ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ.
ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ.
ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು
ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು
ಹೊಸದಾಗಿ ಭಾವನಂಟರಾದವರನ್ನು ಬಿಟ್ಟು,
ಮನೆ ಬಿಟ್ಟು, ಸಾಕಿದ್ದ ಕೋಳಿ ಬಿಟ್ಟು,
ಅರ್ಧ ಓದಿದ್ದ, ಇನ್ನೂ ಓದದೇ ಇದ್ದ ಪುಸ್ತಕ ಬಿಟ್ಟು
ಹೋಗಿದ್ದ. ಬಾಗಿಲು ತಟ್ಟಿದಾಗ ಅವನೆ ತೆರೆದ,
ಪೊಲೀಸರು ಹಿಡಿದುಕೊಂಡು ಹೋದರು.
ಹೊಡೆದರು, ಫ್ರಾನ್ಸು, ಡೆನ್ಮಾರ್‍ಕು
ಸ್ಪೇನು, ಇಟಲಿ ಹೋದಲೆಲ್ಲ ರಕ್ತಕಾರಿಕೊಂಡ.
ಅಲೆದಾಡುತ್ತಲೇ ಸತ್ತ. ನನಗೀಗ ಅವನ ಮುಖ ಕಾಣುತ್ತಿಲ್ಲ.
ಗಂಭೀರ ಮೌನ ಕೇಳಿಸುತ್ತಿಲ್ಲ. ಆಮೇಲೆ ಒಮ್ಮೆ,
ಬಿರುಗಾಳಿ ರಾತ್ರಿಯಲ್ಲಿ,
ಬೆಟ್ಟಕ್ಕೆ ಹಿಮದ ನಯ ಬಟ್ಟೆ ಕವಿಯುತ್ತಿದ್ದಾಗ,
ಕುದುರೆ ಮೇಲೆ ಹೋಗುತ್ತಾ
ಅಲ್ಲಿ, ದೂರದಲ್ಲಿ, ಗೆಳೆಯನನ್ನು ಕಂಡೆ.
ಕಲ್ಲಿನಲ್ಲಿ ಮೂಡಿದ್ದ ಮುಖ,
ಕಾಡು ಹವೆಯ ಧಿಕ್ಕರಿಸಿದ ಭಾವ,
ಪೀಡಿತರ ನರಳಾಟವನ್ನು ಮುಖಕ್ಕೆ ತಂದಪ್ಪಳಿಸುವ ಗಾಳಿ.
ಅಲ್ಲಿ ಗಡೀಪಾರಾದವನು ನೆಲೆ ಮುಟ್ಟಿದ.
ತನ್ನದೇ ದೇಶದಲ್ಲಿ ಕಲ್ಲಾಗಿ ಬದುಕಿದ.
*****
ಮೂಲ: ಪಾಬ್ಲೋ ನೆರುಡಾ / Pablo Neruda
















