ಬಾನು ರೆಪ್ಪೆ ಮುಚ್ಚುತಿದೆ
ಇರುಳು ಸೆರಗ ಹೊಚ್ಚುತಿದೆ
ತಾರೆ ಚಂದ್ರ ತೀರದಲ್ಲಿ
ನಕ್ಕು ಹರಟೆ ಕೊಚ್ಚುತಿವೆ.
ಮಾತಾಡದೆ ಸಡಗರದಲಿ
ತೇಕಾಡಿದೆ ಮುಗಿಲು,
ಹಾಡಲು ಶ್ರುತಿ ಹೂಡುತ್ತಿದೆ
ಬೆಳಂದಿಂಗಳ ಕೊರಳು.
ದಡವ ಕೊಚ್ಚಿ ಹರಿಯುತ್ತಿದೆ
ನದಿಗೆ ಮಹಾಪೂರ,
ಗಡಿಯ ದಾಟಿ ಹಬ್ಬುತ್ತಿದೆ
ಪಾರಿಜಾತ ಸಾರ,
ಹಳತನೆಸೆದು ಹೊಸ ರೂಪಕೆ
ತಡಕುತ್ತಿದೆ ಜೀವ,
ತಳಮಳಿಸುತ ಅನುಭವಿಸಿದೆ
ಹೊಸಸೃಷ್ಟಿಯ ನೋವ.

ಬಂತು ಹೇಗೆ, ಯಾವುದು ಈ
ಕೊಳಲಿನ ಮಧುನಾದ ?
ಗೆಜ್ಜೆ ಕಟ್ಟಿ ನರ್ತಿಸಲು
ತವಕಿಸುತಿದೆ ಪಾದ.
ಜೊಂಪಿನ ತಳದಿಂದ ಚಿತ್ತ
ಮೇಲೆ ತೇಲಿ ಬರುತಿದೆ,
ಮಿಂಚ ನೇಯ್ದ ಬಸಿರಿ ಮುಗಿಲ
ಸಂಚು ಹೂಡಿ ಕಾದಿದೆ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ.
ಒಣಗಿದೆಲೆಯ ಕೆಳಚಿ ನಿಂತ
ಮೈಯ ತೂರಿ ಬಾ
ಮಳೆಗಾಲದ ನವನೀರದ
ಹರಸುವಂತೆ ಬಾ,
ಬತ್ತಿಹೋದ ಚಿತ್ತದಲ್ಲಿ
ಜಲ ಚಿಮ್ಮಿಸು ಬಾ.

ಉದಾಸೀನ ಜೀವಹೀನ-
ವಾದುವೆಲ್ಲ ಈ
ಕೊನೆಯಿರುಳಿನ ಕಣ್ಣೀರಲಿ
ತೇಲಿ ಹೋಗಲಿ

ಸೃಷ್ಟಿಶಕ್ತಿ ಆರಿಹೋದ
ವಸ್ತುವೆಲ್ಲವೂ
ತನ್ನೊಡಲನು ನವಸೃಷ್ಟಿಗೆ
ತೆರವು ಮಾಡಲಿ.

ಬಾ ಬಾ ಹೊಸ ಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರಯವನ್ನು
ಮರಳಿ ನೆಲಕೆ ತಾ.
ಪ್ರಾಣವೀಣೆಯನ್ನು ದನಿಸಿ
ಕರಣಗಳಿಗೆ ಕಿಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,
ಚೈತ್ರದ ಹೊಸ ಮೈತ್ರಿಯಲ್ಲಿ
ಜಗವನದ್ದು ಬಾ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)