿ, ಖಾನ್ ಸಾಹೇಬರ ಸಾವಿಗೆ ಕಣ್ಣೀರು ಹಾಕಿದ. ಯಾಕೆಂದರೆ ಶಹನಾಯಿ ಊದುವುದು ಅವನ ಮನೆತನದ ಉದ್ಯೋಗ, ಸತ್ತಾಗ, ಹುಟ್ಟಿದಾಗ, ಮದುವೆ, ಮುಂಜವಿಯಾಗ, ಶಹನಾಯ್ ಮತ್ತು ಭಾಜಾ ಭಜಂತ್ರಿ ಬಾರಿಸುವುದು, ಒಂದಕ್ಷರವೂ ಓದದ ಹನುಮಂತ ಖಾನ್ ಸಾಹೇಬರು ನುಡಿಸುವ ಹಲವಾರು ರಾಗಗಳನ್ನು ತನ್ನ ರೇಡಿಯೋ ಸಹಾಯದಿಂದ ಕಲ್ತಿದ್ದ. ಮೇಲಿಂದ ಮೇಲೆ ಅವನು ನನ್ನ ಮುಂದೆ ಹೇಳುತ್ತಿದ್ದ. ಒಮ್ಮೆ ವಾರಣಾಸಿಗೆ ಹೋಗಿ ಬಿಸ್ಮಿಲ್ಲಾ ಖಾನರನ್ನು ನೋಡಬೇಕು ಅಂತ. ಎತ್ತಣ ಮಾಮರ ಎತ್ತಣ ಕೋಗಿಲೆ. ನಮ್ಮ ಶಾಲೆಯ ಟೀಚರಾರೂ ಖಾನ್ ಸಾಹೇಬರ ಬಗ್ಗೆ ಒಂದೂ ವಿಶಾದದ ಮಾತು ಹೇಳಲಿಲ್ಲ. ಇಡೀ ದಿನ ಹನುಮಂತ ಅಸ್ತವ್ಯಸ್ತನಾಗಿದ್ದ. ಸಂಗೀತವನ್ನು ಅರಿಯುವ ಮನಸ್ಸು, ಅದು ನೀಡುವ ಅಹ್ಲಾದ ಸಂತೋಷ, ಆಳದಲ್ಲಿ ಚಿಮ್ಮುವ ಉನ್ಮಾದ ಉಲ್ಲಾಸ ಎಲ್ಲದಕ್ಕೂ ಸ್ಪಂದಿಸುವ ಹೃದಯಬೇಕು. ಅವನಿಗೆ ನಾನೇ ಸಮಾಧಾನ ಹೇಳಿದೆ. ಅವರಿಗೆ ಪೂರ್ಣ ಆಯಸ್ಸು ಆಗಿದೆ. ನಿನ್ನ ಉಸುರಿನ ಬೆಳಕು ಆರದಿರಲಿ. ಅವರಿಲ್ಲದಿದ್ದರೇನು, ಅವರ ಆತ್ಮದ ರಾಗದ ಶಹನಾಯ್ ನಿನ್ನಲ್ಲಿದೆಯಲ್ಲಾ. ದಿನಾ ಒಂದು ಹೊಸ ರಾಗಗಳನ್ನು ಭಾರಿಸು, ಒಂದಲ್ಲ ಒಂದು ದಿನ ನೀನೂ ಖಾನ್ ಸಾಹೇಬರಂತೆ ಇಡೀ ಭಾರತದ ಮನೆ ಮನೆಯ ಮಾತಾಗುತ್ತೆ ಎಂದೆ. ಮೌನದ ದುಗುಡ ಹೊತ್ತ ಹನುಮಂತ ಸುಮ್ಮನೆ ತಲೆ ಅಲ್ಲಾಡಿಸಿದ.
ದೇಹದಲ್ಲಿ ಮನಸ್ಸಿನಲ್ಲಿ ಸಂಚರಿಸಿದ ಕ್ಷಣಗಳು ವಿಸ್ಮಯ ಗುನುಗುಗಳು, ರೋಮಾಂಚನ ಗೊಳಿಸುವ ಖುಷಿಯ ತರಂಗಗಳು ಪ್ರೀತಿಯ ನಾದ ಝರಿಗಳು ಹುಟ್ಟು ಹಾಕುವ ಸಂಸ್ಕೃತಿಯ ನದಿ, ಭಾಷೆ, ಗಡಿ, ಜಾತಿ, ದೇವರು ಎಲ್ಲವನ್ನೂ ಮೀರಿ ಹುಟ್ಟುಹಾಕುವ ಸಂಕೇತಗಳು, ಸಂಗೀತ, ಎಲ್ಲವನ್ನೂ ಮೀರುವ ಕಾಳಜಿಯ ಪ್ರೀತಿ ಮನುಷ್ಯರನ್ನು ಅಜರಾಮರನ್ನಾಗಿಸಿಬಿಡುತ್ತದೆ. ಇದೇ ದೇಶ, ನೆಲ ಜಲ, ಜನಪದ ಪರಾಕಷ್ಠೆಯನ್ನು ಮುಟ್ಟಿ ಬಾಗುತ್ತವೆ. ಇಂತಹ ವ್ಯಕ್ತಿಗಳ ಬದುಕಿನ ಉನ್ನತಿಯ ಮುಂದೆ. ಡಾ. ಅಬ್ದುಲ್ ಕಲಾಂ ಮತ್ತು ಬಿಸ್ಮಿಲ್ಲಾಖಾನ ಈ ಸಂಜೆ ಇಡೀ ಭಾರತದ ಸಮುದಾಯದ ಜನರಿಗೆ ಸಂತರಂತೆ ಕಂಡರು. ಗಾಢ ಅನುಭವ ಜ್ಞಾನದ ಹಿನ್ನೆಲೆಯಿಂದ ಮಹಾನ್ ಗುರಿಯನ್ನು ಹೇಗೆ ಮುಟ್ಟಬಹುದು ಅಂತ ಈ ಇಬ್ಬರೂ ನನ್ನೊಳಗೆ ಜಿಜ್ಞಾಸೆ ಹುಟ್ಟಿಸಿದರು.
ನೋಡುವ ಕಣ್ಣಿದ್ದರೆ, ಮಾತನಾಡುವ ಮನಸ್ಸು ಇದ್ದರೆ, ನಮ್ಮೆದುರೇ ಆದರ್ಶ ಹೊಂದಿದ ಸಾಧಕರಿದ್ದಾರೆ. ಅನುಷ್ಠಾನದ ಬದ್ಧತೆಯೊಂದಿದೆ. ಕೆಲಸಮಾಡಿದರೆ ವಿಸ್ತಾರದ ಅನುಭವ ಮಂಟಪ ನಮ್ಮದಾಗುತ್ತದೆ. ನೀನು ಸಾಮಾಜಿಕ ಕಳಕಳಿ ಹೊತ್ತ ಮನುಷ್ಯ, ಜೀವನ ವಿದ್ಯೆ ನಿನ್ನ ಎಲ್ಲಾ ಸಾಹಿತ್ಯ ಕೃತಿಗಳಲ್ಲಿ ಕಂಡು ಬರುತ್ತದೆ. ಹಿತ ನೀಡುವ ನಿನ್ನ ಕೆಲಸಗಳೆಲ್ಲವೂ ನನಗೆ ಪ್ರೀತಿ. ಹೀಗಾಗಿ ನೀನು ನನಗೆ ದೋಸ್ತ.
ಬ್ರೈಲ್‍ಲಿಪಿಯಲ್ಲಿ ನೀನು ಹೊರತಂದ ಅದೃಶ್ಯ ಕಾವ್ಯ ನನಗೆ ಮತ್ತು ನನ್ನ ಅಂಧ ಶಿಷ್ಯರಿಗೆ ಹೊಸ ದೃಶ್ಯ ಕಾವ್ಯಗಳನ್ನು ಹುಟ್ಟು ಹಾಕಬಲ್ಲದು. ಅದಕ್ಕಾಗಿ ನಿನ್ನ ಕೈಗಳಿಗೆ ಪ್ರೀತಿಯ ಮುತ್ತುಗಳು.
ನಿನ್ನ
ಕಸ್ತೂರಿ
*****