ಹಿಂಗ್ಯಾಕ ಮಾಡ್ತಾನ ಮಠದಯ್ಯಾ
ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ||

ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ
ಕಾಮೀನಿ ಭಾಮೀನಿ ಅಂತಾನ
ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ
ಹಿಂದ್ಯಾಕ ನನಸೀರಿ ಎಳಿತಾನ ||೧||

ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ
ವನಕೀಯ ಏಟ್ತಿಂದು ಓಡ್ತಾನ
ಕೆರಿಯಾಗ ಈಜ್ತಾನ ಕೆರಿಯೆಮ್ಮಿ ಹಿಡಿತಾನ
ಕಾಡೆಮ್ಮಿ ಕೋಡ್ಹಾದು ಕೂಗ್ತಾನ ||೨||

ಕಂಬ್ಕಂಬ ವದಿತಾನ ಗ್ವಾಡ್ವಾಡಿ ಹಾಯ್ತಾನ
ಬೋಳೇರ ತಲಿಗುಂಡಾ ಚೂಟ್ತಾನ
ಮುದಿಕ್ಯಾರ ಮುಂದ್ಹೋಗಿ ಮುರಕಾನ ಮಾಡ್ತಾನ
ಮಸಡೀಗಿ ಕಡಬುಂಡು ಬಾಡ್ತಾನ ||೩||

ಲಗ್ನಕ್ಕೆ ಹೋಕ್ಕಾನ ಕನ್ಯಾನ ಕರಿತಾನ
ನಿನಗಂಡ ನಾನೆಂದು ಅಂತಾನ
ಎರಕೊಂಡು ಬಂದೋರ ಕರಕೊಂಡು ಕಾಡ್ತಾನ
ಮಠದಾಗ ತೊಟ್ಟಾನ ತೂಗ್ತಾನ |೪||
*****
ಮಠದಯ್ಯ = ಭಗವಂತ
ಕುಂಡಿಯ ಕಟದಯ್ಯ = ಅಧಃ ಪ್ರಜ್ಞೆಯಲ್ಲಿ (Lower Consciousness) ಬೆಳಕು ಬೀರುವವ
ಗರತೇರು ಬೋಳೇರು ಮುದಿಕೇರು ಮುಂ. = ನಾನಾ ಸಂಸ್ಕಾರಗಳ ಜಡ ಆತ್ಮರು
ಮಠದಾಗ = ಮುಕ್ತಿಧಾಮ, ಶಾಂತಿಧಾಮ
ತೊಟ್ಲಾ ತೂಗು = ಆತ್ಮರೆಂಬ ಶಿಶುಗಳನ್ನು ಮುಕ್ತಿಧಾಮದಲ್ಲಿ ನೆಲೆಗೊಳಿಸು