ಸಾಹಿತ್ಯ ಲೋಕದಲ್ಲಿ ಆ ವಿಮರ್ಶಕನಿಗೆ ದೊಡ್ಡ ಗೌರವವಿತ್ತು. ಪೌರ್ವಾತ್ಯ, ಪಾಶ್ಚಿಮಾತ್ಯ ಲೇಖಕರ ಕೃತಿಗಳನ್ನು ಆಳವಾಗಿ ಓದಿಕೊಂಡಿದ್ದ ಅವನನ್ನು ವಿಮರ್ಶೆಯಲ್ಲಿ ಮೀರಿಸುವವರೇ ಇರಲಿಲ್ಲ. ಒಮದು ಕೃತಿ ಬಿಡುಗಡೆಯಾಗಿ ಕೈಸೇರುತ್ತಲೆ ಅದರ ಜನ್ಮ ಜಾಲಾಡುವ, ಅದಕ್ಕೊಂದು ಸ್ಥಾನ ಕಲ್ಪಿಸುವ ಪ್ರಗಲ್ಭ ಪಾಂಡಿತ್ಯ ಅವನದು. ಗಣ್ಯಾತಿಗಣ್ಯ ಲೇಖಕರು ಅವನ ವಿಮರ್ಶೆಗಾಗಿ ಕಾತರಿಸುತ್ತಿದ್ದರು.

ಪ್ರಪಂಚದ ಮಹಾ ಕಾವ್ಯಗಳನ್ನು ಮಹಾಲೇಖಕರ ಕೃತಿಗಳನ್ನು ತನ್ನದೇ ಆದ ದೃಷ್ಟಿಕೋನದಿಂದ ಪರಾಮರಿಸುವ, ಸಮರ್ಥಿಸುವ, ಮೌಲಿಕಗೊಳಿಸುವ ಸಾತತ್ಯದಿಂದಾಗಿ ವಿಮರ್ಶಕನಿಗೆ ಪ್ರಶಸ್ತಿ ಪ್ರಸಿದ್ಧಿ ಪ್ರಾಪ್ತವಾಗಿದ್ದವು. ಹೀಗೆ ಒಂದು ನೆಲೆಯಲ್ಲಿ ಗಟ್ಟಿಗೊಂಡ ಮೇಲೆ ವಿಮರ್ಶಕನ ನಿಸ್ಪೃಹತೆ ಅಳ್ಳಕಾಗುತ್ತ ಬಂತು. ಒಂದು ವರ್ಗದ ಸಿದ್ಧಾಂತಗಳನ್ನು ತನ್ನ ವಿಮರ್ಶೆಯ ಮಾನದಂಡವನ್ನಾಗಿಸಿಕೊಂಡ ಅವನು ತನ್ನವರ ಕೃತಿಗಳ ಬಗ್ಗೆ ಹಿತಾಸಕ್ತಿಯನ್ನು ಇತರರ ಕೃತಿಗಳ ಬಗ್ಗೆ ಅಸಹನೆಯನ್ನು ರೂಢಿಸಿಕೊಂಡು ವಿಮರ್ಶಾಕ್ಷೇತ್ರವನ್ನು ರೋಗಗ್ರಸ್ತಗೊಳಿಸಿದ. ಮತ್ತೊಂದು ವರ್ಗದ ಲೇಖಕರ ಸಾಮರ್ಥ್ಯವನ್ನು ಅದ್ಭುತ ಪ್ರತಿಭೆಯನ್ನು ಅಸ್ಥಿರಗೊಳಿಸುವ ಅವನ ದೋಷ ಪ್ರಜ್ಞಾಪೂರ್ವಕವಾಗಿಯೇ ಇರುತ್ತಿತ್ತು. ಕೆಲವರು ಅವನ ಪೂರ್ವಾಗ್ರಹ ಪೀಡಿತ ವಿಮರ್ಶೆಯನ್ನು ಭಯೋತ್ಪಾದಕತೆಗೆ ಹೋಲಿಸುತ್ತಿದ್ದುದು ಸಹಜವೇ ಆಗಿತ್ತು.

ವಿದ್ವತ್ತಿನ ಅಹಮಿಕೆಯಲ್ಲಿ ಸ್ವಜನ ಪ್ರಕ್ಷಪಾತದ ಕಬಂಧಬಾಹುವಿನಲ್ಲಿ ಬಂಧಿಯಾದ ಅವನ ಸೂಕ್ಷ್ಮ ನೋಟ ಒಂದಿನ ಇದ್ದಕ್ಕಿದ್ದಂತೆ ಪ್ರಕೃತಿಯ ಮೇಲೆ ಹರಿದಾಡಿತ್ತು. ಸಮತಳವಿಲ್ಲದ ಭೂಮಿ ಕುರೂಪ, ಬೆಟ್ಟ ಗುಡ್ಡಗಳು, ಸತ್ತ ಹೆಣ, ಮರಗಳು ಡೊಂಕು, ನದಿಗಳದು ತರಾವರಿ ಪಾತ್ರ, ಸಮುದ್ರ ಅಪಾಯಕಾರಿ, ಉರಿಯುವ ಸೂರ್ಯ ನಿಷ್ಕರುಣಿ, ಚಂದ್ರ ಕಳಂಕಿತ… ಹೀಗೆ ಸಾಗಿತ್ತು ಅವನ ಸಮೀಕ್ಷೆ.

“ವಿಮರ್ಶಕ ಮಹಾಶಯರೇ” ಕೂಗಿ ಕರೆಯಿತು ಪ್ರಕೃತಿ.

“ಓ! ಪ್ರಕೃತಿ, ನನ್ನ ವಿಮರ್ಶೆಯಿಂದ ಬೇಸರವಾಯಿತೇ?” ಕೇಳಿದ ವಿಮರ್ಶಕ.

“ಹಾಗೇನಿಲ್ಲ. ಆದರೆ ನಿಮ್ಮ ವಿಮರ್ಶೆ ಸಹಜವಾಗಿಲ್ಲ”

“ನಾನು ಸೂಕ್ಷ್ಮಜ್ಞ ನನ್ನ ವಿಮರ್ಶೆ ಸಮರ್ಥವಾಗಿದೆ”

“ನಿಮ್ಮ ಬುದ್ಧಿಗೆ ಹೊಳೆದಷ್ಟನ್ನೇ ಹೇಳುತ್ತಿದ್ದೀರಿ”

“ಆ ಬುದ್ಧಿಯಲ್ಲಿ ಪ್ರತಿಸೃಷ್ಟಿ ಇರುವದು ವಾಸ್ತವ”

“ಸೃಷ್ಟಿಸುವುದು ಗೊತ್ತಿಲ್ಲದವರಿಗೆ ಪ್ರತಿಸೃಷ್ಟಿ ಹೇಗೆ ಸಾಧ್ಯ?”

“ಅದು ನನಗೆ ದಕ್ಕಿದ ಅಸಾಮಾನ್ಯ ಸಾಮರ್ಥ್ಯ!”

ಪ್ರಕೃತಿ ಹೇಳಿತು:
“ಹಾಗಾದರೆ ಮೋಡಗಳಿಂದ ಮಳೆ ಸುರಿಸುವುದು, ಆಕಾಶದಲ್ಲಿ ಸೂರ್ಯ ಚಂದ್ರರನ್ನು ಬೆಳಗಿಸುವುದು, ಭೂಮಿಯಲ್ಲಿ ಬೀಜ ಸೃಷ್ಟಿಸುವುದು, ಅದನ್ನು ಕೊನರಿಸಿ ಮರವಾಗಿಸುವುದು, ಹೂವಾಗಿಸುವುದು, ಕಾಯಾಗಿಸುವುದು, ಫಲವಾಗಿಸುವುದು ನಿಮ್ಮ ಸಾಮರ್ಥ್ಯದಿಂದ ಸಾಧ್ಯವೇ?”

ವಿಮರ್ಶಕ ಉತ್ತರಕ್ಕಾಗಿ ತಡಕಾಡಿದ.

*****

 

Latest posts by ಅಬ್ಬಾಸ್ ಮೇಲಿನಮನಿ (see all)