ಬಾಳ ಹೊಳೆ ಬತ್ತಿ
ದಡಗಳೆರಡು ಒಣಗಿ
ಪಾತ್ರವು ವಿಕಾರವಾಗಿ ತೆರೆದುಕೊಂಡು
ನರಳುವ ನಡುವೆ
ಜೀವ ಸೆಲೆಯಾಗಿ ಬಂದ ದೌಹಿತ್ರ
ಚೆಂದಂಪು ತುಂಬಿತು.

ಕುಸಿಯುತ್ತಿದ್ದ ಮನೆ, ಮನಸಿನಲಿ
ಪ್ರಾಣ ವಾಯು ಪಲ್ಲವಿಸಿ
ಕೈ ಜಾರಿ ಹೋಗುತ್ತಿದ್ದ ಬದುಕು
ಮರಳಿ
ತಕ್ಕೈಸಿಕೊಂಡಿತು.

ಮೌನ ಸೊನ್ನೆ ತೆರವಾಗಿ
ಮುದ್ದು ಮಾತು ಹರಿದಾಡಿ
ಜೀವೋತ್ಸಾಹ ತಂಗಾಳಿ
ಮೊರೆಯ ತೊಡಗಿತು.

ಜಡವಾಗಿ
ಮೂಲೆ ಹಿಡಿದು ಕೂತಿದ್ದೆಲ್ಲ
ರೂಪು, ಲಾವಣ್ಯ ಪಡೆದು
ಉತ್ಸಾಹದ ಉತ್ಸವ ಹೊರಟಿತು.

ಸೂತ್ರದಾರ ಪೋರ
ಮರವೆಯಾಗಿದ್ದ, ಮಾಡದೆ ಉಳಿದಿದ್ದ
ಮಾಡುವಂತೆ ಮುಂದುಮಾಡಿ
ಪುಣ್ಯ ಮೂರ್ತಿಯಾದ.
*****