ಮೂಲಾತ್ಮ

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ
ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು
ಆಗುವುದು ಆಗುವುದು ಏನೇನೊ ಮನಕೆ
ಭೋಗವನು ಚಣಕಾಲ ತಳ್ಳೆ ಪದತಲಕೆ
ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು
ಹದವನರಿಯದೆ ಎಲ್ಲೊ ಸುಳಿಯುತಿತ್ತು
ಬಯಲಾಯ್ತು ಬಯಲಾಯ್ತು ಬಟ್ಟಬಯಲಾಯ್ತು
ಸೃಷ್ಟಿಕರ್ತನ ಗುಟ್ಟು ತಿಳಿಯಲನುವಾಯ್ತು
ಮುದವಾಯ್ತು ಮುದವಾಯ್ತು ಏನೊ ಮುದವಾಯ್ತು
ಮಧುರ ಭಾವದ ಒಂದು ಸ್ಪರ್ಶವಾಯ್ತು ೧೦

ಬದಲಾಯ್ತು ಬದಲಾಯ್ತು ವಿಶ್ವ ಬದಲಾಯ್ತು
ಇದುವೆ ಅವನೆಂಬ ನುಡಿ ಸತ್ಯವಾಯ್ತು
ಅಳವಲ್ಲ ಅಳವಲ್ಲ ಬಣ್ಣಿಸಲು ಇದನು
ಧೂಳಿನಾ ಕಣಕಿಂತ ಕಿರಿಯಳಹ ನಾನು
ಏನಿಹುದೊ ಏನಿಹುದೊ ಎನ್ನೊಳಗೆ ಹೊರಗೆ
ನಾನರಿಯೆ ಸಣ್ಣವಳು ಈ ವಿಶ್ವದೊಳಗೆ
ಕೊನೆಯೇನೊ ಮೊದಲೇನೊ ಇದರ ಪೆಸರೇನೊ
ಅಣು ಮಹತ್ತುಗಳೊಳಗೆ ತುಂಬಿರುವುದೇನೊ
ತಿಳಿಯುವೆನು ತಿಳಿಯುವೆನು ಮುಂಬೆಳಕ ತರಿಸು
ಮಣಿಯುವೆನು ಅಡಿಗಡಿಗೆ ಎನ್ನ ಘನ ಪಡಿಸು ೨೦

ಕೊಳಲಿನಿಂ ಶ್ರಾವ್ಯವಹ ಗಾನವನು ನುಡಿಸು
ಸುಳಿಸುಳಿದು ಹಣ್ಣಾದ ಬಳಲಿಕೆಯ ಮರಸು
ಜ್ಞಾನದಾ ಉಜ್ವಲದ ಸರಸತಿಯ ಕರಸು
ನೀನೆನಗೆ ಆ ದೇವಿಯಭಯವನು ಕೊಡಿಸು
ಪಯಣದಿಂ ಪಯಣವನು ಬೆಳೆಸು ಎನ್ನೊಡನೆ
ಕೇಕೆ ಹಾಕುತ ನಡೆವೆ ನಾನು ನಿನ್ನೊಡನೆ
ನುಗ್ಗುವೆನು ನಗ್ಗುವೆನು ಇದರೊಳಗೆ ನಾನು
ಸುಗ್ಗಿ ಬೆಳಸಿನ ಊಟವುಣಿಸು ಬಾ ನೀನು
ಸಾಗುವೆನು ಸಾಗುವೆನು ತೆಪ್ಪದೊಳು ತೇಲಿ
ದಾಟುವೆನು ಕುಪ್ಪಳಿಸಿ ಬಂಧನದ ಬೇಲಿ ೩೦

ಮೇರು ಗಿರಿಯುತ್ತುಂಗ ಶಿಖರವನು ಏರಿ
ಬಾಂದಳಕೆ ಮುಟ್ಟಿಸುವೆನೆನ್ನ ಜಯಭೇರಿ
ಜಲಚರ ಗಹ್ವರ ಮೂಸೆಯೊಳು ತೂರಿ
ಒಳಗಣಾ ಕೃತಿಗಳೊಳು ಪರಿಕಿಸುವೆ ದಾರೆ
ಆಗಸದ ಆ ಸೊಗದ ಎತ್ತರಕೆ ಹಾರಿ
ಆನಲ್ಲಿ ಸುಖಿಸುವೆನು ಶೃಂಖಲೆಯ ಮೀರಿ
ಆ ರವಿಯ ಆ ಶಶಿಯ ರಾಜ್ಯದೊಳು ಸುಳಿದು
ಆ ನಿಯಮ ಶಾಸನವ ಶೋಧಿಪೆನು ತಿಳಿದು
ಚುಕ್ಕೆಗಳ ತೆಕ್ಕೆಯೊಳು ಮಿಳಿತವಾಗುವೆನು
ನಿಚ್ಚಳದ ಬಾಂದಳದಿ ತೂಗಿ ನಲಿಯುವೆನು ೪೦

ಆಡುವೆನು ಪಾಡುವೆನು ಬಾನ ಬಯಲಿನೊಳು
ಬಹುಮುಖದ ಜೋತಿಗಳ ನಿನ್ನ ಬೆಳಕಿನೊಳು
ಮಿಂಚೊಡೆದು ಗರ್ಜಿಸುವ ಮೇಘ ನಾನಾಗಿ
ಇಳಿಯುವೆನು ಜೊಳಜೊಳನೆ ಧರೆಗೆ ಹನಿಯಾಗಿ
ಹುಟ್ಟುವೆನು ಬಹುವಿಧದ ಸಸ್ಯ ಬೆಳಸಾಗಿ
ಮೂಡುವೆನು ಲತೆಯೊಡೆದ ಸುಮನಿಕರವಾಗಿ
ಬಾಗುವೆನು ಬನರಾಣಿಯಲರು ನಾನಾಗಿ
ಪೂಗಳೊಳು ಪುಟ್ಟುವೆನು ಸುಮಗಂಧವಾಗಿ
ಕಾಣುವೆನು ಭೂಗುಣದಿ ನಿನ್ನ ಬಹುಪರಿಯ
ರಸಗಳಲಿ ತುಂಬಿರುವ ದಿವ್ಯ ವೈಖರಿಯ ೫೦

ಕೂಗುವೆನು ಕೋಗಿಲೆಯ ಕಂಠದೊಳು ಬೆರೆತು
ಹೀರುವೆನು ಮಧುರಸವ ಭೃಂಗದೊಳು ಕಲೆತು
ಮೂಡುವೆನು ಬಹುಕೋಟಿ ಪ್ರಾಣಿ ಜೀವದೊಳು
ನೋಡುವೆನು ಏನಿಹುವೊ ನಿನ್ನ ಮಹಿಮೆಗಳು
ಭಾವದೊಳು ಭಾಷೆಯೊಳು ಜಡಚೇತನದೊಳು
ಶಬ್ದನಿಶ್ಶಬ್ದ ದೊಳಗೇನಿಹುದೊ ಅರಿವೆ
ಮಣ್ಣಿನೊಳು ಲೋಹದೊಳು ಪಂಚಭೂತದೊಳು
ನಿನ್ನಿರವ ತಿಳಿಯುವೆನು ಉಷ್ಣ ಶೀತದೊಳು
ಯೋಗದೊಳು ರಾಗದೊಳು ಸರ್ವೇಂದ್ರಿಯದೊಳು
ಚಲಿಸುವೆನು ಆ ನಿನ್ನ ಸರ್ವಶಕ್ತಿಯೊಳು ೬೦

ಯೋಗಿಯೊಳು ಭೋಗಿಯೊಳು ದ್ವಂದ್ವ ಕುಟಿಲದೊಳು
ಅಣು ಘನಗಳೊಳು ನಿನ್ನ ಮಹಿಮೆಗಳ ತಿಳಿವೆ
ನಿದ್ರೆಯೊಳು ಸ್ತಬ್ಧದೊಳು ಬುದ್ಧಿಗಾಚೆಯೊಳು
ನಿನ್ನಿರವನರಿಯುವೆನು ನಿರ್ವಿಕಲ್ಪದೊಳು
ಗಾನದೊಳು ಧ್ಯಾನದೊಳೂ ಚೆನ್ನು ಚೆಲುವಿನೊಳು
ನಾನೊಮ್ಮೆ ಸುಳಿಯುವೆನು ಅಂತರಾತ್ಮನೊಳು
ಬೀಭತ್ಸ ದಳ್ಳುರಿಯ ತಾಕಲಾಟಗಳ
ಪುಟ್ಟಿಸು ಅಡಗಿಸುವ ಚಿಚ್ಛಕ್ತಿ ಕಾಂಬೆ
ಋತುವಾಗಿ ಹಿಮವಾಗಿ ಕಡಲಿನೆಲೆಯಾಗಿ
ಕ್ಷಿತಿಯೊಳೆಲ್ಲವ ಪೊಕ್ಕು ಬರುವೆ ಮುದವಾಗಿ ೭೦

ಬಿದಿಯಾಗಿ ನೀನೆನ್ನ ಬೆದರಿಸಲು ಬಂದು
ಅದನೊಂದು ಲೆಕ್ಕಿಸದೆ ಸಾಗುವೆನು ಮುಂದು
ಹಾರುವೆನು ಹಕ್ಕಿಗಳ ಗುಂಪಿನೊಳು ಸೇರಿ
ವಾಯುವಗ್ನಿಯು ಸುಳಿವ ತಾಣದೊಳು ತೂರಿ
ಜಠರಾಗ್ನಿ ಭೂಕಂಪ ಪ್ರಳಯ ಪಲ್ಲಟವ
ಹಿಲ್ಲೋಲ ಕಲ್ಲೋಲಗಳನೆಲ್ಲ ತಿಳಿವೆ
ಬುವಿಗಾಚೆ ಬಾನಾಚೆ ಜೀವತ್ವದಾಚೆ
ಏನಾಗಿ ನೀನಿಹೆಯೊ ನಾನದನು ಕಾಂಬೆ
ಆತ್ಮಗಳ ಮೂಲಾತ್ಮ ನೀನಿರುವ ಎಡೆಗೆ
ಪೋಗುವೆನು ಆ ಪುಣ್ಯದುನ್ನತದ ಗುಡಿಗೆ ೮೦

ಕೂಗುವೆನು ದೇಗುಲದ ಅಂಗಳದಿ ನಿಂದು
ವೇಗದಂ ಕದ ತೆರೆದು ಕಾಣು ನೀ ಬಂದು
ದೇದೀಪ್ಯದಾ ಸ್ನಿಗ್ಧ ಕಿರಣಂಗಳಿಂದ
ಶೋಭಿಸುವ ನಗೆಮೊಗವ ತೋರು ನೀ ಬಂದು
ಜ್ಞಾನಾರ್ಜನೆಯ ಮೊತ್ತಗಳ ಪುಣ್ಯಪುರುಷಾ
ನೀನೆನಗೆ ಅಭಯವನು ನೀಡು ಸರ್ವೇಶ
ತಗ್ಗುವೆನು ಕುಗ್ಗುವೆನು ಬಗ್ಗಿ ಮಣಿಯುವೆನು
ಹಿಗ್ಗಿನೊಳು ನಿನ್ನೆಡೆಯ ಸೇರಿ ತಣಿಯುವೆನು
ಬಾಗುವೆನು ಶರಣೆಂದು ದಾಸಿ ನಾನಾಗಿ
ಕರುಣವಂ ತೋರು ಜಗದೊಡೆಯ ನೀನಾಗಿ ೯೦

ಭಾರತದ ಕೊಳುಗುಳವನೊಲ್ಲದರ್ಜುನಗೆ
ನೀನೊರೆದುದೆಲ್ಲವಂ ಒಮ್ಮೆ ಅರುಹೆನಗೆ
ತಿಳಿವುದಕೆ ಮಿಗಿಲಾದ ನೋಟಕಬ್ಬರಮಾದ
ನಿನ್ನ ಧ್ಯೇಯವ ತಿಳಿಸು ಪರಮಪಾವನದ
ನುತಿಸುವೆನು ಬಕುತಿಯಿಂದ ತೂಗಿ ನಲಿದಾಡಿ
ಅದ್ಭುತದ ಚಾತುರ್‍ಯವಿದನು ಕೊಂಡಾಡಿ
ಪಿರಿದಣ್ಣ ಪಿರಿದಣ್ಣ ನೀನು ಬಹು ಪಿರಿದು
ನಿನ್ನಿರವ ತಿಳಿಯಲ್ಕೆ ನಾನು ಬಹು ಕಿರಿದು
ಜಾಣನೋ ಜಾಣನೋ ಓ ವಿಶ್ವಶಿಲ್ಪಿ
ಕಾಣೆವೋ ಮಾನವರು ನಿನ್ನ ಮಹಿಮೆಗಳ! ೧೦೦

ಚೆಲುವೇನು ಚೆಲುವೇನು ನಿನ್ನ ಚೆಲುವೇನು
ಆವ ಪೆಸರಿಟ್ಟು ಕರೆಯಲಿ ಇದಕೆ ನಾನು
ಸೊಗಸೇನು ಸೊಂಪೇನು ಇದರ ಘನವೇನು
ನಗಿಸಿ ಅಳಿಸುತಲಿರುವ ನಿನ್ನಾಟವೇನು
ಸಿಹಿಯೇನು ಕಹಿಯೇನು ಕರುಣರಸವೇನು
ಬರುತ ಪೋಗುತಲಿರುವ ಪಯಣಂಗಳೇನು
ಹಿಗ್ಗೇನು ಹಿರಿದೇನು ಚಿರಕಾಂತಿಯೇನು
ನುಗ್ಗು ನೂಕುಗಳೇನು ಗದ್ದಲವಿದೇನು
ಕಾಲಗಣನೆಗಳೇನು ವಸತಿ ಸತ್ರಗಳೇನು
ನಾನು ಮಾಡುವುದೇನು ನೀ ಗೈವುದೇನು? ೧೧೦

ನಾಕ ನರಕಗಳೇನು ನಾಟಕದ ಗುಟ್ಟೇನು
ಪಾಪ ಪುಣ್ಯಗಳೇನು ಬುಗುರಿಯಾಟಗಳೇನು
ಹೆಣ್ಣೇನು ಗಂಡೇನು ಬಹುಮುಖಗಳೇನು
ನಿನ್ನ ಸೋಗುಗಳೇನು ಸಮರಿಲ್ಲವೇನು?
ಜ್ಞಾನಜೋತಿಯು ಒಳಗೆ ಅಜ್ಞಾನವದು ಹೊರಗೆ
ನಾನೆ ಬಹುಪರಿದೆಂದು ಜಾಣ್ಮೆ ತೋರಿಹೆಯಾ?
ಬೀಜ ನೀನೊಂದಾಗಿ ಸಸಿಯು ನೂರೆಂಟಾಗಿ
ಬಹುಕೋಟಿ ಕವಲಾಗಿ ಬಾಳುತಿಹೆಯಾ?
ನಿತ್ಯ ನಿರ್ಮಲನಾದ ಪರಮಪಾವನನೇ
ಸತ್ಯದಾ ಸೊಡರಾಗಿ ಬಾಳುತಿಹೆಯಾ? ೧೨೦

ಅಹುದಹುದು ಅಹುದಹುದು ನಿನಗೆ ಪರಿದಿಲ್ಲ
ನೀನಿಲ್ಲದೆಡೆ ಇಲ್ಲ ನಿನಗೆ ಸಮರಿಲ್ಲ
ಹುಟ್ಟುತಿರುವುದು ನೀನೆ ಲಯವಾಗುದು ನೀನೆ
ಕತ್ತಲಿಸಿ ಬೆಳಗಿಸುವ ನಿತ್ಯವದು ನೀನೆ
ಭಾರತ ಪುರಾಣಗಳ ಸಾರಸುಖ ನೀನೆ
ಸಾರುತಿಹ ವೇದಗಳ ಸಾರವದು ನೀನೆ
ಬ್ರಹ್ಮ ವಿಷ್ಣು ಮಹೇಶ ಕಲಿರಾಜ ನೀನೆ
ಅಸುರ ಮಾನವ ದೇವ ದೇವಿಯರು ನೀನೆ
ಒಕ್ಕಡೆಗೆ ಭಕ್ತಗಣ ಒಕ್ಕಡೆಗೆ ವೈರಿಗಣ
ಮುಕ್ಕೋಟಿ ರೂಪಗಳ ಮೂಲವದು ನೀನೆ! ೧೩೦

ಆಗಾಗ ಆದರ್ಶ ಜನ್ಮವನು ತಾಳಿ
ಭರತಭೂಮಿಯ ಧ್ವಜವನೆತ್ತುವನು ನೀನೆ
ವೈಭವದ ಕೋಟೆಗಳ ಗೋಪುರಾಗ್ರಗಳ
ಸಿಂಗರದ ರಾಜ್ಯಗಳ ರಚಿಸಿದವ ನೀನೆ
ಹಿಮಗಿರಿಯೆ ಮೊದಲಾದ ಗಿರಿಗಳಂ ನಿಲಿಸಿ
ಗಂಗೆ ಯಮುನೆಯ ಝರಿಯ ತರಿಸಿದವ ನೀನೆ
ಮುತ್ತು ಮಾಣಿಕ ಪಚ್ಚೆ ರತ್ನಗಳ ಸೃಜಿಸಿ
ಪುಷ್ಪ ಫಲ ಪೈರುಗಳನಿತ್ತವನು ನೀನೆ
ಪರ್ಣಶಾಲೆಗಳೊಡನೆ ಮುನಿಗಳನು ತೋರಿ
ನಿನ್ನ ಪ್ರಭೆಗಳ ಸೂರೆ ಚೆಲ್ಲಿದವ ನೀನೆ ೧೪೦

ಭರತಭೂಮಿಯ ಸರ್ವಮಂಗಳದ ಸಿರಿಯು
ಯಜ್ಞಯಾಗವು ಹೋಮ ದೂಮಗಳು ನೀನೆ
ಧರ್ಮಸ್ಥಾಪಕರೆಂದು ಪೆಸರಾಂತು ಪೋದ
ವಾಲ್ಮೀಕಿ ಬುದ್ಧ ಗುರು ಶಂಕರರು ನೀನೆ
ಅಲ್ಲಲ್ಲಿ ಪಿರಿದೆನಿಪ ಕ್ಷೇತ್ರಗಳನಿರಿಸಿ
ಪೂಜೆಗಳ ಕೈಕೊಳುವ ಪುಣ್ಯಾತ್ಮ ನೀನೆ
ಛತ್ರ ಚಾಮರ ರಥಗಳಿಂದ ಶೋಭಿಸುತ
ಭಕ್ತರಿಗೆ ಜಾತ್ರೆಗಳ ನಡಸುವವ ನೀನೆ
ಸಂಗೀತ ಸಾಹಿತ್ಯ ನಾಟ್ಯ ಶಿಲ್ಪಗಳ
ಬಗೆಬಗೆಯ ಭಾವಗಳ ಕಲ್ಪನೆಯು ನೀನೆ! ೧೫೦

ಚಿಗುರಿಟ್ಟು ತೆನೆಯೊಡೆದ ಪಚ್ಚೆ ಪಯರಿನೊಳು
ತುಂಬಿ ತುಳುಕುತಲಿರುವ ಸೌಂದರ್ಯ ನೀನೆ
ಪುಣ್ಯಮಯ ಭಾರತದ ಭವನದೊಳಗಿರುವ
ಜೀವನಾಧಾರವಹ ಗ್ರಂಥಗಳು ನೀನೆ
ನೀನೆ ತನ್ಮಯನಾಗಿ ತುಂಬಿರುವೆ ಇಳೆಯ!
ಮಾನುಷವು ಮಥಿಸುತಿದೆ ಅರಿತುಕೊಳ್ಳಲು ನಿನ್ನ
ನಾನರಿಯೆ ನಾನರಿಯೆ ಪಾಮರಳು ದೇವ
ಹುಚ್ಚು ಹೊಳೆ ಹರಿದೊಡನೆ ಕಾಣುವುದೆ ಕಡಲ
ಸುತ್ತಿಬಂದರೆ ಏನು ಪಕ್ವವಾಗದ ಮನವು
ಅಜ್ಞಾನಿ ನಾ ನಿನ್ನ ಮಹಿಮೆ ತಿಳಿಯುವೆನೆ? ೧೬೦

ಬತ್ತಿ ಬರಿದಾಗಿರುವ ಜೀವವಿದು ಗುರುವೇ
ಮುನ್ನಡೆವ ಮಾರ್ಗವಂ ಕಾಣದಾಗಿಹೆನು
ಎತ್ತಣದೊ ಈ ಜನ್ಮವೇಕೆ ಬಂದಿಹುದೊ
ಜೀವನ ರಹಸ್ಯವೇ ತಿಳೀಯದಂತಿಹುದು
ವ್ಯರ್ಥವಪ್ಪುದು ಕಾಲಕೃತ್ಯವೊಂದರಿಯದೆ
ವಿಶ್ವಚಿತ್ರವ ನೋಡಿ ಸ್ತಬ್ಧಳಾಗಿಹೆನು
ಧನಿಕನಾಗಿಹನೊರ್ವ ತಿರುಕನಾಗಿಹನೊರ್ವ
ಕರುಣಿಯಾಗಿಹನೊರ್ವ ಕಠಿನ ತಾನೊರ್ವ
ಧೂರ್ತ ದುಷ್ಕೃತನೊರ್ವ ಸಾಧುಸಜ್ಜನನೊರ್ವ
ಕುರುಡ ಕುಂಟನದೊರ್ವ ಚೆಲ್ವ ತಾನೊರ್ವ ೧೭೦

ನ್ಯಾಯವೆಂಬುದದೆಲ್ಲೊ ಮೂಲೆಯೊಳಗಡಗಿಹುದು
ಮನಬಂದ ತೆರದಂತೆ ವಿಶ್ವ ಕುಣಿಯುವುದು
ಆವ ಮರೆಯೊಳು ನಿಂತು ನಡಸುತಿಹೆ ಇದನು
ಆವ ಬಳಿಗೈದಿದರೆ ಕಾಣುವೆಯೊ ನೀನು
ದೇವನೆಂಬುವ ನಿನ್ನ ನೋಡಲರಿಯದೆ ನಾನು
ಭವದೊಳಗೆ ಮುಳುಮುಳುಗಿ ನರಳುತಿಹೆನು
ಎನ್ನ ಪೋಷಣೆಗೈವ ದಾತ ನೀನಿರುತಿಲು
ಅನ್ಯರಿಗೆ ಮೊರೆಹೊಕ್ಕು ಬಳಲುತಿಹೆನು
ಎನ್ನಸುವ ತುಂಬಿಸುವ ಫಲವೆ ನೀನಾಗಿರಲು
ಗಿಡದ ಫಲಗಳ ಬಯಸಿ ಬಾಯ್ದೆರೆಯುತಿಹೆನು ೧೮೦

ನಿನ್ನೊಮ್ಮೆ ಕಾಣುವೆನು ಬಾರಯ್ಯ ಗುರುವೇ
ಮನದ ಕದ ತೆರೆದು ನಾ ಕಾದು ನಿಂತಿರುವೆ
ಬಂದನೆಂದರು ಕೆಲರು ಕಂಡೆವೆಂದರು ಕೆಲರು
ಮಂದಮತಿ ಇವಳೆಂದು ಬಾರದಿಹೆಯಾ?
ಕರ್ಣಕುಂಡಲ ದಿವ್ಯಮಣಿ ಮುಕುಟಧರನೇ
ಧೂಳಿ ಮುಸುಕಿದ ಮನೆಯು ನಿನಗೊಲ್ಲದೆ?
ಬಾಳಕಡಲಿನ ಮಧ್ಯೆ ತೇಲಿ ಸಾಗುತಲಿರಲು
ಬಿರುಗಾಳಿಯೊಂದೆದ್ದು ಬಡಿವುದೊಮ್ಮೆ
ನಾವೆ ಮುಳುಗುವುದೆಂದು ಆತುರದಿ ನಾ ಸಾಗೆ
ಕಾಳರಾತ್ರಿಯು ಬಂದು ಕವಿವುದೊಮ್ಮೆ ೧೯೦

ಗುಡುಗಿ ಮುಗಿಲದು ಮಿಂಚಿ ಭೋರೆಂದು ಹನಿಯೆ
ಅಪ್ಪಳಿಸಿ ಈ ನಾವೆ ಸುಳಿವುದೊಮ್ಮೆಮ್ಮೆ
ಮುನ್ನಡೆವ ಪಯಣಿಗರು ಬಾರೆಂದು ಕೂಗುತಿರೆ
ಹಿಂದುಳಿದ ಜನರೆಲ್ಲ ತಾಳು ತಾಳೆಂಭರೋ
ಇರು ನಿಲ್ಲು ಸರಿಯಲ್ಲ ಗಿರಿಶೈಲ ಮುಂದಿಹುದು
ದಾರಿ ತಪ್ಪದೆ ಮೂಳಿ ತಿರುಗೆನ್ನುತಿಹರು
ದೇವನೆಂಬವನೊಬ್ಬ ನಾವಿಕನ ಸಾಯದಿಂ
ಊರು ಸೇರಿದೆವೆಂದು ಕೆಲವರೆನ್ನುತಿಹರು
ದಾರಿಗಾಣದೆ ನಿನ್ನ ಕಾದು ನಿಂತಿಹೆನಿಲ್ಲಿ
ಸುತ್ತ ನೋಡುತಲಿರುವೆ ಸುಳಿವಿಲ್ಲ ಎಲ್ಲೂ ೨೦೦

ಬಾರಯ್ಯ ಮೂಲಾತ್ಮ ಶರಣೆಂಬೆ ನಿನಗೆ
ಊರು ಸೇರುವ ದಾರಿ ತೋರು ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನಿಗಳು
Next post ಮೂನ್‌ಮೂನಣ್ಣ

ಸಣ್ಣ ಕತೆ

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys