ಎಂದಾದರೊಂದು ದಿನ
ಬರುವೆ ಏನೆ ಕೇಳಲೇ
ಬಾಗಿಲ ತೆರೆದು ಬೆಳಕನ್ನು ನೀಡಿ
ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ ||

ಹೊಸಿಲ ಮೆಟ್ಟಿ ಬರಲು ನನ್ನರಸಿಯೆ
ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ
ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ
ಹೊಂಗಿರಣವು ನಾಚಿ ಬಾಗಿರಲು ಧರೆಗೆ
ನೆನಪಾಗಿ ಪ್ರತಿಕ್ಷಣ ತುಡಿಯುವುದು ಸರಿಯೇನೆ || ಎ ||

ಭಾವವೂ ನೀನು ಅನುರಾಗವೂ ನೀನು
ಬಿದಿಗೆ ಚಂದ್ರತಾರ ಹೂನಗೆಯು ನೀನು
ಎನ್ನ ಜೀವಕೆ ಚೈತನ್ಯ ತುಂಬಿ
ಭಾವದೊಲುಮೆ ಸೋಪಾನದಲಿ ವಿರಮಿಸಿ
ಶೃತಿಯ ಮೀಟಿ ಮನವಾ ಕಾಡುವುದು ಸರಿಯೇನೆ || ಎ ||

ಕಲ್ಪನೆಯೂ ಕನಸೋ ನಾನರಿಯೇ
ನನಸಾಗುವುದೆಂತೋ ಕಾದಿರುಳ ಹಾದಿಯಲಿ
ಮಲ್ಲಿಗೆ ಹೂಹಾಸಿ ಬಾಗಿಲಲಿ ಕಾದಿಹೆ
ಕಾಮಿನಿ ಭಾಮಿನಿ ಎನ್ನ ಮನದರಸಿಯೆ
ನಿನ್ನ ಬರುವಿಕೆಯ ಸಡಗರದೆ ಮರೆತೆ ನಾ ನನ್ನನೇ
ಎಂದು ಬರುವೆ ಹೇಳಲೇ || ಎ ||
*****

Latest posts by ಹಂಸಾ ಆರ್‍ (see all)