ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು
ನೀನೊಂದು ಕ್ಷಣಕಾಲವಲ್ಲಿ ಕೂಡು
ಜ್ಞಾನಮಯದಾನಂದ ಶಾಂತಿಮಯದಾನಂದ
ತಾನೆ ತಾನಾಗಿಹುದು ಪುಣ್ಯವಂತಳ ಬೀಡು

ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು
ಕೆಟ್ಟ ಯೋಚನೆ ಮಾಡದಂತೆ ಘಳಿಗೆ
ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ಮಾತು
ಎಳ್ಳಷ್ಟು ಸೇರದು ನಮ್ಮ ಗಂಗವ್ವನಿಗೆ

ಪೂರ್ಣವಿಕಸನವಾದ ಕುಸುಮದಂತೆ, ನಮ್ಮ
ಅಜ್ಜಿ ಗಂಗವ್ವನ ಮನಸು ಅಂತೆ
ಮುಸಿ ಮುಸಿ ನಸುನಗುತ ಹಸನಾಗಿ ನುಡಿಯುವಳು
ಬಂದವರನಾದರಿಸಿ ಕುಶಲವೇ ನೀವೆಂದು

ಕರ್ಮಯೋಗವನರಿತು ಬಾಳುತಿಹಳು ಜಗದ
ಮರ್ಮಂಗಳನು ತಿಳಿದು ಸುಮ್ಮನಿಹಳು
ಕ್ಷತ್ರಿಯರ ಕುಲದವಳು ವೀರಪುತ್ರರ ಮಗಳು
ಧೈರ್‍ಯವಂತಳು ಅಜ್ಜಿ ನುರಿತವಳು ಸಾಸಿಗಳು

ಹಂಗಿನನ್ನವನುಂಬ ಪ್ರಾಣಿಯಲ್ಲಾ ನಮ್ಮ
ಗಂಗಜ್ಜಿ ವೃಥ ಕಾಲ ಕಳೆವಳಲ್ಲ
ಅತ್ತಿತ್ತ ತಿರುಗದೆ ಚಿತ್ರಕಲೆಗಳ ರಚಿಸಿ
ಉತ್ತಮರಿಗದನಿತ್ತು ಕಾಲಕಳೆಯುವಳೆಲ್ಲ

ಚೌರಿ ಕೂದಲು ತುರುಬು ಸೃಷ್ಟಿಯಂತೆ, ದಿವ್ಯ
ಪಾರಿಜಾತದ ಪುಷ್ಪವೃಕ್ಷವಂತೆ
ಸಕ್ಕರಿಯ ಸರವಂತೆ, ಮಕ್ಕಳಿಗೆ ಮೆಚ್ಚಂತೆ
ಸೂಕ್ಷ್ಮಪಾಕದಿ ಮಾಳ್ಪ ಅಚ್ಚು ಕೆಲಸಗಳಂತೆ

ಚೋರ ಕೃಷ್ಣನು ಸೀರೆ ಕದ್ದುದಂತೆ, ಅಲ್ಲಿ
ಗೋಪಿಯರು ಕೈಮುಗಿದು ನಿಂತುದಂತೆ
ಶಂಕರನ ಗುಡಿಯಂತೆ, ಪೂಜೆ ವಸ್ತುಗಳಂತೆ
ಮೈಸೂರು ಮಲ್ಲಿಗೆಯ ಹಾರಗಳ ಸೊಗಸಂತೆ

ಶೃಂಗಾರವಾಗಿಹುದು ಕೌಶಲ್ಯವು ಅಲ್ಲಿ
ಸ್ವಾಮಿ ಪೂಜೆಗಳೊಡನೆ ಪುಣ್ಯಕಥೆಯು
ಸಂಗೀತ ಸಾಹಿತ್ಯ ಚಿತ್ರ ಶಿಲ್ಪದ ಕಲೆಯು
ತುಂಬಿ ತುಳುಕುತಲಿಹುದು ಮಾತಿನೊಳು ರಸಿಕತೆಯು

ಸದ್ದು ಸಪ್ಪುಳ ಇಲ್ಲದಂತೆ ಪೋದೆ ನಮ್ಮ
ಅಜ್ಜಿ ಗಂಗವ್ವನಿಗೆ ಪ್ರೇಮವಾದೆ
ಮುದ್ದು ಸುರಿಸುತ ಅಲ್ಲಿ ನಾನೊಬ್ಬ ಮಗಳಾದೆ
ಬುದ್ಧಿವಂತಳ ಕಂಡು ಬೆಪ್ಪಾದೆ ಬೆರಗಾದೆ!

ಹಡೆದವ್ವ ದಿನದಿನಕೆ ಮರೆಯುತಿಹಳು, ನಮ್ಮ
ಗಂಗಜ್ಜಿ ಮಾಡಿದಳು ಇಂತು ಮರುಳು
ನನ್ನಮ್ಮ ಎಂದು ಬಹುಲಾಲನೆಯ ಮಾಡುವಳು
ಬಾ ಬಾರೆ ಜನಕಜೇ ಉಣ್ಣೆಂದು ಕರೆಯುವಳು
*****

ಜನಕಜೆ
Latest posts by ಜನಕಜೆ (see all)