ರಸ್ತೆಯ ಇಕ್ಕೆಲಗಳಲ್ಲಿ ಗುಡಿಸಿಟ್ಟ ಪ್ಲಾಸ್ಟಿಕ್ ಚೀಲಗಳು, ಒಣಗಿದ ಎಲೆಗಳು, ಎಸೆದ ನಾನಾ ರೀತಿಯ ಕಸ ದುರ್ವಾಸನೆ ಬೀರುತ್ತಿತ್ತು. ಏನಾದರು ಆಹಾರ ಸಿಕ್ಕಿತೇ ಎಂದು, ನಾಯಿ ಮೂಸಿ ನೋಡಿ ಮುಂದೆ ಹೋಯಿತು. ಅದರ ಹಿಂದೆಯೇ ಹಂದಿ ಬಂದು ಮೂಸಿನೋಡಿ ಮುಂದೆ ಹೋಯಿತು. ಕೋತಿ ಕೆದಕಿ ಕೆದಕಿ ಹೋಗಿದ್ದ ಕಸದ ಪ್ಲಾಸ್ಟಿಕ್ ಚೀಲಗಳ ಜೊತೆಗೆ ಕಸ ಕಡ್ಡಿಯನ್ನು ಹಸಿದ ಹಸು ಮೇಯುತಿತ್ತು. ರೈತ ಸಾಲಕ್ಕೆ ಬಡ್ಡಿ ಕಟ್ಟಲು ಹೋಗಿದ್ದ. ಅವನಿಗೆ ಹಸುವಿನ ಚಿಂತೆ ಕಾಡಿರಲಿಲ್ಲ. ಬೆಳಿಗ್ಗೆ ಕೆಚ್ಚಲು ಗಟ್ಟಿಯಾಗಿ ಹಿಂಡಿ ಹಾಲನ್ನು ಕರೆದ. ಹಸು ಹಾಲನ್ನು ಕೊಡುವಾಗ ‘ಅಂಬಾ’ ಎನ್ನುತ್ತ ಮೂಕ ವೇದನೆ ಪಡುತಿತ್ತು. ರೈತ ಕೆಚ್ಚಲನ್ನು ಕಿವುಚುತ್ತಲೇ ಇದ್ದ. ಹಸುವಿನ ಹಾಲು ಹಾಲಿನಂತೇ ಇಲ್ಲ ಎಂದು ಜನ ಗೊಣುಗುತಿದ್ದರು.
*****