ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ
ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು;
ನಿಂತಾಗ ಗರಿಬುದ್ದಿ ತೊಲೆಭಾರವಾಗಿ
ನಿನ್ನೆ ನೆನಪು-
ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ
ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ;
ಮಿಸುಕಿದರೆ ಕತ್ತು ಲಟ್ಟೆನುವ ಯಮಹೊರೆ ಹೊತ್ತು
ತಿನಿಕಿ ನಡೆವಾಗ ಕೆಳಗಡೆ ಪಾಚಿಗಲ್ಲು;
ಪೂಯೆಂದು ಬಾಯಿಂದ ಎಣ್ಣೆ ಉಗ್ಗಿದ ಹಾಗೆ ಪಂಜಿಗೆ,
ಭಗ್ಗೆಂದು ಹೂಗೆಸಹಿತ ಬೆಳಕೆದ್ದು ಧಗಧಗಿಸಿ
ತೂಗುವುದು ಗಾಳಿಗೆ
ದಾಸವಾಳದ ಕೆಂಪು ನಾಲಗೆ
ಅದರೊಳಗೆ :
ಕೆಂಪು ಸೀರೆಯನುಟ್ಟು ಬರಿತಲೆಗೆ ಸೆರಗಿಟ್ಟು
ಬತ್ತ ಕುಟ್ಟುವ, ಬೀಸೆಕಲ್ಲು ಬೀಸುವ, ಪುಟ್ಟ
ಸೊರಗು ಮೈಯಿನ ವಿಧವೆ ಹೆಣ್ಣು ;
ಪಕ್ಕಕ್ಕೆ ಕೂತು
ಹರಕು ಜೇಬಲ್ಲಿ ಕೈಯ ಇಳಿಬಿಟ್ಟು ಅವಳನ್ನೇ
ನೆಟ್ಟು ನೋಡುತ್ತಲಿದೆ ಆರೇಳರ ಎಳೆಗಣ್ಣು.
ತಾಯ ಮುಖದಲಿ ಒಂದು ಪೆಚ್ಚುನಗೆ, ಅವಳಿಗೆ
ಕನಿಕರಿಸುವಂತೆ ಹುಡುಗನ ಮುಖದ ಬಗೆ; ಹೀಗೆ
ತಾಯಿ ಇಳಿವಳು ಮಗನ ಬಾಳಿಗೆ.

ಹರಿದಂತೆ ಇಂಥ ಗರಗಸ ನೆನಪು ತಲೆಯಲ್ಲಿ
ಉದುರುವುದು ಹೊಟ್ಟಾಗಿ ಬದುಕು.
ಛೇ! ಹರಿವ ಹೊಳೆ ಮಾಡಬಾರದು ಕೊಚ್ಚಿ ತೆಗೆದಿರುವ
ದಡದ ಚಿಂತೆ.
ಇದ್ದ ನೆಲವನ್ನೆಲ್ಲ ಗೆದ್ದು ಸಾಗುವುದು,
ಹೊಸ ನೆರೆಗೆ ತುಡಿಯುವುದು ;
ಪಡೆಯಲೆಂಬಂತೆ,
ಗಡಿದಾಟಿ ಹರಿಯುತ್ತ ಹೊಸ ಗುರುತ ಕೊರೆಯುತ್ತ
ಬಾನಿನಂಗಳದಲ್ಲಿ ಮುಗಿಲ ಪಡೆ ಹೂಡುವುದು
ನಾಳೆಗೆಂಬಂತೆ.

ಮರ ಬೆಳೆದು ಬೇರಗಲ ಕರಗಿರುವ ನೆಲದಂತೆ ತಾಯಿ,
ಅವಳ ಚಿ೦ತೆ-
ಹಾಲಲ್ಲೆ ಇಳಿದಂಥ ನೊರೆಗೆ ಅತ್ತಂತೆ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)