ಯಕ್ಕಯ್ಯ ಜೋಗಯ್ಯ ಜಲ್ಲೆಂದು ಬಾರಯ್ಯ
ಯಲ್ಲವ್ನ ಸಿಂಗಾರ ಕಾಣಬಾರೊ
ಒಳಗಣ್ಣು ಜಮದಗ್ನಿ ಹೊರಗಣ್ಣು ಕಾಳಾಗ್ನಿ
ನೋಡಲ್ಲಿ ಕೂಗ್ಯಾನೂ ಪರಸುರಾಮೊ

ಯಲ್ಲಾರ ಗುಡ್ಡಕ್ಕ ಯಲ್ಲವ್ನ ಕೊಳ್ಳಕ್ಕ
ಉದ್ದುದ್ದ ಉದೊಯೆಂದು ಏರಬಾರೊ
ನಲ್ಲಪ್ಪ ನಿಲ್ಲಪ್ಪ ಸಂಗಪ್ಪ ಶಿವನಾರ
ಅವನಾರ ಜಡಿಮಾಲಿ ನೋಡಬಾರೋ

ಜೋಗವ್ವ ಆಗೇನಿ ಯೋಗವ್ನ ಹೊತ್ತೇನಿ
ಹೊತ್ತಿಗೆ ಗೊತ್ತೀಗೆ ಗುಲಗಂಜಿ ತಾ
ಯಲ್ಲವ್ನ ಹಣಿತುಂಬ ಮಣಭಾರ ಭಂಡಾರ
ಬಾರೆಲೆಗೆ ತಾರೆಲೆಗೆ ಕವಡೀಯತಾ

ಉಟಸೀರಿ ಗಟಿಸೀರಿ ಉರಿ ಹಚ್ಚಿ ಬೆಳಗೇನೆ
ಗಿಟಗೊಬ್ರಿ ಬೆಲ್ಲಾಗಿ ನೀ ತೋರಿ ಬಾ
ತುರುಬೀಗೆ ಉರಿಹಚ್ಚಿ ಶಿವನೆಂದು ಅತ್ತೇನೆ
ಕಣ್ಣೀರ ಯಣಿಗೊಂಡ ನೀ ಕುಡಿಯ ಬಾ