(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು)

“ಆಲಲ ರಾಯರ ಬರೋಣಾಯ್ತೇನು?…. ಬರಬೇಕ…. ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?…. ಇಲ್ಲೆ ,ಇಲ್ಲೆ ಮ್ಯಾಲೆ ಕೂಡ್ರಿ ರಾಯರಽ! ಎಲೋ… ಯಾರಾವರು….? ದಿಂಬೆಲ್ಲಿ ಅದನೋ….? ತಾ; ತಾ, ಲಗೂನಽ ತಾ! ಏನಪಾ… ಈ ಹುಡಗೋರು….! ಇಟ್ಟದ್ದು ಇಟ್ಟಲ್ಲಿ ಇರಗೊಡೂಹಾಂಗಽ ಇಲ್ಲ! ಕೂಡ್ರಿ ರಾಯರಽ ಕೂಡ್ರಿ….! ಹುಡುಗೂರ ಕಾಲಾಗ ಬ್ಯಾಸತ್ತು ಹೋಗಿನ್‌ ನೋಡ್ರಿ… ಅತು ಹಾಸಗೀ ಸುರಳೀಗೆ ನಂಬಿ ಕೂತುಗೊಳ್ರಿ! ಏನು ಚಹ ಆಗಬೇಕೊ, ಕಾಫಿಯೋ, ಹಾಲೊ….? ಏನುಬೇಕು ಹೇಳ್ರಿ! ಒಲ್ಲೇ ಅಂದ್ರ ಕೇಳೂಹಾಂಗಿಲ್ಲ… ಬಡವರ ಮನೀಗೆ ಬಂದು ಏನು ಹಾಂಗಽ ಹೋಗತೀರಾ? ನಾಳೆ ನಿಮ್ಮ ಮನೀ ಮುಂದ ನಾಲಗೀ ಕಿತ್ತಿಗೊಂಡು ಪ್ರಾಣಾ ಕೊಟ್ಟೇನು!”

“ಏ…! ಒಳಗ ಹೇಳೊ ರಾಯರಿಗೆ ಸ್ವಲ್ಪ ಸಜ್ಜಗೀ ಮಾಡಂತ ಹೇಳು….! ಮತ್ತ ಸಜ್ಜಗೀ ತುಪ್ಪದಾಗ ಕರೀಲಿಕ್ಕೆ ಹೇಳು….! ಇಲ್ಲದಿದ್ದರ ಏನ ಕೇಳತೀ ಅದು ಡೊಣಿಸಾಲ ಹೆಣ್ಣು! ನುಚ್ಚು ಕುದಿಸಿ ಇಟ್ಟೀತು…! ಸೀ ಸಜ್ಜಗೀ ಅಂತ ಹೇಳು ಮತ್ತೆ…! ಇಲ್ನೋಡು, ಒಮಗಿಲೆ ಓಡಬ್ಯಾಡ! ಕಿವಿ ಕಿತ್ತೇನು… ಪೂರಾ ಕೇಳಿಕೊಂಡು ಹೋಗು! ಬರೇ ಸೀ ಆದರ ನೆಟ್ಟಗಾಗೂದಿಲ್ಲ, ಸ್ಪಲ್ಪ ಅವಲಕ್ಕೀ ಒಗ್ಗರಣೀ ಹಾಕಲಿಕ್ಕೆ ಹೇಳು….! ಎಲೆಯಲ್ಲಾ! ಗೌಡರ ಹಿತ್ತಲಾಗಿಂದಽ ಕರೀಬೇವು ಇಸಗೊಂಡು ಬಾರೊ-ಅವಲಕ್ಕಿಗೆ-ಅವಲಕ್ಕಿ ಘಮಾ ಘಮಾ ಆಗಲಿ!…. ಚಹಾಕ್ಕ ಒಂದು ಬ್ಯಾರೆ ಎಸರಿಡಲಿಕ್ಕೆ ಹೇಳು ಸುಳ್ಳಽ ತಡಾ ಮಾಡಬ್ಯಾಡ್ರಿ!”

“ಎಲೊ-ಅಳಮಾರೀಗಂಡೇ! ಗಂಡಸಽ ನೀನು?…. ‘ಸಕ್ರಿಲ್ಲಾ-ಚಹಾ ಇಲ್ಲಾ-’ ಹೇಳಲಿಕ್ಕೆ ಬಂದಾನ ಅತುಗೋತ….! ಹೋಗು ಓಡು ಜಲ್‌ದಿ…, ಚೆನಬಸಪ್ಪನ ಅಂಗಡಿಗೆ ಹೋಗು, ನಾ ಹೇಳಿನಿ ಅಂತ ಹೇಳು! ಅತಗೋತಾಽ ತಿರಿಗಿ ಬರಬ್ಯಾಡ! ಕಾಲು ಮುರದೀನು, ಹಾಂಗ ಹೀಂಗ ಅಂತ ಚೆನಬಸಪ್ಪ ಅದಽ ಮಾತು ಹಚ್ಚಾನು…., ರಾಯರು ಬಂದು ಕೂತಾರಂತ ಹೇಳು, ಇಲ್ನೋಡು…. ಹಂಗಽ ನಾಲ್ಕು ಅಡಕಿ ಒಂದ್ನಾಲ್ಕು ಲವಂಗ, ಒಂದು ಕಾಚಿನ ಹಳ್ಳು ಕೊಡಂತ ಹೇಳು-ಚೆನಬಸಪ್ಪಗ… ಲಗೂ ಬಾ, ಬಿಸಲಾಯ್ತು….!

“ಏನಂತಾರೋ ಒಳಗ….? ತುಪ್ಪಿಲ್ಲಂತ….? ಇಷ್ಟೊತ್ತು ಏನು ಮಾಡತಿದ್ಲು….! ಹೇಳಲಿಕ್ಕೇನಾಗಿತ್ತು-ಹುಣ್ಣಾಗಿತ್ತೇನು ಬಾಯಿಗೆ….? ತುಪ್ಪ ತೀರಿಹೋಯ್ತೇನು? ಇದಽ, ಇಂದ ಇನ್ನೂ ಮಂಗಳವಾರ… ಶನಿವಾರ ಸಂತೀ ದಿನ ಮೂರು ಸೇರು ಬೆಣ್ಣೆ ತಂದಿತ್ತು….; ಏನು ಎರಕೋತಾಳೋ ಏನೊ ತುಪ್ಪದಲೆ! ಎಷ್ಟು ತಂದರೂ ಈಡಽ ಆಗೋದಿಲ್ಲ…! ಹೋಗೋ ದಾಮೂ; ಕುಲಕರ್ಣ್ಯಾರ ಮನ್ಯಾಗ ತುಪ್ಪಾ ಇಸಗೊಂಡು ಬಾ… ಸಂತೀ ದಿವಸ ಕೊಡತೀವಂತ್‌ ಹೇಳು! ಕೂಡ್ರಿ ರಾಯರಽ ತಡಾ ಅತ್ಯು! ಹತ್ತ ನಿಮಿಷದಾಗಽ ಚಹಾ ಆಗತದ…; ಎಂದೂ ಬಾರದವರು. ಹಂಗಽ ಕಳಿಸೂದು ನಮ್ಮ ಧರ್ಮಽ?

“ಏನದೂ….? ಗುರೂಗುರೂ ಸಪ್ಪಳ್ಯಾತರದು? ಸಜ್ಜಗೀ ಒಡೀತಾರ….? ಬೇಶ್‌ ಬೇಶ್‌ ಇದ್ದರಿಂಥಾ ಹೆಣ್ಣು ಇರಬೇಕು….; ಲಗೂ ಆಗಲೀ ಅಂತ ಹೇಳು. ರಾಯರು ಹಸದಿದ್ದರು….”

(ಒತ್ತಾಯದ ಕೆಮ್ಮನ್ನು ತಂದುಕೊಂಡು ಖೇಕರಿಸಿ ಉಗಳಲೆಂದು ಹೊರಗೆ ಹೋದ ರಾಯರು ಮೊಚ್ಚೆಯ ಪರಿವೆಯಿಲ್ಲದೆ ಊರಿನ ವರೆಗೆ ಓಡಿ ಬಿಟ್ಟರು.)
*****