ನಾಸಿರ್‌ ಇಬ್ನ್‌ ಅಹಮದ್‌

ನಾಸಿರ್‌ ಇಬ್ನ್‌ ಅಹಮದ್!
ಯಾರಿಗೆ ತಾನೆ ಗೊತ್ತಿಲ್ಲ ಅವನ ?
ಸಾಮನೀದ್‌ ರಾಜವಂಶದ ಅಮೀನ
ಅವನಲ್ಲಿ ನಮಗೆ ಅಪಾರ ವಿಶ್ವಾಸ-ಆತ

ಹೋದ ಹೋದಲ್ಲಿ ರಕ್ಷಣೆಯ ಪಡೆ,
ಸೇವಕರ ದಂಡು,
ಬುಖಾರಾದವರು ಸ್ವಾಮಿ, ನಾವು.

ಕಸುವಿರುವ ನೆಲ, ಫಲಭರಿತ ಹೊಲ
ನಮ್ಮ ಸಂತೋಷಕ್ಕೆ ದುಡಿಮೆ ಸ್ಫೂರ್ತಿ
ಜನರ ಅದೃಷ್ಟ, ಅದು ಅಂಥ ಕಾಲ
ಬೊಕ್ಕಸದಂತೆ ಜೇಬುಗಳೂ ಭರ್ತಿ

ಮಾಗಿಯನು ಕಳೆಯುತಿದ್ದೆವು
ರಾಜಧಾನಿಯಲಿ, ಬೇಸಿಗೆಯನ್ನು
ಸಮರ್‌ಖಂಡದಲ್ಲಿ
ಅಥವ ಖೋರಾಸಾನದ ಇತರ ಇಂಥದೇ
ಒಂದು ಚಲೋ ಸ್ಥಳದಲ್ಲಿ

ಹೀಗಿರಲು ಬಂತೊಮ್ಮೆ
ಹೆರಾತಿನ ಸರದಿ-ಆ ವರ್ಷ
ಬಾದ್ಗೀಶ್‌ ಎಂಬಲ್ಲಿ ವಸಂತವ ಕಳೆದು
ನಂತರ ಹೆರಾತಿನಲಿ ಬೇಸಿಗೆಯೆಂದು ತೀರ್ಮಾನ

ಆಯ್ತು. ಬಾದ್ಗೀಶೊ ! ತಲೆಯೆತ್ತಿ
ನೋಡಿದ ಕಡೆ ಬೆಟ್ಟಗಳೆ !
ಬೆಟ್ಟಗಳ ಮೇಲಿಂದ
ಬರ್‍ಫದ ಗಡ್ಡೆ ಜರಿದು
ಹಳ್ಳಗಳು, ಸ್ವಾಮಿ, ಹಳ್ಳಗಳು-ಆಚೀಚೆ
ಹಸಿಹುಲ್ಲ ವಿಶಾಲ ಬಯಲುಗಳು ಅಂಥಕಡೆ
ಕೊಬ್ಬಿದರೆ ನಮ್ಮ ಒಂಟೆ ಕುದುರೆಗಳು
ಆಶ್ಚರ್ಯವೇನಿಲ್ಲ.

ಕೆಲವು ದಿನ ಕಳೆದು
ವಸಂತಕ್ಕೆ ಮೊದಲೆ
ಹೆರಾತನು ನಾವು ಸೇರಲೇಬೇಕೆಂದು
ಎತ್ತಿದುದಾಯ್ತು ಡೇರೆ

ಆಮೇಲೆ ! ಆಹ ! ಆಮೇಲೆ ನಾವು
ಹೆರಾತನೆಂದೂ ಸೇರಲೇ ಇಲ್ಲ
ಕಾರಣವಿಷ್ಟೆ : ಊರ ಹೂರಗೊಂದು ಊರು
ಮಾರ್ಗ್-ಇ-ಸಪೀದ್‌ ಎಂದು
ಆ ಊರ ಹೆಸರು

ಏನು ಯಾತಕೆ ಎಂದು
ತಿಳಿವ ಮೊದಲೇ
ತಳವುರಿದರು ನಮ್ಮ
ಅಮೀನರು ಅಲ್ಲೇ !

ಉತ್ತರದ ಕಡೆಯಿಂದ ಬಂದಂಥ ಗಾಳಿ
ಬೆಟ್ಟಗಳ ಹಾದು ದಣಿದ ಘಳಿಗೆ
ದಕ್ಷಿಣದ ಕಡಯಿಂದ ಬಂದಂಥ ಹಕ್ಕಿ
ಕಡಲಾಚೆಗಿನ ಹಾಡು ಕಂಠದೊಳಗೆ

ಆಮೇಲೆ ವರ್ತಕನು
ಆಮೇಲೆ ನರ್ತಕಿಯ
ಇಳಿಗಣ್ಣ ನಾವಿಕನು
ಕನಸಿನೊಳಗಿಂದ

ಒಂದು ಇಡಿ ದೇಶವೇ
ಅರ್ಧ ನಿದ್ದೆಯೊಳಿತ್ತು
ಸ್ಪರ್ಣವೃಕ್ಷದ ಮೇಲೆ
ಹಕ್ಕಿ ಕುಳಿತಿತ್ತು
ಅದರ ರೆಕ್ಕೆಗೆ ಕೂಡ
ಚಿನ್ನದ ರಂಗಿತ್ತು
ಕೆಂಪು ಹವಳದಲಿ
ಕಣ್ಣುಗಳ ಮಾಡಿತ್ತು.

“ಇದು ಪುರಾತನ ಹಕ್ಕಿ”
– ಎಂದು ಹೇಳಿದನು ವರ್ತಕ:
“ಫೇರೊ ಕೂಫುವಿನ ಗೋರಿಯೊಳಗಿಂದ
ಗೋರಿಕಳ್ಳರಿದನ್ನು ಅಗೆದು ತೆಗೆದರು
ಅವರಿಂದ ಕೊಂಡು ತಂದಿರುವೆ, ದೊರೆಯೇ !
ಇದು ಇದ್ದಲ್ಲಿ ಸೌಂದರ್ಯ, ಇದ್ದಲ್ಲಿ ಐಶ್ವರ್ಯ,
ಲಕ್ಷ ವರಹಕ್ಕೆ ನಿಮ್ಮದಾಗುವುದು.”

“ಫೇರೊ ಕೂಫುವಿನ ಮಗಳೇ ನಾನು
ಅಪ್ರತಿಮ ಸುಂದರಿ”
– ಎಂದಳಾ ನರ್ತಕಿ :
“ಹತ್ತರಲಿ ನೆರೆದೆ, ಹನ್ನೊಂದರಲಿ ಕುಣಿದೆ
ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡುವರು
ಸೂರ್ಯಕಿರಣಗಳಂತೆ ಕಣ್ಣುಗಳು
ಅವು ನಿದ್ರೆಯನೆ ಮರೆಸುವುವು.”

ನೀ ಮಾತ್ರವೇ ಯಾಕೆ
ಮಾತಾಡದಿರುವೆ
ಇಳಿಗಣ್ಣ ನಾವಿಕ
ನಿನ್ನ ಕತೆಯೇನು?

“ಕಣ್ಣು ಕಡಲಾಗಲಿ, ಆ
ಕಡಲಲ್ಲಿ ಒಂದು ಹಡಗ ಮೂಡಲಿ !”
-ಎಂದನವನು

ಜ್ಹರೀನ

ಲೆಬೆನಾನದಿಂದ ಕಾರ್ತೇಜಿಗೆ
ಹೊರಟವರು ನಾವು
ಕ್ರೀಟಿನಲಿ ಸ್ವಲ್ಪ ಸರಕನಿಳಿಸಿದೆವು
ಒಳನಾಡ ಹಣ್ಣುಗಳು
ಬೆಲೆಬಾಳುವ ಕಲ್ಲುಗಳು
ಮದಿರೆಯ ಭಾಂಡಿಗಳು
ನಮ್ಮ ಜತೆ ಇದ್ದುವು.
ಎಲ್ಲಿಂದಲೋ ಬಂದ
ಎಲ್ಲಿಗೋ ಹೊರಟಿದ್ದ
ಪ್ರಯಾಣಿಕರು ಕೂಡ
ಹಲವು ಜನ ಇದರು.

ಆ ಜನರ ಮಧ್ಯೆ
ವಹಾಬ ಮತ್ತವನ
ಎಳೆಪತ್ನಿ ಜ್ಹರೀನ-
ಕಟಕಟೆಯ ಬಳಿ ನಿಂತು
ನೋಡುವಳು ದೂರ
ಬಿಟ್ಟ ನೆಲವ
ಅವಳಿಗಿದೇ ಮೊದಲ
ಸಮುದ್ರಯಾನ.

ಎಲ್ಲ ಸರಿಯಾಗಿತ್ತು ಮೊದಲ ದಿನ
ಹಿತವಾದ ಹವೆ
ಮುಂಗುರುಳ ಮಾತ್ರ
ಆಡಿಸುವಂಥ ಗಾಳಿ
ಆಡುತಿದ್ದರು ಜನರು
ಹಾಡುತಿದ್ದರು, ಬೇಕಷ್ಟು
ಕುಡಿಯುತ್ತಿದ್ದರು-ರಾತ್ರಿ

ಬೆಳಗಾದಾಗ ಮಾತ್ರ
ಎಲ್ಲ ಬದಲಾಗಿತ್ತು
ತೂಫಾನವೊಂದು
ಎದ್ದು ಹೊಡೆಯುತ್ತಿತ್ತು.
ನನಗೆ ಗೊತ್ತಿರಲಿಲ್ಲ
ಪ್ರಜ್ಞೆಯ ತೀರ
ಇಷ್ಟೊಂದು ದೂರವೆಂದು
ಕಾಲು ಮರಗಟ್ಟಿತ್ತು
ಮರಳಲ್ಲಿ ಮಲಗಿದ್ದೆ
ಆಮೇಲೆ ನಿಧಾನ
ಬಿಸಿಲೇರಿ ಮೈಗೆ
ಕಾವು ಹತ್ತಿದ ಸಮಯ
ಎದ್ದು ನಡೆದಾಡಿದೆ
ಅಂದಿರುಳು ಒಂದು
ಗವಿಯಲ್ಲಿ ಕಳೆದೆ.

ಒಂದು ದ್ವೀಪಕ್ಕೆಲ್ಲ
ನಾನೊಬ್ಬನೇ ಒಡೆಯ !
ಸಿಹಿನೀರಿಗೂ, ಚಿಪ್ಪಿ
ಮೀನಿಗೂ !
ನಗಬೇಕೊ ಅಳಬೇಕೊ
ತಿಳಿಯದೇ ನಡೆದೆ.

ಅರರೆ ! ನೋಡಿದರೆ
ಒಂದು ಜತೆ
ಮನುಷ್ಯ ಹಜ್ಜೆ
ಅದರ ಜತೆಗಿನ್ನೊಂದು
ಹುಡುಕುತ್ತ ನಡೆದೆ-
ನಿಜ, ನೀವು ಊಹಿಸಿದ್ದೀ ಸರಿ !
ಒಂದು ಕಲ್ಲಿನಮೇಲೆ
ಕೂತಿದ್ದರವರು
ವಹಾಬ ಮತ್ತು ಜ್ಹರೀನ

ಸಂದರಿ ಜ್ಹರೀನ
ಅವಳ ಬಟ್ಟೆಯೂ ಹರಿದಿತ್ತು

ನಡುಗಡ್ಡೆಯೆಂದರೆ ಅದೊಂದು
ಸ್ಥಳವಲ್ಲ, ಸ್ಥಿತಿ !
ಒಳಗಿರಲಾರೆವು
ಹೊರಗೂ ಬರಲಾರೆವು
ಮುಖ ಮುಖ ನೋಡುತ್ತ
ಆಕಸ್ಮಿಕಕ್ಕೆ ಕಾಯುತ್ತ
ನಮ್ಮ ಕ್ಷಿತಿಜ ಪ್ರಪಂಚದಲಿ

ಒಂದಂತು ಖರೆ !
ಇಬ್ಬರಿರುವಲ್ಲಿ ಒಬ್ಬ ಮಾತ್ರವೆ ಜಾಸ್ತಿ !
ಬಾ ವಹಾಬ !
ನಮ್ಮ ರಕ್ಷಿಸುವ ಹಡಗ
ಎಲ್ಲಿಂದ ನೋಡಿದರೆ
ಕಾಣುವುದೊ ಅಂಥ ಶಿಖರ
ತೋರಿಸುವೆ ನಿನಗೆ
ಬಾ ವಹಾಬ !

ಅಲ್ಲಿಂದ ಬಿದ್ದವರು
ಬದುಕುವ ಸಾಧ್ಯತೆಯೆ ಇಲ್ಲ!
ಅಷ್ಟು ಕಡಿದಾಗಿತ್ತು ಕಂದರ !
* * *

ಮುಖದ ಮಾತಲ್ಲ
ಸುಖದ ಮಾತಲ್ಲ
ಏನು ನೋಡಬೇಕಿಂದಿದ್ದೆ
ಏನು ಮಾಡಬೇಕೆಂದಿದ್ದೆ
ಅದೀಗ ಎಂದು ಬೇಕೋ ಆಗ
ಎಲ್ಲಿ ಬೇಕೋ ಅಲ್ಲಿ-
ಮರಳಲ್ಲಿ
ನೆರಳಲ್ಲಿ
ನೀರೊಳಗೆ
ನೀರ ಹೊರಗೆ
ಬಂಡೆಗಳ
ಮೇಲೆ ಕೆಳಗೆ
ಜ್ಹರೀನ ಮತ್ತು ನಾನು
ಭಯವಿಲ್ಲ
ನಾಚಿಕೆಯಿಲ್ಲ
ಆಯ್ಕೆಗಳೇ ಇರಲಿಲ್ಲ

ಈ ದಿನ ಇದ್ದ ಹಾಗೇ ಇತ್ತು
ಆ ದಿನ ಕೂಡ
ತುಸು ಮೋಡ ಮುಸುಕಿ
ಅಂಥಲ್ಲಿ
ಯಾರದು ನನ್ನ
ಬೆನ್ನ ಹಿಂದೆಯೇ ಬರುತಿರುವ ಹಾಗೆ
ಹಜ್ಜೆಯ ಮೇಲೆ ಹಜ್ಜೆಯ ಸದ್ದು !
ತಿರುಗಿ ನೋಡಿದರೆ ಮಾತ್ರ
ಯಾರಿಲ್ಲ!
ಆದರೂ ನನ್ನ ಶೋಧವ ನಾನು
ಬಿಡಲಿಲ್ಲ
ಸುತ್ತಿದೆ ನನ್ನ ಸಾಮ್ರಾಜ್ಯದ ಉದ್ದಗಲ
ಹಲವು ಸಲ

ಒಂದು ಮುಸ್ಸಂಜೆ
ಬೆಟ್ಟವ ಹತ್ತಿದ್ದೆ
ಬಂಡೆಯ ಮೇಲೆ ಕುಳಿತು
ಕ್ಷಿತಿಜವ ನೋಡುತ್ತಿದ್ದೆ
ಎಲ್ಲ ನೆನಪೂ
ಆಗುವ ಹೊತ್ತು
ಎಲ್ಲ ನೆನಪೂ
ಮಾಸುವಂತಿತ್ತು

ಆಗ ಕೇಳಿತು ಮತ್ತದೇ
ಸದ್ದು ! ಆಹಾ
ಅದು ನನ್ನ
ಹಿಂದೆಯೇ ಇತ್ತು !
ಇಂಥ ಕಂದಕದಲ್ಲಿ ಬಿದ್ದವರು
ಉಳಿಯುವುದಿಲ್ಲ ಯಾರೂ
ಉಳಿಯುವುದು
ಕೇವಲ ಸದ್ದು
ಅವನದೂ
ನನ್ನದೂ

ರುದಾಕಿಗೆ ಮೊರೆ

ಸಾವಿರ ಮಂದಿಯ ಕನಸುಗಳನ್ನೂ
ನಾಸಿರನೊಬ್ಬನೆ ಕಾಣುವನಲ್ಲ !
ಮಾಗ್‌-ಇ-ಸಫೀದಿನ ತೋಟಗಳಲ್ಲಿ
ಹಣ್ಣುಗಳೂ ಮುಗಿಯುವುದಿಲ್ಲ
ದ್ರಾಕ್ಷಿಯೊಂದೇ ನೂರೆಂಟು ವಿಧ
ಒಂದರ ರುಚಿಯೂ ಪ್ರತ್ಯೇಕ ತರ
ಖರ್ಬೂಜದ ಬಗೆ ಹೇಳುವುದೇನು
ಮನಸಿದ್ದಂತೇ ಅವರವರ

ಮಾಗ್‌-ಇ-ಸಫೀದಿಗೆ ದಿನವೂ ಬರುವ
ಗಾಡಿಗಳಲಿ ಜೇನಿನ ಭರಣಿ
ಅಥವಾ ಸಕ್ಕರೆ ಅಥವ ಖರ್ಜೂರ
ವಿವಿಧ ಮದ್ಯಗಳ ಸರಣಿ

ವಸಂತ ಮುಗಿಯಿತು ಬೇಸಿಗೆ ಬಂತು
ಬೇಸಿಗೆಯೂ ಬಲುಬೇಗನೆ ಕಳೆಯಿತು
ಮಳೆಯೂ ಹುಟ್ಟಿತು ಮಾಗಿಯು ತಟ್ಟಿತು
ಅದರ ಹಿಂದೆಯೇ ವಸಂತ ಮರಳಿತು

ವರ್ಷ ಮುಗಿಯಿತು ವರ್ಷ ಬಂದಿತು
ಆದರು ನಾಸಿರನೇಳಲೆ ಇಲ್ಲ
ಮುಗಿಯಿತಿಂದಿಗೆ ನಾಲ್ಕನೆ ವರ್ಷ
ಊರಿಗೆ ಮರಳುವ ಸೂಚನೆಯಿಲ್ಲ !

ದಿನವೂ ಹೊಸಹೊಸ ಕನಸುಗಳಲ್ಲಿ
ನಾಸಿರನಿದ್ದನು ಎಲ್ಲವ ಮರೆತು
ಮಾಗ್‌-ಇ-ಸಫೀದಿನ ವರವೇ ಶಾಪ
ಎಂಬ ಪರಿಸ್ಥಿತಿಯಾಯ್ತು

ನಾವೋ ಬಲು ಬೇಸರಗೊಂಡು
ರುದಾಕಿಯ ಕಂಡೆಂದೆವು ಹೀಗೆ :
“ಹೆಂಡಿರು ಮಕ್ಕಳ ಮರೆತೇ ಹೋಗಿದೆ
ಊರಿಗೆ ಹೋಗದೆ ಇರುವುದೆ ಹೀಗೆ ?

ಅಮೀರರಿಗೆ ಬಲು ಹತ್ತಿರ ನೀವು
ಮನವೊಲಿಸಿರಿ ಹೇಗಾದರು ಮಾಡಿ
ಊರಿಗೆ ಹೋದರೆ ಸಾವಿರ ವರಹ
ಕಾಣಿಕೆ ಕೊಡುವೆವು ಎಲ್ಲರು ಕೂಡಿ !”

ನಕ್ಕು ರುದಾಕಿ ನೋಡುವೆನೆಂದ
ಅಮೇಲರಸನ ಬಳಿಗೈತಂದ
ಕೇಳಿದೆನೀದಿನ ಹೊಸ ಹಾಡೊಂದ
ಕೇಳಿಸಲಪ್ಪಣೆಯೇ ನಿಮಗೆಂದ

ರುದಾಕಿಯ ಹಾಡು

ಕೇಳಿ ನಾಸಿರರೇ ಕೇಳಿ !

ಜುಯೀ-ಮೂಲಿಯಾನ್‌ ನದೀ ಮೇಲೆ
ನೆರೆಯೊಂದು ಬಂತು
ಆ ನೆರೆಯ ನೆನಪು ನೀರಿನ ಹಾಗೇ
ಏರಿಕೊಂಡು ಬಂತು

ಅಮೂ-ದರಿಯಾ ಹೊಳೆಯ ದಡಕ್ಕೂ
ಉಸುಕಿನ ರಾಸಿ
ಕಾಲ ಕೆಳಗೆ ರೇಶಿಮೆ ಹಾಗೇ
ಮೆತ್ತಗೆ ಹಾಸಿ

ಅಮೂ-ದರಿಯಾ ಹೊಳೆ ನಮ್ಮ
ಸೊಂಟಕೆ ಬಂದು
ಹಲವು ನೂರು ನೀರ ಬುಗ್ಗೆಗಳ
ಬಿಸಿಯನು ತಂದು

ಕುಣೀ ಬುಖಾರ ! ಕುಣಿ ಬುಖಾರ
ಅಮೀರ ಬಂದಿರುವ !
ತಣೀ ನೆಲವೆ ! ತಣೀ ಬಯಲೆ !
ಚಂದಿರ ಮೂಡಿರುವ !

ಕೇಳಿ ನಾಸಿರರೇ ಕೇಳಿ !

ಎರಡೂ ಒಂದೇ

ನಾಸಿರನೆದ್ದ ಕುದುರೆಯನೇರಿದ
ಬರಿಗಾಲಲ್ಲೇ ಪಕ್ಕೆಗೆ ತಿವಿದ

ಕುಣಿದಾಡಿದರು ಪಾಳೆಯದವರು
ಡೇರೆಯ ಕಿತ್ತರು ಎಲ್ಲಾ ಹೊತ್ತರು

ಅರಸನ ಹಾವುಗೆ ಕಾಲಿನ ಪಟ್ಟಿ
ಯಾರೋ ಕೊಟ್ಟರು ಬರೂನ ಮುಟ್ಟಿ

ಅವನೊ ! ಬುಖಾರಾ ತಲಪುವ ವರೆಗೂ
ಓಗೊಡಲಿಲ್ಲ ಯಾರದೆ ಕರೆಗೂ

ಊರಿಗೆ ತಲುಪಿದ ಸೈನ್ಯ ಸಮೂಹ
ಕೊಟ್ಟಿತೆ ಕವಿಗೆ ಸಾವಿರ ವರಹ ?

ಎರಡೂ ಒಂದೇ ! ನಾಡಿಗೆ ಎಂದೇ
ರುದಾಕಿ ಕೂಡ ಮರೆತನು ಅಂದೇ
*****