ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ
ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ
ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ
ಇನ್ನು ಯಾರೂ ಇರದ ರೀತಿಯಲ್ಲಿ

ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು
ಛೋಟಾ ಇಮಾಮನಿಗೆ ಖಾಲಿ ಬೆರಳು
ಜನರು ಅತ್ತ ಹಣಿಕುವರು ಇತ್ತ ಹಣಿಕುವರು
ಕುಳಿತಲ್ಲಿ ಕೂರರು

ಇಬ್ಬರ ಮುಂದೆಯೂ ತೆರದ ಪವಿತ್ರ ಕುರಾನ
ಆಗಾಗ ಅದರಿಂದ ಶ್ಲೋಕಗಳ ಪಠನ
ಒಬ್ಬನ ವಾಣಿ ನಾಲ್ಕು ದಿಕ್ಕುಗಳಲಿ ಗುಡುಗುವುದು
ಇನ್ನೊಬ್ಬನ ಕಿವಿ ಕಿವುಡು ನಟಿಸುವುದು

ಸುತ್ತಮುತ್ತ ಜನ ತಲೆದೂಗುತ್ತ
ಮನೆಗೆ ತೆರಳುವರು ರಾತ್ರಿಯಾಗುತ್ತ
ಆಮೇಲೆ ಬಡಾ ಇಮಾಮನೆಲ್ಲಿ ಛೋಟಾ ಇಮಾಮನೆಲ್ಲಿ
ದೇವರು ಕರುಣಿಸಿದ ನಿದ್ದೆಯ ಮರವೆಯಲ್ಲಿ
*****