ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ
ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು
ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು
ಹೊಸ ವರ್ಷ ಬಾ ಬಂದು ನಮ್ಮನ್ನಾಳು
ಬುದ್ಧಿ, ಶ್ರಮ, ಹಣ ಎಲ್ಲ ಸುರಿದು ದುಡಿದಿದ್ದೇವೆ
ಹಗಲು ಇರುಳೆನ್ನದೇ ನಿದ್ದೆಗೆಟ್ಟು.
ಹೆಡ್ರೊಜನ್ ಬಾಂಬುಗಳ ಪೇರಿಸಿಟ್ಟಿದ್ದೇವೆ
ಉಳಿಯದಂತೆ ಯಾರೂ ವಿವೇಕಗೆಟ್ಟು
ನಿಟ್ಟುಸಿರು ನೋವು ಕೊಲೆ ಸುಲಿಗೆ, ಎನ್ನದಿರಣ್ಣ
ಹೊಸತು ತಂದಿದ್ದೇವೆ ಬದುಕಿನಲ್ಲಿ
ಬದಲಾಗಿದೆಯೆ ಹೇಳು ಸೃಷ್ಟಿ ಬೇರೆಡೆಯಲ್ಲಿ
ಬೆಟ್ಟ ನದಿ ಕಡಲು ಮೃಗ ಕಾಡಿನಲ್ಲಿ
ಮನೆಯಲ್ಲಿ ಹಾವು, ಹಳೆಮನೆ, ಹತ್ತು ಬಿರುಕುಗಳು
ಒಂದೊಂದು ಸಂದಿಯೂ ಕರೆವ ಸಾವು
ನಿದ್ದೆ ಮಾತಿರಲಿ ಎದ್ದಿರುವಾಗಲೂ ಕೂಡ
ಸಣ್ಣ ಸದ್ದಿಗು ‘ಅಯ್ಯೊ ಬಂತು ಹಾವು !’
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕೃಷ್ಣಭಕ್ತರ ಕುಣಿತ - April 15, 2021
- ಸೀನಿಯರ್ ಕ್ರಿಕೆಟಿಗನ ಸಂಜೆ - April 8, 2021
- ಅರ್ಧಸತ್ಯದ ಪ್ರಾಪ್ತಿ - April 1, 2021