ಶ್ರೀ ಶಿವಾಪರಾಧ ಸ್ತೋತ್ರ

ಜಯತು ಗಣಪತಿ ಜ್ಞಾನ ದಿನಮಣಿ
ಜಯತು ಸರಸ್ವತಿ ವಾಗ್ವಿಲಾಸಿನಿ
ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ
ಜಯತು ಕವಿವರ ವ್ಯಾಸ ಶುಕಮುನಿ
ಜಯತು ವಾಲ್ಮೀಕಿ ಋಷಿ ಕಲಾಗ್ರಣಿ
ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧||

ಶಂಕರನ ಅವತರಿಸಿ
ಶಂಕರಾಚಾರ್ಯಾಗಿ ಬಂದನು
ಪಂಕವನು ತೊಳೆದೆಲ್ಲ ಮನಸಿನ ಬಿಂಕವನು ಬಿಡಿಸಿ |
ಕಿಂಕರವ ಪಾವನವ ಮಾಡುತ
ಶಂಕೆಯಿಲ್ಲದ ಪದದೊಳಿಟ್ಟನು
ಡೊಂಕುಹಾದಿಯ ಬಿಡಿಸಿ ಕಲಿಯುಗದಲ್ಲಿ ಗುರುವಾಗಿ || ೨ ||

ಉಣ್ಣದೂಟವನುಣಿಸಿದನು ಗುರು
ತನ್ನ ಶಿಷ್ಯರ ಗುಣವ ನೋಡದೆ
ಮನ್ನಣೆಯ ಕೊಟ್ಟವರನೀ ಭವಜಲದಿ ದಾಂಟಿಸಿದಾ |
ಇನ್ನು ಗುರುವಿಗೆ ಸರಿಯಗಾಣೆನು
ಬೆನ್ನು ಬಿದ್ದಂಥವರ ರಕ್ಷಿಪ
ಉನ್ನತೋನ್ನತ ಮಹಿಮೆ ಪಾಮರನುಡಿಯಲೆನ್ನಳವೆ || ೩ ||

ತಾನು ಶಂಕರಭಾರ್ತಿ ಗುರುವಿನ
ನಾನಾಬಗೆಯನು ತಾಪ ಲಕ್ಷಣ
ಮಾನ್ವಜನ್ಮಕೆ ಬಂದುದೆಲ್ಲವ ಭೋಗಿಸಿದ ಪರಿಯ |
ತಾನು ಬಾಲ್ಯಾವಸ್ಥೆ ಮೊದಲಾದ್ದೇನು
ವ್ಯಥೆಯಾಗುವದು ತನುವಿಗೆ
ಸ್ವಾನುಭಾವದಿ ನುಡಿಯುತಿಹ ಪರೋಪಕಾರಾಥ೯ ||೪||

ಮನುಜರಾದವರೆಲ್ಲ ಕೇಳ್ವದು
ನೆನಪಿನಲಿ ಆಪರಾಧಸ್ತೋತ್ರವ
ಅನುದಿನದಿ ಮಾಡುವದು ನಿತ್ಯಾನಿತ್ಯಾ ವಿವರವನು |
ತನುತ್ರಯಕೆ ಸಾಕ್ಷಾತ ದೇವನ
ತನುವಿನಲಿ ಕಾಣುವುದೆ ಸಾಥ೯ಕ
ಎನಗೆ ಮತಿಯಿದ್ದಷ್ಟು ಪ್ರಾಕೃತಭಾಷೆಯಲಿ ನುಡಿವೆ ||೫||

ಮೊದಲು ಮಾಡಿದ ಕಮ೯ದಿಂದಲಿ
ಒದಗಿ ಬಂದೆನು ತಾಯಿಯುದರದಲಿ
ಪುದಿದು ಮಲಮೂತ್ರದಲಿನೊಂದೆನು ಜಠರಾಗ್ನಿಯಲಿ |
ಒದರಲಿಕೆ ಶಕ್ತಿಲ್ಲ ದುಃಖದ
ಸದನದಲಿ ಮುಳುಗಿದೆನು ಶಿವ ಶಿವಾ
ಇದಕೆ ಎನ್ನಯ ತಪ್ಪು ನೋಡದೆ ಕ್ಷಮಿಸು ಮಹದೇವಾ ||೬||

ಬಾಲ್ಯತನದಲಿ ದುಃಖ ಬಹಳ
ಕಾಲದಲಿ ತನುವೇಳದಿರಲು
ಮೊಲೆಹಾಲು ಕುಡಿಯಲು ಶಕ್ತಿ ನಾಸ್ತಿಯು ಇಂದ್ರಿಯಂಗಳಿಗೆ |
ಮೇಲೆ ರೋಗದ ಹೇಸಿಕೆಯು
ಕಣ್ಣಾಲೆ ನೊಣಗಳು ಕಡಿಯೆರದನದಿ
ನೀಲಕಂಠನ ಸ್ಮರಣೆತಪ್ಪಿದೆ ಕ್ಷಮಿಸು ಮಹದೇವಾ ||೭||

ತನುವು ಪ್ರಾಯದ ಪಂಚವಿಷಯದ
ಮೊನೆಯ ಬಾಣವು ತಾಗಲಾಕ್ಷಣ
ನೆನಪು ಹೋದುದು ಮಾನ ಗವ೯ದ ಗಿರಿಯನಡರಿದೆನು |
ಮನಸಿನಲಿ ವಿವೇಕವಿಲ್ಲದೆ ಧನವು
ಮಕ್ಕಳು ಮಡದಿಯರ ಸವಿ
ಎನಗೆ ಹತ್ತಲು ಮರತ ತಪ್ಪನು ಕ್ಷಮಿಸು ಮಹದೇವ || ೮ ||

ಒದಗಿ ಮುಪ್ಪದು ಬರಲು ಕಾಮತಿ
ಕದಲುವವು ಬಲು ಇಂದ್ರಿಯಂಗಳು
ಚದುರವದು ಮನ ಭ್ರಾಂತಿ ಹೋಗದು ವ್ಯಾಧಿ ಸಮನಿಸಲು|
ಉದರದೊಳು ಬರೆ ಸುಳ್ಳುಮೋಹವು
ತುದಿಗೆ ದೂರ್ಜಟೆ ಧ್ಯಾನಕೊದಗ
ಇದಕೆ ಎನ್ನಯ ತಪ್ಪುನೋಡದೆ ಕ್ಷಮಿಸು ಮಹದೇವ ||೯||

ಏನು ಅರಿಯೆನು ಸ್ಮಾರ್ತಕರ್ಮದ
ಹೀನನಾದೆನು ಕುಲದ ನೀತಿಗೆ
ತಾನೆ ಘಟಿಸುವ ಪ್ರತ್ಯವಾಯದ ಸ್ಮರಣೆಯೆನಗಿಲ್ಲ |
ಜ್ಞಾನತತ್ವ ವಿಚಾರ ಬ್ರಹ್ಮದ
ಕೂನ ಹಾದಿಯ ಶ್ರವಣ ಮನನದ
ಜ್ಞಾನಶೂನ್ಯನ ತಪ್ಪನು ಸರ್ವವು ಕ್ಷಮಿಸು ಮಹದೇವ||೧೦||

ಉದಯಕಾಲದಿ ಸ್ನಾನ ಸಂಧ್ಯಾ-
ವಿಧಿಯನಲ್ಲವ ಮುಗಿಸಿ ಭಾವಧಿ
ನದಿಯ ಉದಕದಿ ಮಾಡಲಿಲ್ಲವು ಶಿವಗೆ ಮಜ್ಜನವು |
ಮುದದಿ ಪೂಜಿಸಿ ಬಿಲ್ವಪತ್ರದಿ
ಒದಗಿಸುವ ಮಲಸುಗಂಧಪುಷ್ಪವ
ಇದನೇರಿಸದಿರ್ದ ತಪ್ಪನು ಕ್ಷಮಿಸು ಮಹದೇವ ||೧೧||

ತಂದು ಮಧುಘೃತಪಯವು ಶತಘಟ
ಇಂದುಧರನಿಗೆ ಎರಿಯಲಿಲ್ಲವು
ಚಂದನವೆ ಮೊದಲಾದ ಲೇಪನ ಕನಕಭೂಷಣವ |
ಇಂದು ಪೂಜಿಸಿ ಆನ್ನ ಚತುರ್ವಿಧ-
ದಿಂದಲರ್ಪಿಸಿ ಧೂಪ ಕರ್ಪೂರ
ಚಂದದೀಪವ ಬೆಳಗದಿಹಮರೆ ಕ್ಷಮಿಸಲು ಮಹದೇವ ||೧೨||

ಚಿತ್ತದಲಿ ಶಿವಧ್ಯಾನ ಮಾಡೆನು
ಮತ್ತೆ ನೀಡೆನು ಧನವ ದ್ವಿಜನರಿಗೆ
ಹೊತ್ತಿದಗ್ನಿಗೆ ಹವನ ಅರ್ಪಿಸಿ ಬೀಜಮಂತ್ರದಲಿ |
ನಿತ್ಯ ಗಂಗಾವಾಸದಲಿರೆ
ಉತ್ತಮದ ವೃತ ರುದ್ರಜಪವನು
ಸತ್ಯದಲಿ ಸಾಧಿಸಿದ ತಪ್ಪನು ಕ್ಷಮಿಸು ಮಹದೇವ ||೧೩||

ಸಂಗ ವಿರಹಿತನಾಗಿ ಗುಣಗಳ
ಹಿಂಗಿ ಮೋಹವ ಕಳಿಯ ಕತ್ತಲೆ
ಕಂಗಳಿಂದಲೆ ನಾಸಿಕಾಗ್ರವ ನೋಡಿ ವಾಸನೆಯ |

ನುಂಗಿದ್ಯೆತ್ಯವ ಉನ್ಮನಿಂದಲಿ
ಅಂಗದೊಳಗಿನ ಮಲಿನ ಕಳೆಯಲು
ಮಂಗಳಾತ್ಮನ ಸ್ಮರಣೆ ತಪ್ಪಿದೆ ಕ್ಷಮಿಸು ಮಹದೇವ ||೧೪||

ಕುಳಿತು ಸ್ವಸ್ಥಾನದಲ್ಲಿ ತನ್ನೊಳು
ಸುಳಿವ ಗಾಳಿಯ ಸೂಕ್ಷ್ಮಮಾರ್ಗಕೆ
ಎಳೆದು ಈಡಾಪಿಂಗಳೆರಡು ಸುಷುಮ್ನ ಮಾರ್ಗದಲಿ |
ಹೊಳೆವ ಪ್ರಣವಜ್ಯೋತಿ ರೂಪ
ಒಳಗೆ ಬ್ರಹ್ಮಾರಂದ್ರದಲಿ ಮನ
ಮುಳುಗಿಸಿದ ಆಪರಾಧಯೆನ್ನದು ಕ್ಷಮಿಸು ಮಹದೇವ ||೧೫||

ಶಿರಸದಲಿ ಚಂದ್ರಮನ ಸ್ಮರರಿಪು
ಪರಮಪಾವನ ಗಂಗೆ ಜಡೆಯಲಿ
ಉರಗಭೂಷಣ ಕಟಕ ಕಿವಿಯಲಿ ನೇತೃದಲಿ ಆಗ್ನಿ |
ಧರಿಸಿಹನು ಕರಿಚರ್ಮದಂಬರ
ನಿರುಪಮನೆ ತ್ರೈಲೋಕ್ಯಶೋಭಿಪ
ಸ್ಮರಿಸುವೆನೂ ಮೋಕ್ಷಾರ್ಥಲೋಸುಗ ಕರ್ಮಭಯದಿಂದಾ ||೧೬||

ತನಗೆ ದನ-ಕರವು ಇದ್ದರೇನವು
ತನಗ ಹಯಕರಿ ಇದ್ದರೇನವು
ತನಗೆ ರಾಜ್ಯವು ಪುತ್ರ ಮಿತ್ರ ಕಳತ್ರವಿರಲೇನ |
ತನಗೆ ಧನವದು ಇದ್ದರೇನವು
ಕ್ಷಣವು ಸ್ಥಿರವಲ್ಲವೆಂದು ಜರಿಯುತ
ಮನದೊಳಗೆ ಗುರುವಾಖ್ಯದಿಂದಿಲಿ ಭಜಿಸುವೆನು ಶಿವನ ||೧೭||

ದಿನದಿನಕೆ ಆಯುಷ್ಯ ಕ್ಷೀಣವು
ತನಗೆ ಪ್ರಾಯವು ಹೋಗುವದು ನಿಜ
ತನುವ ಭಕ್ಷಿಪ ಕಾಲನಾಕ್ಷಣ ಲಕ್ಷ್ಮಿ ಸ್ಥಿರವಲ್ಲಾ |
ಇನಿತು ತೋಯತರಂಗ ಪರಿಯಲಿ
ಎನಗೆ ತೋರಿತು ಮಿಂಚಿನಂದದಿ
ನಿನಗೆ ಶರಣನು ಬಂದೆ ರಕ್ಷಸು ಜೀವಭ್ರಮೆ ಬಿಡಿಸಿ ||೧೮||

ಕರಚರಣ ಕಿವಿ ವಾಕ್ಕು ಜಿಂಹ್ವೆಯು
ಹರಿವ ನಯನವು ಮತ್ತೆ ಮನಸಿನ
ಪರಿಪರಿಯ ಅಪರಾಧ ವಿಹಿತಾ ವಿಹಿತವೆಲ್ಲವನು |
ತ್ವರಿತದಿಂದಲಿ ಕ್ಷಮಿಸು ಸರ್ವವು
ಹರನೆ ಜಯ ಜಯ ಕರುಣಸಾಗರ
ನಿರುಪಮನೆ ನಿಜಲಿಂಗ ದೇವರದೇವ ಮಹದೇವ ||೧೯||

ಇಂತು ಶಂಕರಭಾರ್ತಿ ಗುರುವಿನ
ಅಂತರಂಗದ ತಾಪಲಕ್ಷಣ
ಎಂತು ಪೇಳಲುಬಹುದು ಜಗದೋದ್ಧಾರಗೋಸುಗುವ |
ಅಂತಿದೆಲ್ಲವ ತೋರಿದನ: ಗುರು
ಭ್ರಾಂತಿ ತೊರೆದನು ಬ್ರಹ್ಮ ಭಾವದಿ
ಚಿಂತಿಯಿಲ್ಲದ ಮನೆಯ ಹೊಗಿಸಿದ ಮೂಢ ಪಾಮರನ ||೨೦||

ಮನಸು ಒಗಡುಸುತನಕ ವಿಷಯದ
ಮನವು ಉನ್ಮನವಾಗಬಲ್ಲುದೆ
ಮನವು ಉನ್ಮನವಾಗೋತನಕ ಘನವು ದೊರಕುವುದೇ |
ಘನವು ದೊರಕದೆ ಶಾಂತಿಬಾರದು
ಜನನ ಮರಣವು ಹಿಂಗಲರಿಯೆವು
ತನುವು ಜಡವಿದು ಹೊತ್ತು ಬಂದುದರಿಂದ ಫಲವೇನು ||೨೧||

ಜರಿದು ಮನಸಿನ ಪಂಚವಿಷಯವ
ಹರಿದು ಗುರುವಿನ ಪಾದಕಮಲಕೆ
ಬೆರೆದು ಹೋಗುವೆನೆಂದು ಯೋಚಿಸಿ ಬರಲು ಸನ್ನಿಧಿಗೆ |
ಕರೆದು ತನ್ನಯ ಮುಂದೆ ಎನ್ನಯ
ಶಿರದಲಿಟ್ಟನು ಅಭಯಹಸ್ತವ
ಒರೆದನಾಗಳೆ ತತ್ವಮಸಿ ಮಹವಾಕ್ಯದುಪದೇಶ ||೨೨||

ಕಡಿದುಹೋಯಿತು ಮನದ ತಾಪವು
ಒಡಿಯ ಗುರುವಿನ ವಾಖ್ಯದಿಂದಲಿ
ಜಡಿದುಹೋದೆನು ಪಾದಕಮಲಕೆ ಎರಕದಿಂದಲಿ |
ಬಿಡದು ಗುರುವಿನ ಮೋಹವೆಂದಿಗು
ಸಡಗರವ ನಾನೆಷ್ಟು ಹೇಳಲಿ
ಮೃಡನೆ ಬಲ್ಲನು ಸುಖದ ಬಗೆಯನು ಅಂತರಂಗದಲಿ ||೨೩||

ಪರುಷ ಕಬ್ಬಿಣ ಸೋಂಕಿದಾಗಲೆ
ತ್ವರಿತದಲಿ ಹೇಮಾಗಿ ನಿಲ್ವದು
ಸ್ಪರ್ಶವಾಗಲು ಗುರುಕೃಪಾಕರ ಜೀವ ಬ್ರಹ್ಮಾದ |
ನಿರಸವಾಗದು ಎಂದಿಗಾಸುಖ
ಬೆರಸಿದನು ಗುರು ತನ್ನ ಪದದಲಿ
ಹರುಷವಿಡಿಯಲು ಗಗನವದು ಪರಬ್ರಹ್ಮಮಯವಾಯ್ತು || ೨೪||

ಒಂದು ಶ್ಲೋಕಕೆ ಒಂದು ಪದವನು
ತಂದೆ ಗುರುಗೋವಿಂದನಾಜ್ಞದಿ
ಕಂದ ಪೇಳಿದ ಜ್ಞಾನಬೋಧೆಯ ಸ್ತೋತ್ರವಪರಾಧ |
ಕುಂದು ಹೆಚ್ಚನು ಏನು ನೋಡದೆ
ಮಂದಮತಿ ಹೇಳಿಹನು ಜ್ಞಾನಿ-
ವೃಂದ ಕೇಳ್ವದು ಸಾಧುಸಂತರು ಪರಮ ಕರುಣದಲಿ || ೨೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನ ಹಯವೇ! ನಿನಗೆ ವಂದನೆ!
Next post ಸನ್ಮತಿ

ಸಣ್ಣ ಕತೆ

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…