ಕಾಯುತ್ತಿದೆ ಈ ನೀರವ ಗಗನ
ಕಾಯುತ್ತಿದೆ ಗಿರಿ ನದಿ ಆವರಣ
ಮಾಯಿಸಿ ಹಿಂದಿನ ನೋವು ನಿರಾಸೆಯ
ಆಗುತ್ತಿದೆ ಹೊಸ ವರ್ಷಾಗಮನ

ಇರುಳಲಿ ಎಷ್ಟೇ ನೊಂದರು ಜೀವ
ತುಡಿಯದೆ ಕನಸಿಗೆ ಬೆಳಗಿನ ಝಾವ?
ಸಾಗಿದ ವರ್ಷವೊ ನೀಗಿದ ಇರುಳು
ಹೊಸ ಹಾಡಿಗೆ ಅಣಿಯಾಗಿದೆ ಕೊರಳು

ಬರುವ ಮುಂಚೆಯೇ ಭಾವೀದಿನವ
ಶಂಕಿಸದಂತೆ ಸರಿಯಿಡಿ ಮನವ,
ನವವಧುವನು ಕೈ ಹಿಡಿಯುವ ತರುಣ
ಕಾಯುವಂತೆ ಕಾತರದಲಿ ಕ್ಷಣವ

ಕಾಯುತ್ತಿದೆ ಈ ನೀರವ ಗಗನ
ಧ್ಯಾನಿಸುವಂತೆ ದೇವನ ಚರಣ
ಈಗಿನ ಕತ್ತಲು ಬೇಗನೆ ಕರಗಿ
ಮೂಡಲೆಂದು ನವಭಾಸ್ಕರ ಕಿರಣ
*****