ಮುಗಿಲ ತೂರಿ ಮೇಲೆ ಎದ್ದ
ಗಿರಿಯ ನೆತ್ತಿಯಲ್ಲಿ,
ಕರುಳ ಕೊರೆವ ಹಿಮಗಾಳಿಯ
ಕಲ್ಲಭಿತ್ತಿಯಲ್ಲಿ,
ಎವೆ ಬಡಿಯದ ಎಚ್ಚರದಲಿ
ಹೊತ್ತಿ ಉರಿವ ಕೆಚ್ಚಿನಲ್ಲಿ
ದೇಶ ನನ್ನ ದೈವ ಎಂದು
ಹೋರಾಡುವ ಧೀರರೇ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ

ತಿನ್ನಲಿರದ ಕುಡಿಯಲಿರದ
ಬಂಡೆರಾಶಿ ನಡುವೆ,
ಥಂಡಿಗಾಳಿ ಬಡಿವ ಕ್ರೂರ
ಹವೆಯಲ್ಲೂ ಬಿಡದೆ,
ವೈರಿನಲೆಯ ಮೇಲೆ ಗುಂಡು
ಉರಿಯುತಿರುವ ಬೆಂಕಿ ಚಂಡು
ಸಿಡಿಸಿ ದೇಶವನ್ನು ಕಾಯ್ದೆ
ಎನುವ ಧೀರ ಯೋಧರ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ

ಹೆಂಡತಿ ಮನೆ ಮಕ್ಕಳನ್ನು
ಬಿಟ್ಟು ದೂರದಲ್ಲಿ,
ಎಲ್ಲ ಭೋಗಸುಖಗಳನೂ
ಮನಸಿನಿಂದ ತಳ್ಳಿ,
ಜೀವಕಿಂತ ದೇಶ ಮಿಗಿಲು
ದುಡಿವ ಅದಕೆ ಹಗಲು ಇರುಳು
ಮೀಸಲದಕೆ ಕೊರಳು ಎಂಬ
ಛಲದಿ ಕುದಿವ ಧೀರರೇ,
ನಿಮ್ಮೊಡನಿದೆ ನಮ್ಮ ಹೃದಯ
ಇದೋ ನಿಮಗೆ ವಂದನೆ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)